×
Ad

ಈ ದೇಶದಲ್ಲಿ ಮಾತನಾಡುವುದು ಸುರಕ್ಷಿತವಲ್ಲವೆ?; ಇನ್ನು ಮುಂದೆ ಸರ್ಕಾರಿ ಯೋಜನೆಯನ್ನು ಟೀಕಿಸಿದರೆ ಜೈಲು ಶಿಕ್ಷೆ!

Update: 2025-07-17 16:36 IST

Photo credit: ANI

ಉಮರ್ ಖಾಲಿದ್ ಮತ್ತಿತರ ಕಾರ್ಯಕರ್ತರು ಯಾವುದೇ ವಿಚಾರಣೆಯಿಲ್ಲದೆ ಸುಮಾರು 5 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಗೌರಿ ಲಂಕೇಶ್ ಅವರನ್ನು 2017 ರಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಸ್ಟ್ಯಾನ್ ಸ್ವಾಮಿ ಅವರನ್ನು ಸುಳ್ಳು ಆರೋಪ ಹೊರಿಸಿ ಜೈಲಿಗೆ ತಳ್ಳಿ, ಬಲಿ ಪಡೆಯಲಾಯಿತು. ಇಂಥ ಹಲವು ಉದಾಹರಣೆಗಳು ಕಾಣಿಸುತ್ತವೆ.

ಈಗ, ಮಹಾರಾಷ್ಟ್ರ ಸರ್ಕಾರದ ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ ಮಸೂದೆ ಈ ಅಪಾಯವನ್ನು ಮತ್ತಷ್ಟು ಹೆಚ್ಚಿಸುವ ಹಾಗಿದೆ. ಈ ಮಸೂದೆ ಪ್ರಕಾರ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಸರ್ಕಾರಿ ಯೋಜನೆ ಬಗ್ಗೆ ಟೀಕಿಸಿದರೆ ಅಥವಾ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರವನ್ನು ಪ್ರಶ್ನಿಸಿದರೆ ಅಥವಾ ಯಾವುದೇ ಸರ್ಕಾರಿ ನೀತಿಯನ್ನು ವಿರೋಧಿಸುವ ಯಾವುದೇ ಚಳವಳಿಯಲ್ಲಿ ಸೇರಿದರೆ, ಅಂಥವರನ್ನು ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡಿದ ಆರೋಪದಲ್ಲಿ ಮಹಾರಾಷ್ಟ್ರ ಪೊಲೀಸರು ಯಾವುದೇ ವಾರಂಟ್ ಇಲ್ಲದೆ ಬಂಧಿಸಬಹುದಾಗಿದೆ.

ನಗರ ನಕ್ಸಲರನ್ನು ಎದುರಿಸಲು ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ ಮಸೂದೆಯನ್ನು ತಂದಿದೆ. ಈ ಕಾನೂನಿನಡಿ ನಗರ ನಕ್ಸಲಿಸಂನ ವ್ಯಾಖ್ಯಾನ ದೊಡ್ಡ ವ್ಯಾಪ್ತಿಯದ್ದಾಗಿದೆ. ಯಾವುದೇ ಭಿನ್ನಾಭಿಪ್ರಾಯ, ಪ್ರತಿಭಟನೆ ಅಥವಾ ಪ್ರಶ್ನೆ ಇವೆಲ್ಲವನ್ನೂ ಕಾನೂನುಬಾಹಿರ ಎಂದು ಪರಿಗಣಿಸುವಂಥ ಕಾಯ್ದೆ ಇದಾಗಿದೆ.

ಯಾರಾದರೂ ಮಾತಿನಲ್ಲಿ, ಬರವಣಿಗೆಯಲ್ಲಿ, ಪೋಸ್ಟರ್‌ಗಳ ಮೂಲಕ ಅಥವಾ ಸಾಂಕೇತಿಕವಾಗಿ ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೆ, ಅದನ್ನು ಈ ಕಾನೂನಿನ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಯಾರಾದರೂ ಸರ್ಕಾರಿ ಸಂಸ್ಥೆಯನ್ನು ಟೀಕಿಸಿದರೆ ಅಥವಾ ಪ್ರಶ್ನಿಸಿದರೆ, ಅಂತವರ ವಿರುದ್ದವೂ ಈ ಕಾನೂನನ್ನು ಬಳಸಬಹುದು. ಅಂದರೆ ಈಗ ಪ್ರತಿಭಟನೆ, ಪ್ರದರ್ಶನ, ಘೋಷಣೆಗಳು, ಮಾಧ್ಯಮ ವರದಿ ಅಥವಾ ಮಾನವ ಹಕ್ಕುಗಳ ಕುರಿತು ಬರೆಯುವುದು ಎಲ್ಲವೂ ಅಪರಾಧವಾಗಬಹುದು.

