ಕೋವಿಡ್ ಕಾಲದಲ್ಲಿ ಕಡಿಮೆ ಗುಣಮಟ್ಟದ ಗ್ಲೌಸ್ ಪೂರೈಕೆ: ಕಂಪೆನಿ ವಿರುದ್ಧ ಯಾವುದೇ ಕ್ರಮವಿಲ್ಲ
ಬೆಂಗಳೂರು: ರಕ್ತದ ಕಲೆಗಳನ್ನು ಹೊಂದಿದ್ದ ಮತ್ತು ತುಂಬಾ ಕಡಿಮೆ ಗುಣಮಟ್ಟ ಹೊಂದಿರುವ ಕೈಗವಸುಗಳನ್ನು (ಗ್ಲೌಸ್) ಪೂರೈಕೆ ಮಾಡಲಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಗಳ 6 ವೈದ್ಯಾಧಿಕಾರಿಗಳು ಸಲ್ಲಿಸಿದ್ದ ದೂರನ್ನಾಧರಿಸಿ ತನಿಖೆ ನಡೆಸಿ ಸರಬರಾಜುದಾರ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಗುಣಕೋಶದ ಪ್ರಧಾನ ವ್ಯವಸ್ಥಾಪಕ ಮಾಡಿದ್ದ ಶಿಫಾರಸನ್ನು ಬದಿಗೊತ್ತಿಯಾವುದೇ ಕ್ರಮವಿಲ್ಲದೆಯೇ ಕಡತವನ್ನು ಮುಕ್ತಾಯಗೊಳಿಸಿರುವುದು ಇದೀಗ ಬಹಿರಂಗವಾಗಿದೆ.
ಕೋವಿಡ್ ಕಾಲದಲ್ಲಿ ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಿಗೆ ಪೂರೈಕೆಯಾಗಿದ್ದ ಕೈಗವಸುಗಳಿಗೆ ರಕ್ತದ ಕಲೆಗಳು ಅಂಟಿದ್ದವು. ಇದು ಕೈಗಳ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎಂದು ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ, ಕೊಳ್ಳೇಗಾಲದ ವೈದ್ಯಾಧಿಕಾರಿ ಡಾ.ಪರಮೇಶ್ ಮತ್ತು ಸೋಮವಾರಪೇಟೆಯ ವೈದ್ಯಾಧಿಕಾರಿಗಳು ಸಲ್ಲಿಸಿದ್ದ ದೂರುಗಳನ್ನು ಕಸದ ಬುಟ್ಟಿಗೆ ಎಸೆದು ಸರಬರಾಜುದಾರ ಕಂಪೆನಿಗೆ ಹಣ ಪಾವತಿಸಲು ಕಡತವನ್ನು ರವಾನಿಸಲಾಗಿದೆ.
ಈ ಕಡತವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರ ಅನುಮೋದನೆಗೆ ಬಾಕಿ ಇದೆ ಎಂದು ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘the-file.in’ ಸಮಗ್ರ ಕಡತವನ್ನು ಪಡೆದುಕೊಂಡಿದೆ.
ಕೋವಿಡ್ ಕಾಲದ ಅಕ್ರಮಗಳ ಕುರಿತಾಗಿ ತನಿಖೆ ನಡೆಸಲು ಕಾಂಗ್ರೆಸ್ ಸರಕಾರವು ನಿರ್ಧಾರ ಪ್ರಕಟಿಸಿರುವ ಹೊತ್ತಿನಲ್ಲಿಯೇ ರಕ್ತದ ಕಳೆಗಳು ಅಂಟಿದ್ದ ಕೈಗವಸುಗಳನ್ನು ಸರಬರಾಜು ಮಾಡಿರುವ ಕಂಪೆನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಮುನ್ನೆಲೆಗೆ ಬಂದಿದೆ.
