×
Ad

62ರ ಹರೆಯದಲ್ಲೂ ಮಿಂಚುತ್ತಿರುವ ಮಾಸ್ಟರ್ ಅತ್ಲೀಟ್ ಅಬ್ದುಲ್‌ ರಹ್ಮಾನ್

Update: 2025-02-03 13:02 IST

ಮಂಗಳೂರು: ಹೋಬಳಿ, ತಾಲೂಕು, ಜಿಲ್ಲೆ, ವಲಯ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಾಸ್ಟರ್ ಅತ್ಲೀಟ್ ಉಳ್ಳಾಲದ ಅಬ್ದುಲ್ ರಹ್ಮಾನ್ ಇದೀಗ ಅಂತರ್‌ರಾಷ್ಟ್ರ ಮಟ್ಟದಲ್ಲೂ ಮಿಂಚುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸೌತ್ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್ ಕರ್ನಾಟಕ ಕ್ರೀಡಾಕೂಟದಲ್ಲಿ ವಿದೇಶಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಭಾರತೀಯ ತಂಡವನ್ನು ಪ್ರತಿನಿಧಿಸಿದ್ದ 62ರ ಹರೆಯದ ಅಬ್ದುಲ್ ರಹ್ಮಾನ್ 100 ಮತ್ತು 60 ಮೀ. ಓಟದಲ್ಲಿ ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಶ್ರೀಲಂಕಾ, ಭೂತಾನ್, ನೇಪಾಳ, ಆತಿಥೇಯ ಭಾರತವನ್ನು ಒಳಗೊಂಡ ನೂರಾರು ಅತ್ಲೀಟ್‌ಗಳು ಭಾಗವಹಿಸಿದ್ದ ಸೌತ್ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್‌ನ ಓಟದ ಟ್ರ್ಯಾಕ್‌ನಲ್ಲಿ ಅಬ್ದುಲ್ ರಹ್ಮಾನ್ ಚಾಂಪಿಯನ್ ಆಗಿದ್ದಾರೆ.

4/100 ಮೀಟರ್ ರಿಲೇಯಲ್ಲಿ ಭಾರತೀಯ ಪುರುಷರ ತಂಡದಲ್ಲೂ ಅಬ್ದುಲ್ ರಹ್ಮಾನ್ ಮಿಂಚಿದ್ದಾರೆ. 2019ರಲ್ಲಿ ಮಲೇಶ್ಯದಲ್ಲಿ ನಡೆದ ಏಷ್ಯಾಖಂಡ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲೂ ಇವರು ಭಾರತವನ್ನು ಪ್ರತಿನಿಧಿಸಿ ಪದಕ ಗಳಿಸಿದ್ದಾರೆ. ದೇಶದ ಹಲವು ರಾಜ್ಯ ಗಳಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಕಂಚು ಅಥವಾ ಬೆಳ್ಳಿ ಅಥವಾ ಚಿನ್ನ ಹೀಗೆ ನೂರಾರು ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಉಳ್ಳಾಲದ ಹಾಜಿ ಯು.ಎಂ.ಚಾಯಬ್ಬ ಮತ್ತು ಬೀಫಾತಿಮಾರ ಪುತ್ರನಾಗಿ 1963ರ ನವೆಂಬರ್ 23ರಂದು ಮೇಲಂಗಡಿಯಲ್ಲಿ ಜನಿಸಿದ ಅಬ್ದುಲ್ ರಹ್ಮಾನ್ ಬಿ.ಎ. ಪದವೀಧರ. ಪ್ರಾಥಮಿಕ ಶಾಲಾ ದಿನಗಳಲ್ಲೇ ಕಬಡ್ಡಿ, ಫುಟ್ಬಾಲ್, ಕ್ರಿಕೆಟ್, ಲಾಂಗ್‌ಜಂಪ್‌ನಲ್ಲಿ ತೊಡಗಿಸಿಕೊಂಡಿದ್ದ ಇವರು ಉಳ್ಳಾಲದ ಮದನಿ ಪಿಯು ಕಾಲೇಜಿನಲ್ಲಿರುವಾಗ ಓಟದಲ್ಲಿ ತೊಡಗಿಸಿಕೊಂಡಿದ್ದರು. ಹಾಗಾಗಿ ತರಗತಿಯಲ್ಲಿ ಇದ್ದುದಕ್ಕಿಂತ ಮೈದಾನದಲ್ಲಿ ಇದ್ದುದೇ ಅಧಿಕ ಎನ್ನಬಹುದು. ಹಾಗಂತ ಓದಿನಲ್ಲಿ ಹಿಂದೆ ಬಿದ್ದಿರಲಿಲ್ಲ. ಪ್ರಥಮ ಶ್ರೇಣಿಯಲ್ಲೇ ಪದವಿ ಪೂರೈಸಿದರು.

ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅಬ್ದುಲ್ ರಹ್ಮಾನ್‌ಗೆ ಕ್ರೀಡೆಯಲ್ಲಿ ‘ಗುರು’ ಇಲ್ಲದಿದ್ದರೂ ‘ಗುರಿ’ ಇತ್ತು. ಕೆಲಕಾಲ ವಿದೇಶದಲ್ಲಿ ಕೆಲಸ ಮಾಡಿ ಬಳಿಕ ಊರಲ್ಲಿ ಉದ್ಯಮ-ವ್ಯವಹಾರದಲ್ಲಿ ಸಕ್ರಿಯರಾದರೂ ಓಟವನ್ನು ಮರೆಯಲಿಲ್ಲ.

ಸಾಧಾರಣ ಶರೀರ, ಅತ್ಯಂತ ಸರಳ ವ್ಯಕ್ತಿತ್ವದ, ಕಠಿಣ ಪರಿಶ್ರಮಿಯಾಗಿರುವ ಅಬ್ದುಲ್ ರಹ್ಮಾನ್ ಓಟ-ರಿಲೇ ಕ್ರೀಡಾಕೂಟದ ಮತ್ತಷ್ಟು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಕನಸು ಕಾಣುತ್ತಿದ್ದಾರೆ. ಹಾಗಾಗಿ ಉಳ್ಳಾಲದ ಭಾರತ್ ಸ್ಕೂಲ್ ಮೈದಾನ ಅಥವಾ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಕಾಣಲು ಸಿಗುವ ಇವರು ಬೀಚ್ ರನ್ನಿಂಗ್, ಗುಡ್ಡಕಾಡು ಓಟವಲ್ಲದೆ ದಿನಾ ಬೆಳಗ್ಗೆ ಕನಿಷ್ಠ ಎರಡು ಗಂಟೆ ಕಾಲ ವ್ಯಾಯಾಮ, ಯೋಗ, ಓಟದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದುವೇ ಅವರ ದೈಹಿಕ ಕ್ಷಮತೆಯಾಗಿದೆ. ಮಿತ ಆಹಾರವೂ ಅವರ ಆರೋಗ್ಯದ ಗುಟ್ಟು. ವಯಸ್ಸು 62 ಆದರೂ ಯುವಕರನ್ನು ನಾಚಿಸುವಂತಹ ವೇಗದ ಓಟಕ್ಕೆ ಇನ್ನೂ ಸೈ ಎಂಬಂತಿದ್ದಾರೆ.

ಅಬ್ದುಲ್ ರಹ್ಮಾನ್‌ಗೆ ನಿಮ್ಮ ಪ್ರೋತ್ಸಾಹ ಬೇಕಾಗಿದೆ. ಅದು ಅವರನ್ನು ಈ ಕ್ಷೇತ್ರದಲ್ಲಿ ಮತ್ತಷ್ಟು ಬೆಳೆಯಲು ಸಹಕಾರಿಯಾದೀತು. ಆಸಕ್ತರು ಅವರನ್ನು ಮೊ.ಸಂ: 9481406418ನ್ನು ಸಂಪರ್ಕಿಸಬಹುದು.

