×
Ad

2020 ರ ದಿಲ್ಲಿ ಗಲಭೆ ; ಕಪಿಲ್ ಮಿಶ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲು ನ್ಯಾಯಾಲಯ ಆದೇಶ

Update: 2025-04-01 18:38 IST

ಕಪಿಲ್‌ ಮಿಶ್ರಾ | PC : PTI 

ಹೊಸದಿಲ್ಲಿ : 2020 ರ ಈಶಾನ್ಯ ದಿಲ್ಲಿ ಗಲಭೆ ಪ್ರಕರಣದಲ್ಲಿ ದಿಲ್ಲಿಯ ಹಾಲಿ ಕಾನೂನು ಸಚಿವ ಕಪಿಲ್ ಮಿಶ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲು ದಿಲ್ಲಿ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

ಯಮುನಾ ವಿಹಾರ್ ನಿವಾಸಿ ಮುಹಮ್ಮದ್ ಇಲ್ಯಾಸ್ ಸಲ್ಲಿಸಿದ ಅರ್ಜಿಗೆ ಸ್ಪಂದಿಸಿದ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ಅವರು ಈ ಆದೇಶ ನೀಡಿರುವುದಾಗಿ ವರದಿಯಾಗಿದೆ. ಘಟನೆ ಸಂದರ್ಭದಲ್ಲಿ ಕಪಿಲ್ ಮಿಶ್ರಾ ಸ್ಥಳದಲ್ಲಿಯೇ ಇದ್ದರು ಎಂಬುದನ್ನು ಎಂಬುದು ದೃಢಪಟ್ಟಿದೆ ಎಂದು ಕೋರ್ಟ್ ಹೇಳಿದೆ.

53 ಜನರು ಗಲಭೆಯಲ್ಲಿ ಸಾವನ್ನಪ್ಪಿದ್ದರು ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಗಲಭೆಯಲ್ಲಿ ಮಿಶ್ರಾ ಮತ್ತು ಇತರ ಆರು ಜನರ ಪಾತ್ರದ ಬಗ್ಗೆ ತನಿಖೆ ನಡೆಸಬೇಕೆಂದು ಇಲ್ಯಾಸ್ ಕಳೆದ ಡಿಸೆಂಬರ್ ನಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ವರ್ಷದ ಮಾರ್ಚ್‌ನಲ್ಲಿ, ದಿಲ್ಲಿ ಪೊಲೀಸರು ಗಲಭೆಯಲ್ಲಿ ಮಿಶ್ರಾ ಪಾತ್ರವಿಲ್ಲ ಎಂದು ಹೇಳಿ, ಈ ಅರ್ಜಿಗೆ ವಿರೋಧ ವ್ಯಕ್ತಪಡಿಸಿದ್ದರು. ಕಪಿಲ್ ಮಿಶ್ರಾ, ಮುಸ್ತಫಾಬಾದ್ ಶಾಸಕ ಮತ್ತು ಉಪ ಸ್ಪೀಕರ್ ಮೋಹನ್ ಸಿಂಗ್ ಬಿಶ್ತ್, ಆಗಿನ ಡಿಸಿಪಿ (ಈಶಾನ್ಯ) ದಯಾಳ್ಪುರ ಪೊಲೀಸ್ ಠಾಣೆಯ ಆಗಿನ ಠಾಣಾಧಿಕಾರಿ ಮತ್ತು ಮಾಜಿ ಬಿಜೆಪಿ ಶಾಸಕ ಜಗದೀಶ್ ಪ್ರಧಾನ್ ಗಲಭೆಯಲ್ಲಿ ಭಾಗಿಯಾಗಿದ್ದಾರೆಂದು ತಮ್ಮ ಅರ್ಜಿಯಲ್ಲಿ ಇಲ್ಯಾಸ್ ಆರೋಪಿಸಿರುವುದಾಗಿ ವರದಿಯಾಗಿದೆ.

