ECI ಮೃತರೆಂದು ಘೋಷಿಸಿದ್ದ ಸುಮಾರು 2 ಲಕ್ಷ ಮತದಾರರು ಪಂಚಾಯತ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಜೀವಂತ!
ಮೆಹರ್ ಕೌರ್, ದೀಕ್ಷಾ ಕೊಯಿರಾಲಾ ಮತ್ತು ನಿದಾ ಫಾತಿಮಾ ಮೊಮಿನ್ - reporters-collective. in ವರದಿ
ಸಾಂದರ್ಭಿಕ ಚಿತ್ರ (Photo: reporters-collective. in)
ಒಂದು ಸಂಸ್ಥೆ ಕೈಗೊಂಡ ತೀರ್ಮಾನದ ಬಗ್ಗೆ ಮತ್ತೊಂದು ಸಂಸ್ಥೆಗೆ ಅರಿವಿಲ್ಲದಿರುವುದಕ್ಕೆ ಇಲ್ಲೊಂದು ಸಾಕ್ಷಿಯಿದೆ. ರಾಜಸ್ಥಾನದಲ್ಲಿ ಭಾರತೀಯ ಚುನಾವಣಾ ಆಯೋಗ (ECI) ನಡೆಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವೇಳೆ ಸುಮಾರು 8.75 ಲಕ್ಷ ಜನರನ್ನು “ಮೃತಪಟ್ಟಿದ್ದಾರೆ” ಎಂದು ಘೋಷಿಸಲಾಗಿತ್ತು.
ಆದರೆ, ಈ ‘ಮೃತ’ ಮತದಾರರ ಪೈಕಿ 1.82 ಲಕ್ಷಕ್ಕೂ ಹೆಚ್ಚು ಜನರು ಜೀವಂತವಾಗಿದ್ದಾರೆ ಎಂಬುದನ್ನು ರಾಜಸ್ಥಾನ ರಾಜ್ಯ ಚುನಾವಣಾ ಆಯೋಗ (SEC) ಪತ್ತೆ ಮಾಡಿದ್ದು, ಪ್ರಸ್ತುತ ನಡೆಯುತ್ತಿರುವ ಪಂಚಾಯತ್ ಚುನಾವಣೆಯಲ್ಲಿ ಅವರಿಗೆ ಮತದಾನದ ಹಕ್ಕು ನೀಡಿದೆ.
ಮತದಾರರ ಪಟ್ಟಿ ಪರಿಷ್ಕರಣೆಗಾಗಿ ECI 2025ರ ಅಕ್ಟೋಬರ್ ನಿಂದ 2026ರ ಫೆಬ್ರವರಿ ಅವಧಿಯಲ್ಲಿ SIR ಪ್ರಕ್ರಿಯೆ ನಡೆಸಿತ್ತು. ಇದರ ಪರಿಣಾಮವಾಗಿ ಸುಮಾರು 32.31 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. 2025ರ ಡಿಸೆಂಬರ್ ನಲ್ಲಿ ರಾಜಸ್ಥಾನ ರಾಜ್ಯ ಚುನಾವಣಾ ಆಯೋಗವೂ ಪಂಚಾಯತ್ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಘೋಷಿಸಿತ್ತು.
ಇವೆರಡೂ ಪ್ರತ್ಯೇಕ ಸ್ವಾಯತ್ತ ಸಂಸ್ಥೆಗಳಾಗಿವೆ. ECI ಸಂಸತ್ ಹಾಗೂ ವಿಧಾನಸಭೆ ಚುನಾವಣೆಗಳ ಮತದಾರರ ಪಟ್ಟಿಯ ಉಸ್ತುವಾರಿ ನೋಡಿಕೊಂಡರೆ, SEC ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಿರ್ವಹಿಸುತ್ತದೆ. ಇವೆರಡರ ಮತದಾರರ ಪಟ್ಟಿಗಳು ಬೇರೆ ಬೇರೆಯಾಗಿದ್ದರೂ, ಸೈದ್ಧಾಂತಿಕವಾಗಿ ಎರಡರಲ್ಲೂ ಒಂದೇ ರೀತಿಯ ಮತದಾರರು ಇರಬೇಕಾಗುತ್ತದೆ.
