×
Ad

ರಾಜೀವ್ ಗಾಂಧಿ ಆರೋಗ್ಯ ವಿವಿ ಹೊರಗುತ್ತಿಗೆ ನೇಮಕಾತಿಯಲ್ಲಿ ಅಕ್ರಮ?

ಅಸಿಸ್ಟಂಟ್ ಇಂಜಿನಿಯರ್ ಸಹಿತ 155 ಮಂದಿಯ ನೇಮಕಗಳಲ್ಲಿ ನಿಯಮಗಳ ಉಲ್ಲಂಘನೆ

Update: 2025-11-25 08:03 IST

ಬೆಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಅಸಿಸ್ಟಂಟ್ ಇಂಜಿನಿಯರ್ ಸೇರಿದಂತೆ ಒಟ್ಟಾರೆ 155 ಮಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾಡಿಕೊಂಡಿರುವ ನೇಮಕದಲ್ಲೂ ನಿಯಮ ಉಲ್ಲಂಘನೆಗಳಾಗಿರುವುದನ್ನು ಲೆಕ್ಕ ಪರಿಶೋಧನೆಯು ಪತ್ತೆ ಹಚ್ಚಿದೆ.

2023-24ನೇ ಸಾಲಿಗೆ ಸಂಬಂಧಿಸಿದಂತೆ ಪೂರ್ಣಗೊಂಡಿರುವ ಲೆಕ್ಕಪರಿಶೋಧನೆ ವರದಿಯು, ವಿಶ್ವವಿದ್ಯಾನಿಲಯವು ಎಸಗಿರುವ ನಿಯಮ ಉಲ್ಲಂಘನೆಗಳ ಪಟ್ಟಿಯನ್ನು ಒದಗಿಸಿದೆ. ಈ ವರದಿಯ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ಅಸಿಸ್ಟೆಂಟ್ ಇಂಜಿನಿಯರ್, ಅಕೌಂಟ್ ಅಸಿಸ್ಟೆಂಟ್, ಸಹಾಯಕರು, ಡೇಟಾ ಎಂಟ್ರಿ ಆಪರೇಟರ್, ಜೂನಿಯರ್ ಅಸಿಸ್ಟೆಂಟ್, ಡ್ರೈವರ್, ಗ್ರೂಪ್ ಡಿ ಹುದ್ದೆಯಲ್ಲಿ ಒಟ್ಟಾರೆ 155 ಮಂದಿಯನ್ನು ಮೈಸೂರಿನ ಶಾರ್ಪ್ ವಾಚ್ ಇನ್ವೆಷ್ಟಿಗೇಷನ್ ಸೆಕ್ಯೂರಿಟಿ ಸರ್ವಿಸ್ ಮೂಲಕ ನೇಮಿಸಲಾಗಿದೆ. ಈ ಸೇವೆ ಪಡೆಯಲು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆಯನ್ನು ಪಡೆಯಲಾಗಿದೆ. 2022ರ ಮೇ 25ರಂದು ಟೆಂಡರ್ ಕರೆಯಲಾಗಿತ್ತು.

ಆದರೆ ಈ ಟೆಂಡರ್ ಕಡತದ ಪ್ರಕಾರ ವಿವಿಧ ವರ್ಗದ ಸಿಬ್ಬಂದಿಗೆ ನೀಡಬೇಕಿರುವ ಸಂಬಳದ ಲೆಕ್ಕಾಚಾರವನ್ನು ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆ ಅಡಿಯಲ್ಲಿ ನಿಗದಿಪಡಿಸಿರುವ ಮೊತ್ತವನ್ನು ಆಧರಿಸಿ ಒಟ್ಟಾರೆ ಸಂಬಳದ ಲೆಕ್ಕಾಚಾರವನ್ನು ಮಾಡಬೇಕಾಗಿತ್ತು. ಅಲ್ಲದೆ ಇಪಿಎಫ್, ಇಎಸ್‌ಐ ಹಾಗೂ ಪಿಟಿಯನ್ನು ನಿಯಮಾನುಸಾರ ಕಟಾಯಿಸಬೇಕಿತ್ತು.

