×
Ad

ಬೂಕರ್ ನಮ್ಮೆಲ್ಲರದ್ದು ಎಂದು ಕನ್ನಡಿಗರು ಅಪ್ಪಿಕೊಂಡರು -ಬಾನು ಮುಷ್ತಾಕ್

ಇದು ನನಗೆ ವೈಯಕ್ತಿಕವಾಗಿ ದೊರೆತ ಮನ್ನಣೆಯಲ್ಲ. ಬದಲಿಗೆ ಕನ್ನಡ ಭಾಷೆಗೆ ಸಿಕ್ಕ ಗೌರವ, ಮನ್ನಣೆ. ಇಡೀ ಕನ್ನಡಿಗರು ಈ ಪ್ರಶಸ್ತಿಯನ್ನು ಅನುಭವಿಸುತ್ತಿರುವುದು, ಆಸ್ವಾದಿಸುತ್ತಿರುವುದು, ತಮ್ಮ ಮನೆಯ ಹಬ್ಬದ ರೀತಿ ಆಚರಿಸುತ್ತಿರುವುದು ಮತ್ತು ಈ ಮೂಲಕ ಭಾವೈಕ್ಯತೆಯ ಸನ್ನಿವೇಶ ಮತ್ತು ಸೌಹಾರ್ದಯುತ ವಾತಾವರಣ ಸೃಷ್ಟಿ ಮಾಡಿರುವುದು ಬಹಳ ಮುಖ್ಯವಾಗುತ್ತದೆ.

Update: 2025-06-03 09:54 IST

ಕನ್ನಡದ ಹಿರಿಯ ಸಾಹಿತಿ ಹಾಗೂ ಕನ್ನಡದ ಸಾಹಿತ್ಯದ ಘಮಲನ್ನು ವಿಶ್ವಕ್ಕೆ ಪರಿಚಯಿಸಿ, ಕನ್ನಡಕ್ಕೆ ಮೊದಲ ಅಂತರ್‌ರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ತಂದುಕೊಟ್ಟ ಹೆಮ್ಮೆಯ ಕನ್ನಡತಿ ಬಾನು ಮುಷ್ತಾಕ್‌ರವರ ಜೊತೆಗೆ ‘ವಾರ್ತಾಭಾರತಿ’ ನಡೆಸಿದ ವಿಶೇಷ ಸಂದರ್ಶನದ ಬರಹ ರೂಪ ಇಲ್ಲಿದೆ.

► 40 ವರ್ಷದ ಬರವಣಿಗೆಯ ಅನುಭವದಲ್ಲಿ ಪತ್ರಕರ್ತೆಯಾಗಿ, ವಕೀಲೆಯಾಗಿ, ಸಾಹಿತಿಯಾಗಿ ಸಾಕಷ್ಟು ಅನುಭವ ಪಡೆದುಕೊಂಡಿದ್ದೀರಿ, ಈಗ ಬೂಕರ್ ಪ್ರಶಸ್ತಿ ದೊರಕಿದ ನಂತರ ನಿಮ್ಮ ಅಭಿಪ್ರಾಯವೇನು?

ಬಾನು ಮುಷ್ತಾಕ್: ಬೂಕರ್ ಪ್ರಶಸ್ತಿ ಪಡೆದುಕೊಂಡ ಅನುಭವ ಬಹಳ ವಿಶಿಷ್ಟವಾದದ್ದು, ಅದನ್ನು ಮಾತಿನಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಇದು ನನಗೆ ವೈಯಕ್ತಿಕವಾಗಿ ದೊರೆತ ಮನ್ನಣೆಯಲ್ಲ. ಬದಲಿಗೆ ಕನ್ನಡ ಭಾಷೆಗೆ ಸಿಕ್ಕ ಗೌರವ, ಮನ್ನಣೆ. ಇಡೀ ಕನ್ನಡಿಗರು ಈ ಪ್ರಶಸ್ತಿಯನ್ನು ಅನುಭವಿಸುತ್ತಿರುವುದು, ಆಸ್ವಾದಿಸುತ್ತಿರುವುದು, ತಮ್ಮ ಮನೆಯ ಹಬ್ಬದ ರೀತಿ ಆಚರಿಸುತ್ತಿರುವುದು ಮತ್ತು ಈ ಮೂಲಕ ಭಾವೈಕ್ಯತೆಯ ಸನ್ನಿವೇಶ ಮತ್ತು ಸೌಹಾರ್ದಯುತ ವಾತಾವರಣ ಸೃಷ್ಟಿ ಮಾಡಿರುವುದು ಬಹಳ ಮುಖ್ಯವಾಗುತ್ತದೆ.