ಈ ಕಾನೂನು ನಿಜವಾಗಿಯೂ ಅಪರಾಧಿಗಳನ್ನು ಎದುರಿಸುವ ಉದ್ದೇಶದ್ದಾಗಿದೆಯೇ ಅಥವಾ ಸರ್ಕಾರವನ್ನು ಪ್ರಶ್ನಿಸುವವರನ್ನು ಹೆದರಿಸುವುದು ಇದರ ನಿಜವಾದ ಉದ್ದೇಶವೇ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಈ ಕಾನೂನು ಗುರಿಯಾಗಿಸಿಕೊಂಡಿರುವ ಈ ಅರ್ಬನ್ ನಕ್ಸಲರು ಯಾರು?:

ಅರ್ಬನ್ ನಕ್ಸಲ್ ಎಂಬುದನ್ನು ಕಳೆದ ಕೆಲ ವರ್ಷಗಳಿಂದ ಬಹಳ ಬಳಸಲಾಗುತ್ತಿದೆ. ಆದರೆ ಇದರ ಸ್ಪಷ್ಟ ವ್ಯಾಖ್ಯಾನವಿಲ್ಲ. ಕಾನೂನಿನಲ್ಲಿ ಅಥವಾ ಯಾವುದೇ ಸರ್ಕಾರಿ ದಾಖಲೆಯಲ್ಲಿ ಅಥವಾ ನ್ಯಾಯಾಲಯಗಳು ಅರ್ಬನ್ ನಕ್ಸಲ್ ಯಾರು ಎಂಬುದನ್ನು ಹೇಳಿಲ್ಲ. ಇದರ ಹೊರತಾಗಿಯೂ, ಈ ಪದದ ಸಹಾಯದಿಂದ ಅನೇಕ ಜನರ ಮೇಲೆ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಅನೇಕರನ್ನು ಬಂಧಿಸಲಾಗಿದೆ ಮತ್ತು ಅವರನ್ನು ನಕ್ಸಲ್ ಸಿದ್ಧಾಂತ ಹರಡುವವರೆಂದು ಆರೋಪಿಸಲಾಗಿದೆ.

2018 ರಲ್ಲಿ ಭೀಮಾ ಕೋರೆಗಾಂವ್‌ಗೆ ಸಂಬಂಧಿಸಿದ ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರು, ವಕೀಲರು ಮತ್ತು ಶಿಕ್ಷಕರನ್ನು ಬಂಧಿಸಿದಾಗ ಈ ಪದ ಹೆಚ್ಚು ಚರ್ಚೆಯಾಯಿತು. ಇದರಲ್ಲಿ ಸುಧಾ ಭಾರದ್ವಾಜ್, ವರವರರಾವ್, ಗೌತಮ್ ನವ್ಲಖಾ, ಅರುಣ್ ಫೆರೇರಾ ಅವರಂಥ ಅನೇಕ ಪ್ರಸಿದ್ಧರ ಹೆಸರುಗಳು ಸೇರಿವೆ.

ಸರ್ಕಾರ ಮತ್ತು ಕೆಲ ಮಾಧ್ಯಮ ವರದಿಗಳು ಅವರನ್ನು ಅರ್ಬನ್ ನಕ್ಸಲರು ಎಂದು ಕರೆದವು. ಅಂದರೆ, ನಗರಗಳಲ್ಲಿ ಕುಳಿತು ನಕ್ಸಲ್ ಸಿದ್ಧಾಂತವನ್ನು ಹರಡಲು ಮತ್ತು ಹಿಂಸಾಚಾರವನ್ನು ಉತ್ತೇಜಿಸಲು ಕೆಲಸ ಮಾಡುವ ಜನರು. ಆದರೆ ಈ ಆರೋಪಗಳನ್ನು ಯಾವ ಆಧಾರದ ಮೇಲೆ ಮಾಡಲಾಗಿದೆ? ಈ ಜನರ ಬಳಿ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆಯೇ? ಅವರು ನೇರವಾಗಿ ನಕ್ಸಲ್ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲ.

