×
Ad

ಪೌರ ಕಾರ್ಮಿಕರ ಬದುಕಿನಲ್ಲಿ ಬೆಳಕು ಮೂಡೀತೇ?

ಎರಡು ವರ್ಷ (27.10.2017ರಿಂದ 27.10.2019) ಅವಧಿಗೆ ಸ್ಥಳೀಯ ಸಂಸ್ಥೆಗಳೇ ನೇರವಾಗಿ ಸ್ವಚ್ಛತಾ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಅನುವು ಮಾಡಿಕೊಡುವ ಅಧಿಸೂಚನೆಯನ್ನು ಸರಕಾರ ಹೊರಡಿಸಿತು. ಇವರಿಗೆ ಸ್ಥಳೀಯ ಸಂಸ್ಥೆಗಳೇ ವೇತನ ಪಾವತಿಸುವ ನೂತನ ವ್ಯವಸ್ಥೆ ಜಾರಿಗೆ ಬಂತು. ಖಾಲಿ ಇರುವ ಹುದ್ದೆಗಳಿಗೆ ಹಂತ ಹಂತವಾಗಿ ನೇಮಕ ಮಾಡಿಕೊಳ್ಳಲು ತಿಳಿಸಲಾಯಿತು. ಎರಡು ವರ್ಷ ಮುಗಿದು ಹೋಯಿತು. ನೇರ ವೇತನ ಪದ್ಧತಿ ಅವಧಿ ಕೊನೆಗೊಂಡಿತು. ಈ ವಿಷಯದಲ್ಲಿ ಸ್ವಚ್ಛತಾ ಕಾರ್ಮಿಕರ ಹಿತವನ್ನು ಕಾಪಾಡುವಂಥ ಹೊಸ ಆದೇಶ ಬರಲಿಲ್ಲ. ಪರಿಣಾಮ? ಹೊರಗುತ್ತಿಗೆ ಬದಲು ಒಳಗುತ್ತಿಗೆ ಜಾರಿಯಾಗುತ್ತಿದೆ.

Update: 2023-10-01 12:12 IST

 ನಮ್ಮ ಸಮಾಜದಲ್ಲಿ ವೈಯಕ್ತಿಕ ಘನತೆಯಿಂದ ಅಪಾರವಾಗಿ ವಂಚಿತಗೊಂಡಿರುವ ಒಂದು ಸಮೂಹ ಪೌರ ಕಾರ್ಮಿಕರದ್ದು. ಗ್ರಾಮ-ಪಟ್ಟಣ-ನಗರ-ಮಹಾನಗರಗಳನ್ನು ಶುಚಿಗೊಳಿಸುವ ಮೂಲಕ ಇಡೀ ಸಮಾಜವನ್ನು ಆರೋಗ್ಯವಾಗಿ ಇಡುವುದಕ್ಕೆ ಪ್ರತ್ಯಕ್ಷ ಕಾರಣಕರ್ತರು ಇವರು. ರಸ್ತೆ, ಮೈದಾನ, ಚರಂಡಿ ಇತ್ಯಾದಿಗಳನ್ನು ಗುಡಿಸಿ, ಶುಚಿಯಾಗಿಡುವುದು ಇವರ ಕಾಯಕ.

ರಸ್ತೆ-ಮೈದಾನಗಳಲ್ಲಿ ಜನರು ಅಂದರೆ ನಾವು ಕಾಗದ, ಪ್ಲಾಸ್ಟಿಕ್ ಕವರ್, ಚಾಕ್ಲೆಟ್ ಕವರ್, ಕಸ, ಗಾಜಿನ ಚೂರು, ತರಕಾರಿ ಸಿಪ್ಪೆ ಇತ್ಯಾದಿ ಏನೆಲ್ಲವನ್ನೂ ಬೀಸಾಕಿರುತ್ತೇವೆ. ರಸ್ತೆಯಲ್ಲಿ ಉಗುಳಿರುತ್ತೇವೆ. ಮೂಗು ಸೀಟಿಕೊಂಡು, ಸಿಂಬಳವನ್ನು ಬೀಸಾಡಿರುತ್ತೇವೆ. ಕೆಲವು ಕಡೆ ಮಕ್ಕಳು ಶೌಚ ಕೂಡಾ ಮಾಡಿರುತ್ತಾರೆ. ಇವೆಲ್ಲನ್ನೂ ಶುಚಿಗೊಳಿಸುವವರು ಪೌರಕಾರ್ಮಿಕರು.

