12 ವರ್ಷಗಳಾದರೂ 53.12 ಕೋಟಿ ರೂ. ದಂಡ ಪಾವತಿಸದ ಮಾತಾ ಮಿನರಲ್ಸ್
ಬೆಂಗಳೂರು, ಜು.20: ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರ ಪುತ್ರರಿಬ್ಬರು ನಿರ್ದೇಶಕರಾಗಿದ್ದ ಮಾತಾ ಮಿನರಲ್ಸ್ ಕಂಪೆನಿಯು ಅನಧಿಕೃತ ಗಣಿಗಾರಿಕೆ ಮತ್ತು ಕಬ್ಬಿಣದ ಅದಿರು ಸಾಗಣೆ ಮಾಡಿರುವ ಪ್ರಕರಣದ 53.12 ಕೋಟಿ ರೂ. ದಂಡದ ಮೊತ್ತವು ಕಳೆದ 12 ವರ್ಷಗಳಿಂದಲೂ ವಸೂಲಾಗಿಲ್ಲ.
ಈ ಕಂಪೆನಿಯಿಂದ 53.12 ಕೋಟಿ ರೂ.ಗಳನ್ನು ಭೂ ಕಂದಾಯ ಬಾಕಿ ರೂಪದಲ್ಲಿ ವಸೂಲು ಮಾಡುವ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ತುಮಕೂರು ಜಿಲ್ಲೆಯ ಉಪ ನಿರ್ದೇಶಕರು ವರ್ಷದ ಹಿಂದೆಯೇ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಆದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಇದುವರೆಗೂ ಈ ಬಗ್ಗೆ ಯಾವುದೇ ಕ್ರಮವಹಿಸಿಲ್ಲ. ಅಲ್ಲದೆ ಮಾತಾ ಮಿನರಲ್ಸ್ ಸಹ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಜಾಯಿಷಿಯನ್ನು ನೀಡಿಲ್ಲ. ಹಾಗೆಯೇ ದಂಡದ ಮೊತ್ತವನ್ನು ಪಾವತಿಸಿಲ್ಲ.
ರೈಲ್ವೆ ಸೈಡಿಂಗ್‌ಗಳಿಂದ ಅಕ್ರಮವಾಗಿ ಅದಿರು ಸಾಗಣೆ ಮಾಡಿ ಸರಕಾರಕ್ಕೆ 1.50 ಲಕ್ಷ ಕೋಟಿ ರೂ.ಯಷ್ಟು ನಷ್ಟವಾಗಿದೆ ಎಂದು ಈಚೆಗಷ್ಟೇ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನಾಧರಿಸಿ ಎಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿಯೇ ಸಚಿವ ಸಂಪುಟ ಉಪ ಸಮಿತಿಯನ್ನೂ ರಚಿಸಲಾಗಿದೆ. ಈ ಸಮಿತಿಯು ಸರಣಿ ಸಭೆಗಳನ್ನೂ ನಡೆಸುತ್ತಿದೆ.
53.12 ಕೋಟಿ ರೂ. ದಂಡದ ಮೊತ್ತವನ್ನು ವಸೂಲು ಮಾಡಬೇಕು ಎಂದು 2024ರ ಆಗಸ್ಟ್ 3ರಂದು ತುಮಕೂರು ಜಿಲ್ಲೆಯ ಉಪ ನಿರ್ದೇಶಕರು ಸರಕಾರಕ್ಕೆ ಬರೆದಿದ್ದ ಪತ್ರವು ‘the-file.in’ಗೆ ಲಭ್ಯವಾಗಿದೆ.
ಉಪ ನಿರ್ದೇಶಕರ ಪತ್ರದಲ್ಲೇನಿದೆ?