ECI ಸಿದ್ಧಪಡಿಸಿದ್ದ ಗೈರುಹಾಜರಿ, ಸ್ಥಳಾಂತರ, ಮೃತ ಹಾಗೂ ನಕಲಿ (ASDD) ಮತದಾರರ ಪಟ್ಟಿಯನ್ನು ಪಂಚಾಯತ್ ಮತದಾರರ ಪಟ್ಟಿಯೊಂದಿಗೆ ಹೋಲಿಸಿ ನೋಡಿದಾಗ, ECI ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ನಮೂದಾಗಿದ್ದ 1,82,440 ನಾಗರಿಕರು ಪಂಚಾಯತ್ ಪಟ್ಟಿಯಲ್ಲಿ ಜೀವಂತವಾಗಿರುವುದು ಕಂಡುಬಂದಿದೆ.
ಪಂಚಾಯತ್ ಮತದಾರರ ಪಟ್ಟಿ ಪರಿಷ್ಕರಣೆಯು ECI ಕಾರ್ಯಚಟುವಟಿಕೆಗೆ ಸಮಾನಾಂತರವಾಗಿ ಸ್ವತಂತ್ರವಾಗಿ ನಡೆಯಿತು. ECI ನಡೆಸಿದ ಪ್ರಕ್ರಿಯೆ 2026ರ ಫೆಬ್ರವರಿ 21ರಂದು ಪೂರ್ಣಗೊಂಡರೆ, ಅದಾಗಿ ನಾಲ್ಕು ದಿನಗಳ ನಂತರ SEC ತನ್ನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತ್ತು.
ಈ ವರ್ಷದ ಅಕ್ಟೋಬರ್ ನಲ್ಲಿ ಎರಡೂ ಮೂಲಗಳ ದತ್ತಾಂಶಗಳನ್ನು ಪಡೆದು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ವಿಶ್ಲೇಷಣೆ ನಡೆಸಿದೆ. ಈ ವೇಳೆಗೆ ಸಾರ್ವಜನಿಕರು ನಾಲ್ಕು ಹಂತಗಳ ಪಂಚಾಯತ್ ಚುನಾವಣೆಯಲ್ಲಿ ಈಗಾಗಲೇ ಮತದಾನ ಪ್ರಾರಂಭಿಸಿದ್ದರು. ನಿಯಮದಂತೆ, ಮತದಾನ ಆರಂಭವಾಗುವ ಮುನ್ನವೇ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿ ಲಾಕ್ ಮಾಡಲಾಗುತ್ತದೆ.
ಡ್ರಾಫ್ಟ್ ಹಂತದ ನಂತರ ಹಾಗೂ SIR ಪ್ರಕ್ರಿಯೆ ಪೂರ್ಣಗೊಂಡ ಮೇಲೂ ECI ತನ್ನ ಮತದಾರರ ಪಟ್ಟಿಯನ್ನು ಮಾಸಿಕ ಆಧಾರದಲ್ಲಿ ಪರಿಷ್ಕರಿಸುತ್ತಾ ಬಂದಿದೆ. ಆದರೆ, ಈ ಬದಲಾವಣೆಗಳ ಸಂಖ್ಯೆ ತೀರಾ ಕಡಿಮೆಯಿದೆ. ಒಮ್ಮೆ ಮೃತಪಟ್ಟಿದ್ದಾರೆಂದು ನಮೂದಿಸಿ ಪಟ್ಟಿಯಿಂದ ತೆಗೆದುಹಾಕಿದ ವ್ಯಕ್ತಿಗಳನ್ನು ನಂತರ ಜೀವಂತವಾಗಿದ್ದಾರೆಂದು ಮರುಸೇರ್ಪಡೆ ಮಾಡುವಾಗ ಅವರ ಮತದಾರರ ಐಡಿ (Voter ID) ಸಂಖ್ಯೆಯನ್ನು ಬದಲಾಯಿಸಲಾಗುತ್ತದೆಯೇ ಎನ್ನುವುದರ ಬಗ್ಗೆ ECI ಸ್ಪಷ್ಟತೆ ನೀಡದ ಕಾರಣ, ಈ ಮಾಸಿಕ ಪರಿಷ್ಕರಣೆಯ ದತ್ತಾಂಶಗಳನ್ನು ಪರಿಶೀಲಿಸಲು ನಮಗೆ ಸಾಧ್ಯವಾಗಲಿಲ್ಲ ಎಂದು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ವರದಿ ತಿಳಿಸಿದೆ.
