×
Ad

ಶಿಕ್ಷಣ ಕ್ರಾಂತಿಯ ಹರಿಕಾರ ಕುದ್ಮುಲ್ ರಂಗರಾವ್

Update: 2025-06-29 10:17 IST

ಸುಮಾರು ನೂರ ಮೂವತ್ತೈದು ವರ್ಷಗಳ ಹಿಂದಿನ ಕಾಲದಲ್ಲಿ ಶೋಷಿತರಿಗೆ ಸಾಮಾಜಿಕ ಭದ್ರತೆ ಇರಲಿಲ್ಲ. ಶಿಕ್ಷಣವೆಂಬುದು ಕೇವಲ ಮೇಲ್ವರ್ಗಗಳ ಸ್ವತ್ತಾಗಿತ್ತು. ಶೋಷಿತರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ಸಮಾಜದಲ್ಲಿ ಇಂತಹ ಅಂಧಃಶ್ರದ್ದೆ, ಮೂಢನಂಬಿಕೆಗಳು ತುಂಬಿ ತುಳುಕಾಡುತ್ತಿದ್ದವು. ಸವರ್ಣೀಯ ಹಿಂದೂಗಳು ಬರುವ ಜಾಗದಲ್ಲಿ ಕೆಳವರ್ಗದ ಜನರು ಕಾಣುವಂತಿರಲಿಲ್ಲ. ಅಸ್ಪಶ್ಯತೆ, ಜಾತೀಯತೆಗಳನ್ನು ಕೆಳಜಾತಿಯ ಜನರ ಮೇಲೆ ಬಲವಂತವಾಗಿ ಹೇರಲಾಗಿತ್ತು. ಶೋಷಿತ ಸಮುದಾಯದ ಜನರು ಇಂತಹ ಮೂಢನಂಬಿಕೆಗಳಿಗೆ ಕಟ್ಟುಬಿದ್ದಿದ್ದರು. ಸವರ್ಣೀಯ ಹಿಂದೂಗಳ ದಬ್ಬಾಳಿಕೆಗಳಿಂದ ಅವರು ಪಶುಗಳಂತೆ ಜೀವಿಸುತ್ತಿದ್ದರು. ಸವರ್ಣೀಯ ಹಿಂದೂಗಳು ದಲಿತರನ್ನು ಜೀತದಾಳುಗಳಂತೆ ದುಡಿಸಿಕೊಂಡು ತಾವು ಮಾತ್ರ ಐಶಾರಾಮಿ ಜೀವನ ನಡೆಸುತ್ತಿದ್ದರು. ಇಂತಹ ನೂರಾರು ಸಂಕಷ್ಟಗಳನ್ನು ಶೋಷಿತ ಸಮುದಾಯಗಳು ಅರ್ಥಾತ್ ಅಸ್ಪಶ್ಯ ವರ್ಗಗಳು ಕರಾವಳಿ ಭಾಗದಲ್ಲಿ ಅನುಭವಿಸುತ್ತಿದ್ದರು. ತಮ್ಮದಲ್ಲದ ತಪ್ಪಿನಿಂದ ಇಂತಹ ಸಂಕಷ್ಟಕ್ಕೆ ಸಿಲುಕಿರುವ ಅಸ್ಪಶ್ಯರ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದ್ದವರು ಕುದ್ಮುಲ್ ರಂಗರಾಯರು.