ಗಣಿಗಾರಿಕೆ ಯೋಜನೆ ಇಲ್ಲದಿದ್ದರೂ 2004ರಿಂದ 2006ರವರೆಗೆ ಗಣಿಗಾರಿಕೆ ನಡೆಸಿ 3,56,466 ಮೆಟ್ರಿಕ್ ಟನ್‌ನಷ್ಟು ಕಬ್ಬಿಣದ ಅದಿರನ್ನು ಉತ್ಪಾದನೆ ಮಾಡಿ ಸಾಗಣೆ ಮಾಡಲಾಗಿದೆ. ಇದರ ಒಟ್ಟು ಮೌಲ್ಯವು 24.47 ಕೋಟಿ ರೂ. ಆಗಿದೆ. 2006ರಿಂದ 2009ರವರೆಗೆ 2,77,295 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಉತ್ಪಾದನೆ ಮಾಡಿ ಸಾಗಣೆ ಮಾಡಲಾಗಿದೆ. ಇದರ ಒಟ್ಟು ಮೌಲ್ಯವು 28.65 ಕೋಟಿ ರೂ. ಆಗಿದೆ. ಒಟ್ಟಾರೆ 6,33,761 ಮೆಟ್ರಿಕ್ ಟನ್‌ನಷ್ಟು ಕಬ್ಬಿಣ ಅದಿರು ಉತ್ಪಾದಿಸಿ ಸಾಗಣೆ ಮಾಡಲಾಗಿದೆ. ಒಟ್ಟಾರೆ ಮೌಲ್ಯವು 53.12 ಕೋಟಿ ರೂ.ಯಷ್ಟಿದೆ ಎಂದು ಸಿಎಜಿಯ ಆಕ್ಷೇಪಣೆಯ ಮಾಹಿತಿಯನ್ನು ಉಲ್ಲೇಖಿಸಿರುವುದು ಉಪ ನಿರ್ದೇಶಕರ ಪತ್ರದಿಂದ ಗೊತ್ತಾಗಿದೆ.
ಮಹಾಲೇಖಪಾಲರ ಆಕ್ಷೇಪಣೆಯಂತೆ ಒಟ್ಟು 53.12 ಕೋಟಿ ರೂ.ಗಳ ಖನಿಜ ಮೌಲ್ಯವನ್ನು ಅಂತಿಮ ನೋಟಿಸ್ ದಿನಾಂಕದಿಂದ 15 ದಿನದೊಳಗಾಗಿ ಈ ಕಚೇರಿಗೆ ಪಾವತಿಸಬೇಕು. ಆದರೆ, ಗುತ್ತಿಗೆದಾರರು ಇದುವರೆಗೂ ಯಾವುದೇ ಸಮಜಾಯಿಷಿ ನೀಡಿರುವುದಿಲ್ಲ ಹಾಗೂ ದಂಡ/ಬಾಕಿ ಮೊತ್ತವನ್ನು ಪಾವತಿಸಿರುವುದಿಲ್ಲ. ಆದ್ದರಿಂದ ಎಂಎಂ(ಡಿಅಂಡ್‌ಆರ್) ಕಾಯ್ದೆ 1957ರ ಕಲಂ 25ರಂತೆ ಗಣಿಗುತ್ತಿಗೆಗೆ ಸಂಬಂಧಿಸಿದಂತೆ ಬಾಕಿಯನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಾತಿಗಾಗಿ ಆರ್‌ಆರ್‌ಸಿ ಜಾರಿ ಮಾಡಲು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತುಮಕೂರು ಜಿಲ್ಲೆಯ ಉಪ ನಿರ್ದೇಶಕರು ಇಲಾಖೆಯ ನಿರ್ದೇಶಕರಿಗೆ 2024ರ ಆಗಸ್ಟ್ 3ರಂದು ವರದಿ ನೀಡಿರುವುದು ಗೊತ್ತಾಗಿದೆ.
ಕೇಂದ್ರ ಸಚಿವ ವಿ. ಸೋಮಣ್ಣ ಅವರ ಕುಟುಂಬ ಒಡೆತನದಲ್ಲಿದ್ದ ಮಾತಾ ಮಿನರಲ್ಸ್, ಮಾಜಿ ಶಾಸಕ ಅನಿಲ್ ಲಾಡ್ ಒಡೆತನದ ಕಂಪೆನಿಯೂ ಸೇರಿದಂತೆ ತೀವ್ರ ತರದ ಅಕ್ರಮ ಗಣಿಗಾರಿಕೆ ನಡೆಸಿದ್ದ ಐದು ಕಂಪೆನಿಗಳ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಮಾಡಿದ್ದ ಶಿಫಾರಸನ್ನು ಸಿದ್ದರಾಮಯ್ಯ ಅವರು ಅನುಷ್ಠಾನಗೊಳಿಸಿರಲಿಲ್ಲ.