×
Ad

ಆದಿವಾಸಿಗಳ ಬಾಳಿಗೆ ಬೆಳಕಾಗುವುದೇ ರಾಜ್ಯ ಸರಕಾರ ?

Update: 2025-02-07 17:12 IST

ಮಂಗಳೂರು: ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದರೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆದಿವಾಸಿಗಳಿಗಿನ್ನೂ ಬೆಳಕಿನ ಸ್ವಾತಂತ್ರ್ಯ ದೊರಕಿಲ್ಲ. ದಟ್ಟ ಅರಣ್ಯದ ನಡುವೆ ವಾಸಿಸುವ ಕುಟುಂಬಗಳ ಹಲವು ಪ್ರಯತ್ನಗಳ ಹೊರತಾಗಿಯೂ ಮನೆಗಳಿಗೆ ಬೆಳಕು ನೀಡುವ ಕಾರ್ಯ ಇನ್ನೂ ಮರೀಚಿಕೆಯಾಗಿದೆ. ಈ ನಡುವೆ ಇತ್ತೀಚೆಗೆ ನಡೆದ ಸರ್ವೇ ಕಾರ್ಯ ಅರಣ್ಯ ವಾಸಿಗಳಲ್ಲಿ ಭರವಸೆಯ ಬೆಳಕು ಮೂಡಿಸಿದೆಯಾದರೂ ಇನ್ನೆಷ್ಟು ಸಮಯ ಕಾಯಬೇಕು ಎಂಬ ಪ್ರಶ್ನೆಗೆ ಸರಕಾರ ಮತ್ತು ಜಿಲ್ಲಾಡಳಿತ ಸ್ಪಷ್ಟ ಉತ್ತರ ನೀಡಬೇಕಿದೆ.

ಬೆಳ್ತಂಗಡಿ ತಾಲೂಕಿನ ನಾರಾವಿ, ಕುತ್ಲೂರು, ಸುಲ್ಕೇರಿ ಮೊಗ್ರು, ನಾವರ, ಸವಣಾಲು, ನಾವೂರು, ಮಲವಂತಿಗೆ, ಮಿತ್ತಬಾಗಿಲು ಮತ್ತು ಶಿರ್ಲಾಲು ಪ್ರದೇಶಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಒಳಪಟ್ಟಿದ್ದು, ಅರಣ್ಯದ ಅಂಚಿನಲ್ಲಿ ವಾಸಿಸುವ ಆದಿವಾಸಿಗಳಿಗೆ ಸೂಕ್ತ ಮೂಲಭೂತ ಸೌಕರ್ಯ ಒದಗಿಸುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ೨೦೨೪ ನವೆಂಬರ್ ೨೬ರಂದು ಸಭೆ ನಡೆದಿತ್ತು. ಈ ಸಭೆಯಲ್ಲಿ ಆದಿವಾಸಿಗಳಿಗೆ ಸೂಕ್ತ ವಸತಿ, ಕುಡಿಯುವ ನೀರು, ನೈರ್ಮಲ್ಯ, ರಸ್ತೆ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕ ನೀಡಲು ಕ್ರಮ, ಅರಣ್ಯದ ಅಂಚಿನಲ್ಲಿರುವ ಭೂಮಿಯನ್ನು ಗುರುತಿಸಿ ಅಭಿವೃದ್ಧಿ, ನಿವೇಶನ ರಹಿತರಿಗೆ ರಾಜೀವ್ ಗಾಂಧಿ ವಸತಿ ನಿಗಮದಡಿ ಮನೆ ಮಂಜೂರು ಮಾಡಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿತ್ತು. ಬಳಿಕ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ದ.ಕ. ಜಿಲ್ಲಾಮಟ್ಟದ ಆದಿವಾಸಿಗಳ ಸಭೆ ನಡೆಸಿದ್ದರು.