ಇನ್ನು ಚರಂಡಿಗಳ ಕತೆಯೇ ಬೇರೆ. ಏಕೆಂದರೆ, ನಮ್ಮಲ್ಲಿ ಯುಜಿಡಿ (ಅಂಡರ್‌ಗ್ರೌಂಡ್ ಡ್ರೈನೇಜ್) ರಾಜ್ಯದ ಕಾಲುಭಾಗ ಪ್ರದೇಶದಲ್ಲೂ ಇಲ್ಲ. ತೆರೆದ ಚರಂಡಿಗಳೇ ಎಲ್ಲಾ ಕಡೆ. ಇವುಗಳನ್ನು ಶುಚಿಗೊಳಿಸುವವರೂ ಇದೇ ಪೌರ ಕಾರ್ಮಿಕರು. ಇಂಥ ಪೌರ ಕಾರ್ಮಿಕರ ಬದುಕಿನ ಬವಣೆ ದಶಕಗಳಿಂದಲೂ ಹಾಗೇ ಮುಂದುವರಿದುಕೊಂಡು ಬಂದಿದೆ.

ಅಂಬೇಡ್ಕರ್ ಕರೆ

ಸ್ವಾತಂತ್ರ್ಯ ಬಂದು, ಸಂವಿಧಾನ ಜಾರಿಗೊಳ್ಳುವುದಕ್ಕೂ ಮೊದಲೇ ಸಮಸ್ತ ಶೋಷಿತರ ವಿಮೋಚನಾಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರು ‘‘ಕಸ ಗುಡಿಸುವ ಕೆಲಸವನ್ನೂ ಉದ್ಯೋಗ ಎಂದು ಪರಿಗಣಿಸಿ, ಅದನ್ನು ನಿರ್ವಹಿಸಲು ಅಗತ್ಯ ಸೌಲಭ್ಯಗಳನ್ನು ಕೆಲಸಗಾರರಿಗೆ ಒದಗಿಸಬೇಕು; ಈ ಕೆಲಸಕ್ಕೆ ಎಲ್ಲರನ್ನೂ ತೆಗೆದುಕೊಳ್ಳಬೇಕು. ಕೆಲಸಗಾರರಿಗೆ ಸೇವಾ ಭದ್ರತೆ, ಭಡ್ತಿ ಇತ್ಯಾದಿಗಳು ಇರಬೇಕು. ಈ ಕೆಲಸಗಾರರಿಗೆ ಸೇವಾ ಘನತೆ ದೊರಕಬೇಕು...’’ ಇತ್ಯಾದಿ ಹಕ್ಕೊತ್ತಾಯಗಳನ್ನು ಮಾಡಿದ್ದರು.

ಮಹಾರಾಷ್ಟ್ರ ಸರಕಾರದ ನಡೆ

1949ರಲ್ಲಿ ಅಂದಿನ ಬಾಂಬೆ ಸರಕಾರ ದೇಶದಲ್ಲೇ ಪ್ರಥಮ ಬಾರಿಗೆ ಸ್ವಚ್ಛತಾ ಸಮುದಾಯದ ಜೀವನ ಸ್ಥಿತಿ-ಗತಿ, ಸೇವಾ ನ್ಯೂನತೆಗಳನ್ನು ಸರಿಪಡಿಸಲು ಮತ್ತು ಇವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ವಿ.ಎನ್. ಬರ್ವೆ ಅವರ ನೇತೃತ್ವದಲ್ಲಿ ‘ಸ್ವೀಪರ್ಸ್‌ ಮತ್ತು ಸ್ಕ್ಯಾವೆಂಜರ್ಸ್ ಜೀವನ ಮತ್ತು ಸೇವಾ ಸುಧಾರಣಾ ಸಮಿತಿ’ (Scavengers' Living Conditions Enquiry Committee)ಯನ್ನು ನೇಮಕ ಮಾಡಿತು.