► ಕನ್ನಡದ ಕೃತಿ ಇತರ ಭಾಷೆಗೆ ಭಾವಾನುವಾದ ಆದರೆ ಮತ್ತಷ್ಟು ಮನ್ನಣೆ ಸಿಗುತ್ತದೆ ಎಂದು ನಿಮಗೆ ಅನಿಸುತ್ತದೆಯೇ?

ಬಾನು ಮುಷ್ತಾಕ್: ಖಂಡಿತ ಹೌದು, ನಮ್ಮ ಸ್ಥಳೀಯ ಸಂಸ್ಕೃತಿ, ಆಚಾರ ವಿಚಾರವನ್ನು ತಿಳಿದುಕೊಳ್ಳಬೇಕೆಂಬ ಆಸಕ್ತಿ ಪ್ರಪಂಚದ ಇತರ ಭಾಗದ ಜನರಿಗೂ ಇರುತ್ತದೆ. ಹಾಗಾಗಿ ಸಾಹಿತ್ಯ ತನ್ನ ಎಲ್ಲೆಗಳನ್ನು ವಿಸ್ತರಿಸಿಕೊಳ್ಳಬೇಕು. ಅದು ಅಗತ್ಯ ಕೂಡ ಹೌದು. ಕನ್ನಡದಲ್ಲಿ ಬಹಳ ಸತ್ವಯುತ ಸಾಹಿತ್ಯ ಇರುವುದರಿಂದ ಕನ್ನಡಕ್ಕೆ ವಿಪುಲವಾದ ಅವಕಾಶಗಳಿವೆ.

► ಭಾವಾನುವಾದಕ್ಕೆ ಇಂಗ್ಲಿಷ್ ಭಾಷೆ ಅನಿವಾರ್ಯವೇ?

ಬಾನು ಮುಷ್ತಾಕ್: ಇಂಗ್ಲಿಷ್ ಜಗತ್ತಿನೆಲ್ಲೆಡೆಯ ಜನರನ್ನು ತಲುಪಲು ಸಾಧ್ಯವಿರುವ ಭಾಷೆಯಾಗಿದೆ. ಅಲ್ಲದೆ ಅಂತರ್‌ರಾಷ್ಟ್ರೀಯವಾಗಿ ಬೇರೆ ಯಾವುದೇ ಭಾಷೆ ಇಂಗ್ಲಿಷ್‌ನಷ್ಟು ನಮಗೆ ಸಮೀಪವಿಲ್ಲ. ಹೀಗಾಗಿ ಇಂಗ್ಲಿಷ್‌ಗೆ ಅನುವಾದವಾದರೆ ಇಂಗ್ಲಿಷ್ ಮೂಲಕ ಪ್ರಪಂಚದ ಬೇರೆ ಭಾಷೆಗಳಿಗೂ ತಲುಪುವ ಅವಕಾಶವಿದೆ. ಹೀಗಾಗಿ ಇಂಗ್ಲಿಷ್‌ನಲ್ಲಿ ಅನುವಾದವಾದರೆ ಒಳ್ಳೆಯದು.

