ಜಾತಿ ಶ್ರೇಣಿ ಪ್ರತಿಪಾದಕ ಆರೆಸ್ಸೆಸ್ ಬಾಯಲ್ಲೇಕೆ ಅಂಬೇಡ್ಕರ್ ಶ್ಲಾಘನೆ?

ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಸಾಮಾಜಿಕ ಪ್ರಜಾಪ್ರಭುತ್ವದ ಪರಿಕಲ್ಪನೆಯು ಪ್ರಜಾಪ್ರಭುತ್ವದ ಒಂದು ಅವಿಭಾಜ್ಯ ಅಂಗವಾಗಿತ್ತು. ಅವರು ಜಾತಿ ವಿನಾಶಕ್ಕಾಗಿ ಹೋರಾಡಿದ್ದವರು. ಇದಕ್ಕೆ ವ್ಯತಿರಿಕ್ತವಾಗಿ, ವಿವಿಧ ಜಾತಿಗಳು ಇಡೀ ವ್ಯವಸ್ಥೆಯ ಭಾಗವಾಗಿದ್ದು, ಹಿಂದೂ ಸಮಾಜಕ್ಕೆ ಬಲವನ್ನು ನೀಡುವಂಥವಾಗಿವೆ ಎಂಬುದು ಆರೆಸ್ಸೆಸ್ ಧೋರಣೆ. ಸಿದ್ಧಾಂತಗಳಲ್ಲಿನ ಮೂಲಭೂತ ವಿರೋಧಾಭಾಸಗಳ ಹೊರತಾಗಿಯೂ, ಆರೆಸ್ಸೆಸ್ ನಾಯಕರು ಚುನಾವಣಾ ಲಾಭಕ್ಕಾಗಿ ಅಂಬೇಡ್ಕರ್ ಅವರನ್ನು ಗೌರವಿಸುವ ತೋರಿಕೆಯನ್ನು ತಂತ್ರವಾಗಿಸುತ್ತಿರುವುದು ವಿಪರ್ಯಾಸ.

Update: 2023-11-12 03:31 GMT

ಆರೆಸ್ಸೆಸ್ ಸಿದ್ಧಾಂತಗಳು ಮತ್ತು ಬಿ.ಆರ್. ಅಂಬೇಡ್ಕರ್ ಭಾರತೀಯ ರಾಜಕೀಯ ಸನ್ನಿವೇಶದಲ್ಲಿ ಸ್ಪಷ್ಟವಾಗಿ ಎರಡು ವಿರುದ್ಧ ಧ್ರುವಗಳು. ಅಂಬೇಡ್ಕರ್ ಅವರು ಜಾತಿ ವಿನಾಶದ ಪರವಾಗಿ ನಿಂತರೆ, ಪ್ರಜಾಸತ್ತಾತ್ಮಕ ಮೌಲ್ಯಗಳಿಗಾಗಿ ಹೋರಾಡಿದರೆ, ಸಾಮಾಜಿಕ ನ್ಯಾಯದತ್ತ ಸಾಗಿದರೆ, ಆರೆಸ್ಸೆಸ್ ಯಥಾಸ್ಥಿತಿ ಮತ್ತು ಆಧುನಿಕತೆ ಪೂರ್ವದ ಶ್ರೇಣೀಕೃತ ವ್ಯವಸ್ಥೆಯ ಪುನರುಜ್ಜೀವನದ ಪರವಾಗಿ ನಿಂತಿದೆ.

