ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಭೂ ಸ್ವಾಧೀನದ ಪರಿಹಾರದ ವ್ಯಾಜ್ಯ
ಸರಕಾರಿ ಅಧಿಕಾರಿಗಳು, ವಕೀಲರ ಪಿತೂರಿಯಿಂದ ಸಾರ್ವಜನಿಕ ಹಿತಾಸಕ್ತಿಗೆ ಹೊಡೆತ
ಬೆಂಗಳೂರು, ನ.16: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಭೂ ಸ್ವಾಧೀನದ ಪರಿಹಾರಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ವ್ಯಾಜ್ಯಗಳಲ್ಲಿ ಸರಕಾರಿ ವಕೀಲರು ಉತ್ತಮವಾಗಿ ವಾದ ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ ಸರಕಾರಿ ಅಧಿಕಾರಿಗಳು ಮತ್ತು ಸರಕಾರಿ ವಕೀಲರು ಪಿತೂರಿ ನಡೆಸಿ ಸಾರ್ವಜನಿಕ ಹಿತಾಸಕ್ತಿಗೆ ಗಂಭೀರವಾಗಿ ಹೊಡೆತ ಕೊಟ್ಟಿದ್ದಾರೆ.
ಈ ಸಂಗತಿಯನ್ನು ಕಂದಾಯ ಇಲಾಖೆಯು ನೇರ ಮತ್ತು ನಿರ್ಭೀತವಾಗಿ ರಾಜ್ಯ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಗೆ ಲಿಖಿತವಾಗಿ ತಿಳಿಸಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ವ್ಯಾಪ್ತಿಯಲ್ಲಿರುವ ಬಾಗಲಕೋಟೆ, ಮುಧೋಳ ಸುತ್ತಮುತ್ತಲ ಪ್ರದೇಶಗಳ ಭೂ ಸ್ವಾಧೀನ, ಪುನರ್ವಸತಿ ಕಾಯ್ದೆ 2013ರ ಪ್ರಕಾರ ನ್ಯಾಯಯುತ ಪರಿಹಾರದ ಹಕ್ಕು ಮತ್ತು ದಾಖಲಾಗಿರುವ ಪ್ರಕರಣಗಳನ್ನು ಪಾರದರ್ಶಕತೆ ಅಡಿಯಲ್ಲಿ ವಿಚಾರಣೆ ಮಾಡುತ್ತಿರುವ ಪ್ರಕ್ರಿಯೆಗಳಲ್ಲಿ ಸರಕಾರಿ ವಕೀಲರು ಮತ್ತು ಸರಕಾರಿ ಅಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿ ವಿರುದ್ಧವಾಗಿ ಹೇಗೆಲ್ಲಾ ಪಿತೂರಿ ನಡೆಸಿದ್ದಾರೆ ಎಂದು ಖುದ್ದು ಕಂದಾಯ ಇಲಾಖೆಯೇ ಅನಿವಾರ್ಯವಾಗಿ ಬಾಯಿ ಬಿಟ್ಟಿದೆ.
ಕಂದಾಯ ಇಲಾಖೆಯು ಈ ಸಂಬಂಧ ರಾಜ್ಯ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಗೆ 2025ರ ನವೆಂಬರ್ 7ರಂದು ಬರೆದಿರುವ ಪತ್ರವು, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದಲ್ಲಿನ ಬಹುದೊಡ್ಡ ಪಿತೂರಿಯನ್ನು ಅನಾವರಣಗೊಳಿಸಿದೆ.
ಇಲಾಖೆಯು ರಾಜ್ಯ ಅಡ್ವೋಕೇಟ್ ಜನರಲ್ ಅವರಿಗೆ ಬರೆದಿರುವ ಪತ್ರವು "the-file.in'ಗೆ ಲಭ್ಯವಾಗಿದೆ. ಬಾಗಲಕೋಟೆ ಜಿಲ್ಲಾ ನ್ಯಾಯಾಲಯವು ಭೂ ಪರಿಹಾರಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶಗಳೆಲ್ಲವನ್ನೂ ಪರಿಗಣಿಸಿದರೇ ಭೂ ಸ್ವಾಧೀನ ವೆಚ್ಚವು ಸುಮಾರು 2 ಲಕ್ಷ ಕೋಟಿ ರೂ.ಗಳಾಗುತ್ತವೆ. ಇದು ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಮೂಲಭೂತ ಸವಾಲುಗಳನ್ನು ಒಡ್ಡಲಿದೆ ಎಂದು ಕಂದಾಯ ಇಲಾಖೆಯು, ರಾಜ್ಯ ಅಡ್ವೋಕೇಟ್ ಜನರಲ್ ಅವರನ್ನು ಗಮನ ಸೆಳೆದಿದೆ.