ಮುಖ್ಯಮಂತ್ರಿ, ಸ್ಪೀಕರ್ ಶ್ಲಾಘನೆ

ತನ್ನ ಕ್ಷೇತ್ರ ವ್ಯಾಪ್ತಿಯ ಅಬ್ದುಲ್ ರಹ್ಮಾನ್ ಕ್ರೀಡಾರಂಗದಲ್ಲಿ ಸಾಧನೆಗೈದಿರುವುದರಿಂದ ಸ್ಪೀಕರ್ ಯು.ಟಿ.ಖಾದರ್ ಖುಷಿಗೊಂಡಿದ್ದಾರೆ. ಕಳೆದ ತಿಂಗಳು ತನ್ನ ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಬ್ದುಲ್ ರಹ್ಮಾನ್‌ರನ್ನು ಪರಿಚಯಿಸಿದ್ದಾರೆ. ಸೀನಿಯರ್ ವಿಭಾಗದ ಓಟದ ಸ್ಪರ್ಧೆಯಲ್ಲಿ ಮಿಂಚಿರುವ ಅಬ್ದುಲ್ ರಹ್ಮಾನ್‌ರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸ್ಪೀಕರ್ ಯು.ಟಿ.ಖಾದರ್ ಶ್ಲಾಘಿಸಿದ್ದಾರೆ.

ಕಳವು ಆರೋಪಿಗಳನ್ನು ಬೆನ್ನಟ್ಟಿದ್ದ ಅಬ್ದುಲ್ ರಹ್ಮಾನ್!

ತೊಕ್ಕೊಟ್ಟಿನ ರಾಜಧಾನಿ ಜ್ಯುವೆಲ್ಲರಿಗೆ 2013ರ ಜನವರಿ 10ರಂದು ಮಧ್ಯಾಹ್ನ ಗ್ರಾಹಕರ ಸೋಗಿನಲ್ಲಿ ಬಂದ ವಿದೇಶಿಗರು ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದರು. ಕೃತ್ಯ ನಡೆದ ಒಂದು ಗಂಟೆಯ ಬಳಿಕ ಅಂಗಡಿಯವರಿಗೆ ಈ ವಿಚಾರ ತಿಳಿಯಿತು. ಬಹುತೇಕ ಎಲ್ಲಾ ಕಡೆ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ರಾಜಧಾನಿ ಜ್ಯುವೆಲ್ಲರಿಯ ಪಕ್ಕವೇ ಅಬ್ದುಲ್ ರಹ್ಮಾನ್‌ರ ಮೊಬೈಲ್ ಶಾಪ್ ಇತ್ತು. ಕೃತ್ಯ ನಡೆದಾಗ ಅಬ್ದುಲ್ ರಹ್ಮಾನ್ ಪಂಪ್‌ವೆಲ್‌ನಲ್ಲಿದ್ದರು. ತನ್ನ ಅಂಗಡಿಯ ಸಿಬ್ಬಂದಿಯಿಂದ ಮಾಹಿತಿ ಪಡೆದ ಅಬ್ದುಲ್ ರಹ್ಮಾನ್ ಪಂಪ್‌ವೆಲ್ ಬಳಿಯಿರುವ ವಾಹನದ ಬಿಡಿಭಾಗದ ಅಂಗಡಿಯೊಂದರ ಮುಂದೆ ನಿಂತಿದ್ದ ಕಾರು ಮತ್ತು ಆರೋಪಿಗಳ ಫೋಟೊವನ್ನು ತೆಗೆದಿದ್ದರು. ಬಳಿಕ ಅಂಗಡಿ ಮಾಲಕ ಮತ್ತು ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿದ್ದರು. ತಕ್ಷಣ ಅಂಗಡಿಯವರು ಪಂಪ್‌ವೆಲ್‌ಗೆ ಬಂದು ಆರೋಪಿಗಳನ್ನು ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದರೂ ಆಗಲಿಲ್ಲ. ಆರೋಪಿಗಳು ಮುಲ್ಕಿಯತ್ತ

ಪರಾರಿಯಾಗಿದ್ದರು. ಅಬ್ದುಲ್ ರಹ್ಮಾನ್ ಅಂಗಡಿ ಮಾಲಕರು ಮತ್ತು ಪೊಲೀಸರ ಜೊತೆಗೂಡಿ ಆರೋಪಿಗಳನ್ನು ಬೆನ್ನಟ್ಟಿದರು. ಹಾಗೇ ಮುಲ್ಕಿಯಲ್ಲಿ ಆರೋಪಿಯನ್ನು ಸೆರೆಹಿಡಿಯುವಲ್ಲಿ ಅಬ್ದುಲ್ ರಹ್ಮಾನ್ ಯಶಸ್ವಿಯಾದರು. ಇದು ಪೊಲೀಸರ ಶ್ಲಾಘನೆಗೂ ಪಾತ್ರವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹಂಝ ಮಲಾರ್

contributor

Similar News