► ಕನ್ನಡ ಸಾಹಿತ್ಯಕ್ಕೆ ಓದುಗರು ಕಡಿಮೆಯಾಗುತ್ತಿದ್ದಾರೆ ಎಂಬ ಪ್ರಶ್ನೆ ಕೇಳಿಬರುವ ಸಮಯದಲ್ಲಿಯೇ ನಿಮ್ಮ ಸಾಹಿತ್ಯಕ್ಕೆ ಮನ್ನಣೆ ದೊರೆತಿದೆ, ಇದು ಸಾಹಿತ್ಯಾಸಕ್ತರಿಗೆ ಓದುವ ಪ್ರೇರೇಪಣೆ ನೀಡುತ್ತದೆಯೇ?

ಬಾನು ಮುಷ್ತಾಕ್: ಹಿಂದೆ ಕೂಡ ಜನತೆ ಪುಸ್ತಕಗಳಿಂದ ದೂರ ಉಳಿದಿಲ್ಲ, ಸಾಹಿತ್ಯ ಸಮ್ಮೇಳನದ ಸಂದರ್ಭಗಳಲ್ಲಾಗಲೀ, ಪುಸ್ತಕ ಮೇಳಗಳ ಸಂದರ್ಭಗಳಲ್ಲಾಗಲೀ ಪುಸ್ತಕ ಮಳಿಗೆಗಳಲ್ಲಿ ಅತಿ ಹೆಚ್ಚು ಪುಸ್ತಕಗಳು ಮಾರಾಟವಾಗುತ್ತಿತ್ತು. ಮನೆಗಳಲ್ಲಿಯೂ ಕೂಡ ಗ್ರಂಥಾಲಯದ ಸ್ವರೂಪವಿತ್ತು. ಆದರೂ ಈ ಸಂದರ್ಭದಲ್ಲಿ ದೊರೆತ ಪ್ರಶಸ್ತಿಗೆ ಅಂತರ್‌ರಾಷ್ಟ್ರೀಯ ಮನ್ನಣೆ ಇರುವುದರಿಂದ ಇನ್ನೂ ಹೆಚ್ಚಿನ ಜನರು ಓದುವುದಕ್ಕೆ ಮುಂದೆ ಬರುತ್ತಿದ್ದಾರೆ.

► ನಿಮಗೆ ದೊರೆತ ಬೂಕರ್ ಪ್ರಶಸ್ತಿ ಸೌಹಾರ್ದವನ್ನು ಕೂಡ ಈ ನಾಡಿನಲ್ಲಿ ರೂಪಿಸುತ್ತಿದೆ, ಇದರ ಕುರಿತು...

ಬಾನು ಮುಷ್ತಾಕ್: ಹೌದು, ಇದು ಅತ್ಯಂತ ಸಂತೋಷದ ವಿಷಯ. ನಾನೊಬ್ಬ ಲೇಖಕಿಯಾಗಿ ನಾನು ಸಮಾಜಕ್ಕೆ ಏನು ನೀಡಲು ಬಯಸಿದ್ದೇನೋ ಆ ಜವಾಬ್ದಾರಿಯನ್ನು ಒಂದು ಹಂತದಲ್ಲಿ ನಿರ್ವಹಿಸಿದ್ದೇನೆ. ಇನ್ನೂ ನಿರ್ವಹಿಸಬೇಕಾದುದು ಬಹಳಷ್ಟಿದೆ. ಬಂಡಾಯ ಸಾಹಿತ್ಯದ ಪ್ರಭಾವದಿಂದ ನಾವು ಬದ್ಧತೆಯ ಬಗ್ಗೆ ಮಾತನಾಡುತ್ತಿದ್ದೆವು. ಜಾತಿ, ವರ್ಗ, ಸಮುದಾಯ ಮತ್ತು ಲಿಂಗಾಧಾರಿತ ತಾರತಮ್ಯದಿಂದ ನರಳುತ್ತಿರುವ ಸಮುದಾಯಗಳ ಬಗ್ಗೆ ವಿಶೇಷ ಪ್ರಾಮುಖ್ಯತೆ ಕೊಡಬೇಕು, ಸಾಮಾಜಿಕ ಅವಶ್ಯಕತೆಯನ್ನು ಪೂರೈಸುವುದರಲ್ಲಿ ಸಾಹಿತಿಗಳು ಬಹುಮುಖ್ಯ ಪಾತ್ರವಹಿಸುತ್ತಾರೆ. ಅದನ್ನು ಸ್ವಲ್ಪ ಮಟ್ಟಿಗೆ ನಿರ್ವಹಿಸಿದ್ದೇನೆ ಎನ್ನುವ ತೃಪ್ತಿ ಇದೆ.

