ಚಂದ್ರನಲ್ಲಿ ರಸ್ತೆ ನಿರ್ಮಾಣ ಸಾಧ್ಯವೇ?

Update: 2023-11-26 04:43 GMT

ಚಂದ್ರನ ಮಣ್ಣನ್ನು ಕರಗಿಸಲು ದುಬಾರಿ ಮಸೂರಗಳು ಮತ್ತು ಬೃಹತ್ ಸಾಧನಗಳು ಬೇಕಾಗುತ್ತವೆ. ಲೇಸರ್ ವಿಧಾನದಿಂದ ಚಂದ್ರನ ಧೂಳಿನಿಂದ ‘ಟೈಲ್ಸ್’ ಅನ್ನು ಮಾಡಬಹುದು. ಸುಸಜ್ಜಿತ ರಸ್ತೆ ರೂಪಿಸಲುಇಂಟರ್ ಲಾಕ್ ಮಾಡಬಹುದಾದ ಅಂಚುಗಳನ್ನು ತಯಾರಿಸಬಹುದು ಎಂದು ವಿಜ್ಞಾನಿಗಳು ವಾದಿಸಿದ್ದಾರೆ.

ಚಂದಿರನೂರಿಗೆ ದಾರಿ ಸುಗಮಗೊಂಡಿರುವಾಗ, ಚಂದಿರನಲ್ಲಿನ ದಾರಿ ಸುಗಮವಾಗಿರದಿದ್ದರೆ ಹೇಗೆ? ಇಂತಹದ್ದೊಂದು ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಮಾನವರ ಮುಂದಿನ ಪಯಣ ಚಂದ್ರನತ್ತ ಇರುವುದರಿಂದ ಅಲ್ಲಿ ಕೆಲ ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿ, ಕಟ್ಟಡಗಳ ಅಗತ್ಯವಿದೆ. ಭೂಮಿಯ ಮೇಲೆ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿದಷ್ಟು ಸುಲಭವಾಗಿ ಚಂದಿರನಲ್ಲಿ ಮೂಲಭೂತ ಸೌಕರ್ಯ ನಿರ್ಮಾಣ ಸುಲಭವಲ್ಲ. ಮುಖ್ಯವಾಗಿ ಇವುಗಳ ನಿರ್ಮಾಣಕ್ಕೆ ನೀರು ಬೇಕಲ್ಲ? ಎಂಬ ಪ್ರಶ್ನೆಯೂ ಎದುರಾಗುತ್ತದೆ. ಏಕೆಂದರೆ ರಸ್ತೆ, ಚರಂಡಿ ಮತ್ತು ಕಟ್ಟಡಗಳಂತಹ ನಿರ್ಮಾಣ ಕಾರ್ಯಕ್ಕೆ ನೀರು ಬೇಕೇ ಬೇಕು. ನೀರಿಲ್ಲದೆ ಇವುಗಳನ್ನು ನಿರ್ಮಿಸಲಾಗದು ಎಂಬುದೇ ನಮ್ಮ ಇದುವರೆಗಿನ ತಿಳಿವಳಿಕೆ. ಸದ್ಯಕ್ಕೆ ಚಂದ್ರನಲ್ಲಿ ನೀರಿಲ್ಲ. ಆದರೆ ಈಗಾಗಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ಮಂಜಿನ ರೂಪದ ನೀರು ಇರುವುದು ಪತ್ತೆಯಾಗಿದೆ. ಹಾಗಾಗಿ ಮುಂದಿನ ಕೆಲವೇ ವರ್ಷಗಳಲ್ಲಿ ಚಂದ್ರನ ಮೇಲೆ ಮಾನವ ವಾಸಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದು ನಿರೀಕ್ಷಿತ.

ಭೂಮಿಯ ಮೇಲೆ ಸೈಟುಗಳನ್ನು ಖರೀದಿಸುವಂತೆ ಈಗಾಗಲೇ ಕೆಲವರು ಚಂದ್ರನಲ್ಲೂ ಜಾಗಗಳನ್ನು ಖರೀದಿಸಿದ್ದಾರೆ. ಯಾವುದೇ ಸೈಟ್ ನಿರ್ಮಾಣದ ಮೊದಲ ಭಾಗವಾಗಿ ರಸ್ತೆ ನಿರ್ಮಿಸುವಂತೆ ಚಂದ್ರನ ಪಯಣದ ಮೊದಲ ಭಾಗವಾಗಿ ವಿಜ್ಞಾನಿಗಳು ಚಂದ್ರನಲ್ಲಿ ರಸ್ತೆ ನಿರ್ಮಿಸುವ ಬಗ್ಗೆ ಆಲೋಚಿಸುತ್ತಿದ್ದಾರೆ. ಚಂದ್ರನಲ್ಲಿ ರಸ್ತೆ ನಿರ್ಮಾಣ ಸಾಧ್ಯವೇ? ಎಂಬ ಪ್ರಶ್ನೆ ಬರುತ್ತದೆ. ಏಕೆಂದರೆ ಭೂಮಿಯಂತೆ ಚಂದ್ರನ ಮೇಲ್ಮೈ ಗಟ್ಟಿಯಾಗಿಲ್ಲ. ಚಂದ್ರನಲ್ಲಿ ಗಾಳಿ ಇಲ್ಲ, ನೀರಿಲ್ಲ ಮತ್ತು ತಾಪಮಾನದ ಮಿತಿಯಂತೂ ಮೊದಲೇ ಇಲ್ಲ. ಇಂತಹ ಪರಿಸ್ಥಿತಿಗಳಲ್ಲಿ ರಸ್ತೆ ನಿರ್ಮಾಣ ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ.