ನಿವ್ವಳ ಸಂಬಳವನ್ನು ಪಾವತಿಸುವ ಬಗ್ಗೆ ಕ್ರಮಬದ್ಧವಾದ ಲೆಕ್ಕಾಚಾರದ ತಃಖ್ತೆಯನ್ನು ಸಿದ್ಧಪಡಿಸಬೇಕಿತ್ತು. ವಿಶ್ವವಿದ್ಯಾನಿಲಯದಿಂಂದ ಈ ಸೇವೆಗೆ ಸಂಬಂಧಿಸಿದಂತೆ ಆಗುವ ಆರ್ಥಿಕ ಹೊರೆಯ ಬಗ್ಗೆ ಸ್ಪಷ್ಟ ಚಿತ್ರಣವನ್ನು ಸಿಂಡಿಕೇಟ್ ಸಭೆಗೆ ಮಂಡಿಸಿ ಆರ್ಥಿಕ ಅನುಮೋದನೆಯನ್ನು ಪಡೆಯಬೇಕಿತ್ತು.

ಆದರೆ ಈ ಯಾವ ಪ್ರಕ್ರಿಯೆಯನ್ನೂ ಪಾಲಿಸಿಲ್ಲ. ನೇರವಾಗಿ ಟೆಂಡರ್ ಆಹ್ವಾನಿಸುವ ಮೂಲಕ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮಾಡಿದೆ. ಈ ರೀತಿಯ ಯಾವುದೇ ಆರ್ಥಿಕ ಶಿಸ್ತನ್ನು ಕೈಗೊಳ್ಳದೇ ವಿವಿಧ ಸಿಬ್ಬಂದಿಗೆ ವಿವಿಧ ಸಂಬಳ ನೀಡುತ್ತಿರುವುದು ಸಮಂಜಸವಾಗಿರುವುದಿಲ್ಲ ಹಾಗೂ ಟೆಂಡರ್‌ನಲ್ಲಿ ಆರ್ಥಿಕ ಹೊರೆಯ ಆಧಾರದ ಮೇಲೆ ಸೇವೆದಾರರು ಸೇವಾ ಶುಲ್ಕವನ್ನು ನಮೂದಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು.

ಆದರೆ ಈ ರೀತಿಯ ಆರ್ಥಿಕ, ತಾಂತ್ರಿಕ ಸಮಾಲೋಚನೆಯನ್ನು ಮಾಡದೇ ಟೆಂಡರ್ ಪ್ರಕ್ರಿಯೆಯನ್ನು ಯಾವ ಕಾರಣಕ್ಕೆ ಕೈಗೊಳ್ಳಲಾಗಿತ್ತು. ಈ ಕುರಿತು ಸೂಕ್ತ ವಿವರಣೆಯನ್ನು ಲೆಕ್ಕ ಪರಿಶೋಧನೆಗೆ ನೀಡಬೇಕಿತ್ತು.

2022-23ನೇ ಸಾಲಿನಲ್ಲಿ ಹೊರಗುತ್ತಿಗೆ ಸೇವೆ ಪಡೆಯಲು ಕರೆದಿದ್ದ ಟೆಂಡರ್‌ನಲ್ಲಿ ಮೂರು ಸಂಸ್ಥೆಗಳು ಭಾಗವಹಿಸಿದ್ದವು. ಬೆಂಗಳೂರಿನ ಹಿಂದೂಸ್ತಾನ್ ಸೆಕ್ಯುರಿಟಿ ಸರ್ವಿಸ್, ಮೈಸೂರಿನ ಶಾರ್ಪ್ ಇನ್ವೆಷ್ಟಿಗೇಷನ್ ಸೆಕ್ಯುರಿಟಿ ಸರ್ವಿಸ್, ಶ್ರೀ ದತ್ತ ಸಾಯಿ ವಾಚ್ ಇನ್ವೆಷ್ಟಿಗೇಷನ್ ಸೆಕ್ಯುರಿಟಿ ಸರ್ವಿಸ್ ಭಾಗವಹಿಸಿದ್ದವು.

ಈ ಪೈಕಿ ಮೂರೂ ಸಂಸ್ಥೆಗಳು ನಾನ್ ರೆಸ್ಪಾನ್ಸೀವ್ ಆಗಿದ್ದವು. ಅಂತಿಮವಾಗಿ ಶಾರ್ಪ್ ವಾಚ್ ಇನ್ವೆಸ್ಟಿಗೇಷನ್ ಸೆಕ್ಯೂರಿಟಿ ಸರ್ವಿಸನ್ನೇ ವರ್ಷಾಂತ್ಯದ ಲಾಭದ ಮೇರೆಗೆ 2022-23ನೇ ಸಾಲಿಗೆ ಆಯ್ಕೆ ಮಾಡಿಕೊಂಡಿತ್ತು. 2022ರ ಅಕ್ಟೋಬರ್ 7ರಂದು ಕಾರ್ಯಾದೇಶ ನೀಡಲಾಗಿತ್ತು. ಈ ಕಾರ್ಯಾದೇಶದ ಪ್ರಕಾರ ಗುತ್ತಿಗೆ ಅವಧಿಯು 2023ರ ಅಕ್ಟೋಬರ್ 30ಕ್ಕೆ ಮುಕ್ತಾಯಗೊಳ್ಳಬೇಕು. ಹೀಗಾಗಿ ಈ ಸೇವೆಗಳಿಗಾಗಿ ಪುನಃ ಟೆಂಡರ್ ಆಹ್ವಾನಿಸಬೇಕಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಆದರೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು 2023ರ ಡಿಸೆಂಬರ್ 1ರಿಂದ ಮೂರು ತಿಂಗಳ ಅಥವಾ ಅಂತಿಮ ನಿರ್ಧಾರ ಕೈಗೊಳ್ಳುವವರೆಗೂ ಯಾವುದು ಮೊದಲು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೆ ಈ ಸೇವೆಯು 2023ರ ಅಕ್ಟೋಬರ್ 30ಕ್ಕೆ ಮುಕ್ತಾಯಗೊಂಡಿರುವುದರಿಂದ 2023ರ ನವೆಂಬರ್ 1ರಿಂದಲೇ ಮುಂದುವರಿದ ಕಾರ್ಯಾ ದೇಶ ನೀಡಬೇಕು. ನಂತರ ನವೆಂಬರ್ ತಿಂಗಳ ವೇತನವನ್ನೂ ನೀಡಲಾಗಿದೆ. ಅಲ್ಲದೆ ಇದೇ ಏಜೆನ್ಸಿಯಿಂದ ವಿಶ್ವವಿದ್ಯಾನಿಲಯವು ಮಿನಿಯಲ್ ಸ್ವಚ್ಛತಾ ಸೇವೆಯನ್ನೂ 97 ಮಂದಿಯಿಂದ ಪಡೆದುಕೊಂಡಿದೆ.

ನವೆಂಬರ್ 23ರ ಸಂಬಳವನ್ನು ಹೇಗೆ ನೀಡಲಾಯಿತು, ಈ ರೀತಿಯ ತಾಳೆಯಾಗದಿರುವ ದಿನಾಂಕಗಳನ್ನು ಮನಸೋ ಇಚ್ಛೆ ಮುಂದುವರಿದ ಕಾರ್ಯಾದೇಶಗಳನ್ನು ನೀಡುತ್ತಿರುವುದು ಸಮಂಜಸವಾಗಿರುವುದಿಲ್ಲ. ಅಲ್ಲದೇ ಈ ದಿನದವರೆಗೂ ಅಂದರೇ 2025ರ ಜನವರಿ 15ರವರೆಗೂ ಯಾವುದೇ ಟೆಂಡರ್ ಆಹ್ವಾನಿಸದೆಯೇ ಗುತ್ತಿಗೆದಾರರಿಂದ ಸೇವೆಯನ್ನು ಮುಂದುವರಿಸಿಕೊಂಡು ಬಂದಿದೆ ಎಂದು ಲೆಕ್ಕ ಪರಿಶೋಧನೆ ವೇಳೆಯಲ್ಲಿ ಪತ್ತೆ ಹಚ್ಚಲಾಗಿದೆ.