ವಾಸ್ತವವಾಗಿ, ನಗರ ನಕ್ಸಲ್ ಎಂಬ ಪದ ಒಂದು ರೀತಿಯಲ್ಲಿ ಸುಳ್ಳಾರೋಪವೇ ಅಗಿದೆ. ಇದನ್ನು ಹೆಚ್ಚಾಗಿ ಸರ್ಕಾರದ ನೀತಿಗಳನ್ನು ಒಪ್ಪದ ಜನರನ್ನು ಗುರಿಯಾಗಿಸಿ ಬಳಸಲಾಗುತ್ತದೆ. ಬಡವರು, ಬುಡಕಟ್ಟು ಜನಾಂಗದವರು ಅಥವಾ ಕಾರ್ಮಿಕರ ಪರವಾಗಿ ಧ್ವನಿ ಎತ್ತಿದವರನ್ನು, ಪೊಲೀಸರು ಮತ್ತು ಸರ್ಕಾರದ ಅತಿರೇಕಗಳ ಬಗ್ಗೆ ಪ್ರಶ್ನೆ ಮಾಡಿದವರನ್ನು ನಗರ ನಕ್ಸಲರು ಎಂದು ಕರೆದುಬಿಡಲಾಗುತ್ತಿದೆ.

ಅಂದರೆ, ಸಿದ್ಧಾಂತಕ್ಕಿಂತ ಹೆಚ್ಚಾಗಿ ಭಿನ್ನಾಭಿಪ್ರಾಯ ಕುರಿತ ಅಸಹನೆ ಈ ನಗರ ನಕ್ಸಲರು ಎಂಬ ಪದದಲ್ಲಿ ಕಾಣಿಸುತ್ತದೆ. ಯಾವುದೇ ದೃಢವಾದ ಕಾನೂನು ಅಥವಾ ವ್ಯಾಖ್ಯಾನ ಇಲ್ಲದೆ ಹೋದರೂ, ಪ್ರಚಾರ ಬಲದಿಂದ ಈ ಪದ ಹೆಚ್ಚು ಪ್ರಭಾವಶಾಲಿಯಾಗಿಬಿಟ್ಟಿದೆ.

ಸರ್ಕಾರದ ವಿರುದ್ಧ ಧ್ವನಿ ಎತ್ತಿದಾಗ, ಅಂಥವರನ್ನು ನಗರ ನಕ್ಸಲ್ ಎಂದು ಕರೆಯಲಾಗುತ್ತದೆ. ಆ ಮೂಲಕ, ಅಂಥವರನ್ನು ಅನುಮಾನಾಸ್ಪದ ಎಂಬಂತೆ ನೊಡಲಾಗುತ್ತದೆ. ವಿರೋಧ ಪಕ್ಷಗಳನ್ನು ದೂಷಿಸುವುದಕ್ಕೂ ಈ ಪದ ಒಂದು ಅಸ್ತ್ರವಾಗಿದೆ. ಯಾವುದೇ ವಿಚಾರಣೆ ಅಥವಾ ಪುರಾವೆಗಳಿಲ್ಲದೆ ಮತ್ತು ಬೆದರಿಕೆ ಮೂಲಕವೇ ಪ್ರತಿಭಟನೆಯ ಧ್ವನಿಯನ್ನು ಮೌನಗೊಳಿಸುವ ಹುನ್ನಾರ ಇದರ ಹಿಂದಿದೆ. ಈಗ ಮಹಾರಾಷ್ಟ್ರ ಸರ್ಕಾರ ಅಂಥ ಹುನ್ನಾರವನ್ನೇ ಕಾನೂನು ಚೌಕಟ್ಟಿನಲ್ಲಿ ಮಾಡುವುದರ ಭಾಗವೆಂಬಂತೆ ಈ ಕಾನೂನನ್ನು ತಂದಿದೆ.

ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ ಮಸೂದೆಯನ್ನು ಈಗಾಗಲೇ ಮಹಾರಾಷ್ಟ್ರ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾಗಿದೆ. ಅಂತಿಮ ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ.

ಈ ಕಾನೂನಿನ ಕರಡನ್ನು ಮೊದಲು 2024 ರ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲಾಯಿತು. ಆದರೆ ಅಧಿವೇಶನ ಮುಂದೂಡಲ್ಪಟ್ಟ ಕಾರಣ ಅದನ್ನು ಅಂಗೀಕರಿಸಲು ಸಾಧ್ಯವಾಗಿರಲಿಲ್ಲ. ನಂತರ, ಡಿಸೆಂಬರ್ 2024 ರ ಚಳಿಗಾಲದ ಅಧಿವೇಶನದಲ್ಲಿ ಇದನ್ನು ಮತ್ತೆ ತರಲಾಯಿತು.