ನಮಗೆಲ್ಲ ತಿಳಿದಂತೆ ಚಂದ್ರನ ಮೇಲ್ಮೈ ಸೂಕ್ಷ್ಮವಾದ ಧೂಳಿನ ಪದರದಿಂದ ಮುಚ್ಚಲ್ಪಟ್ಟಿದೆ. ಇದನ್ನು ಚಂದ್ರನ ರೆಗೊಲಿತ್ ಎಂದು ಕರೆಯಲಾಗುತ್ತದೆ. ಈ ರೆಗೊಲಿತ್ ಸಣ್ಣ ಸಣ್ಣ ಕಲ್ಲಿನ ಚೂರುಗಳು, ಧೂಳಿನ ಕಣಗಳು ಮತ್ತು ಇತರ ವಸ್ತುಗಳಿಂದ ಕೂಡಿದೆ. ಇದು ಶತಕೋಟಿ ವರ್ಷಗಳಲ್ಲಿ ಉಲ್ಕಾಶಿಲೆಗಳು ಮತ್ತು ಶಿಲೆಗಳ ಸವಕಳಿಯ ಪ್ರಭಾವದಿಂದ ಉಂಟಾಗಿದೆ. ಈ ರೆಗೊಲಿತ್ ಪದರವು ಏಕರೂಪವಾಗಿಲ್ಲ. 1969 ಮತ್ತು 1972ರ ನಡುವೆ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸಿದ ಅಪೊಲೊ ಕಾರ್ಯಾಚರಣೆಗಳು ಚಂದ್ರನ ರೆಗೊಲಿತ್ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸಿದವು. ರೆಗೊಲಿತ್ನ ದಪ್ಪವು ವಿಭಿನ್ನ ಲ್ಯಾಂಡಿಂಗ್ ಸ್ಥಳಗಳಲ್ಲಿ ಬದಲಾಗುತ್ತಿತ್ತು. ಆದರೂ ಸಾಮಾನ್ಯವಾಗಿ ಅದು ಹಲವಾರು ಮೀಟರ್ಗಳಷ್ಟು ಆಳವಿರುವುದು ತಿಳಿದಿದೆ.

ರೆಗೊಲಿತ್ ಅನ್ನು ಕರಗಿಸುವ ಮೂಲಕ ಚಂದ್ರನ ಮೇಲ್ಮೈಯನ್ನು ಸುಗಮಗೊಳಿಸುವ ಮೂಲಕ ರಸ್ತೆ ನಿರ್ಮಿಸಬಹುದೆಂದು ವಿಜ್ಞಾನಿಗಳು ತರ್ಕಿಸಿದ್ದಾರೆ. ರೆಗೊಲಿತ್ ಅನ್ನು ಲೇಸರ್ ವಿಧಾನಗಳಿಂದ ಕರಗಿಸಿ, ಅದರಿಂದ ಸಿಮೆಂಟ್ ಬ್ಲಾಕ್ಗಳನ್ನು ತಯಾರಿಸಿ ರಸ್ತೆ ನಿರ್ಮಿಸಬಹುದೆಂಬುದು ಬರ್ಲಿನ್ ತಾಂತ್ರಿಕ ವಿಶ್ವವಿದ್ಯಾನಿಲಯದ ಗಿನೆಸ್ ಪಲೋಮಾರೆಸ್ ಅವರ ಅಭಿಪ್ರಾಯ. ಚಂದ್ರನ ಮಣ್ಣನ್ನು ಕರಗಿಸಲು ದುಬಾರಿ ಮಸೂರಗಳು ಮತ್ತು ಬೃಹತ್ ಸಾಧನಗಳು ಬೇಕಾಗುತ್ತವೆ. ಲೇಸರ್ ವಿಧಾನದಿಂದ ಚಂದ್ರನ ಧೂಳಿನಿಂದ ‘ಟೈಲ್ಸ್’ ಅನ್ನು ಮಾಡಬಹುದು. ಸುಸಜ್ಜಿತ ರಸ್ತೆ ರೂಪಿಸಲು ಇಂಟರ್ ಲಾಕ್ ಮಾಡಬಹುದಾದ ಅಂಚುಗಳನ್ನು ತಯಾರಿಸಬಹುದು ಎಂದು ವಿಜ್ಞಾನಿಗಳು ವಾದಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬರ್ಲಿನ್ನ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ರಿಸರ್ಚ್ ಆ್ಯಂಡ್ ಟೆಸ್ಟಿಂಗ್ನ ಪ್ರೊಫೆಸರ್ ಜೆನ್ಸ್ ಗುನ್ಸ್ಟರ್ ಮತ್ತು ಸಹೋದ್ಯೋಗಿಗಳು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ಅಭಿವೃದ್ಧಿಪಡಿಸಿದ ಸಲಕರಣೆಗಳನ್ನು ಬಳಸಿಕೊಂಡು ಮಾಡಿದ ಕೆಲಸವು ಒಂದಿಷ್ಟು ಆಶಾಭಾವ ಮೂಡಿಸಿದೆ. ಅವರು ಚಂದ್ರನ ಮಣ್ಣಿನಂತಹ ಧೂಳನ್ನು ಸುಮಾರು 1,600 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಬಿಸಿಮಾಡಲು 50 ಮಿ.ಮಿ. ವ್ಯಾಸದ ಲೇಸರ್ ಕಿರಣವನ್ನು ಬಳಸಿದರು. ಹೀಗೆ ಬಿಸಿಯಾದ ಧೂಳಿನಿಂದ 25 ಸೆಂ.ಮೀ ವ್ಯಾಸದ ಟೈಲ್ಸ್ ನಿರ್ಮಿಸಿದ್ದಾರೆ.