ಜಿಲ್ಲಾಧಿಕಾರಿಯ ಸೂಚನೆಯಂತೆ ವಿದ್ಯುತ್, ರಸ್ತೆ ಸಂಪರ್ಕ ಇಲ್ಲದಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಿದ್ಯುತ್ ಮತ್ತು ರಸ್ತೆ ಸಂಪರ್ಕ ಕಲ್ಪಿಸಲು ಸರ್ವೇ ನಡೆದಿದೆ. ಬೆಳ್ತಂಗಡಿ ತಾಲೂಕಿನ ೧೨೦ ಮಲೆಕುಡಿಯ ಕುಟುಂಬಗಳು ವಾಸಿಸುತ್ತಿರುವ ೮ ಗ್ರಾಮಗಳಿಗೆ ಕಂದಾಯ ಮತ್ತು ವನ್ಯಜೀವಿ ಆರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮೆಸ್ಕಾಂ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಸರ್ವೇ ನಡೆಸಿರುವುದು ಅರಣ್ಯ ವಾಸಿಗಳು ರಸ್ತೆ ಸಂಪರ್ಕದ ಜೊತೆ ಬೆಳಕಿನ ಕನಸಿಗೆ ರೆಕ್ಕಪುಕ್ಕ ಸಿಕ್ಕಂತಾಗಿದೆ.

ಹಲವು ದಶಕಗಳ ಹೋರಾಟ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಿಸುವ ಆದಿವಾಸಿಗಳ ಮೂಲಭೂತ ಸೌಲಭ್ಯಕ್ಕಾಗಿ ಹಲವು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಸಮಸ್ಯೆ ಪರಿಹಾರಕ್ಕಾಗಿ ಸರಕಾರ, ಜಿಲ್ಲಾಡಳಿತ ಸಹಿತ ವಿವಿಧ ಇಲಾಖೆಗಳ ಕದ ತಟ್ಟಿದ್ದೇವೆಯಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಇತ್ತೀಚೆಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಆದಿವಾಸಿಗಳ ಸಭೆ ಅಲ್ಪ ಆಶಾಭಾವನೆ ಮೂಡಿಸಿದ್ದು, ಚಾಲ್ತಿಗೆ ಬರುವಂತೆ ಮಾಡುವುದು ಇಲ್ಲಿನ ಜಿಲ್ಲಾಡಳಿತದ ಕರ್ತವ್ಯವಾಗಿದೆ ಎಂದು ಕರ್ನಾಟಕ ಆದಿವಾಸಿಗಳ ಸಮನ್ವಯ ಸಮಿತಿಯ ಸಂಚಾಲಕ ಶೇಖರ್ ಲಾಯಿಲ ಅಭಿಪ್ರಾಯಿಸಿದ್ದಾರೆ.

ಈಗಾಗಲೇ ವಿದ್ಯುತ್ ಮತ್ತು ರಸ್ತೆ ಸಂಪರ್ಕಕ್ಕೆ ಸಂಬಂಧಿಸಿ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಬೆಳ್ತಂಗಡಿ ತಾಲೂಕಿನ ಆದಿವಾಸಿಗಳ ಹಲವು ಗ್ರಾಮಗಳಿಗೆ ಭೇಟಿ ನೀಡಿ ಸರ್ವೇ ಮಾಡಿದ್ದಾರೆ. ಇದು ಇಲ್ಲಿನ ಮುಗ್ದ ಮಲೆಕುಡಿಯರ ಸಂತೋಷಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದಲ್ಲಿ ನಮಗೆ ವಿದ್ಯುತ್ ಮತ್ತು ರಸ್ತೆ ಸಂಪರ್ಕ ಸಿಗಲಿದೆ ಎಂಬ ಆಶಾಭಾವನೆಯಲ್ಲಿ ಅವರಿದ್ದಾರೆ. ಅಲ್ಲದೆ ದ.ಕ. ಜಿಲ್ಲಾಧಿಕಾರಿ ಕೂಡಾ ಈ ಬಗ್ಗೆ ಅತೀವ ಮುತುವರ್ಜಿ ವಹಿಸಿ ಶೀಘ್ರ ಆದಿವಾಸಿಗಳ ಕತ್ತಲೆಯ ಬದುಕಿಗೆ ಪೂರ್ಣ ವಿರಾಮ ಹಾಕಬೇಕು ಎಂದು ಶೇಖರ್ ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆಯ ಕಾನೂನಿನ ತೊಡಕು: ರಾಜ್ಯ ಸರಕಾರ ಮತ್ತು ದ.ಕ. ಜಿಲ್ಲಾಡಳಿತ ವಿಶೇಷ ಆಸಕ್ತಿಯಿಂದ ಆದಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಿದ್ದಾರೆ. ಆದರೆ ಅರಣ್ಯ ಇಲಾಖೆಯ ವನ್ಯ ಜೀವಿ ಸಂರಕ್ಷಣೆಯ ಕಾನೂನಿನ ತೊಡಕು ಸರಕಾರದ ಕಾರ್ಯಗಳಿಗೆ ಅಡ್ಡಿಯಾಗಿದೆ.