ಈ ಮೂಲಭೂತ ವಿರೋಧಾಭಾಸಗಳ ಹೊರತಾಗಿಯೂ, ಆರೆಸ್ಸೆಸ್ ಸಿದ್ಧಾಂತಿಗಳು ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸುವುದೂ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಅವರಿಗೆ ಗೌರವ ಸಲ್ಲಿಸಲು ಪ್ರಯತ್ನಿಸುತ್ತಿರುವುದು ವಿಪರ್ಯಾಸ. ಆದ್ದರಿಂದ ಒಂದು ರೀತಿಯಲ್ಲಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ತಮ್ಮ ವಾರ್ಷಿಕ ವಿಜಯದಶಮಿ ಭಾಷಣದಲ್ಲಿ ತಮ್ಮ ಅನುಯಾಯಿಗಳಿಗೆ ಅಂಬೇಡ್ಕರ್ ಅವರ ಭಾಷಣಗಳನ್ನು ಓದಲು, ವಿಶೇಷವಾಗಿ ಸಂವಿಧಾನ ಸಭೆಯಲ್ಲಿ ಅವರು ಮಾಡಿದ ಕೊನೆಯ ಎರಡು ಭಾಷಣಗಳನ್ನು ಓದುವಂತೆ ಕರೆ ನೀಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಆರೆಸ್ಸೆಸ್ ಸಂಸ್ಥಾಪಕ ಮತ್ತು ಮೊದಲ ಸರಸಂಘಚಾಲಕ ಕೆ.ಬಿ. ಹೆಡಗೇವಾರ್ ಸಾಲಿನಲ್ಲಿಯೇ ಅಂಬೇಡ್ಕರ್ ಅವರನ್ನು ಸೇರಿಸುವ ಮಟ್ಟಕ್ಕೆ ಭಾಗವತ್ ಹೋದರು.

ಸಾಮಾನ್ಯವಾಗಿ, ಅಂಬೇಡ್ಕರ್ ಅವರ ಸಮಾನತೆಯ ಹುಡುಕಾಟಕ್ಕೆ ಆರೆಸ್ಸೆಸ್ ಮಂದಿಯ ಪ್ರತಿಕ್ರಿಯೆ ಸೈದ್ಧಾಂತಿಕ ಮಟ್ಟದಲ್ಲಿ ಅವರ ಪ್ರಯತ್ನಗಳನ್ನು ತಮ್ಮ ಭವ್ಯವಾದ ಭೂತಕಾಲದ ನೆಲೆಯಲ್ಲಿ ವಿರೋಧಿಸುವುದೇ ಆಗಿದೆ.

ಅಂದಹಾಗೆ, ವಿದರ್ಭದ ನಾಗಪುರ ಪ್ರದೇಶದಲ್ಲಿ ಆರಂಭದಲ್ಲಿ ಬ್ರಾಹ್ಮಣೇತರ ಚಳವಳಿ ರೂಪದಲ್ಲಿ ಬಂದ ಸಾಮಾಜಿಕ ನ್ಯಾಯದ ಹೋರಾಟವೇ, ಈ ಪ್ರದೇಶದ ಭೂಮಾಲಕ-ಬ್ರಾಹ್ಮಣ ಮೈತ್ರಿ ಆರೆಸ್ಸೆಸ್ ಅನ್ನು ರಚಿಸಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರದಲ್ಲಿ, ಈ ಮೈತ್ರಿಯನ್ನು ‘ಶೇಟ್ಜಿ-ಭಟ್ಜಿ’ ಎಂದು ಕರೆಯಲಾಗುತ್ತದೆ. ಶೋಷಿತ ಜಾತಿಗಳಿಗೆ ಶಾಲೆಗಳನ್ನು ತೆರೆಯಲು ಹೋರಾಟ ನಡೆಸಿದ ಜ್ಯೋತಿರಾವ್ ಫುಲೆಯಿಂದ ದಲಿತ ಜಾಗೃತಿ ಶುರುವಾಯಿತು. ಅಂಬೇಡ್ಕರ್ ಅವರು 1920ರಲ್ಲಿ ‘ಮೂಕನಾಯಕ’ ಪತ್ರಿಕೆ ಮತ್ತು 1923ರಲ್ಲಿ ಬಹುಜನ ಹಿತಕಾರಿಣಿ ಸಭಾ ಪ್ರಾರಂಭಿಸುವ ಮೂಲಕ ಅದನ್ನು ಬೆಂಬಲಿಸಿದರು ಮತ್ತು ಅದಕ್ಕೆ ತೀವ್ರತೆ ಸಿಗುವಂತೆ ಮಾಡಿದರು.