ಈ ಪ್ರಕ್ರಿಯೆಯು ತುಂಬಾ ನಿಧಾನದ್ದಾಗಿದೆ. ಸಣ್ಣ ಗಾತ್ರದ ಟೈಲ್ಸ್ಗಳನ್ನು ತಯಾರಿಸಲು ಸುಮಾರು ಒಂದು ಗಂಟೆಗಳ ಕಾಲಾವಧಿ ಬೇಕಾಯಿತು. ಅಂದರೆ 10x10 ಮೀಟರ್ ಅಳತೆಯ ಲ್ಯಾಂಡಿಂಗ್ ಸ್ಪಾಟ್ ಅನ್ನು ರಚಿಸಲು ಸುಮಾರು 100 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ತಂಡವು ಹೇಳಿದೆ. ಏನೇ ಆಗಲಿ ಈ ಪ್ರಕ್ರಿಯೆಯು ಚಂದ್ರನ ಧೂಳಿನ ಪ್ರದೇಶಗಳಲ್ಲಿ ಗಟ್ಟಿಯಾದ ಮೇಲ್ಮೈಗಳನ್ನು ರಚಿಸಲು, ಭವಿಷ್ಯದ ರಸ್ತೆಗಳು ಮತ್ತು ಲ್ಯಾಂಡಿಂಗ್ ಪ್ಯಾಡ್ಗಳನ್ನು ನಿರ್ಮಿಸಲು ಸಹಕಾರಿಯಾಗಲಿದೆ.

ಹಿಂದೆಂದಿಗಿಂತ ಈಗ ಚಂದ್ರನಲ್ಲಿ ರಸ್ತೆ ನಿರ್ಮಾಣದ ಅಗತ್ಯವಿದೆ. ನಾಸಾವು ಚಂದ್ರನಲ್ಲಿ ಶಾಶ್ವತ ಚಂದ್ರನ ಹೊರಠಾಣೆ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಈ ಉದ್ದೇಶ ಈಡೇರಲು ಚಂದ್ರನಲ್ಲಿ ರಸ್ತೆ ನಿರ್ಮಾಣದ ಅಗತ್ಯವಿದೆ. ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಚಂದ್ರನಲ್ಲಿಗೆ ಸಾಗಿಸುವುದು ತುಂಬಾ ದುಬಾರಿಯಾಗಿದೆ. ಆದ್ದರಿಂದ ಅಸಾಂಪ್ರದಾಯಿಕ ಪರಿಹಾರಗಳ ಅವಶ್ಯಕತೆಯಿದೆ.

ಮುಂಬರುವ ವರ್ಷಗಳಲ್ಲಿ ಚಂದ್ರನಲ್ಲಿ ವಸಾಹತು ನಿರ್ಮಾಣಕ್ಕೆ ರಸ್ತೆಗಳ ಅಗತ್ಯವಿದೆ. ಅಲ್ಲದೆ ಮುಂಬರುವ ವರ್ಷಗಳಲ್ಲಿ ಚಂದ್ರನಲ್ಲಿ ಸಂಪನ್ಮೂಲ ಹೊರತೆಗೆಯುವಿಕೆ, ಸಂಶೋಧನೆಗಾಗಿ ಚಂದ್ರನ ನೆಲೆಗಳನ್ನು ಸ್ಥಾಪಿಸಲು, ಗಣಿಗಾರಿಕೆ ಮಾಡಿದ ವಸ್ತುಗಳು, ಉಪಕರಣಗಳು ಮತ್ತು ವೈಜ್ಞಾನಿಕ ಮಾದರಿಗಳನ್ನು ಸಾಗಿಸಲು ಸಮರ್ಥ ಸಾರಿಗೆ ವ್ಯವಸ್ಥೆಯ ಅವಶ್ಯಕತೆ ಬಹಳ ಇದೆ. ಅದಕ್ಕಾಗಿ ಸೂಕ್ತ ರಸ್ತೆಗಳು ಬೇಕಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್.ಬಿ ಗುರುಬಸವರಾಜು

contributor

Similar News