ಅಸ್ಪಶ್ಯ ಜನಾಂಗಗಳು ಸವರ್ಣೀಯರಂತೆಯೇ ಮನುಷ್ಯರು. ಜೀವನದ ಉದಾತ್ತ ಮೌಲ್ಯಗಳನ್ನು ಮತ್ತು ಉತ್ತಮ ನಾಗರಿಕ ಸಂಸ್ಕೃತಿಯನ್ನು ಅಸ್ಪಶ್ಯ ಜನಾಂಗಗಳು ಪಡೆದುಕೊಳ್ಳಬೇಕು ಎಂಬುದು ಕುದ್ಮುಲ್ ರಂಗರಾವ್ ಅವರ ಧ್ಯೇಯವಾಗಿತ್ತು. ಶಿಕ್ಷಣದಿಂದ ಮಾತ್ರ ಇವರ ಜೀವನ ಸುಧಾರಣೆಗೊಳ್ಳುವುದು ಎಂದು ಅರಿತು ಅಸ್ಪಶ್ಯರಿಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಪ್ರಾರಂಭಿಸಿದರು. 1892ರಲ್ಲಿ ಮಂಗಳೂರಿನ ಉರ್ವ ಚಿಲಿಂಬಿಯಲ್ಲಿ ಹುಲ್ಲು ಛಾವಣಿ ಮನೆಯನ್ನು ಬಾಡಿಗೆಗೆ ಪಡೆದು ರಂಗರಾವ್ ಅವರು ಅಸ್ಪಶ್ಯರ ಮಕ್ಕಳಿಗಾಗಿ ಪ್ರಥಮ ಪ್ರಾಥಮಿಕ ಶಾಲೆಯನ್ನು ತೆರೆದರು. ಅಂದು ನಾಲ್ಕು ಅಸ್ಪಶ್ಯ ಮಕ್ಕಳು ಮಾತ್ರ ಶಾಲೆಗೆ ಸೇರ್ಪಡೆಯಾದರು. ಅದರೆ ಸವರ್ಣೀಯ ಹಿಂದೂಗಳು ಅಸ್ಪಶ್ಯರ ಮಕ್ಕಳಿಗೆ ಶಾಲೆಯನ್ನು ಪ್ರಾರಂಭಿಸಿದ ರಂಗರಾವ್ ನಡೆಯನ್ನು ವಿರೋಧಿಸಿದರು. ಶಾಲೆ ಪ್ರಾರಂಭಿಸಲು ಅವರು ಮನೆಯನ್ನು ಕೊಡಲಿಲ್ಲ. ಶಾಲೆಗೆ ಬರುವ ಶಿಕ್ಷಕರು ಮತ್ತು ಮಕ್ಕಳನ್ನು ಬೆದರಿಸಿದರು. ಕೊನೆಗೆ ರಂಗರಾಯರು ಕೆಥೊಲಿಕ್ ಕ್ರಿಶ್ಚಿಯನ್ನರ ಮನೆಯನ್ನು ಬಾಡಿಗೆಗೆ ಪಡೆದು ಪ್ರಥಮ ಶಾಲೆ ತೆರೆದದ್ದು ಆ ಕಾಲದ ಶಿಕ್ಷಣ ಕ್ರಾಂತಿ ಎಂದರೆ ತಪ್ಪಾಗಲಾರದು.

ಶಾಲೆ ತೆರೆದರೂ ಶಾಲೆಗೆ ಬರುವ ಶಿಕ್ಷಕರು ಮತ್ತು ಮಕ್ಕಳಿಗೆ ಸವರ್ಣೀಯರ ಕಿರುಕುಳ ಮುಂದುವರಿಯಿತು. ಸಾಮಾಜಿಕ ಸಮಾನತೆ ಬಯಸದ ಸವರ್ಣೀಯರಿಗೆ ಅಸ್ಪಶ್ಯರ ಮಕ್ಕಳು ಅಕ್ಷರ ಕಲಿಯುವುದು ಇಷ್ಟವಾಗದೆ ಒಟ್ಟಾಗಿ ಮಂಗಳೂರಿನ ಪೆಟ್‌ಲ್ಯಾಂಡ್ ಪೇಟೆಯ ಮುನ್ಸಿಪಾಲಿಟಿಯ ಹತ್ತಿರ ಸುರಿದಿದ್ದ ಕಸ, ಹೇಸಿಗೆ ತಂದು ಶಾಲೆಗೆ ಬರುವ ಸ್ಥಳಕ್ಕೆ ಮತ್ತು ಶಾಲೆಯ ಬಾಗಿಲಿಗೆ ಚೆಲ್ಲುತ್ತಿದ್ದರು. ಕೆಲವು ಸಮಾಜ ವಿರೋಧಿಗಳು ಕಲ್ಲನ್ನು ತಂದು ಶಾಲೆಯ ದಾರಿಗೆ ಅಡ್ಡಲಾಗಿ ಇಟ್ಟು ಶಾಲೆಗೆ ಬರುವ ಮಕ್ಕಳಿಗೆ ತೊಂದರೆ ನೀಡುತ್ತಿದ್ದರು. ರಂಗರಾಯರು ಈ ಬಗ್ಗೆ ಕಟ್ಟಡ ಮಾಲಕರಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಜಾತಿವಾದಿಗಳ ಇಂತಹ ಕಿರುಕುಳದ ನಡುವೆ ಶಾಲೆ ನಡೆಸುವುದು ರಂಗರಾಯರಿಗೆ ಕಷ್ಟವಾಯಿತು. ಸವರ್ಣೀಯರ ಉಪಟಳ ತಾಳಲಾರದೆ ಮಕ್ಕಳ ಹಿತದೃಷ್ಟಿಯಿಂದ ಶಾಲೆಯನ್ನು ಅನಿವಾರ್ಯವಾಗಿ ಮುಚ್ಚಬೇಕಾಯಿತು.