ಅಲ್ಲದೆ ಸರಬರಾಜುದಾರ ಕಂಪೆನಿಗೆ ಎಚ್ಚರಿಕೆ ನೋಟಿಸ್ ನೀಡಿ ಕಡತವನ್ನು ಮುಕ್ತಾಯಗೊಳಿಸಬಹುದು ಎಂದು ಅಭಿಪ್ರಾಯ ನೀಡಿ, ಆ ನಂತರ ಕಪ್ಪು ಪಟ್ಟಿಗೆ ಸೇರಿಸುವ ವಿಚಾರದಿಂದ ಕೈ ಬಿಟ್ಟು ಪ್ರಕರಣವನ್ನು ಅಂತಿಮವಾಗಿ ಮುಕ್ತಾಯಗೊಳಿಸಬಹುದು ಎಂದು ನಿಗಮದ ಕಾನೂನು ವಿಭಾಗವು ನೀಡಿದ್ದ ಅಭಿಪ್ರಾಯವು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಇದನ್ನು ಬಲವಾಗಿ ಆಕ್ಷೇಪಿಸಿದ್ದ ನಿಗಮದ ಗುಣಕೋಶ ವಿಭಾಗವು ಕಾನೂನು ವ್ಯವಸ್ಥಾಪಕರು ಸದರಿ ಅಭಿಪ್ರಾಯದಲ್ಲಿ ಮೋಸದ ಸರಬರಾಜು (FRAUDULENT SUPPLY BY K K ALLIANZE ) ಎಂದು ಅಸ್ಮಾ ರಬ್ಬರ್ ಪ್ರಾಡಕ್ಟ್ ಸಂಸ್ಥೆಯು ನೀಡಿರುವ ದೂರನ್ನು ಪರಿಗಣಿಸಿರುವುದಿಲ್ಲ ಮತ್ತು ದೂರಿನ ಬಗ್ಗೆ ಯಾವುದೇ ಸ್ಪಷ್ಟ ಅಭಿಪ್ರಾಯ ನೀಡಿರುವುದಿಲ್ಲ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿತ್ತು. ಆದರೂ ಕಠಿಣ ಕ್ರಮ ಕೈಗೊಳ್ಳದಿರುವುದು ಸಂಶಯಗಳಿಗೆ ಕಾರಣವಾಗಿದೆ.
ಈ ಕಡತವನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಸಮ್ಮುಖದಲ್ಲಿ ಪರಿಶೀಲಿಸಲಾಗಿತ್ತಲ್ಲದೆ ನಿಗಮಕ್ಕೆ ಮೋಸ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಡತದ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಮರು ಮಂಡಿಸಬೇಕು ಎಂದು ೨೦೨೩ರ ಜನವರಿ ೧೭ರಂದು ಸೂಚಿಸಲಾಗಿತ್ತು.
ಅದರಂತೆ ಕಡತವನ್ನು ಮರು ಮಂಡಿಸಿದ್ದ ಗುಣಕೋಶ ವಿಭಾಗವು ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರ ದೂರುಗಳನ್ನು ಪರಿಗಣಿಸಿ ನಿಗಮದ ಮೂಲಕ ಇಲಾಖೆಗೆ ಮೋಸ ಮಾಡಿರುವ ಕೆ.ಕೆ. ಅಲೈಯನ್ಸ್ ಕಂಪೆನಿ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಯಾವುದೇ ಸಂಸ್ಥೆಯು ಸಹ ನಿಗಮಕ್ಕೆ ಮೋಸ ಮಾಡದಂತೆ ನಿಗಾ ವಹಿಸುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ದರಪಟ್ಟಿ ನಿಬಂಧನೆಗಳ ಪ್ರಕಾರ ಒಂದು ವರ್ಷಗಳ ಅವಧಿಗೆ ಕಪ್ಪು ಪಟ್ಟಿಗೆ ಸೇರಿಸಲು ಅನುಮೋದನೆ ನೀಡಬೇಕು ಎಂದು ಕಡತವನ್ನು ಮಂಡಿಸಲಾಗಿತ್ತು.
ಆದರೆ ಕಡತವನ್ನು ಏಕಾಏಕಿ ಮುಕ್ತಾಯಗೊಳಿಸಿರುವ ನಿಗಮವು ಸರಬರಾಜುದಾರ ಕಂಪೆನಿಗೆ ಹಣ ಪಾವತಿಸಲು ಪಾವತಿ ವಿಭಾಗಕ್ಕೆ ಮತ್ತೊಂದು ಕಡತವನ್ನು ರವಾನಿಸಿದೆ ಎಂದು ಗೊತ್ತಾಗಿದೆ.