ಈ ರೀತಿಯ ಕಾಲಕಾಲಕ್ಕೆ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಈಗಾಗಲೇ ಹಲವಾರು ಸರಕಾರದ ಆದೇಶಗಳಲ್ಲಿ ಮಾರ್ಗದರ್ಶನಗಳನ್ನು ನೀಡಿದ್ದರೂ ಸಹ ಯಾವುದನ್ನೂ ಪಾಲಿಸಿಲ್ಲ. ಅಸಡ್ಡೆ ತೋರಿದೆ. ಹೀಗಾಗಿ ವಿಶ್ವವಿದ್ಯಾನಿಲಯಕ್ಕೆ ಆರ್ಥಿಕ ನಷ್ಟವುಂಟಾಗಿರುತ್ತದೆ. ಅಲ್ಲದೆ ಸರಕಾರದ ಆದೇಶಗಳು ಮತ್ತು ನಿಯಮಗಳ ಉಲ್ಲಂಘನೆಯಾಗಿದೆ. ಈ ಸಂಬಂಧ ಜಾರಿಗೊಳಿಸಿದ್ದ ವಿಚಾರಣೆ ನೋಟೀಸ್‌ಗೆ ವಿಶ್ವವಿದ್ಯಾನಿಲಯವು ಉತ್ತರ ನೀಡಿದೆಯಾದರೂ ಅದನ್ನು ಲೆಕ್ಕ ಪರಿಶೋಧಕರು ಒಪ್ಪಿಲ್ಲ. ಈ ಬಗ್ಗೆ ಸರಿಯಾಗಿ ಸ್ಪಷ್ಟೀಕರಣ ನೀಡುವವರೆಗೂ 6,23,94,923 ರೂ.ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.

2023-24ನೇ ಸಾಲಿನಲ್ಲಿ ಈ ಸೇವೆಗಾಗಿ ಟೆಂಡರ್ ಆಹ್ವಾನಿಸಿತ್ತು. ಇದರಲ್ಲಿ ಶಾರ್ಪ್ ವಾಚ್ ಇನ್ವೆಷ್ಟಿಗೇಷನ್ ಸೆಕ್ಯುರಿಟಿ ಸರ್ವಿಸ್, ಡಿಟೆಕ್ವಿವ್ ಆಲ್ ಸೆಕ್ಯುರಿಟಿ , ವಿಸ್ಡಂ, ದಾತಾರ್ ಸಾಯಿ ಸೆಕ್ಯುರಿಟಿ ಎಂಟರ್ ಪ್ರೈಸೆಸ್ ಭಾಗವಹಿಸಿದ್ದವು. ಇಲ್ಲಿಯೂ ಸಹ ಶಾರ್ಪ್ ವಾಚ್ ಇನ್ವೆಸ್ಟಿಗೇಷನ್ ಸೆಕ್ಯುರಿಟಿ ಸರ್ವಿಸ್‌ಗೆ 12 ತಿಂಗಳ ಅವಧಿಗೆ ಕಾರ್ಯಾದೇಶ ನೀಡಿದೆ.