ಈ ಮೊದಲು ೨೦೧೬ರಲ್ಲಿ ಸುಲ್ಕೇರಿ ಮೊಗ್ರು ಪರಿಶಿಷ್ಟ ಪಂಗಡ ಕಾಲನಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಅಲ್ಲಿನ ಸ್ಥಳೀಯರು ೫೦ಸಾವಿರ ರೂ. ಖರ್ಚು ಮಾಡಿ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ೨೦೧೯ರಲ್ಲಿ ಈ ಅರ್ಜಿ ವಿಲೇವಾರಿಯಾಗಿ ಅರಣ್ಯ ಸಂರಕ್ಷಣಾ ಕಾಯ್ದೆ ೧೯೮೦ರಡಿ ಕಾಮಗಾರಿಗೆ ಅನುಮತಿ ಸಿಕ್ಕಿತ್ತು. ಅದರಂತೆ ಮೆಸ್ಕಾಂ ಇಲಾಖೆ ಕಾಮಗಾರಿ ನಡೆಸಲು ಮುಂದಾದಾಗ ಅರಣ್ಯ ಇಲಾಖೆಯವರು ಅರಣ್ಯ ಹಕ್ಕು ಕಾಯ್ದೆ ೨೦೦೬ರಡಿ ಅನುಮತಿ ಪಡೆಯಲಾಗಲಿಲ್ಲ ಎಂದು ತಕರಾರು ತೆಗೆದಿದ್ದು, ಇದರಿಂದ ಮತ್ತೆ ವಿದ್ಯುತ್ ಸಂಪರ್ಕ ಹೊಂದುವ ಆದಿವಾಸಿಗಳ ಕನಸು ಕನಸಾಗಿಯೇ ಉಳಿಯಿತು. ಬಳಿಕ ಅರಣ್ಯ ಹಕ್ಕು ಕಾಯ್ದೆಯಡಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಶೇಖರ್ ಲಾಯಿಲ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಯೋಜನಕ್ಕೆ ಬಾರದ ಸೋಲಾರ್: ಆದಿವಾಸಿಗಳಿಗೆ ನಕ್ಸಲ್ ಪ್ಯಾಕೇಜ್ನಡಿ ಸೋಲಾರ್ ದೀಪಗಳನ್ನು ನೀಡಲಾಗಿತ್ತು. ಆದರೆ ಅದು ಹೆಚ್ಚಿನ ಪ್ರಯೋಜನ ನೀಡಿಲ್ಲ. ಆಗಾಗ ಸೋಲಾರ್ ಹಾಳಾಗುತ್ತಿದ್ದು, ಮಳೆಗಾಲದಲ್ಲಂತೂ ಸೋಲಾರ್ ಲೈಟ್ಗಳು ಉರಿಯುವುದೇ ಇಲ್ಲ. ಹಾಗಾಗಿ ತಮಗೆ ಶಾಶ್ವತ ವಿದ್ಯುತ್ ಸಂಪರ್ಕ ಒದಗಿಸಿ ಎಂಬುದು ಆದಿವಾಸಿಗಳ ಒತ್ತಾಯವಾಗಿದೆ.