ವಿಶ್ಲೇಷಣೆಗಾಗಿ ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ಎರಡು ಹಂತಗಳ ಪರಿಶೀಲನೆ ನಡೆಸಿದೆ. ಚುನಾವಣಾ ಆಯೋಗವು ಮೃತಪಟ್ಟಿದ್ದಾರೆಂದು ಘೋಷಿಸಿದ 1.82 ಲಕ್ಷ ಜನರು ಪಂಚಾಯತ್ ಪಟ್ಟಿಯಲ್ಲಿ ಇದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ECI ದತ್ತಾಂಶದಲ್ಲಿದ್ದ ಅವರ ಮತದಾರರ ಐಡಿ ಮತ್ತು EPIC ಸಂಖ್ಯೆಗಳನ್ನು ಪಂಚಾಯತ್ ಪಟ್ಟಿಯೊಂದಿಗೆ ಹೋಲಿಸಿ ನೋಡಲಾಯಿತು. ನಂತರ, ರಾಜ್ಯ ಆಯೋಗ ನಿರ್ವಹಿಸುವ ಮತ್ತೊಂದು ಪೋರ್ಟಲ್ ನಲ್ಲಿ EPIC ಸಂಖ್ಯೆ ನಮೂದಿಸಿ ಮತದಾರರ ವಿವರಗಳನ್ನು ಮಾದರಿ ಆಧಾರದಲ್ಲಿ ಪರಿಶೀಲಿಸಲಾಯಿತು.
ಎರಡೂ ಆಯೋಗಗಳು ಒಂದೇ ಸಮಯದಲ್ಲಿ ಪಟ್ಟಿ ಪರಿಷ್ಕರಣೆ ನಡೆಸಿರುವುದರಿಂದ ಈ ಗೊಂದಲ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಪಟ್ಟಿಗಳ ತಯಾರಿಕೆಯಲ್ಲಿ ಹೆಚ್ಚಿನ ಸಮಯದ ಅಂತರವಿದ್ದರೆ, ಮಧ್ಯಂತರದಲ್ಲಿ ಪರಿಸ್ಥಿತಿ ಬದಲಾಗಿದೆ ಎಂದು ಸಮರ್ಥಿಸಿಕೊಳ್ಳಲು ಅವಕಾಶವಿರುತ್ತಿತ್ತು. ಆದರೆ, ECI ತನ್ನ ಪಟ್ಟಿಯಿಂದ ಮೃತರು, ಸ್ಥಳಾಂತರಗೊಂಡವರು ಹಾಗೂ ನಕಲಿ ಮತದಾರರ ಹೆಸರುಗಳನ್ನು ತೆಗೆದುಹಾಕಿದ ನಂತರವೇ ಪಂಚಾಯತ್ ಕರಡು ಪಟ್ಟಿ ಪ್ರಕಟವಾಗಿತ್ತು.
‘ಮೃತ’ ಮತದಾರರು ಎಲ್ಲಿ ಮತ ಚಲಾಯಿಸುತ್ತಿದ್ದಾರೆ?
ECI ಪಟ್ಟಿಯಲ್ಲಿ ‘ಮೃತ’ ಎಂದು ನಮೂದಾಗಿ, ಪಂಚಾಯತ್ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರಾಗಿರುವವರ ಸಂಖ್ಯೆ ಗಾರ್ಹಿ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಾಗಿದೆ. ಗಾರ್ಹಿಯಲ್ಲಿ ECI ದೋಷರಹಿತ ಪ್ರಕ್ರಿಯೆಯಡಿ ಮೃತಪಟ್ಟಿದ್ದಾರೆನ್ನಲಾದ 4,889 ಮತದಾರರನ್ನು ರಾಜ್ಯ ಆಯೋಗವು ಜೀವಂತ ಹಾಗೂ ಸಿಂಧು ಮತದಾರರು ಎಂದು ಘೋಷಿಸಿದೆ.
ಎರಡೂ ಆಯೋಗಗಳಲ್ಲಿ ಯಾವುದು ಸರಿ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಸ್ಥಳೀಯ ಮಟ್ಟದ ಪರಿಶೀಲನೆ ನಡೆಸಿಲ್ಲ ಎಂದು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ವರದಿ ಉಲ್ಲೇಖಿಸಿದೆ. ಇದೇ ರೀತಿ ಶಿರೋಹಿ ಕ್ಷೇತ್ರದಲ್ಲಿ 4,624 ‘ಮೃತ’ ಮತದಾರರು ರಾಜ್ಯ ಆಯೋಗದ ಪಟ್ಟಿಯಲ್ಲಿ ಜೀವಂತವಾಗಿದ್ದಾರೆ.
ಈ ಮತದಾರರು ನಿಜಕ್ಕೂ ಜೀವಂತವಾಗಿದ್ದರೆ, ಪಂಚಾಯತ್ ಚುನಾವಣೆಯಲ್ಲಿ ಮತ ಚಲಾಯಿಸಬಹುದು. ಆದರೆ, ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ.
ಉದಾಹರಣೆಗೆ, ಅಜ್ಮೇರ್ ನ ಕಿಶನ್ಗಢ ಕ್ಷೇತ್ರದ 26 ವರ್ಷದ ಶಾಲು ಡೋಲಿಯಾ ಎಂಬ ಮಹಿಳೆಯನ್ನು ECI ತನ್ನ ಪಟ್ಟಿಯಲ್ಲಿ 'ಮೃತಪಟ್ಟಿದ್ದಾರೆ' ಎಂದು ನಮೂದಿಸಿತ್ತು. ಆದರೆ, ಡೋಲಿಯಾ ಜೀವಂತವಾಗಿದ್ದರೆ, ಅವರಿಗೆ ಪಂಚಾಯತ್ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಇರುತ್ತದೆ.
ಈ ಕುರಿತು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ಮೂವರು ಬೂತ್ ಮಟ್ಟದ ಅಧಿಕಾರಿಗಳನ್ನು (BLOs) ಸಂಪರ್ಕಿಸಿತು. ಒಬ್ಬ ಅಧಿಕಾರಿ ಮಾತನಾಡಲು ನಿರಾಕರಿಸಿದರೆ, ECI ಪ್ರಕ್ರಿಯೆಯಲ್ಲಿದ್ದ ಮತ್ತೊಬ್ಬ BLO, SIRನಲ್ಲಿ ಹೆಸರು ರದ್ದಾದ ಯಾರೂ ಪಂಚಾಯತ್ ಪಟ್ಟಿಯಲ್ಲಿ ಇಲ್ಲ ಎಂದು ಹೇಳಿದರು. ಲೋಟಿಯಾನಾ ಗ್ರಾಮ ಪಂಚಾಯತ್ BLO ಕೂಡ ಈ ವ್ಯತ್ಯಾಸವನ್ನು ಒಪ್ಪದೆ, "ಯಾರ ಹೆಸರೂ ಡಿಲೀಟ್ ಆಗಿಲ್ಲ" ಎಂದರು.
ಆದರೆ, ನಮ್ಮ ವಿಶ್ಲೇಷಣೆಯು ಈ ಇಬ್ಬರೂ ಅಧಿಕಾರಿಗಳ ವಾದ ತಪ್ಪೆಂದು ಸಾಬೀತುಪಡಿಸಿದೆ. ಮತದಾರರ ಪಟ್ಟಿಯ ಈ ಗೊಂದಲಗಳ ಕುರಿತು ನಾವು ECI ಮತ್ತು ರಾಜಸ್ಥಾನ ರಾಜ್ಯ ಚುನಾವಣಾ ಆಯೋಗಕ್ಕೆ ವಿವರವಾದ ಪ್ರಶ್ನಾವಳಿ ಕಳುಹಿಸಿದ್ದು, ಈವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ಹೇಳಿದೆ.
ಸೌಜನ್ಯ: reporters-collective.in