ಆದರೆ ಸನಾತನ ಸಂಪ್ರದಾಯವಾದಿಗಳ ಈ ದಬ್ಬಾಳಿಕೆ, ಗೊಡ್ಡುಬೆದರಿಕೆಗಳಿಗೆ ರಂಗರಾಯರು ಹೆದರಲಿಲ್ಲ. ಇಂತಹ ಸಂಕಷ್ಟಗಳು, ಅಡ್ಡಿಗಳು ಬರುತ್ತವೆಂದು ಅವರು ಮೊದಲೇ ಊಹಿಸಿದ್ದರು. ಚಿಲಿಂಬಿಯಲ್ಲಿ ಪ್ರಥಮವಾಗಿ ಸ್ಥಾಪನೆ ಮಾಡಿದ ಶಾಲೆಯನ್ನು ಅವರು ತಾತ್ಕಾಲಿಕವಾಗಿ ಮುಚ್ಚಿದರೂ ಧೃತಿಗೆಡಲಿಲ್ಲ. ತಮ್ಮ ಆಧ್ಯಾತ್ಮಿಕ ನಂಬಿಕೆ ಮತ್ತು ಶಾಂತಿ, ಸಹನೆಯಿಂದ ಎಲ್ಲವನ್ನೂ ಸಹಿಸಿಕೊಳ್ಳತ್ತಿದ್ದರು. ಆದರೆ ಅಸ್ಪಶ್ಯರಿಗಾಗಿ ಶಾಲೆ ಪ್ರಾರಂಭಿಸಿದ ಹೆಜ್ಜೆಯಿಂದ ಹಿಂದೆ ಸರಿಯದೆ, ತಾವು ಕೈಗೊಂಡ ದಲಿತ ಮಕ್ಕಳಿಗೆ ವಿದ್ಯೆ ನೀಡಬೇಕೆಂಬ ಹಠದಿಂದ ತಮ್ಮ ಕಾಯಕ ಮುಂದುವರಿಸಿ ದರು. ಮುಂದೆ ಮಂಗಳೂರು ನಗರದ ಕಂಕನಾಡಿ ಮತ್ತು ಬೋಳೂರು ಎಂಬ ಸ್ಥಳಗಳಲ್ಲಿ ಎಲಿಮೆಂಟರಿ ಶಾಲೆಯನ್ನು ಪ್ರಾರಂಭಿಸಿದರು. ಅಲ್ಲೂ ಸಹ ಜಾತಿವಾದಿಗಳು ಇವರನ್ನು ವಿರೋಧಿಸಿ ಕಿರುಕುಳ ನೀಡುತ್ತಿದ್ದರು. ಹಿಂದೂ ಶಿಕ್ಷಕರು ಅಸ್ಪಶ್ಯ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಲು ಮುಂದೆ ಬರಲಿಲ್ಲ. ಇಂತಹ ವಿಚಾರಗಳು ಮರುಕಳಿಸುತ್ತಿದ್ದರೂ ರಂಗರಾಯರು ವಿಚಲಿತರಾಗದೆ ಪುನಃ ಕ್ರೈಸ್ತ ಶಿಕ್ಷಕರನ್ನು ಕರೆಸಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನೀಡಿಸುತ್ತಿದ್ದರು.