ಮೂಲಭೂತ ಸೌಲಭ್ಯ ನಿರಾಕರಣೆಯೇ ನಕ್ಸಲ್ ಹುಟ್ಟಿಗೆ ಕಾರಣ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾಗಿ ಎರಡು ದಶಕಗಳು ಕಳೆದಿವೆ. ಅಂದಿನಿಂದ ಆದಿವಾಸಿಗಳ ಸಂಕಷ್ಟದ ಬದುಕು ಆರಂಭಗೊಂಡಿತ್ತು. ಆರಂಭದಲ್ಲಿ ಉದ್ಯಾನವನದೊಳಗಿರುವ ಎಲ್ಲರನ್ನೂ ಒಕ್ಕಲೆಬ್ಬಿಸಲು ಸರಕಾರ ಮುಂದಾಗಿತ್ತು. ಇದರಿಂದ ಕಾಡಿನಲ್ಲಿ ಜೀವನ ನಡೆಸಿಕೊಂಡು ಬರುತ್ತಿರುವ ಆದಿವಾಸಿಗಳು ಭಯಭೀತರಾದರು. ಆ ವೇಳೆಗೆ ಆದಿವಾಸಿಗಳ ಹಕ್ಕುಗಳ ಪರ ನಕ್ಸಲ್ ಹೋರಾಟ ರೂಪುಗೊಂಡಿತ್ತು. ಆದಿವಾಸಿ ಯುವಕರೂ ಇದರ ಭಾಗವಾಗಿ ಜೀವ ಕಳೆದುಕೊಂಡರು. ಆ ವೇಳೆಗೆ ಎಚ್ಚೆತ್ತುಕೊಂಡ ಸರಕಾರ ಆದಿವಾಸಿಗಳಿಗೆ ಕಾಡಿನಲ್ಲಿಯೇ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿತು. ಅಲ್ಲದೆ ನಕ್ಸಲ್ ಪ್ಯಾಕೇಜ್ಗಳು ಘೋಷಣೆಯಾದವು. ಬಳಿಕ ನಿಲುವು ಬದಲಿಸಿದ ಸರಕಾರ ಪುನರ್ವಸತಿಯ ಭರವಸೆ ನೀಡಿತ್ತು. ಸೂಕ್ತ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸುವುದಾಗಿ ತಿಳಿಸಿ ಅನುದಾನ ಬಿಡುಗಡೆಯೂ ಮಾಡಿತ್ತು. ಈ ವೇಳೆ ಬೆರಳೆಣಿಕೆಯ ಕುಟುಂಬಗಳು ಅರಣ್ಯದಿಂದ ಹೊರಬಂದವು. ಕೆಲವರಿಗೆ ಸೂಕ್ತ ಪರಿಹಾರ ದೊರೆತರೆ ಇನ್ನೂ ಹಲವು ಕುಟುಂಬಗಳು ವಂಚಿಸಲ್ಪಟ್ಟವು.

ಆದಿವಾಸಿಗಳಿಗೆ ಸಂವಿಧಾನಬದ್ಧವಾಗಿ ದೊರಕಬೇಕಾದ ಮೂಲಭೂತ ಸೌಲಭ್ಯವನ್ನು ಸರಕಾರ ಒದಗಿಸಬೇಕು. ದೇಶ ಸ್ವಾತಂತ್ರ್ಯಗೊಂಡ ಬಳಿಕವೂ ಇಲ್ಲಿನ ನಿವಾಸಿಗಳು ಚಿಮಿಣಿ ದೀಪದ ಬೆಳಕಿನಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಸರಿಯಾದ ರಸ್ತೆ ಸಂಪರ್ಕವೂ ಇಲ್ಲದೆ ಸಂಕಷ್ಟದ ಬದುಕು ಸವೆಸುತ್ತಿದ್ದಾರೆ. ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಅಭಿವೃದ್ಧಿ ಮಾಡುವ ಆಸಕ್ತಿ ಇದ್ದಲ್ಲಿ ಯಾವುದು ಅಸಾಧ್ಯವಲ್ಲ. ವಿದ್ಯುತ್ ಮತ್ತು ರಸ್ತೆ ಸಂಪರ್ಕವನ್ನು ಒದಗಿಸುವ ಮೂಲಕ ಆದಿವಾಸಿಗಳ ಕತ್ತಲೆಯ ಬದುಕಿಗೆ ಬೆಳಕು ನೀಡುವ ಕೆಲಸವಾಗಲಿ.