ನಾಗರಿಕ ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ತೀವ್ರ ಟೀಕೆ ಬಳಿಕ, ಇದನ್ನು ಶಾಸಕಾಂಗದ ಜಂಟಿ ಆಯ್ಕೆ ಸಮಿತಿಗೆ ಕಳುಹಿಸಲಾಯಿತು. ಈ ಕಾನೂನಿನ ಕುರಿತು ಸಮಿತಿ 12,000 ಕ್ಕೂ ಹೆಚ್ಚು ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಿತು. ಆದರೆ ಈಗ ಜುಲೈನಲ್ಲಿ ಇದನ್ನು ಮತ್ತೆ ವಿಧಾನಸಭೆಯಲ್ಲಿ ಮಂಡಿಸಿದಾಗ, ಕೇವಲ ಮೂರು ಬದಲಾವಣೆಗಳನ್ನು ಮಾತ್ರ ಮಾಡಲಾಯಿತು. ಮಸೂದೆಯ ಹೆಸರು ಮತ್ತು ಪೀಠಿಕೆಯಲ್ಲಿ ಮೊದಲ ಬದಲಾವಣೆ ಮಾಡಲಾಯಿತು.

ಈಗ ಕಾನೂನು ನೇರವಾಗಿ ಸಂಘಟನೆಗಳ ಬಗ್ಗೆ ಮಾತನಾಡುತ್ತದೆ. ಅಲ್ಲದೆ, ಈ ಕಾನೂನು ಎಡಪಂಥೀಯ ಉಗ್ರಗಾಮಿ ಸಂಘಟನೆಗಳು ಅಥವಾ ಅಂಥ ಇನ್ನಾವುದೇ ಸಂಘಟನೆಗಳ ಕಾನೂನುಬಾಹಿರ ಚಟುವಟಿಕೆಗಳನ್ನು ನಿಗ್ರಹಿಸುವ ಉದ್ದೇಶದ್ದೆಂದು ಪೀಠಿಕೆಯಲ್ಲಿ ಹೇಳಲಾಗಿದೆ. ಅಂದರೆ, ಸರ್ಕಾರದ ಗಮನ ಈಗ ಸಂಘಟನೆಗಳ ಮೇಲೆ ಹೋಗಿದೆ. ಎರಡನೇ ಪ್ರಮುಖ ಬದಲಾವಣೆಯನ್ನು ಸೆಕ್ಷನ್ 52 ರಲ್ಲಿ ಮಾಡಲಾಗಿದೆ. ಹೈಕೋರ್ಟ್‌ನ ಪ್ರಸ್ತುತ, ಮಾಜಿ ಅಥವಾ ಅರ್ಹ ನ್ಯಾಯಾಧೀಶರಾಗಿರುವ ಮೂವರು ವ್ಯಕ್ತಿಗಳ ಸಲಹಾ ಮಂಡಳಿ ರಚಿಸಲಾಗುತ್ತದೆ ಎಂದು ಈ ಹಿಂದೆ ಹೇಳಲಾಗಿತ್ತು. ಸರ್ಕಾರ ಅವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತದೆ. ಈಗ ಅಧ್ಯಕ್ಷರು ಹೈಕೋರ್ಟ್‌ನ ಮಾಜಿ ಅಥವಾ ಪ್ರಸ್ತುತ ನ್ಯಾಯಾಧೀಶರಾಗಿರುತ್ತಾರೆ. ಆದರೆ ಇತರ ಇಬ್ಬರು ಸದಸ್ಯರು ನಿವೃತ್ತ ನ್ಯಾಯಾಧೀಶರಾಗಿರುತ್ತಾರೆ ಮತ್ತು ಇನ್ನೊಬ್ಬರು ರಾಜ್ಯ ಸರ್ಕಾರದಿಂದ ನೇಮಿಸಲ್ಪಟ್ಟ ಸರ್ಕಾರಿ ವಕೀಲರಾಗಿರುತ್ತಾರೆ ಎಂದು ಬದಲಾಯಿಸಲಾಗಿದೆ.