ಮುಂದೆ ಸ್ವಲ್ಪ ಸಮಯದ ನಂತರ ರಂಗರಾಯರು ಮಂಗಳೂರು ನಗರದ ಶೇಡಿಗುಡ್ಡೆಯ ಕೋರ್ಟ್ ಗುಡ್ಡದ ಇಳಿಜಾರು ಜಾಗದಲ್ಲಿ ಅಸ್ಪಶ್ಯ ಜನಾಂಗದ ಮಕ್ಕಳಿಗೆ ಮತ್ತೊಂದು ಶಾಲೆಯನ್ನು ತೆರೆದರು. ಮುಂದುವರಿದು ದಲಿತ ಮಕ್ಕಳು ವೃತ್ತಿಪರ ಶಿಕ್ಷಣ ಕಲಿಯಬೇಕೆಂದು ಕೈಗಾರಿಕಾ ತರಬೇತಿ ಶಾಲೆಯನ್ನು ಅಲ್ಲೇ ಕಟ್ಟಿಸಿದರು. ಪರಿಶಿಷ್ಟ ಜಾತಿ ಜನರು ಮತ್ತು ಪರಿಶಿಷ್ಟ ಪಂಗಡದ ಕೊರಗ ಸಮುದಾಯಗಳು ಕೂಲಿಗಾಗಿ, ಒಂದು ಹೊತ್ತು ಅನ್ನ ಸಂಪಾದಿಸಲು ಅಲೆಮಾರಿಗಳಾಗಿ ಊರೂರು ತಿರುಗುತ್ತಿದ್ದರು. ಇವರಿಗಾಗಿ ರಂಗರಾಯರು ಆಶ್ರಮ ಶಾಲೆಯನ್ನು ಕಟ್ಟಿಸಿದರು. ಬುಟ್ಟಿ ಹೆಣೆಯುವ ಕಾಯಕ ಮಾಡುತ್ತಿದ್ದ ಕೊರಗ ಸಮುದಾಯದ ಕರಕುಶಲ ವೃತ್ತಿಗೆ ಇದು ಸಹಕಾರಿಯಾಯಿತು. ಅಂದಿನ ಕಾಲದಲ್ಲಿ ಅನೇಕ ಪರಿಶಿಷ್ಟ ಜಾತಿಯ, ವರ್ಗದ ಜನರು ಪಟ್ಟಣಕ್ಕೆ ಬರಲು ಹೆದರುತ್ತಿದ್ದರು. ಇವರಿಗಾಗಿ ಮತ್ತು ಇವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ದಲಿತ ಹೆಣ್ಣು ಮಕ್ಕಳ ವಸತಿ ನಿಲಯವನ್ನು ರಂಗರಾವ್ ಇದೇ ಶೇಡಿಗುಡ್ಡೆಯಲ್ಲಿ ಕಟ್ಟಿಸಿ ಪ್ರಾರಂಭಿಸಿದರು.

ರಂಗರಾಯರು ಸ್ಥಾಪನೆ ಮಾಡಿದ ಶಾಲೆಗಳಲ್ಲಿ ನಾಲ್ಕನೇ ತರಗತಿವರೆಗೆ ಕಲಿತ ದಲಿತ ಯುವಕರನ್ನು ಶಿಕ್ಷಕ ವೃತ್ತಿ ತರಬೇತಿ ಶಾಲೆಗಳಿಗೆ ಕಳಿಸುತ್ತಿದ್ದರು. ಅವರ ಶೈಕ್ಷಣಿಕ ಅಭಿವೃದ್ಧಿ ಉತ್ತೇಜಿಸುವ ಸಲುವಾಗಿ ಈ ಕ್ರಮಗಳನ್ನು ರಂಗರಾಯರು ಕೈಗೊಳ್ಳುತ್ತಿದ್ದರು. ಇವರ ಶಾಲೆಯಲ್ಲಿ ಕಲಿತ ಅನೇಕ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಶಿಕ್ಷಕ ತರಬೇತಿ ಪಡೆದು ಇವರೇ ಸ್ಥಾಪನೆ ಮಾಡಿದ ಅತ್ತಾವರ ಬಾಬು ಗುಡ್ಡೆ ಶಾಲೆ, ದಡ್ಡಲ್ ಕಾಡು, ಉಳ್ಳಾಲ, ಮುಲ್ಕಿ ಮತ್ತು ಉಡುಪಿಯ ಬನ್ನಂಜೆ, ನೇಜಾರು ಶಾಲೆಗಳಿಗೆ ಶಿಕ್ಷಕರಾಗಿ ನೇಮಕಗೊಳ್ಳುತ್ತಿದ್ದರು. ಹೀಗೆ ತಮ್ಮ ಶಾಲೆಯಲ್ಲಿ ಕಲಿತ ದಲಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗಗಳೆರಡನ್ನು ರಂಗರಾಯರು ನೀಡಿ ಅಸ್ಪಶ್ಯ ವಿದ್ಯಾರ್ಥಿಗಳನ್ನು ಸ್ವಾವಲಂಬನೆಯೆಡೆಗೆ ಕರೆದೊಯ್ಯುತ್ತಿದ್ದರು.