ಈ ಸಮಿತಿ 1949ರಿಂದ 1952ರವರೆಗೆ ಬಾಂಬೆ ಸರಕಾರದ ಅಧೀನಕ್ಕೆ ಒಳಪಟ್ಟ ಎಲ್ಲಾ ಪ್ರಾಂತಗಳಿಗೆ ಪ್ರವಾಸ ಮಾಡಿ, ಅಧ್ಯಯನ ಮಾಡಿ, ವರದಿ ಹಾಗೂ ಶಿಫಾರಸುಗಳನ್ನು ಬಾಂಬೆ ಸರಕಾರಕ್ಕೆ ನೀಡಿತು. ಇಂದು ನಮ್ಮ ರಾಜ್ಯದಲ್ಲಿರುವ ವಿಜಯಪುರ, ಧಾರವಾಡ ಹಾಗೂ ಕಾರವಾರ ಜಿಲ್ಲೆಗಳು ಅಂದು ಬಾಂಬೆ ಪ್ರಾಂತಕ್ಕೆ ಸೇರಿದ್ದವು. ಬರ್ವೆ ಸಮಿತಿಯು 1952ರಲ್ಲಿ ತನ್ನ ವರದಿಯನ್ನು ನೀಡಿತು.

ಈ ಸಮಿತಿಯ ಶಿಫಾರಸುಗಳು ಒಂದೊಂದಾಗಿ ಜಾರಿಯಾಗಿ, ಸ್ವಚ್ಛತಾ ಸಮುದಾಯದ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದವು.

ಕೇಂದ್ರ ಸರಕಾರದ ಮುತುವರ್ಜಿ

ಕೇಂದ್ರ ಸರಕಾರದ ಗೃಹ ಸಚಿವರಾಗಿದ್ದ ಗೋವಿಂದ ವಲ್ಲಭ ಪಂತ್ ಅವರು ಸ್ವಚ್ಛತಾ ಕಾರ್ಮಿಕರ ಜೀವನ ಸುಧಾರಣೆಗಾಗಿ 1957ರಲ್ಲಿ ರಾಷ್ಟ್ರೀಯ ಸಮಿತಿಯನ್ನು ನೇಮಕ ಮಾಡಿದರು. ಈ ರಾಷ್ಟ್ರೀಯ ಸಮಿತಿಯು, ಸ್ವಚ್ಚತಾ ಕಾರ್ಮಿಕರು ಅಮಾನುಷ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದುದನ್ನು, ಅವರು ಮಲ ಹೊತ್ತು ಸಾಗಿಸುತ್ತಿದ್ದುದನ್ನು ಗಮನಿಸಿತು. ಈ ಕುರಿತು ಸರಕಾರಕ್ಕೆ ಅಗತ್ಯ ಶಿಫಾರಸುಗಳೊಂದಿಗೆ ವರದಿಯನ್ನು ನೀಡಿತು.

ಈ ವರದಿಯನ್ನು ಪರಿಶೀಲನೆ ಮಾಡಲು ಕೇಂದ್ರ ಸರಕಾರವು ಪ್ರೊ. ಎನ್.ಆರ್. ಮಲ್ಕಾನಿ ಅವರ ಅಧ್ಯಕ್ಷತೆಯಲ್ಲಿ ಸ್ವಚ್ಚತಾ ಕಾರ್ಮಿಕರ ಜೀವನ ಸುಧಾರಣೆ ಹಾಗೂ ಮಲ ಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡಲು ಇನ್ನೊಂದು ರಾಷ್ಟ್ರೀಯ ಸಮಿತಿಯನ್ನು ನೇಮಕ ಮಾಡಿತು. ಇದರಲ್ಲಿ ಪಿ.ಎನ್.ರಾಜಭೋಜ್, ಕೆ.ಎಲ್.ವಾಲ್ಮೀಕಿ, ರಾಜಕೃಷ್ಣ ಬೋಸ್, ಎನ್.ಎಸ್.ಕಾಜ್ರೋಳ್ಕರ್ ಸದಸ್ಯರಾಗಿದ್ದರು. ಒ.ಕೆ.ಮೂರ್ತಿ ಕಾರ್ಯದರ್ಶಿ ಆಗಿದ್ದರು. ಈ ಸಮಿತಿಯು 1957ರಿಂದ 1960ರವರೆಗೆ ದೇಶದ ಉದ್ದಗಲಕ್ಕೂ ಪ್ರವಾಸ ಮಾಡಿ, ಅಧ್ಯಯನ ಮಾಡಿ, ಭಾರತ ಸರಕಾರಕ್ಕೆ 48 ಶಿಫಾರಸುಗಳೊಂದಿಗೆ ವರದಿಯನ್ನು ಸಲ್ಲಿಸಿತು.