ಈಗ ಸರ್ಕಾರ ತನ್ನ ಚಿಂತನೆಗೆ ಹೊಂದಿಕೆಯಾಗುವ ವ್ಯಕ್ತಿಯನ್ನು ಮಂಡಳಿಯಲ್ಲಿ ನಾಮನಿರ್ದೇಶನ ಮಾಡುವ ಅವಕಾಶ ಪಡೆದುಕೊಂಡಿದೆ.

ಮೂರನೇ ಬದಲಾವಣೆ ಸೆಕ್ಷನ್ 152 ಕ್ಕೆ ಸಂಬಂಧಿಸಿದೆ. ಈ ಕಾನೂನಿನಡಿಯಲ್ಲಿ, ಯಾವುದೇ ಪ್ರಕರಣವನ್ನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಥವಾ ಅವರ ಮೇಲಿನ ಅಧಿಕಾರಿ ತನಿಖೆ ಮಾಡಬಹುದು ಎಂದು ಹಿಂದಿನ ಕರಡಿನಲ್ಲಿ ಹೇಳಲಾಗಿತ್ತು.

ಈಗ ಅದಕ್ಕೆ ತಿದ್ದುಪಡಿ ತರಲಾಗಿದ್ದು, ಡಿಎಸ್‌ಪಿ ಮಟ್ಟದ ಅಧಿಕಾರಿ ಅಂದರೆ ಪೊಲೀಸ್ ಉಪ ವರಿಷ್ಠಾಧಿಕಾರಿ ಮಾತ್ರ ತನಿಖೆ ನಡೆಸುತ್ತಾರೆ ಎಂದು ಹೇಳಲಾಗಿದೆ.

ನಿಷೇಧಿತ ಸಂಘಟನೆಗಳಿಗೆ ಸಹಾಯ ಮಾಡುವುದು, ಅಂತಹ ಸಂಸ್ಥೆಗಳಿಗೆ ಸಂಪನ್ಮೂಲ ಒದಗಿಸುವುದು, ಅವರ ಚಟುವಟಿಕೆಗಳನ್ನು ಉತ್ತೇಜಿಸುವುದು ಮತ್ತು ಅವರ ಆಲೋಚನೆಗಳ ಬಗ್ಗೆ ಸಹಾನುಭೂತಿ ತೋರಿಸುವುದು ಇವೆಲ್ಲವನ್ನೂ ಈ ಕಾನೂನಿನಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ. ಅಂದರೆ, ಯಾರೇ ಏನನ್ನಾದರೂ ಹೇಳಿದಾಗ ಮತ್ತು ಸರ್ಕಾರ ಅಂಥ ಆಲೋಚನೆಗಳು ನಕ್ಸಲೈಟ್ ಸಂಘಟನೆಯ ಆಲೋಚನೆಗಳಂತಿವೆ ಎಂದು ಪರಿಗಣಿಸಿದರೆ, ಈ ಕಾನೂನಿನಡಿಯಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ.

ಇನ್ನೊಂದು ಮುಖ್ಯ ವಿಷಯವೆಂದರೆ, ಈ ಕಾನೂನಿನಡಿಯಲ್ಲಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಆಯುಕ್ತರು, ಯಾವುದೇ ಸಂಘಟನೆ ಕಾನೂನುಬಾಹಿರ ಚಟುವಟಿಕೆಗಳಿಗೆ ಸ್ಥಳವನ್ನು ಬಳಸುತ್ತಿದೆ ಎಂದು ಅನುಮಾನಿಸಿದರೆ, ಅವರು ಆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. 

ಈ ಕಾನೂನನ್ನು ಸಂಸ್ಥೆಗಳ ಮೇಲೆ ಮಾತ್ರವಲ್ಲದೆ ಸರ್ಕಾರಕ್ಕೆ ವಿರುದ್ಧವಾದ ಯಾವುದೇ ಆಲೋಚನೆ ಅಥವಾ ಚಟುವಟಿಕೆಯ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲು ತರಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಸರ್ಕಾರ ಈ ಮಸೂದೆಯನ್ನು ಭದ್ರತೆಯ ಉದ್ದೇಶ ಹೊಂದಿದೆ ಎಂದು ಸಮರ್ಥಿಸಿದೆ.