► ಮಹಿಳೆಯಾಗಿ ಮತ್ತು ಮುಸ್ಲಿಮ್ ಸಮುದಾಯದವರಾಗಿ ನೀವು ಎದುರಿಸಿದ ಸವಾಲುಗಳೇನು?

ಬಾನು ಮುಷ್ತಾಕ್: ಸವಾಲುಗಳು ಎಲ್ಲಾ ಕಾಲದಲ್ಲೂ, ಎಲ್ಲಾ ಜನರಿಗೂ ಮತ್ತು ಎಲ್ಲಾ ಸಾಮಾಜಿಕ ವ್ಯವಸ್ಥೆಯಲ್ಲಿ ಬಂದೇ ಬರುತ್ತದೆ. ಸಾಂಪ್ರದಾಯಿಕ ಆಲೋಚನಾ ಕ್ರಮಕ್ಕೂ ಸ್ವಲ್ಪ ಭಿನ್ನ ಆಲೋಚನಾ ಕ್ರಮಕ್ಕೂ ವ್ಯತ್ಯಾಸವಿರುತ್ತದೆ. ಸಾಂಪ್ರದಾಯಿಕ ನೇತಾರರು ಸಾಮಾಜಿಕ ಮತ್ತು ಆರ್ಥಿಕ ಆಲೋಚನಾ ಕ್ರಮ ಯಥಾಸ್ಥಿತಿಯಲ್ಲಿರಬೇಕೆಂದು ಬಯಸುತ್ತಿರುತ್ತಾರೆ. ಸಾಮಾಜಿಕ ಸತ್ಯ ನುಡಿಯುವವರು, ಮನುಷ್ಯತ್ವದ ಬಗ್ಗೆ ಮಾತನಾಡುವವರು, ಮಾನವೀಯ ನೆಲೆಯಲ್ಲಿ ಆಲೋಚನೆ ಮಾಡುವವರು ಸವಾಲುಗಳನ್ನು, ಪ್ರತಿರೋಧಗಳನ್ನು ಸ್ವೀಕರಿಸಿ ಮತ್ತು ಎದುರಿಸಿ ನಂತರ ತಮ್ಮ ನಿಲುವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಈ ರೀತಿಯ ಬದ್ಧತೆ ಇದ್ದಾಗಲೇ ನಿಜವಾದ ಬದಲಾವಣೆ ತರಲು ಸಾಧ್ಯ.

► ಮುಸ್ಲಿಮ್ ಸಮುದಾಯದ ಬಗ್ಗೆ ಕೀಳರಿಮೆ, ಕೋಮುಗಲಭೆ, ಧ್ರುವೀಕರಣ ಮತ್ತೊಂದು ಕಡೆ ಮುಸ್ಲಿಮ್ ಸಮುದಾಯದ ಮಹಿಳೆಯಾಗಿ ನಿಮ್ಮ ಸಾಧನೆ ಇದರ ಬಗ್ಗೆ?