ಭೂಸ್ವಾಧೀನ ಪ್ರಕ್ರಿಯೆಯು ವಿವಿಧ ಸಮಸ್ಯೆಗಳನ್ನು ಒಳಗೊಂಡಿವೆ. ವಿಶೇಷವಾಗಿ ಈ ಸಂಬಂಧ ಹಲವು ಸಂಖ್ಯೆಯಲ್ಲಿ ಮೊಕದ್ದಮೆಗಳನ್ನು ಹೂಡಲಾಗಿದೆ. ಇದಲ್ಲದೆ, ವಿವಿಧ ಭೂಸ್ವಾಧೀನಗಳಲ್ಲಿ ಸ್ಪಷ್ಟವಾಗಿ ವೈಫರಿತ್ಯಗಳನ್ನು ಹೊಂದಿರುವುದು ಬೆಳಕಿಗೆ ಬಂದಿವೆ. ಯುಕೆಪಿ 3ನೇ ಹಂತದಲ್ಲಿ ಕಂಡು ಬರುತ್ತಿರುವ ಈ ಸಮಸ್ಯೆಗಳು ಎಲ್ಲದರ ಮೇಲೆ ಬೀರುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕಂದಾಯ ಇಲಾಖೆಯು, ಅಡ್ವೋಕೇಟ್ ಜನರಲ್ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
1.23 ಕೋಟಿ ರೂ.ನಿಂದ 23 ಕೋಟಿ ರೂ.ಗೆ ಹೆಚ್ಚಿದ ಪರಿಹಾರ ಮೊತ್ತ :
ಯುಕೆಪಿ 3 ರಲ್ಲಿ ಗಮನಿಸಿದಂತೆ, 10 ರಿಂದ 20 ಲಕ್ಷ ವ್ಯಾಪ್ತಿಯಲ್ಲಿ ಅವಾರ್ಡ್‌ಗಳನ್ನು ಪಡೆದ ಪ್ರಕರಣಗಳಲ್ಲಿ, ಸಿವಿಲ್ ನ್ಯಾಯಾಲಯಗಳು ಪರಿಹಾರವನ್ನು 1.26 ಕೋಟಿ ರೂ.ನಿಂದ 23 ಕೋಟಿ ರೂ.ಗೆ ಹೆಚ್ಚಿಸಿವೆ. ಅಂತಹ ಪ್ರಕರಣಗಳು ಮೇಲ್ಮನವಿ ಅವಧಿಯನ್ನೂ ದಾಟಿವೆ. ಮೇಲ್ಮನವಿ ಅವಧಿ ಮುಗಿದ ಕಾರಣ ಹೈಕೋರ್ಟ್ ಸಹ ಮೇಲ್ಮನವಿಗಳನ್ನು ವಜಾಗೊಳಿಸಿದೆ ಎಂದು ಪತ್ರದಲ್ಲಿ ತಿಳಿಸಿದೆ. ‘ನಾವು ಈ ಅವಾರ್ಡ್‌ಗಳನ್ನು ಪರಿಗಣಿಸಿದರೆ, ಒಟ್ಟು ಭೂಸ್ವಾಧೀನ ವೆಚ್ಚವು ಸುಮಾರು 2 ಲಕ್ಷ ಕೋಟಿ ರೂ.ಗಳಷ್ಟಾಗುತ್ತದೆ. ಇದು ಯೋಜನೆಗೆ ಬಹಳ ಮೂಲಭೂತ ಸವಾಲುಗಳನ್ನು ಒಡ್ಡುತ್ತದೆ.’ ಎಂದು ಕಂದಾಯ ಇಲಾಖೆಯು ಆರ್ಥಿಕ ಪರಿಣಾಮಗಳ ಕುರಿತು ರಾಜ್ಯ ಅಡ್ವೋಕೇಟ್ ಜನರಲ್ ಅವರ ಗಮನ ಸೆಳೆದಿರುವುದು ಗೊತ್ತಾಗಿದೆ.
ಪಿತೂರಿ ಅಡಗಿದೆಯೆ? :
ಸಕಾಲಿಕ ಮೇಲ್ಮನವಿಗಳನ್ನು ಸಲ್ಲಿಸುವಲ್ಲಿ ಮತ್ತು ಉತ್ತಮ ವಾದಗಳನ್ನು ಮಂಡಿಸುವಲ್ಲಿ ಸರಕಾರಿ ಅಧಿಕಾರಿಗಳು, ಸರಕಾರಿ ವಕೀಲರು ವೈಫಲ್ಯವನ್ನು ತೋರಿಸಿದ್ದಾರೆ. ಈ ಪಿತೂರಿ ನಡವಳಿಕೆಯು ಸಾರ್ವಜನಿಕ ಹಿತಾಸಕ್ತಿಗೆ ಗಂಭೀರ ಹೊಡೆತವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
‘ನಾವು ಇಡೀ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು. ಪರಿಶೀಲನೆಗಳು ಮತ್ತು ಸಮತೋಲನಗಳಿಲ್ಲದೆ ಮತ್ತು ವ್ಯವಸ್ಥೆಯ ಸರಿಯಾದ ಕಾರ್ಯಾಚರಣೆಯಿಲ್ಲದೆ ಕೈಗೊಳ್ಳುವ ಯಾವುದೇ ನಿರ್ಧಾರವು ಅನಿರೀಕ್ಷಿತ ಪರಿಣಾಮಗಳನ್ನು ಉಂಟುಮಾಡಬಹುದು,’ ಎಂದೂ ಕಂದಾಯ ಇಲಾಖೆಯು ರಾಜ್ಯ ಅಡ್ವೋಕೇಟ್ ಜನರಲ್ ಅವರನ್ನು