ಈ ಶಿಫಾರಸುಗಳ ಅನ್ವಯ, ದೇಶದ ಎಲ್ಲಾ ಮುನಿಸಿಪಾಲಿಟಿ ಹಾಗೂ ಸ್ಥಳೀಯ ಸಂಸ್ಥೆಗಳು ಸ್ವಚ್ಛತಾ ಕಾರ್ಮಿಕರ ಸೇವೆಗೆ ವಿಶೇಷ ಕಾಳಜಿ ವಹಿಸಿದವು. ಯಾವುದೇ ಕಾರಣಕ್ಕೂ ಮಲ ಹೊರುವ ಪದ್ಧತಿಯನ್ನು ಜೀವಂತವಾಗಿ ಇಡಬಾರದು, ಕನಿಷ್ಠ ಕಾಲ ಮಿತಿಯೊಳಗೆ, ಮಲ ಹೊರುವ ಪದ್ಧತಿಯನ್ನು ನಿಷೇಧಿಸಬೇಕು, ಅದನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು, ಕಾರ್ಮಿಕರ ಸಂಕಷ್ಟಕ್ಕೆ ವಿಶೇಷ ಹಣಕಾಸು ವ್ಯವಸ್ಥೆಯನ್ನು ಜಾರಿ ಮಾಡಬೇಕು ಎಂದು ಕೇಂದ್ರ ಸರಕಾರ ಆದೇಶ ಮಾಡಿತು.

ಎಪ್ರಿಲ್ 3, 1959ರಲ್ಲಿ ಕೇಂದ್ರ ಸರಕಾರದ ಗೃಹ ಮಂತ್ರಿ ಜಿ.ಬಿ. ಪಂತ್ ಅವರು ಮುಖ್ಯಮಂತ್ರಿಗಳ ಸಭೆಯಲ್ಲಿ ಅನಿಷ್ಟವಾಗಿರುವ ಮಲ ಹೊರುವ ಪದ್ಧತಿಯನ್ನು ಕೂಡಲೇ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿತು.

ಕೇಂದ್ರ ಸರಕಾರವು 1972ರಲ್ಲಿ ದೇಶದ 25ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಮರಣೀಯವಾಗಿಸಲು ಹಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಿತು. ಅವುಗಳಲ್ಲಿ ಮಲಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು ಎಂಬುದೂ ಸೇರಿತ್ತು.

ನಮ್ಮ ರಾಜ್ಯ ಸರಕಾರದ ನಿರ್ಧಾರ

ಆಗಿನ ಮೈಸೂರು ರಾಜ್ಯ ಸರಕಾರ, ಮಲ ಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡಲು ಹಾಗೂ ರಾಜ್ಯದಲ್ಲಿರುವ ಸ್ವಚ್ಚತಾ ಕಾರ್ಮಿಕರ ಜೀವನ ಮತ್ತು ಸೇವಾ ಸುಧಾರಣೆಗಾಗಿ ರಾಜ್ಯ ಮಟ್ಟದ ಸಮಿತಿ ನೇಮಿಸಲು ನಿರ್ಧರಿಸಿತು. ಆಗ ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಸಮಾನತೆಯ ಹರಿಕಾರ ದೇವರಾಜ ಅರಸು. ಅರಸು ಅವರ ಚಿಂತನೆಗೆ ಜೊತೆಗಾರರಾಗಿ ಆಗ ನಿಂತಿದ್ದು ರಾಜ್ಯ ಸರಕಾರದಲ್ಲಿ ಪೌರ ಆಡಳಿತ ಸಚಿವರಾಗಿದ್ದ ಬಿ. ಬಸವಲಿಂಗಪ್ಪ.

ಐ.ಪಿ.ಡಿ.ಸಾಲಪ್ಪ ಸಮಿತಿ ರಚನೆ

ನಮ್ಮ ರಾಜ್ಯ ಸರಕಾರ, ಕರ್ನಾಟಕದಲ್ಲಿ ಮ್ಯಾನುವಲ್ ಸ್ಕ್ಯಾವೆಂಜಿಂಗ್ ಪರಿಸ್ಥಿತಿ ಏನಿದೆ? ಸ್ವಚ್ಚತಾ ಕಾರ್ಮಿಕರು ಯಾವ ರೀತಿ ಬದುಕನ್ನು ನಡೆಸುತ್ತಿದ್ದಾರೆ? ಅವರ ಸಂಖ್ಯೆ ಎಷ್ಟಿದೆ? ಅವರಿಗೆ ಕೆಲಸ ಎಷ್ಟಿದೆ? ಅವರು ಕೆಲಸ ಮಾಡುತ್ತಿರುವ ವಾತಾವರಣ ಹೇಗಿದೆ? ಅವರಿಗೆ ಯಾವ್ಯಾವ ಭದ್ರತಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ? ಇತ್ಯಾದಿ ಪ್ರಶ್ನೆಗಳನ್ನು ಕುರಿತು ರಾಜ್ಯಾದ್ಯಂತ ಅಧ್ಯಯನ ನಡೆಸಲು 1972ರಲ್ಲಿ ಐ.ಪಿ.ಡಿ. ಸಾಲಪ್ಪ ಅವರ ಅಧ್ಯಕ್ಷತೆಯಲ್ಲಿ The Committee on the Improvement of Living and Working Conditions of Sweepers and Scavengers (ಸ್ವೀಪರ್ಸ್‌ ಮತ್ತು ಸ್ಕ್ಯಾವೆಂಜರ್ಸ್ ಜೀವನ ಹಾಗೂ ಕರ್ತವ್ಯ ಸ್ಥಿತಿಗತಿ ಅಧ್ಯಯನ ಮತ್ತು ಸುಧಾರಣಾ ಸಮಿತಿ) ಎಂಬ ಸಮಿತಿಯನ್ನು ರಚಿಸಿತು.

ಈ ಸಮಿತಿಯಲ್ಲಿ ಪಿ.ಎನ್. ರಾಮಚಂದ್ರ, ಶ್ರೀಮತಿ ಲಕ್ಷ್ಮೀ ಸುಬ್ಬರಾವ್, ಎಸ್.ಎ. ಮುಲ್ಲಾ, ಕೆ. ಶ್ರೀರಾಮುಲು, ಶಾಸಕರಾದ ಪಿ.ಡಿ. ಬಂಗೇರ, ಟಿ. ಆರ್. ಶಾಮಣ್ಣ, ನಾರಾಯಣ ಸಿಂಗ್, ಕೋಣಂದೂರು ಲಿಂಗಪ್ಪ, ಎಸ್.ಸಿ. ವೆಂಕಟೇಶ್, ಎ.ಕೆ. ಅನಂತಕೃಷ್ಣ, ಜಿ.ಪಿ. ಗಂಜಿಗಟ್ಟಿ, ಎಂ. ರಘುಪತಿ ನಾಲ್ಕು ವರ್ಷ ಅಧ್ಯಯನ ಮಾಡಿದ ಸಮಿತಿಯು 1976ರಲ್ಲಿ ವರದಿಯನ್ನು ಸಲ್ಲಿಸಿತು.

ಮಲ ಹೊರುವ ಪದ್ಧತಿ ನಿಷೇಧ

ಐ.ಪಿ.ಡಿ.ಸಾಲಪ್ಪ ಸಮಿತಿ ನೀಡಿದ ಮಧ್ಯಂತರ ವರದಿಯನ್ನು ಆಧರಿಸಿ, ರಾಜ್ಯ ಸರಕಾರವು 15 ಆಗಸ್ಟ್ 1973ರಂದು ಮಲವನ್ನು ತಲೆ ಮೇಲೆ ಹೊತ್ತೊಯ್ಯುವುದನ್ನು ಮತ್ತು ಮಲವನ್ನು ಕೈಯಿಂದ ಮುಟ್ಟಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಿತು. ಮಾನವ ಘನತೆಯನ್ನು ಕಾಪಾಡಲು ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ ಯನ್ನು ಜಾರಿಗೆ ತಂದರು. ಈ ಚಾರಿತ್ರಿಕ ಆದೇಶ ದೇಶದಲ್ಲೇ ಸಂಚಲನ ಮೂಡಿಸಿತು.

ನಂತರ, ಸ್ವಚ್ಛತಾ ಕಾರ್ಮಿಕರು ಗ್ರಾಮ/ಪಟ್ಟಣ/ನಗರ/ಮಹಾನಗರವನ್ನು ಸ್ವಚ್ಛಗೊಳಿಸುವ ಕಾರ್ಮಿಕರಾಗಿರುವುದರಿಂದ, ಇವರನ್ನು ಇನ್ನು ಮುಂದೆ ಪೌರಕಾರ್ಮಿಕರೆಂದು ಗುರುತಿಸಲು ಪೌರ ಆಡಳಿತ ಮಂತ್ರಿ ಬಿ. ಬಸವ ಲಿಂಗಪ್ಪ ಆದೇಶಿಸಿದರು. ಆಗ, ಬಿ. ಬಸವಲಿಂಗಪ್ಪ ಅವರೊಂದಿಗೆ ಜೊತೆಗೂಡಿ ಕೆಲಸ ಮಾಡಿದ್ದು ಕಂದಾಯ ಮಂತ್ರಿ ಡಿ. ಕೆ. ನಾಯ್ಕರ್.

ಐ.ಪಿ.ಡಿ.ಸಾಲಪ್ಪ ಸಮಿತಿಯು 1973ರಿಂದ 1976ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಬೇರೆ ರಾಜ್ಯಗಳಲ್ಲಿ ಪ್ರವಾಸ ಮಾಡಿ, ಅಧ್ಯಯನ ಮಾಡಿ, ಮಾಹಿತಿ ಸಂಗ್ರಹಿಸಿ, ಎಪ್ರಿಲ್ 1976ರಲ್ಲಿ ರಾಜ್ಯ ಸರಕಾರಕ್ಕೆ 310 ಪುಟಗಳ ಸಮಗ್ರ ವರದಿ ಹಾಗೂ 17 ಅಂಶಗಳ 96 ಶಿಫಾರಸುಗಳನ್ನು ಸರಕಾರಕ್ಕೆ ಸಲ್ಲಿಸಿತು.

ಈ ಶಿಫಾರಸುಗಳಲ್ಲಿ ಕೆಲವು ಅಗತ್ಯ ಶಿಫಾರಸುಗಳನ್ನು ಕರ್ನಾಟಕ ಸರಕಾರ ಮಾನ್ಯ ಮಾಡಿ, ಅಂಗೀಕರಿಸಿತು. ಅವುಗಳನ್ನು ಸುತ್ತೋಲೆ ಸಂಖ್ಯೆ ಎಚ್.ಎಂ.ಎ./118/ಎಂ.ಎನ್.ಎಂ./77 ದಿನಾಂಕ 30 ಜೂನ್ 1977ರಲ್ಲಿ ತಿಳಿಸಿ, ಎಲ್ಲಾ ಶಿಫಾರಸುಗಳನ್ನು ಎಲ್ಲಾ ಮುನ್ಸಿಪಾಲಿಟಿಗಳು ಕೂಡಲೇ ಜಾರಿ ಮಾಡಲು ಸೂಚಿಸಲಾಯಿತು. ಕೈಗೊಂಡ ಕ್ರಮಗಳನ್ನು ಮೂರು ತಿಂಗಳೊಳಗಾಗಿ ಸರಕಾರಕ್ಕೆ ವರದಿ ನೀಡುವಂತೆಯೂ ತಿಳಿಸಲಾಯಿತು.