ಸರ್ಕಾರದ ವಿರುದ್ಧದ ಹಿಂಸಾಚಾರ ಎದುರಿಸಲು ಯುಎಪಿಎ ಅಂದರೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಮತ್ತು MCOCA ಅಂದರೆ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಂಥ ಕಠಿಣ ಕಾನೂನುಗಳು ಈಗಾಗಲೇ ಇರುವಾಗ, ಪ್ರತ್ಯೇಕ ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ ಮಸೂದೆಯ ಅಗತ್ಯವೇನಿತ್ತು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಯುಎಪಿಎ ಅಡಿಯಲ್ಲಿ, ಕೇಂದ್ರ ಸರ್ಕಾರ ಯಾವುದೇ ಸಂಘಟನೆಯನ್ನು ಕಾನೂನುಬಾಹಿರ ಅಥವಾ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬಹುದಾಗಿದೆ.

ಆದರೆ ಯುಎಪಿಎ ಅಡಿಯಲ್ಲಿ, ಒಂದು ಸಂಘಟನೆಯನ್ನು ಕಾನೂನುಬಾಹಿರ ಎಂದು ಘೋಷಿಸಿದಾಗ, ಅದರ ಮೇಲೆ ಶಾಶ್ವತ ನಿಷೇಧ ಹೇರಲು ವಿಶೇಷ ನ್ಯಾಯಮಂಡಳಿಯನ್ನು ರಚಿಸಲಾಗುತ್ತದೆ. ಇದು ಹೈಕೋರ್ಟ್‌ನ ನ್ಯಾಯಾಧೀಶರ ನೇತೃತ್ವದಲ್ಲಿರುತ್ತದೆ. ಈ ನ್ಯಾಯಮಂಡಳಿ ನಿಷೇಧ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತನಿಖೆ ಮಾಡಿ, ನಂತರ ಅಂತಿಮ ನಿರ್ಧಾರ ಪ್ರಕಟಿಸುತ್ತದೆ.

ಅಂದರೆ, ಸರ್ಕಾರಕ್ಕೆ ಇದರ ಮೇಲೆ ಸಂಪೂರ್ಣ ನಿಯಂತ್ರಣ ಇರುವುದಿಲ್ಲ. ಸರ್ಕಾರ ಯಾವುದೇ ಸಂಘಟನೆಯನ್ನು ದೇಶವಿರೋಧಿ ಎಂದು ತಾನೇ ಘೋಷಿಸಲು ಸಾಧ್ಯವಿಲ್ಲ. ಒಂದು ಸಂಘಟನೆಯನ್ನು ನಿಷೇಧಿಸದಿದ್ದರೆ ಮತ್ತು ಅದರ ವಿರುದ್ಧ ಯಾವುದೇ ಪ್ರಕರಣ ಅಥವಾ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಪುರಾವೆಗಳಿಲ್ಲದಿದ್ದರೆ, ಅದನ್ನು ಸಂಘಟನೆ ಎಂಬ ಕಾರಣಕ್ಕಾಗಿ ಮಾತ್ರವೇ ಶಂಕಿತ ಎಂದು ಘೋಷಿಸುವುದು ಕಾನೂನಿನ ಮೂಲ ತತ್ವಗಳಿಗೆ ವಿರುದ್ಧ. ಆದರೆ ಮಹಾರಾಷ್ಟ್ರ ಸರ್ಕಾರದ ಹೊಸ ಕಾನೂನು ಅಂತಹ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶ ಹೊಂದಿದೆ.

ಹಾಗಾಗಿ ಇದು ಯುಎಪಿಎ ಮತ್ತು MCOCA ಗಿಂತ ಭಿನ್ನವಾಗಿದೆ. ಇಲ್ಲಿ ಎಲ್ಲವೂ ಸರ್ಕಾರದ ಹಿಡಿತದಲ್ಲಿರುವಂತೆ ಕಾಣಿಸುತ್ತದೆ.