ರಂಗರಾಯರು ಸ್ಥಾಪನೆ ಮಾಡಿದ ಶಾಲೆಗಳನ್ನು ಆ ಕಾಲದಲ್ಲಿ ಪಂಚಮ ಶಾಲೆಗಳೆಂದು ಕರೆಯುತ್ತಿದ್ದರು. ಅವರು ಪರಿಶಿಷ್ಟ ಜಾತಿ ಮತ್ತು ಪಂಗಡದ ಕೊರಗ ವಿದ್ಯಾರ್ಥಿಗಳಿಗೆ 2 ಪೈಸೆ ಮತ್ತು 6 ಪೈಸೆ ಪ್ರೋತ್ಸಾಹ ಧನ ನೀಡುತ್ತಿದ್ದರು. ಇದರಿಂದ ಮಕ್ಕಳ ಹಾಜರಾತಿಯು ಉತ್ತಮವಾಗುತ್ತಿತ್ತು. ದಲಿತ ಮಕ್ಕಳು ಹಸಿವಿನಿಂದ ನರಳಬಾರದು ಮತ್ತು ಅವರ ಮಕ್ಕಳು ಶಾಲೆಗೆ ಬರುವಂತೆ ಉತ್ತೇಜನ ನೀಡಲು ಪಂಚಮ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ರಂಗರಾಯರು ನೀಡುತ್ತಿದ್ದರು. ಈ ಯೋಜನೆಯಿಂದ ಅಸ್ಪಶ್ಯ ಮಕ್ಕಳು ಸೇರಿದಂತೆ ಹಿಂದುಳಿದ ವರ್ಗಗಳ ಮಕ್ಕಳು ಶಾಲೆಗೆ ಬರುತ್ತಿದ್ದರು. ಇಂತಹ ಉದಾತ್ತ ಗುಣಗಳಿಂದ ರಂಗರಾಯರು ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು.

ರಂಗರಾಯರು ಅಸ್ಪಶ್ಯರ ಮನೆಗಳಿಗೆ ಹೋಗಿ ‘‘ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ, ಅವರು ವಿದ್ಯಾವಂತರಾಗಿ ಬುದ್ಧಿವಂತರಾಗಲಿ’’ ಎಂದು ಮಕ್ಕಳ ತಂದೆ ತಾಯಿಯರಲ್ಲಿ ವಿನಂತಿಸಿಕೊಂಡು ಶಾಲೆಗೆ ಕರೆತರುತ್ತಿದ್ದರು. ಕೆಲವೊಮ್ಮೆ ದಲಿತರ ಕೇರಿಯ ಹಟ್ಟಿಗಳಲ್ಲಿ ಮಲಗುತ್ತಿದ್ದರು. ಅವರ ಕಷ್ಟಗಳನ್ನು ಕೇಳಿ ಸಂತೈಸುತ್ತಿದ್ದರು. ರಂಗರಾಯರು ತಮ್ಮ ವಿದ್ಯಾರ್ಥಿ ನಿಲಯಗಳಲ್ಲಿ ದಲಿತ ಮಕ್ಕಳಿಗೆ ಮೈ ಕೈ ತೊಳೆದು ಸ್ನಾನ ಮಾಡಿಸಿ ಶುಚಿಗೊಳಿಸುತ್ತಿದ್ದರು. ಅಸ್ಪಶ್ಯ ಮಕ್ಕಳ ತಲೆ ಸವರಿ ‘‘ಚೆನ್ನಾಗಿ ಓದಿ ಮಕ್ಕಳೇ, ವಿದ್ಯಾವಂತರಾಗಿ ನೆಮ್ಮದಿ ಜೀವನ ನಡೆಸಿ’’ ಎಂದು ಅವರಲ್ಲಿ ಆಪ್ತತೆಯಿಂದ ಇರುತ್ತಿದ್ದರು. ಅಸ್ಪಶ್ಯರ ಮಕ್ಕಳ ಜೊತೆ ಕುಳಿತು ಊಟ ಮಾಡುತ್ತಿದ್ದರು. ಪಂಚಮ ಶಾಲೆಗಳಲ್ಲಿ ಮಕ್ಕಳಿಗೆ ಪ್ರೋತ್ಸಾಹ ಧನ ನೀಡುತ್ತಿದ್ದರಿಂದ ದಲಿತ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ಸಿಗುತ್ತಿತ್ತು. ಹೆತ್ತವರಿಗೂ ನಂಬಿಕೆ ವಿಶ್ವಾಸ ಬರುತ್ತಿತ್ತು. ಇಂತಹ ಕಾರ್ಯಗಳಿಂದ ರಂಗರಾಯರಿಗೆ ಅತೀವ ಆನಂದವಾಗುತ್ತಿತ್ತು.