2020 ರ ಫೆಬ್ರವರಿ 23 ರಂದು ಕಾರ್ಡಂಪುರಿಯಲ್ಲಿ ಮಿಶ್ರಾ ಮತ್ತಿತರರು ರಸ್ತೆ ತಡೆದು ಬೀದಿ ವ್ಯಾಪಾರಿಗಳ ಕೈಗಾಡಿಗಳನ್ನು ನಾಶಪಡಿಸುವುದನ್ನು ನೋಡಿರುವುದಾಗಿ ಇಲ್ಯಾಸ್ ಹೇಳಿಕೊಂಡಿದ್ದಾರೆ. ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಬೆದರಿಸುವಾಗ ಮಾಜಿ ಡಿಸಿಪಿ ಮತ್ತಿತರ ಕೆಲ ಅಧಿಕಾರಿಗಳು ಮಿಶ್ರಾ ಅವರೊಂದಿಗೆ ನಿಂತಿದ್ದರು ಎಂದು ಅವರು ಹೇಳಿದ್ದಾರೆ. ಮಾಜಿ ದಯಾಳ್ಪುರ ಠಾಣಾಧಿಕಾರಿ ಮತ್ತಿತರರು ಈಶಾನ್ಯ ದಿಲ್ಲಿಯಾದ್ಯಂತ ಮಸೀದಿಗಳನ್ನು ಧ್ವಂಸ ಮಾಡುವುದನ್ನು ತಾನು ನೋಡಿರುವುದಾಗಿ ಲಿಯಾಸ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಗಲಭೆಯ ಸಂಚುಕೋರರೆಂದು ಪೊಲೀಸರು ಉಮರ್ ಖಾಲಿದ್, ಗುಲ್ಫಿಶಾ ಫಾತಿಮಾ ಮತ್ತು ಶಾರ್ಜೀಲ್ ಇಮಾಮ್ ಸೇರಿದಂತೆ ಹಲವಾರು ವಿದ್ಯಾರ್ಥಿ ಮುಖಂಡರು ಮತ್ತು ಕಾರ್ಯಕರ್ತರನ್ನು ಹೆಸರಿಸಿದ್ದಾರೆ. ಆದರೆ, ದಿಲ್ಲಿ ಅಲ್ಪಸಂಖ್ಯಾತ ಆಯೋಗ ರಚಿಸಿದ 10 ಸದಸ್ಯರ ಸತ್ಯಶೋಧನಾ ತಂಡ ದಿಲ್ಲಿ ಹಿಂಸಾಚಾರ ಯೋಜಿತ ಮತ್ತು ಗುರಿಯಾಗಿಸಿ ಮಾಡಲಾಗಿರುವುದು ಎಂದು ಹೇಳಿತ್ತು. ಮತ್ತು ಮಿಶ್ರಾ ಅದಕ್ಕೆ ಕಾರಣವೆಂದು ಅದು ಬೊಟ್ಟು ಮಾಡಿತ್ತು.

2020ರ ಫೆಬ್ರವರಿ 23 ರಂದು ಈಶಾನ್ಯ ದಿಲ್ಲಿಯ ಜಾಫ್ರಾಬಾದ್‌ನಲ್ಲಿ ಪ್ರತಿಭಟನಾಕಾರರನ್ನು ಬಲವಂತವಾಗಿ ಚದುರಿಸಲು ಕಪಿಲ್ ಮಿಶ್ರಾ ಬಹಿರಂಗವಾಗಿ ಕರೆ ನೀಡಿದ ನಂತರ ವಿವಿಧ ಪ್ರದೇಶಗಳಲ್ಲಿ ಹಿಂಸಾಚಾರ ಶುರುವಾಗಿತ್ತು ಎಂದು ವರದಿ ಹೇಳಿದೆ. ಮೂರು ದಿನಗಳ ನಂತರ ರಸ್ತೆಗಳನ್ನು ತೆರವುಗೊಳಿಸದಿದ್ದರೆ ನಾವು ಪೊಲೀಸರ ಮಾತನ್ನು ಕೇಳುವುದಿಲ್ಲ ಎಂದು ಹೇಳುವ ಮೂಲಕ ಮಿಶ್ರಾ ಮತ್ತು ಅವರ ಬೆಂಬಲಿಗರು ವಿಷಯಗಳನ್ನು ತಮ್ಮ ಕೈಗೆ ತೆಗೆದುಕೊಳ್ಳಲಿರುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಅದು ಹೇಳಿದೆ.

ಪೊಲೀಸರ ಮಾತನ್ನು ಕೇಳುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರಲ್ಲಿ ಅವರು ಕಾನೂನುಬಾಹಿರ ನಡೆಗೆ ಮುಂದಾಗಿರುವುದು ಸ್ಪಷ್ಟವಿತ್ತು ಮತ್ತು ಹಾಜರಿದ್ದ ಅಧಿಕಾರಿಗಳು ಹಿಂಸಾಚಾರ ಪ್ರಚೋದಿಸುತ್ತಿದ್ದುದನ್ನು ಕಾಣಬಹುದಿತ್ತು ಎಂದು ಸಮಿತಿ ಹೇಳಿದೆ. ಡಿಸಿಪಿ ವೇದ್ ಪ್ರಕಾಶ್ ಸೂರ್ಯ ಪಕ್ಕದಲ್ಲೇ ನಿಂತಿದ್ದರೂ ಪೊಲೀಸರು ಮಿಶ್ರಾ ಅವರನ್ನು ಬಂಧಿಸಲಿಲ್ಲ ಎಂದು ಸಮಿತಿ ಹೇಳಿದೆ.

ಹಿಂಸಾಚಾರ ಉಂಟಾಗುವುದನ್ನು ತಪ್ಪಿಸಲು ಮತ್ತು ಪ್ರಾಣ, ಆಸ್ತಿ ಪಾಸ್ತಿ ರಕ್ಷಿಸಲು ತಕ್ಷಣದ ಕ್ರಮ ತೆಗೆದುಕೊಳ್ಳುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸಮಿತಿ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News