ಬಾನು ಮುಷ್ತಾಕ್: ಪೂರ್ವಾಗ್ರಹ ಪೀಡಿತ ಮನಸ್ಥಿತಿ ಇದ್ದಾಗ ಈ ಸಮಸ್ಯೆ ಎದುರಾಗುತ್ತದೆ. ‘ನೀವು ಹೀಗೆ’ ಎಂಬ ಹಣೆಪಟ್ಟಿ ಕಟ್ಟುತ್ತಿರುವುದು ನಮಗೆಲ್ಲ ತಿಳಿದಿದೆ. ಶೈಕ್ಷಣಿಕವಾಗಿ ಮುಸ್ಲಿಮ್ ಸಮುದಾಯದ ಹೆಣ್ಣುಮಕ್ಕಳು ಚಿನ್ನದ ಪದಕಗಳೊಂದಿಗೆ ತೇರ್ಗಡೆಯಾಗಿದ್ದಾರೆ, ಕಮಾಂಡೋ, ಟ್ರಕ್ ಡ್ರೈವರ್ ಸೇರಿ ಎಲ್ಲಾ ಕ್ಷೇತ್ರದಲ್ಲೂ ಮುಸ್ಲಿಮ್ ಮಹಿಳೆಯರಿದ್ದಾರೆ. ಆದರೆ ಅವರನ್ನು ಗುರುತಿಸುತ್ತಿರಲಿಲ್ಲ. ಈಗ ಗುರುತಿಸುವ ಕೆಲಸ ಆಗುತ್ತಿದೆ.

► ಕನ್ನಡದ ಬಗ್ಗೆ ಉತ್ತರ ಭಾರತದಲ್ಲಿ ತಪ್ಪು ದೃಷ್ಟಿಕೋನವಿದೆ. ಅದೇ ರೀತಿಯಲ್ಲಿ ಭಾರತೀಯ ಮುಸ್ಲಿಮರ ಬಗ್ಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ತಪ್ಪು ಕಲ್ಪನೆ ಇದೆಯೇ?

ಬಾನು ಮುಷ್ತಾಕ್: ನಮ್ಮ ದೇಶದ ಬಗ್ಗೆ ಹಾಗೂ ರಾಜ್ಯದ ಬಗ್ಗೆ ಹಲವಾರು ತಪ್ಪು ಗ್ರಹಿಕೆಗಳಿವೆ. ಹೊರಗಿನವರು ನಮ್ಮ ರಾಜ್ಯವನ್ನು ತೀವ್ರ ಅಸಹಿಷ್ಣು ರಾಜ್ಯ ಎಂದು ತಿಳಿದುಕೊಂಡಿದ್ದಾರೆ. ಉತ್ತರ ಭಾರತದ ಹಿಂದಿ ಭಾಷೆಯ ಮಾಧ್ಯಮದಲ್ಲಿ ಸಂದರ್ಶನ ನೀಡುತ್ತಿರುವಾಗ ಅಲ್ಲಿನ ಒಬ್ಬ ಪತ್ರಕರ್ತ ನನ್ನಲ್ಲಿ ‘‘ನೀವು ಹಿಂದಿಯಲ್ಲಿ ಮಾತನಾಡುತ್ತಿದ್ದೀರಿ. ಇದಕ್ಕೆ ನಿಮ್ಮ ರಾಜ್ಯದವರು ಅನುಮತಿ ಕೊಡುತ್ತಾರೆಯೇ?’’ ಎಂದು ಪ್ರಶ್ನಿಸಿದರು. ಅದಕ್ಕೆ ನಾನು ‘ಕನ್ನಡಿಗರಷ್ಟು ಭಾಷಾ ಸಹಿಷ್ಣುಗಳು ಬೇರೆ ಯಾರಿದ್ದಾರೆ? ಯಾವಾಗ ಭಾಷೆಯನ್ನು ರಾಜಕೀಯಕ್ಕೆ ಹಾಗೂ ದ್ವೇಷದ ಸರಕನ್ನಾಗಿ ಮಾಡುತ್ತೀರೋ ಅವಾಗ ಸಮಸ್ಯೆ ಪ್ರಾರಂಭ ಆಗುತ್ತದೆ. ಕನ್ನಡಿಗರ ಪ್ರತಿಕ್ರಿಯೆ ಬಗ್ಗೆ ನೀವು ಮಾತನಾಡುತ್ತಿದ್ದೀರಿ ಆದರೆ ಯಾಕೆ ಬೇರೆಯವರ ಕ್ರಿಯೆ ಬಗ್ಗೆ ಮಾತನಾಡುತ್ತಿಲ್ಲ’’ ಎಂದೆ.