ರಂಗರಾಯರು ಸ್ಥಾಪಿಸಿದ ಶಾಲೆಗಳಲ್ಲಿ ಕಲಿತು ಅವರ ಶಾಲೆಗಳಲ್ಲಿ ಶಿಕ್ಷಕರಾಗಿದ್ದ ದಲಿತ ವರ್ಗದ ಮುಂಡಪ್ಪ ಮಾಸ್ತರ್, ಬೆಂದೂರು ಬಾಬು ಮಾಸ್ತರ್, ಬ್ಯಾರಿಪಳ್ಳ ಅಂಗರ ಮಾಸ್ತರ್, ಪುಟ್ಟ ಮಾಸ್ತರ್, ಬಸವ ಮಾಸ್ತರ್, ಕಾಪಿಕಾಡ್ ಪದ್ದು ಮಾಸ್ತರ್, ಗುರುವ ಮಾಸ್ತರ್, ಜೆ. ಬಾಬು ಮಾಸ್ತರ್, ಉಳ್ಳಾಲ ಕೊರಗ ಮಾಸ್ತರ್, ಯು. ಕೋಟಿ ಮಾಸ್ತರ್, ಉಡುಪಿ ಗೋವಿಂದ ಮಾಸ್ತರ್ ಮುಂತಾದವರನ್ನು ಪ್ರಥಮ ಶಿಕ್ಷಕರುಗಳೆಂದು ಗುರುತಿಸಲಾಗಿದೆ.

ರಂಗರಾಯರ ಸಂಸ್ಥೆಯಲ್ಲಿ ಓದಿ, ಮುಂದೆ ಸರಕಾರಿ ಹೈಸ್ಕೂಲ್ ಸೇರಿದ ಪ್ರಥಮ ದಲಿತ ವಿದ್ಯಾರ್ಥಿಗಳಲ್ಲಿ ಬಿ. ಚಂದ್ರಶೇಖರ್, ಉಡುಪಿ ರಾಮಕೃಷ್ಣ ಮತ್ತು ಉಡುಪಿ ಉದ್ಯಾವರದ ರಾಮಚಂದ್ರ ಮೊದಲಿಗರಾಗಿದ್ದರು.

ಹಾಗೆಯೇ ಉಡುಪಿಯ ಗೋವಿಂದರಾವ್ ಅವರು ಸುದೀರ್ಘ 18 ವರ್ಷಗಳ ಕಾಲ ಡಿ.ಸಿ.ಎಂ. ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಮೊದಲಿಗರೆನ್ನಬಹುದು. ವಿಶೇಷವಾಗಿ ಹೇಳಬೇಕೆಂದರೆ ಉಡುಪಿಯ ಗೋವಿಂದರಾವ್ ಅವರು ಅಸ್ಪಶ್ಯತಾ ನಿವಾರಣಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು ಮತ್ತು ಇವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂಬುದು ಉಲ್ಲೇಖಾರ್ಹ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಕೆ.ಪಿ. ಮಹಾಲಿಂಗು ಕಲ್ಕುಂದ

contributor

Similar News