ಈ ಸುತ್ತೋಲೆಯಲ್ಲಿ ತಿಳಿಸಲಾಗಿರುವ 36 ಅಂಶಗಳ ಪೈಕಿ, ಬಹು ಮುಖ್ಯವಾದ ಅನೇಕ ಅಂಶಗಳು ಇದುವರೆಗೂ ಜಾರಿ ಆಗಿಲ್ಲ. ಈ ಕುರಿತು ಸರಕಾರವನ್ನು ಪ್ರಶ್ನಿಸುವ ಕೆಲಸ ಆಗಬೇಕು. ಪೌರ ಕಾರ್ಮಿಕರ ಸಂಘಗಳೂ ಇವೆ; ದಲಿತ ಸಂಘಟನೆಗಳೂ ಇವೆ. ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳೂ ಇದ್ದಾರೆ. ಶಾಸಕರು ಕೂಡ ಇದ್ದಾರೆ. ಜೊತೆಗೆ ಜವಾಬ್ದಾರಿ ಇರುವ ನಾಗರಿಕ ಗುಂಪುಗಳೂ ಇವೆ. ಇವರೆಲ್ಲರೂ ಒಗ್ಗೂಡಿ ಸರಕಾರದ ಮೇಲೆ ಒತ್ತಡ ತರುವ ಕೆಲಸ ತೀವ್ರವಾಗಿ ಆಗಬೇಕಿದೆ. ಗುತ್ತಿಗೆ ಪದ್ಧತಿ ಹೆಸರಲ್ಲಿ ನಡೆದಿರುವ ಅಧ್ವಾನವನ್ನು ಕೊನೆಗೊಳಿಸಬೇಕಿದೆ. ಜನಸಂಖ್ಯೆಗೆ ತಕ್ಕ ಪ್ರಮಾಣದಲ್ಲಿ ಪೌರ ಕಾರ್ಮಿಕರ ನೇಮಕಾತಿ ಆಗಬೇಕಿದೆ.

ಎರಡು ವರ್ಷ (27.10.2017ರಿಂದ 27.10.2019) ಅವಧಿಗೆ ಸ್ಥಳೀಯ ಸಂಸ್ಥೆಗಳೇ ನೇರವಾಗಿ ಸ್ವಚ್ಛತಾ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಅನುವು ಮಾಡಿಕೊಡುವ ಅಧಿಸೂಚನೆಯನ್ನು ಸರಕಾರ ಹೊರಡಿಸಿತು. ಇವರಿಗೆ ಸ್ಥಳೀಯ ಸಂಸ್ಥೆಗಳೇ ವೇತನ ಪಾವತಿಸುವ ನೂತನ ವ್ಯವಸ್ಥೆ ಜಾರಿಗೆ ಬಂತು. ಖಾಲಿ ಇರುವ ಹುದ್ದೆಗಳಿಗೆ ಹಂತ ಹಂತವಾಗಿ ನೇಮಕ ಮಾಡಿಕೊಳ್ಳಲು ತಿಳಿಸಲಾಯಿತು. ಎರಡು ವರ್ಷ ಮುಗಿದು ಹೋಯಿತು. ನೇರ ವೇತನ ಪದ್ಧತಿ ಅವಧಿ ಕೊನೆಗೊಂಡಿತು. ಈ ವಿಷಯದಲ್ಲಿ ಸ್ವಚ್ಛತಾ ಕಾರ್ಮಿಕರ ಹಿತವನ್ನು ಕಾಪಾಡುವಂಥ ಹೊಸ ಆದೇಶ ಬರಲಿಲ್ಲ. ಪರಿಣಾಮ? ಹೊರಗುತ್ತಿಗೆ ಬದಲು ಒಳಗುತ್ತಿಗೆ ಜಾರಿಯಾಗುತ್ತಿದೆ.

ಪ್ರಸಕ್ತ ರಾಜ್ಯದ ಆಡಳಿತದ ಚುಕ್ಕಾಣಿಯನ್ನು ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜವಾದಿ ಚಿಂತನೆಯ ಹಿನ್ನೆಲೆಯವರು. ರಾಜ್ಯವನ್ನು ಕಲ್ಯಾಣ ರಾಜ್ಯವನ್ನಾಗಿ ರೂಪಿಸುವ ಪಣ ತೊಟ್ಟವರು. ಅವರಿಗೆ ವಿಷಯವನ್ನು ಮನವರಿಕೆ ಮಾಡಿ ಕೊಡುವುದು ಕಠಿಣವಲ್ಲ. ಸಂಬಂಧಪಟ್ಟವರು ಈ ದಿಸೆಯಲ್ಲಿ ಕಾರ್ಯಾಚರಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಸುಬ್ಬಣ್ಣ ನಾಗರಾಜು

contributor

Similar News