ಆನಂತರ ಸಾಮಾಜಿಕ ನ್ಯಾಯದ ಕುರಿತ ಆಗ್ರಹವಾಗಿ ಅಂಬೇಡ್ಕರ್ ಅವರು 1927ರಲ್ಲಿ ದಲಿತರಿಗೆ ಸಾರ್ವಜನಿಕ ಕುಡಿಯುವ ನೀರಿನ ಲಭ್ಯತೆಗಾಗಿ ಹೋರಾಡಿದರು. 1930ರಲ್ಲಿ ದೇವಾಲಯ ಪ್ರವೇಶ ಚಳವಳಿಯನ್ನು ಸಂಘಟಿಸಿದರು. ಅಂಬೇಡ್ಕರರ ಈ ಚಳವಳಿಗಳನ್ನು ಬೆಂಬಲಿಸಲು ಸ್ವತಃ ಆರೆಸ್ಸೆಸ್ ಎಂದಿಗೂ ಮುಂದೆ ಬಂದದ್ದಿಲ್ಲ. ಮೇಲ್ವರ್ಗದ ನಾಯಕರಲ್ಲಿ, 1932ರ ಪೂನಾ ಒಪ್ಪಂದದ ನಂತರದ ವರ್ಷಗಳಲ್ಲಿ ಜಾತಿಯ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡವರು ಮತ್ತು ದಲಿತರ ಸ್ಥಿತಿಯನ್ನು ಸುಧಾರಿಸಲು ತೊಡಗಿಸಿಕೊಂಡಿದ್ದವರು ಗಾಂಧಿ ಮಾತ್ರ.

ಇದೇ ವೇಳೆ ಆರೆಸ್ಸೆಸ್ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಪ್ರಚಾರ ಮಾಡುತ್ತಿತ್ತು. ವಿ.ಡಿ. ಸಾವರ್ಕರ್ ಹಿಂದೂ ರಾಷ್ಟ್ರ ಮತ್ತು ಮುಸ್ಲಿಮ್ ರಾಷ್ಟ್ರ ಎಂಬ ಎರಡು ರಾಷ್ಟ್ರಗಳ ಸಿದ್ಧಾಂತದ ಮುಂಚೂಣಿಯಲ್ಲಿದ್ದರು. ಆರೆಸ್ಸೆಸ್ ಪ್ರಚಾರ ಮಾಡಿದ ಈ ಹಿಂದೂ ರಾಷ್ಟ್ರದ ಸಿದ್ಧಾಂತವು ಅಂಬೇಡ್ಕರ್ ಅವರಿಂದ ತೀವ್ರ ಟೀಕೆಗೆ ಒಳಗಾಯಿತು:

‘‘ವಿಚಿತ್ರವಾಗಿ ಕಾಣಿಸಬಹುದು, ಸಾವರ್ಕರ್ ಮತ್ತು ಜಿನ್ನಾ ಅವರು ಒಂದು ರಾಷ್ಟ್ರ ಮತ್ತು ಎರಡು ರಾಷ್ಟ್ರಗಳ ವಿಷಯದಲ್ಲಿ ಪರಸ್ಪರ ವಿರೋಧಿಸುವ ಬದಲು ಅದರ ಬಗ್ಗೆ ಸಂಪೂರ್ಣ ಸಮ್ಮತಿ ತೋರಿಸುತ್ತಿದ್ದಾರೆ. ಇಬ್ಬರೂ ಒಪ್ಪುತ್ತಾರೆ ಮಾತ್ರವಲ್ಲ, ಭಾರತದಲ್ಲಿ ಎರಡು ರಾಷ್ಟ್ರಗಳಿವೆ ಎಂದು ಪ್ರತಿಪಾದಿಸುತ್ತಾರೆ-ಒಂದು ಮುಸ್ಲಿಮ್ ರಾಷ್ಟ್ರ ಮತ್ತು ಇನ್ನೊಂದು ಹಿಂದೂ ರಾಷ್ಟ್ರ’’ ಎಂದು ‘ಥಾಟ್ಸ್ ಆನ್ ಪಾಕಿಸ್ತಾನ್’ ಕೃತಿಯಲ್ಲಿ (1940) ಅಂಬೇಡ್ಕರ್ ಬರೆದಿದ್ದರು.

ಅಂಬೇಡ್ಕರ್ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ವಿರೋಧಿಸಿದ್ದರು. ಹಿಂದೂ ರಾಷ್ಟ್ರ ನಿರ್ಮಾಣವಾದರೆ, ಅದು ನಿಸ್ಸಂದೇಹವಾಗಿ ಈ ದೇಶಕ್ಕೆ ದೊಡ್ಡ ವಿಪತ್ತಾಗಿರುತ್ತದೆ. ಹಿಂದೂ ರಾಷ್ಟ್ರ ನಿರ್ಮಾಣವಾಗುವುದನ್ನು ಯಾವುದೇ ಬೆಲೆ ತೆತ್ತಾದರೂ ತಡೆಯಬೇಕು ಎಂದು ಅವರು ‘ಪಾಕಿಸ್ತಾನ್ ಆರ್ ದಿ ಪಾರ್ಟಿಷನ್ ಆಫ್ ಇಂಡಿಯಾ’ ಕೃತಿಯಲ್ಲಿ (1946) ಬರೆದಿದ್ದರು.

ಅವರು, ಭಾರತೀಯ ಸಂದರ್ಭದಲ್ಲಿ ಬಹುಸಂಖ್ಯಾತ ಸಮುದಾಯವಾದ ಹಿಂದೂಗಳ ಅನಿಯಂತ್ರಿತ ಆಡಳಿತಕ್ಕೆ ದಾರಿಯಾಗುವ ಬಹುಸಂಖ್ಯಾತತೆಯ ವಿರುದ್ಧವಾಗಿದ್ದರು. ಆದರೆ ಇಂದು ಆ ಬಹುಸಂಖ್ಯಾತತೆಯೇ ಭಾಗವತ್ ನೇತೃತ್ವದ ಆರೆಸ್ಸೆಸ್ನ ಪ್ರಸ್ತುತ ಪ್ರಬಲ ಸಿದ್ಧಾಂತವಾಗಿದೆ. ಬಹುಸಂಖ್ಯಾತವಾದದ ಪರವಾಗಿದ್ದರೆ ತಪ್ಪೇನು ಎಂದು ಕೇಳುವ ಮೂಲಕ ನರೇಂದ್ರ ಮೋದಿಯಂಥವರು ಅದನ್ನು ಸಮರ್ಥಿಸಿಕೊಳ್ಳಲು ಮುಂದಾಗುತ್ತಾರೆ.

ಸಂವಿಧಾನದ ಅಂತಿಮ ಕರಡು ಮಂಡಿಸಿದ ನಂತರ, ಆರೆಸ್ಸೆಸ್ನ ವಿರೋಧವು ಅದರ ಮುಖವಾಣಿ ‘ಆರ್ಗನೈಸರ್’ನಲ್ಲಿ ಪ್ರಕಟವಾಯಿತು. ನವೆಂಬರ್ 1949ರ ಆವೃತ್ತಿಯಲ್ಲಿ ಕಟುವಾದ ಸಂಪಾದಕೀಯದಲ್ಲಿ ಹೀಗೆ ಹೇಳಲಾಗಿದೆ:

ಭಾರತದ ಹೊಸ ಸಂವಿಧಾನದಲ್ಲಿ ಭಾರತೀಯವಾದದ್ದು ಏನೂ ಇಲ್ಲ. ಪ್ರಾಚೀನ ಭಾರತೀಯ ಸಾಂವಿಧಾನಿಕ ಕಾನೂನುಗಳು, ಸಂಸ್ಥೆಗಳು, ಹೆಸರುಗಳು ಮತ್ತು ನುಡಿಗಟ್ಟುಗಳ ಯಾವ ಕುರುಹುಗಳೂ ಅದರಲ್ಲಿ ಇಲ್ಲ.

ಅಂಬೇಡ್ಕರ್ ರಚಿಸಿದ ಹಿಂದೂ ಕೋಡ್ ಬಿಲ್ ಪಿತೃಪ್ರಭುತ್ವದ ಹಿಡಿತವನ್ನು ಸಡಿಲಗೊಳಿಸುವ ಮತ್ತು ಮಹಿಳೆಯರಿಗೆ ಸಮಾನತೆಗಾಗಿ ಶ್ರಮಿಸುವ ಪ್ರಯತ್ನಗಳಲ್ಲಿ ಪ್ರಮುಖ ಹೆಜ್ಜೆಯಾಗಿರುವುದನ್ನು ಕಂಡಾಗ, ಆರೆಸ್ಸೆಸ್ ನೇತೃತ್ವದ ಸಂಪ್ರದಾಯಸ್ಥರ ಪಡೆಗಳು ಅದರ ಮೇಲೆ ದಾಳಿ ನಡೆಸಿದ್ದವು. ಆಧುನಿಕ ಭಾರತದ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಬರೆಯುತ್ತಾರೆ:

‘‘ಹಿಂದೂ ಮಹಿಳೆಯರಿಗೆ ತಮ್ಮ ಜಾತಿಯ ಹೊರಗೆ ಮದುವೆಯಾಗಲು, ಪತಿಗೆ ವಿಚ್ಛೇದನ ನೀಡಲು ಮತ್ತು ಆಸ್ತಿಯನ್ನು ಪಿತ್ರಾರ್ಜಿತವಾಗಿ ಪಡೆಯುವ ಹಕ್ಕನ್ನು ನೀಡುವ ಹಿಂದೂ ಕೋಡ್ ಮಸೂದೆಯ ಅಂಗೀಕಾರವನ್ನು ಸಂಘವು ವಿರೋಧಿಸಿತು. 1949ರಲ್ಲಿ ಆರೆಸ್ಸೆಸ್ ಮಸೂದೆಯನ್ನು ನಿಲ್ಲಿಸಲು ಭಾರತದಾದ್ಯಂತ ನೂರಾರು ಸಭೆಗಳು ಮತ್ತು ಪ್ರತಿಭಟನೆಗಳನ್ನು ಆಯೋಜಿಸಿತು. ಅಲ್ಲಿ ಮಾತನಾಡಲು ಸಾಧುಗಳು ಮತ್ತು ಸಂತರು ಬಂದರು.’’

ಸಂವಿಧಾನ ಸಭೆಯು ಪರಿಶಿಷ್ಟ ಜಾತಿಗಳು ಮತ್ತು ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯ ನಿಬಂಧನೆಗಳನ್ನು ಘೋಷಿಸಿತು. ಬಾಯಿಮಾತಿನ ಪ್ರಚಾರದ ಮೂಲಕ, ಬಲಪಂಥೀಯ ನಾಯಕರು ಈ ನಿಬಂಧನೆಗಳನ್ನು ದುರ್ಬಲಗೊಳಿಸಲು ಯತ್ನಿಸಿದರು ಮತ್ತು ಅವಹೇಳನ ಮಾಡಿದರು. ಇದು ಗುಜರಾತ್ನಲ್ಲಿ 1980-1981 ಮತ್ತು ಅನಂತರ 1985ರಲ್ಲಿ ದಲಿತ ವಿರೋಧಿ ಹಿಂಸಾಚಾರಕ್ಕೆ ಕಾರಣವಾಯಿತು. ಅದೇ ರೀತಿ ಮಂಡಲ್ ಆಯೋಗದ ಅಡಿಯಲ್ಲಿ ಒಬಿಸಿಗಳಿಗೆ ಮೀಸಲಾತಿಯನ್ನೂ ವಿರೋಧಿಸಲಾಯಿತು. ಕುತೂಹಲಕಾರಿಯಾಗಿ, ಸಂಘ ಪರಿವಾರವು ಡಿಸೆಂಬರ್ 6ರಂದು ಅಂಬೇಡ್ಕರ್ ಅವರ ಪುಣ್ಯತಿಥಿಯಂದು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿತು. ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಈ ದಿನದ ಪ್ರಾಮುಖ್ಯತೆಯನ್ನು ದುರ್ಬಲಗೊಳಿಸುವ ತಂತ್ರದ ಭಾಗವಾಗಿದೆ.

ಧಾರ್ಮಿಕ ಅಲ್ಪಸಂಖ್ಯಾತರ ಸ್ಥಿತಿಗೆ ಸಂಬಂಧಿಸಿದಂತೆ, ಅಂಬೇಡ್ಕರ್ ಸಂಪೂರ್ಣ ರಕ್ಷಣಾತ್ಮಕ ಕ್ರಮಗಳನ್ನು ತರಲು ಬಯಸಿದ್ದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವುದೇ ಸಮಯದಲ್ಲಿ ಈ ಷರತ್ತುಗಳನ್ನು ಪೂರ್ಣವಾಗಿ ಜಾರಿಗೆ ತರದಿದ್ದರೂ, ಅವುಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನವನ್ನು ಅಲ್ಪಸಂಖ್ಯಾತರ ಓಲೈಕೆ ಎಂದು ಲೇಬಲ್ ಮಾಡಲಾಗಿದೆ. ಅಂಬೇಡ್ಕರರು ಭ್ರಾತೃತ್ವದ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವುದರ ಪರವಾಗಿದ್ದರೆ, ಅದಕ್ಕೆ ವ್ಯತಿರಿಕ್ತವಾಗಿ, ಬಹುಸಂಖ್ಯಾತ ರಾಜಕೀಯವು ಅಲ್ಪಸಂಖ್ಯಾತರ ವಿರುದ್ಧ ದ್ವೇಷವನ್ನು ಹರಡುತ್ತದೆ. ಇದು ಹಿಂಸಾಚಾರ ಮತ್ತು ಧ್ರುವೀಕರಣಕ್ಕೆ ಕಾರಣವಾಗುತ್ತದೆ.

ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಸಾಮಾಜಿಕ ಪ್ರಜಾಪ್ರಭುತ್ವದ ಪರಿಕಲ್ಪನೆಯು ಪ್ರಜಾಪ್ರಭುತ್ವದ ಒಂದು ಅವಿಭಾಜ್ಯ ಅಂಗವಾಗಿತ್ತು. ಅವರು ಜಾತಿ ವಿನಾಶಕ್ಕಾಗಿ ಹೋರಾಡಿದ್ದವರು. ಇದಕ್ಕೆ ವ್ಯತಿರಿಕ್ತವಾಗಿ, ಆರೆಸ್ಸೆಸ್ ಸಾಮಾಜಿಕ ಸಾಮರಸ್ಯ ವೇದಿಕೆಯನ್ನು ಸ್ಥಾಪಿಸಿದೆ. ವಿವಿಧ ಜಾತಿಗಳು ಇಡೀ ವ್ಯವಸ್ಥೆಯ ಭಾಗವಾಗಿದ್ದು, ಹಿಂದೂ ಸಮಾಜಕ್ಕೆ ಬಲವನ್ನು ನೀಡುವಂಥವಾಗಿವೆ ಎಂಬುದು ಆರೆಸ್ಸೆಸ್ ಧೋರಣೆ.

ಇಲ್ಲಿ ಈ ಎರಡು ಧಾರೆಗಳ ಸಿದ್ಧಾಂತದ ನಡುವೆ ಪ್ರಮುಖ ವೈರುಧ್ಯವಿದೆ. ಹಿಂದೂ ಬಹುಸಂಖ್ಯಾತ ರಾಜಕೀಯವು ಹೊಸ ಪದಗಳ ಮೂಲಕ ಜಾತಿ ಶ್ರೇಣಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಭಾರತೀಯ ಸಂವಿಧಾನಕ್ಕೆ ಬದ್ಧವಾಗಿರುವಂತೆ ತೋರಿಸಿಕೊಳ್ಳುತ್ತ, ಹಿಂದೂ ಬಹುಸಂಖ್ಯಾತ ಸಿದ್ಧಾಂತದ ಪ್ರತಿಪಾದಕರು ಮನುಸ್ಮತಿಯಂತಹ ಧರ್ಮಗ್ರಂಥಗಳಲ್ಲಿನ ಜಾತಿ ಮತ್ತು ಲಿಂಗ ಶ್ರೇಣಿಯ ಮೌಲ್ಯಗಳ ಸಂಕೇತಗಳನ್ನು ಮುಖ್ಯವೆಂಬಂತೆ ವಾದಿಸುತ್ತಾರೆ.

ಬಹಳ ಜಾಣ್ಮೆಯಿಂದ ಅಂಬೇಡ್ಕರ್ ಅವರ ಸಿದ್ಧಾಂತವನ್ನು ವಿರೋಧಿಸುತ್ತಿರುವ ಸಂಘ ಪರಿವಾರವು ಅವರ ನಿಲುವನ್ನು ಬೆಂಬಲಿಸುವಂತೆ ತೋರಿಸಿಕೊಳ್ಳುತ್ತಿದೆ ಮತ್ತು ಈಗ ಅವರ ಮಾತುಗಳನ್ನು ಉಲ್ಲೇಖಿಸುತ್ತಿದೆ. ಇದು ಸಂಪೂರ್ಣವಾಗಿ ಚುನಾವಣಾ ಉದ್ದೇಶಕ್ಕಾಗಿಯೇ ಪ್ರಯೋಗಿಸಲಾಗುತ್ತಿರುವ ಬುದ್ಧಿವಂತ ತಂತ್ರವಲ್ಲದೆ ಮತ್ತೇನೂ ಅಲ್ಲ.

(ಕೃಪೆ:thewire.in)

Writer - ವಾರ್ತಾಭಾರತಿ

contributor

Editor - Safwan

contributor

Byline - ರಾಮ್ ಪುನಿಯಾನಿ

contributor

Similar News