- ಶೇಖರ್ ಲಾಯಿಲ, ಸಂಚಾಲಕ, ಕರ್ನಾಟಕ ಆದಿವಾಸಿಗಳ ಸಮನ್ವಯ ಸಮಿತಿ

ಕಳೆದ 15 ವರ್ಷಗಳ ಬಳಿಕ ಇದೇ ಮೊದಲ ಬಾರಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಆದಿವಾಸಿಗಳ ಸಭೆ ನಡೆದಿದೆ. ಇದು ಆದಿವಾಸಿಗಳ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ. ಸರಕಾರ ಮತ್ತು ದ.ಕ. ಜಿಲ್ಲಾಡಳಿತದ ಮೇಲೆ ನಮಗೆ ಭರವಸೆ ಇದೆ. ಈ ಬಾರಿಯಾದರೂ ವಿದ್ಯುತ್ ಮತ್ತು ರಸ್ತೆ ಸಂಪರ್ಕ ಕಲ್ಪಿಸುತ್ತಾರೆ ಎಂಬ ನಂಬಿಕೆ ಇದೆ. ಹಲವು ದಶಕಗಳ ನಮ್ಮ ಹೋರಾಟಕ್ಕೆ ಫಲ ಸಿಗಲಿದೆ ಎಂಬ ಅಶಾಭಾವನೆ ಹೊಂದಿದ್ದೇವೆ.

- ಜಯಾನಂದ ಪಿಲಿಕಳ, ಕಾರ್ಯದರ್ಶಿ, ಕರ್ನಾಟಕ ಆದಿವಾಸಿಗಳ ಸಮನ್ವಯ ಸಮಿತಿ ಬೆಳ್ತಂಗಡಿ


ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಿಸುವ ಆದಿವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಅದರಂತೆ ವಿದ್ಯುತ್ ಮತ್ತು ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮೆಸ್ಕಾಂ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸರ್ವೇ ಕಾರ್ಯ ಪೂರ್ಣಗೊಳಿಸಿದೆ. ಮುಂದಿನ ಯೋಜನೆಯ ಬಗ್ಗೆ ಶೀಘ್ರ ಸಭೆ ಕರೆದು ತೀರ್ಮಾನಿಸಲಾಗುವುದು. ಪಡಿತರ ಚೀಟಿ, ಆಧಾರ್ ಕಾರ್ಡ್, ಇನ್ನಿತರ ದಾಖಲೆ ಪತ್ರಗಳನ್ನು ಕಾನೂನು ಪ್ರಕಾರ ಒದಗಿಸಲಾಗುತ್ತಿದೆ. ಯಾವುದೇ ತಾಂತ್ರಿಕ ತೊಡಕಿದ್ದಲ್ಲಿ ಅಂತಹ ಇಲಾಖೆಯ ಜೊತೆ ಸಮನ್ವಯ ಸಾಧಿಸಿ ಕಾನೂನು ರೀತಿಯಲ್ಲಿ ಆದಿವಾಸಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಲಾಗುವುದು.

- ಮುಲ್ಲೈ ಮುಗಿಲನ್, ದ.ಕ. ಜಿಲ್ಲಾಧಿಕಾರಿ

ಈಗಾಗಲೇ ವಿದ್ಯುತ್ ಸಂಪರ್ಕಕ್ಕಾಗಿ ಸುಲ್ಕೇರಿ ಮೊಗ್ರು ಪರಿಶಿಷ್ಟ ಪಂಗಡದ ಕಾಲನಿ ನಿವಾಸಿಗಳ ಅರ್ಜಿ ಅಂತಿಮ ಹಂತದಲ್ಲಿದ್ದು, ಶೀಘ್ರ ಕಾನೂನು ಪ್ರಕಾರ ವಿದ್ಯುತ್ ಸಂಪರ್ಕಕ್ಕಾಗಿ ಅನುಮತಿ ಸಿಗಲಿದೆ. ಉಳಿದ ಗ್ರಾಮ ಗಳಲ್ಲಿ ಮೆಸ್ಕಾಂನಿಂದ ಸರ್ವೇ ಕಾರ್ಯ ನಡೆದಿದ್ದು, ಅನುಮತಿ ಕೋರಿ ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗಕ್ಕೆ ಯಾವುದೇ ಅರ್ಜಿ ಬಂದಿಲ್ಲ.

- ಶಿವರಾಮ ಬಾಬು, ಉಪಅರಣ್ಯ ಸಂರಕ್ಷಣಾಧಿಕಾರಿ, ಕುದುರೆಮುಖ ವನ್ಯಜೀವಿ ವಿಭಾಗ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಂಶುದ್ದೀನ್ ಎಣ್ಮೂರು

contributor

Similar News