ಎಚ್ಚರಿಸಿರುವುದು ಗೊತ್ತಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಒಪ್ಪಂದದ ಐ ತೀರ್ಪಿನಲ್ಲಿ ಕಲಂ 23(ಎ) ರಂತೆ ಪರಿಹಾರ ಧನದ ಮೊತ್ತವು ನಿಗದಿಪಡಿಸಬೇಕಿದ್ದ ಪ್ರಾಧಿಕಾರವು ಭೂಸ್ವಾಧೀನಾಧಿಕಾರಿಗಳ ಐ ತೀರ್ಪಿಗಿಂತ ಶೇ.20ರಿಂದ 30ಪಟ್ಟು ಹೆಚ್ಚಿನ ಭೂ ಪರಿಹಾರ ನಿಗದಿಪಡಿಸುತ್ತಿದೆ. ಇದರ ಬೆನ್ನಲ್ಲೇ ಪ್ರಾಧಿಕಾರದ ನ್ಯಾಯಾಲಯಗಳೂ ಅತೀ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಧನ ಹೆಚ್ಚಳ ಮಾಡುತ್ತಿರುವುದರಿಂದ ಸರಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆ ಉಂಟಾಗುತ್ತಿದೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ 2022ರ ಆಗಸ್ಟ್ 12ರಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿ ನಡೆದಿತ್ತು.
ಶೇ.30ರವರೆಗೆ ಪರಿಹಾರ ನೀಡಿದರೂ ಇದನ್ನು ಒಪ್ಪದ ರೈತರು ನ್ಯಾಯಾಲಯದ ಕಟಕಟೆ ಏರುತ್ತಿದ್ದಾರೆ. ಹೀಗಾಗಿ ಇದನ್ನು ತಪ್ಪಿಸಲು ಪರಿಹಾರ ಧನದ ಮೊತ್ತವನ್ನು ಶೇ.50ರವರೆಗೆ ಹೆಚ್ಚಿಸುವುದೇ ಸೂಕ್ತ ಎಂದು ಅಧಿಕಾರಿಗಳು ಸರಕಾರಕ್ಕೆ ಸಲಹೆ ನೀಡಿದ್ದರು.
ಯೋಜನೆಯ ಮೂರನೇ ಹಂತಕ್ಕೆ 73,000 ಎಕರೆ ಜಮೀನು, 23,000 ಕಟ್ಟಡಗಳಿಗೆ ಭೂ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವ ಹೊತ್ತಿನಲ್ಲೇ ಪ್ರಾಧಿಕಾರದಲ್ಲೇ ಶೇ.20ರಿಂದ ಶೇ.30 ಪಟ್ಟು ಹೆಚ್ಚಿನ ಭೂ ಪರಿಹಾರ ನಿಗದಿಪಡಿಸಿತ್ತು.
ಒಪ್ಪಂದದ ಐ ತೀರ್ಪಿನಲ್ಲಿ ಕಲಂ 23(ಎ)ರಡಿ ನೀಡುವ ಪರಿಹಾರ ಧನದ ಮೊತ್ತವು ಕಲಂ 26ರಿಂದ 30 ಅನ್ವಯ ನಿಗದಿಪಡಿಸುವ ಒಟ್ಟು ಮೊತ್ತದ ಮೇಲೆ ಶೇ. 5ಕ್ಕಿಂತ ಕಡಿಮೆ ಇಲ್ಲದಷ್ಟು ಅಥವಾ ಶೇ.10ರಷ್ಟನ್ನು ಮೀರದಂತಿರಬೇಕು ಎಂದು ಸ್ಪಷ್ಟಪಡಿಸಿತ್ತು. ಇದರ ಪ್ರಕಾರ ಒಂದು ಎಕರೆಗೆ 10 ಲಕ್ಷ ರೂ.ಪರಿಹಾರ ನೀಡಲು ಕಲಂ 26ರಡಿ ನಿಗದಿಯಾಗಿದ್ದರೆ ಈ ಮೊತ್ತಕ್ಕೆ ಶೇ.10ರಷ್ಟನ್ನು ಸೇರಿಸಿದರೆ ಒಟ್ಟು 11 ಲಕ್ಷ ರೂ. ಆಗಲಿದೆ. ಇದಕ್ಕೆ ರೈತರು ಒಪ್ಪಂದದ ಐ ತೀರ್ಪು ರಚಿಸಲು ಮುಂದೆ ಬರುವುದಿಲ್ಲ. ಹೀಗಾಗಿ ಶೇ.10ರಷ್ಟು ಇದ್ದದ್ದನ್ನು ಶೇ.50ರವರೆಗೆ ಹೆಚ್ಚಿ ಸಿದಲ್ಲಿ ಒಂದು ಎಕರೆಗೆ 15 ಲಕ್ಷ ರೂ.ನಿಗದಿಪಡಿಸಿದರೆ ರೈತರು ಒಪ್ಪಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದರು.