ವಸೂಲಾತಿಯಲ್ಲಿ ಗ್ರಾಮ ಪಂಚಾಯತ್‌ಗಳ ನಿರ್ಲಕ್ಷ್ಯ: ಬಿಜೆಪಿ ಸರಕಾರದ ಅವಧಿಯಲ್ಲಿ ಒಟ್ಟು 587.86 ಕೋಟಿ ರೂ. ಬಾಕಿ
ಸಾಂದರ್ಭಿಕ ಚಿತ್ರ PC: freepik
ಬೆಂಗಳೂರು, ಮೇ 17: ರಾಜ್ಯದ ಬಹುತೇಕ ಗ್ರಾಮ ಪಂಯತ್‌ಗಳು ವಿವಿಧ ವಸೂಲಾತಿಯಲ್ಲಿ ನಿರ್ಲಕ್ಷ್ಯ ವಹಿಸಿವೆ. ಹೀಗಾಗಿ ಪಂಚಾಯತ್‌ಗಳಲ್ಲಿ ಸೆಕ್ಷನ್ ಎ ಮತ್ತು ಬಿ ಪಟ್ಟಿ ಪ್ರಕಾರ ಒಟ್ಟು 587.86 ಕೋಟಿ ರೂ. ವಸೂಲಾತಿಗೆ ಬಾಕಿ ಉಳಿಸಿಕೊಂಡಿವೆ ಎಂಬುದನ್ನು ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಪತ್ತೆ ಹಚ್ಚಿದೆ.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯದ 2,916 ಗ್ರಾಮ ಪಂಚಾಯತ್‌ಗಳು ವಾರ್ಷಿಕ ಆಯವ್ಯಯವನ್ನು ತಯಾರಿಸಿರಲಿಲ್ಲ ಮತ್ತು 1,363 ಗ್ರಾಮ ಪಂಚಾಯತ್‌ಗಳು ನಗದು ಪುಸ್ತಕವನ್ನೇ ನಿರ್ವಹಿಸಿರಲಿಲ್ಲ ಎಂದು ಲೆಕ್ಕ ಪರಿಶೋಧನೆ ಇಲಾಖೆಯು ಬಹಿರಂಗಪಡಿಸಿದ್ದರ ಬೆನ್ನಲ್ಲೇ ಇದೀಗ ವಸೂಲಾತಿಯಲ್ಲಿ ಗ್ರಾಮ ಪಂಚಾಯತ್‌ಗಳ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿದೆ.
ರಾಜ್ಯದ ಗ್ರಾಮ ಪಂಚಾಯತ್‌ಗಳಿಗೆ ಸಂಬಂಧಿಸಿದಂತೆ 2022-23ನೇ ಸಾಲಿನ ಮಾರ್ಚ್ 31ರ ಅಂತ್ಯಕ್ಕೆ ಲೆಕ್ಕ ಪರಿಶೋಧನೆ ನಡೆಸಿದ್ದ ರಾಜ್ಯ ಲೆಕ್ಕಪತ್ರ ಇಲಾಖೆ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಪಂಚಾಯತ್‌ಗಳ ಹಣಕಾಸಿನ ದುರಾಡಳಿತದ ವಿವಿಧ ಮಗ್ಗುಲುಗಳನ್ನು ಅನಾವರಣಗೊಳಿಸಿದೆ. ಇಲಾಖೆಯು ಸಲ್ಲಿಸಿರುವ ಲೆಕ್ಕಪರಿಶೋಧನೆ ವರದಿಯು "The-file.in"ಗೆ ಲಭ್ಯವಾಗಿದೆ.
ಕರ್ನಾಟಕ ಪಂಚಾಯತ್‌ರಾಜ್ (ಗ್ರಾಮ ಪಂಚಾಯತ್‌ಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮ 2006ರ ನಿಯಮ 113ರ ಪ್ರಕಾರ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳಿಗೆ ಸೂಕ್ತ ಅನುಪಾಲನ ವರದಿಗಳನ್ನು ಸಲ್ಲಿಸಬೇಕು. ಸೆಕ್ಷನ್ ಎ (ವಸೂಲಾತಿ) ಪ್ರಕಾರ ಕಾನೂನಿಗೆ ವಿರುದ್ಧವಾಗಿ ಮಾಡಿದ ಸಂದಾಯ ಪ್ರಕರಣಗಳು, ಸೆಕ್ಷನ್ ಬಿ ಪ್ರಕಾರ ಅಧಿಕಾರಿ ಸಿಬ್ಬಂದಿಯ ಬೇಜವಾಬ್ದಾರಿ ಅಥವಾ ಕರ್ತವ್ಯ ನಿರ್ಲಕ್ಷ್ಯದಿಂದ ಉಂಟಾದ ಆರ್ಥಿಕ ನಷ್ಟದ ಪ್ರಕರಣಗಳು, ಆಯಾ ವರ್ಷಗಳಲ್ಲಿ ಸೇರ್ಪಡೆಗೊಳ್ಳುವ ಸೆಕ್ಷನ್ ಎ ಮತ್ತು ಬಿ ಕಂಡಿಕೆಗಳಲ್ಲಿ ಕ್ರೋಡೀಕರಿಸಲಾಗುತ್ತಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅನುಪಾಲನ ವರದಿಗಳನ್ನು ಕಾಲಕಾಲಕ್ಕೆ ಸಲ್ಲಿಸಬೇಕು.
ಇದರ ಪ್ರಕಾರ ಸೆಕ್ಷನ್ ಎ ರಂತೆ ಪಂಚಾಯತ್‌ಗಳಲ್ಲಿ 523.38 ಕೋಟಿ ರೂ. ಆರಂಭಿಕ ಶಿಲ್ಕು ಇತ್ತು. ಇದಕ್ಕೆ 411.03 ಕೋಟಿ ರೂ. ಸೇರ್ಪಡೆ ಮಾಡಲಾಗಿತ್ತು. ಒಟ್ಟು 934.42 ಕೋಟಿ ರೂ. ಇತ್ತು. ಇದರಲ್ಲಿ ತೀರುವಳಿ ಎಂದು 8.17 ಕೋಟಿ ರೂ. ತೋರಿಸಲಾಗಿತ್ತು. ಉಳಿದಂತೆ 926.24 ಕೋಟಿ ರೂ. ಅಂತಿಮ ಶಿಲ್ಕು ರೂಪದಲ್ಲಿತ್ತು. ಹಾಗೇ ಸೆಕ್ಷನ್ ಬಿ ರಂತೆ ಪಂಚಾಯತ್‌ಗಳಲ್ಲಿ 299.93 ಕೋಟಿ ರೂ. ಆರಂಭಿಕ ಶಿಲ್ಕಿನ ರೂಪದಲ್ಲಿದ್ದು ಸೇರ್ಪಡೆ ರೂಪದಲ್ಲಿ 285.72 ಕೋಟಿ ರೂ. ಸೇರಿ ಒಟ್ಟು 585.66 ಕೋಟಿ ರೂ. ಇತ್ತು. ಇದರಲ್ಲಿ 5.99 ಕೋಟಿ ರೂ. ಗಳನ್ನು ತೀರುವಳಿ ರೂಪದಲ್ಲಿ ತೋರಿಸಿತ್ತು. ಅಂತಿಮ ಶಿಲ್ಕಿನಲ್ಲಿ ಒಟ್ಟಾರೆ 579.66 ಕೋಟಿ ರು ಇತ್ತು. ಈ ಸಂಬಂಧ ಲೆಕ್ಕ ಪರಿಶೋಧನೆ ಇಲಾಖೆಯು ಈ ಎರಡೂ ಕಂಡಿಕೆಗಳಲ್ಲಿ 642.40 ಕೋಟಿ ರೂ. ಮೊತ್ತವನ್ನು ಆಕ್ಷೇಪಣೆಯಲ್ಲಿಟ್ಟಿತ್ತು. ಸೇರ್ಪಡೆ ಸಂಬಂಧ 2.43 ಕೋಟಿ ರೂ., ಆಕ್ಷೇಪಣೆಯಲ್ಲಿತ್ತು. ಒಟ್ಟಾರೆ 642.26 ಕೋಟಿ ರೂ. ಆಕ್ಷೇಪಣೆಯಲ್ಲಿತ್ತು. 587.86 ಕೋಟಿ ರೂ. ವಸೂಲಾತಿಗೆ ಬಾಕಿ ಇತ್ತು.
ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಅತೀ ಹೆಚ್ಚು ಮೊತ್ತದ ಆಕ್ಷೇಪಣೆ/ವಸೂಲಾತಿ (ಸೆಕ್ಷನ್ ಎ ಮತ್ತು ಬಿ) ಕಂಡಿಕೆಗಳಿದ್ದಾಗ್ಯೂ ತೀರುವಳಿಯಾಗದೇ ಬಾಕಿ ಉಳಿದಿರುವುದು ಗ್ರಾಮ ಪಂಚಾಯತ್‌ಗಳು ವಸೂಲಾತಿಗೆ ತೋರಿರುವ ನಿರ್ಲಕ್ಷ್ಯ ಮತ್ತು ಅಸಡ್ಡೆಯನ್ನು ಎತ್ತಿ ತೋರಿಸುತ್ತಿರುತ್ತದೆ’ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈ ಕುರಿತು ಜಿಲ್ಲಾ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಸೂಕ್ತ ಕ್ರಮ ಜರುಗಿಸಿಲ್ಲ. ಮತ್ತು ವರ್ಷಗಳು ಉರುಳಿದ ನಂತರ ದಾಖಲೆಗಳ ಅಲಭ್ಯತೆಯಿಂದ ಆಕ್ಷೇಪಣೆ, ವಸೂಲಾತಿ ಕಂಡಿಕೆಗಳು ತೀರುವಳಿಯಾಗದೇ ಬಾಕಿ ಉಳಿಯುವುದಕ್ಕೆ ಕಾರಣವಾಗುತ್ತಿವೆ ಎಂದು ವರದಿಯಲ್ಲಿ ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.
‘ಹೀಗಾಗಿ ಗ್ರಾಮ ಪಂಚಾಯತ್‌ಗಳು ಅನುಪಾಲನ ವರದಿಗಳನ್ನು ಸಲ್ಲಿಸಲು ಮತ್ತು ಮೊತ್ತ ವಸೂಲಿಸಲು ಕಷ್ಟವಾಗುವುದಿಲ್ಲದೇ ತೀರುವಳಿಗೊಳಿಸುವ ಸಂಭವವೂ ಕಡಿಮೆ ಇರುತ್ತದೆ. ಆದ್ದರಿಂದ ಈ ವಿಷಯದಲ್ಲಿ ಗ್ರಾಮ ಪಂಚಾಯತ್‌ಗಳು ಆದ್ಯತೆ ಮೇಲೆ ಕ್ರಮ ಜರುಗಿಸಿ ಸಂಭವನೀಯ ನಷ್ಟವನ್ನು ತಡೆಗಟ್ಟಬಹುದಾಗಿದೆ’ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.