ಈ ಕಾರ್ಯಾದೇಶದ ಪ್ರಕಾರ ಗುತ್ತಿಗೆ ಅವಧಿಯು 2023ರ ಆಗಸ್ಟ್ 31ಕ್ಕೆ ಅಂತ್ಯವಾಗಲಿದೆ. ಹೀಗಾಗಿ ಈ ಸೇವೆಯನ್ನು ಪುನಃ ಪಡೆಯಲು ಟೆಂಡರ್ ಆಹ್ವಾನಿಸಬೇಕು. ನಂತರ ಮೂರು ಬಾರಿ 2023ರ ಆಗಸ್ಟ್ 9, ನವೆಂಬರ್ 24 ಮತ್ತು 2024ರ ಫೆ.23ರಂದು ಮನಸೋ ಇಚ್ಛೆ ಮುಂದುವರಿದ ಕಾರ್ಯಾದೇಶ ನೀಡಲಾಗಿದೆ. ಇದು ಸಮಂಜಸವಲ್ಲ ಎಂದು ಲೆಕ್ಕ ಪರಿಶೋಧಕರು ಆಕ್ಷೇಪ ಎತ್ತಿದ್ದಾರೆ. 2023-24ನೇ ಸಾಲಿನಲ್ಲಿ ವಿಶ್ವವಿದ್ಯಾನಿಲಯವು ನಿವೃತ್ತ ಅಧಿಕಾರಿ, ನೌಕರರನ್ನು ನೇಮಿಸಿಕೊಂಡು ವೇತನದ ಮೊತ್ತವಾಗಿ ಒಟ್ಟು 82,40,172 ರೂ.ಗಳನ್ನು ಪಾವತಿಸಿದೆ. ಡಾ. ಸುಜಾ ಕೆ. ಶ್ರೀಧರ್ ಅವರಿಗೆ ತಿಂಗಳಿಗೆ 90,000 ರೂ., ಡಾ. ಎಚ್.ಎಸ್. ಸಿದ್ದಮಲ್ಲಯ್ಯ ಅವರಿಗೆ 90,000 ರೂ., ಸೋಮಶೇಖರ್ ಸಿ.ಬದಾಮಿಗೆ 1,00,000.00 ರೂ., ಪ್ರೊ.ರಾಮಚಂದ್ರ ಶೆಟ್ಟಿ ಅವರಿಗೆ 1,20,000 ರೂ., ಡಾ. ಮುನೀರ್ ಅಹ್ಮದ್ ಅವರಿಗೆ 1,20,000 ರೂ., ಎಸ್. ಸುರೇಶ್ ಬಾಬು ಅವರಿಗೆ 60,000 ರೂ., ಯು.ಜಯದೇವ ಅವರಿಗೆ 41,710 ರೂ., ಬಿ. ಶಂಕರ್ ರಾವ್ ಅವರಿಗೆ 64,971 ರೂ. ಪಾವತಿಸಿತ್ತು.

ನಿವೃತ್ತ ನೌಕರರನ್ನು ಸಮಾಲೋಚಕರು ಎಂದು ನೇಮಕಾತಿ ಮಾಡಿಕೊಂಡಿದೆ. ಆದರೆ ವಿಶ್ವವಿದ್ಯಾನಿಲಯದಲ್ಲಿ ಸಮಾಲೋಚಕರು ಎಂಬ ಹುದ್ದೆಯು ಸರಕಾರದಿಂದ ಇದುವರೆಗೂ ಸೃಜನೆಯಾಗಿರುವುದಿಲ್ಲ. ಹಾಗೂ ನಿವೃತ್ತ ನೌಕರರನ್ನು ಮಂಜೂರಾದ ಹುದ್ದೆಯ ಎದುರಾಗಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಯಾವುದೇ ದಾಖಲಾತಿಯನ್ನೂ ಒದಗಿಸಿಲ್ಲ. 2016ರ ಮಾರ್ಚ್ 2ರಂದು ಸರಕಾರವು ಹೊರಡಿಸಿದ್ದ ಸುತ್ತೋಲೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ. ಮಹಾಂತೇಶ್

contributor

Similar News