ಒಂದು ಕಾನೂನು ಸಾರ್ವಜನಿಕರ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರಬಹುದೆಂದು ಕಂಡಾಗ, ಸಾಮಾನ್ಯವಾಗಿ ವಿರೋಧ ಪಕ್ಷಗಳು ತೀವ್ರವಾಗಿ ಚರ್ಚಿಸಬೇಕು. ಅದರ ಬಗ್ಗೆ ಪ್ರಶ್ನೆಗಳನ್ನು ಎತ್ತಬೇಕು ಮತ್ತು ಅಗತ್ಯವಿದ್ದರೆ ಅದನ್ನು ಬಹಿರಂಗವಾಗಿ ವಿರೋಧಿಸಬೇಕು. ಆದರೆ ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ ಮಸೂದೆ ವಿಷಯದಲ್ಲಿ ವಿರೋಧ ಪಕ್ಷ ಬಹುತೇಕ ಮೌನವಾಗಿದೆ. ಯಾವುದೇ ಪ್ರತಿರೋಧ ಇಲ್ಲದೆ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಈ ವಿವಾದಾತ್ಮಕ ಕಾನೂನನ್ನು ಸುಲಭವಾಗಿ ಅಂಗೀಕರಿಸಲಾಗಿದೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟು 288 ಸದಸ್ಯರಿದ್ದಾರೆ. ಈ ಪೈಕಿ 230 ಶಾಸಕರು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದಿಂದ ಬಂದವರು. ಅಂದರೆ, ಸರ್ಕಾರ ಸದನದಲ್ಲಿ ಭಾರಿ ಬಹುಮತ ಹೊಂದಿದೆ. ಈ ಅಧಿಕಾರದ ಆಧಾರದ ಮೇಲೆ, ಯಾವುದೇ ಮಸೂದೆಯನ್ನು ಅಂಗೀಕರಿಸಬಹುದು ಮತ್ತು ಇಲ್ಲಿ ಅದೇ ಆಗಿದೆ.

ಈ ಬಹುಮತ ಎಷ್ಟು ನಿರ್ಣಾಯಕವಾಗಿದೆ ಎಂದರೆ, ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ವಿರೋಧಿಸಿದ್ದರೂ, ಕಾನೂನನ್ನು ತಡೆಯುವ ಸಾಧ್ಯತೆ ಇರಲಿಲ್ಲ.

ಜಂಟಿ ಆಯ್ಕೆ ಸಮಿತಿಯಲ್ಲಿ ಅನೇಕ ಹಿರಿಯ ವಿರೋಧ ಪಕ್ಷದ ನಾಯಕರನ್ನು ಸೇರಿಸಲಾಗಿತ್ತು. ಕಾಂಗ್ರೆಸ್‌ನಿಂದ ನಾನಾ ಪಟೋಲೆ, ವಿಜಯ್ ವಡೆಟ್ಟಿವಾರ್, ಸತೇಜ್ ಪಾಟೀಲ್, ಎನ್‌ಸಿಪಿ ಶರದ್ ಪವಾರ್ ಬಣದಿಂದ ಜಿತೇಂದ್ರ ಅವದ್, ಶಶಿಕಾಂತ್ ಶಿಂಧೆ ಮತ್ತು ಶಿವಸೇನೆ ಉದ್ಧವ್ ಠಾಕ್ರೆ ಬಣದಿಂದ ಅಂಬಾದಾಸ್ ದಾನ್ವೆ ಮತ್ತು ಭಾಸ್ಕರ್ ಜಾಧವ್ ಇದ್ದರು.

ಈ ಎಲ್ಲಾ ನಾಯಕರು ಈ ಮಸೂದೆಯ ಕರಡನ್ನು ಆಳವಾಗಿ ಓದಿದ್ದರು. ಅವರು ಸಲಹೆಗಳನ್ನು ಕೂಡಾ ನೀಡಿದ್ದರು. ಆದರೆ ಮಸೂದೆಯನ್ನು ಅಂತಿಮಗೊಳಿಸಿ, ವಿಧಾನಸಭೆಯಲ್ಲಿ ಮಂಡಿಸಿದಾಗ, ಅವರ ಸಲಹೆಗಳನ್ನು ಸೇರಿಸಲಾಗಿಲ್ಲ. ಅಂದರೆ, ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಯಿತು. ಆದರೆ ಕೊನೆಯಲ್ಲಿ ಅವರ ಅಭಿಪ್ರಾಯಗಳನ್ನು ನಿರ್ಲಕ್ಷಿಸಲಾಯಿತು.

ವಿಧಾನಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಿದಾಗ, ಸಿಪಿಐಎಂ ಶಾಸಕ ವಿನೋದ್ ನಿಕೋಲೆ ಒಬ್ಬರೇ ಬಹಿರಂಗವಾಗಿ ಮಸೂದೆಯನ್ನು ವಿರೋಧಿಸಿದರು. ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ವಿರೋಧ ವಾಕ್ಔಟ್ ಮಾಡುವುದಕ್ಕೆ ಸೀಮಿತವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News