ಭಾರತೀಯ ಮುಸ್ಲಿಮರ ಬಗ್ಗೆಯೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕೆಲವರಲ್ಲಿ ತಪ್ಪು ಕಲ್ಪನೆ ಇದೆ. ಇದನ್ನು ನಾನು ನನ್ನ ಪ್ರವಾಸದ ಸಂದರ್ಭದಲ್ಲಿ ಕೆಲವು ಕಡೆ ಗಮನಿಸಿದ್ದೇನೆ. ಅವರು ಭಾರತೀಯ ಮುಸ್ಲಿಮರು ಅಪಾರ ನೋವಿನಲ್ಲಿದ್ದಾರೆ, ಅಪಾರ ತುಳಿತಕ್ಕೆ ಒಳಗಾಗಿದ್ದಾರೆ, ಬದುಕು ಸಾಗಿಸಲು ಸಾಧ್ಯವಿಲ್ಲ ಇತ್ಯಾದಿ ಏನೇನೋ ಅಂದು ಕೊಂಡಿದ್ದಾರೆ, ಇದೂ ತಪ್ಪು ಕಲ್ಪನೆ.

► ಕಾದಂಬರಿ ಬರವಣಿಗೆ ಕುರಿತಾಗಿ?

ಬಾನು ಮುಷ್ತಾಕ್: ನಾನು ಕಾದಂಬರಿಗಳನ್ನು ಸಹ ಬರೆದಿದ್ದೇನೆ, ಇನ್ನೊಂದು ಕಾದಂಬರಿ ಅರ್ಧ ಮುಗಿದಿದೆ ಅದನ್ನು ಪೂರ್ಣ ಮಾಡಬೇಕು. ಕಾದಂಬರಿ ಬರೆಯಲು ತುಂಬಾ ಸಹನೆ ಮತ್ತು ಸಮಯ ಬೇಕು. ಇನ್ನು ಕೆಲವು ತಿಂಗಳ ನಂತರ ನನ್ನ ವಿಸ್ತೃತವಾದ ಕಾದಂಬರಿ ನಿಮ್ಮ ಕೈ ಸೇರಲಿದೆ. ಅಲ್ಲದೆ ನನ್ನ ಆತ್ಮ ಕಥನ ಕೂಡ ಬರಲಿದೆ.

► ಕನ್ನಡಕ್ಕೆ ಭಾವಾನುವಾದಕರ ಅಗತ್ಯ ಮತ್ತು ದೀಪಾ ಭಾಸ್ತಿಯವರ ಕುರಿತು?

ಬಾನು ಮುಷ್ತಾಕ್: ದೀಪಾ ಭಾಸ್ತಿ ಒಳ್ಳೆಯ ಅನುವಾದಕರು. ಅವರ ಇಂಗ್ಲಿಷ್ ಸರಳ ಮತ್ತು ಉತ್ತಮವಾಗಿದೆ. ಜನ ಅದನ್ನು ಇಷ್ಟಪಡುತ್ತಿದ್ದಾರೆ, ಕನ್ನಡದಿಂದ ಬೇರೆ ಭಾಷೆಗೆ ಅನುವಾದಗಳು ಬಹಳ ಕಡಿಮೆಯಾಗುತ್ತ್ತಾ ಇದೆ. ಕನ್ನಡಕ್ಕೆ ಅನುವಾದಕರ ಅಗತ್ಯ ತುಂಬಾ ಇದೆ. ಸರಕಾರ ಮತ್ತು ಸಾಹಿತ್ಯಕ ಸಂಸ್ಥೆಗಳು ವಿಪುಲ ಅವಕಾಶಗಳನ್ನು ಸೃಷ್ಟಿ ಮಾಡಿ ನಮ್ಮ ಸಾಹಿತ್ಯ, ವಿಚಾರಧಾರೆಯನ್ನು ಹೊರದೇಶಗಳಿಗೂ ಪಸರಿಸುವಂತೆ ಮಾಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಂದರ್ಶನ: ಮಂಜುಳಾ ಮಾಸ್ತಿಕಟ್ಟೆ

contributor

Similar News