ಪ್ರಧಾನಿ ನೆತನ್ಯಾಹು ರಾಜೀನಾಮೆಗೆ ಇಸ್ರೇಲ್ ನಲ್ಲಿ ಆಗ್ರಹ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (PTI)
ಫೆಲೆಸ್ತೀನ್ ಮೇಲಿನ ಇಸ್ರೇಲ್ ಆಕ್ರಮಣ ಶುರುವಾಗಿ ಒಂದು ತಿಂಗಳಾಗಿದೆ. ಅಂದ್ರೆ ಕಳೆದ ಮೂವತ್ತು ದಿನಗಳಿಂದ ಸತತವಾಗಿ ಇಸ್ರೇಲ್ ಗಾಝಾ ಮೇಲೆ ಇನ್ನಿಲ್ಲದಂತೆ ದಾಳಿ ಮಾಡುತ್ತಿದೆ, ಅಲ್ಲಿ ಎಲ್ಲವನ್ನೂ ಧ್ವಂಸ ಮಾಡುತ್ತಿದೆ, ನಿರ್ನಾಮ ಮಾಡುತ್ತಿದೆ, ಅಲ್ಲಿರುವ ಜನರನ್ನು ಕೊಂದು ಹಾಕುತ್ತಿದೆ. ಗಾಝಾ ಮಕ್ಕಳ ಸ್ಮಶಾನವಾಗುತ್ತಿದ್ದು, ಮಾನವೀಯ ದೃಷ್ಟಿಯಿಂದ ಯುದ್ಧ ನಿಲ್ಲಿಸುವಂತೆ ವಿಶ್ವಸಂಸ್ಥೆ ಕಾರ್ಯದರ್ಶಿ ಅಂಟನಿಯೊ ಗುಟೆರಸ್ ಹೇಳಿದ್ದಾರೆ.
ಆದರೆ, ಹಮಾಸ್ ಒತ್ತೆ ಇರಿಸಿಕೊಂಡಿರುವ 240 ಜನರನ್ನು ಬಿಡುಗಡೆ ಮಾಡುವವರೆಗೂ ಕದನ ವಿರಾಮ ಘೋಷಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ. ಕಳೆದೊಂದು ತಿಂಗಳಲ್ಲಿ ಇಸ್ರೇಲ್ ದಾಳಿಯಿಂದ ಗಾಝಾಪಟ್ಟಿಯಲ್ಲಿ ಬಲಿಯಾದವರ ಸಂಖ್ಯೆ 10 ಸಾವಿರ ದಾಟಿದ್ದು, ಮೃತಪಟ್ಟವರ ಪೈಕಿ 4,100 ಮಕ್ಕಳು ಸೇರಿದ್ದಾರೆ.
ಇಷ್ಟೆಲ್ಲಾ ನಿರ್ನಾಮ, ವಿನಾಶ ಆಗುತ್ತಿದ್ದರೂ ಅಮೇರಿಕ, ಇಂಗ್ಲೆಂಡ್ ಸಹಿತ ಬಲಾಢ್ಯ ದೇಶಗಳು ಇಸ್ರೇಲ್ ಬೆನ್ನ ಹಿಂದೆ ಗಟ್ಟಿಯಾಗಿ ನಿಂತುಕೊಂಡಿವೆ. ಅದು ನಡೆಸುತ್ತಿರುವ ನರಮೇಧಕ್ಕೆ ಪೂರ್ಣ ಬೆಂಬಲ ನೀಡಿವೆ. ಇದೆಲ್ಲದರ ನಡುವೆಯೇ, ಫೆಲೆಸ್ತೀನ್ ಪರವಾಗಿ ಇಸ್ರೇಲ್ ನಲ್ಲೇ ಧ್ವನಿಗಳು ಮೊಳಗತೊಡಗಿವೆ.
ಜಗತ್ತಿನಾದ್ಯಂತದಿಂದ ಇಂಥದೊಂದು ವಿಶೇಷ ಬೆಂಬಲ ಫೆಲೆಸ್ತೀನ್ ಗೆ ವ್ಯಕ್ತವಾಗುತ್ತಿದೆ. 80 ದೇಶಗಳ ರಾಯಭಾರಿಗಳೆದುರು ನೆತನ್ಯಾಹು ಶಕ್ತಿಪ್ರದರ್ಶನ ಮಾಡಿದ್ದು, ಅವರ ಬೆಂಬಲ ಇರುವುದಾಗಿ ಹೇಳಿಕೊಂಡಿದ್ದರೂ, ಆ ದೇಶಗಳ ಜನರ ದೊಡ್ಡ ವರ್ಗ ಫೆಲೆಸ್ತೀನ್ ಮೇಲಿನ ಇಸ್ರೇಲ್ ಆಕ್ರಮಣದ ವಿರುದ್ಧವಾಗಿದೆ ಎಂಬುದು ಗಮನಾರ್ಹ.
ಅಮೆರಿಕ ಸರಕಾರ ಇಸ್ರೇಲ್ ಗೆ ಬೆಂಬಲ ನೀಡಿದ್ದರೂ ಅಮೆರಿಕದಲ್ಲಿಯೂ ಇಸ್ರೇಲ್ ಆಕ್ರಮಣವನ್ನು ಖಡಾಖಂಡಿತವಾಗಿ ವಿರೋಧಿಸುವ, ಫೆಲೆಸ್ತೀನ್ ಪರವಿರುವವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಈವರೆಗೆ ಗಾಝಾ ಮೇಲೆ 12 ಸಾವಿರಕ್ಕೂ ಹೆಚ್ಚು ವಾಯು ದಾಳಿಗಳನ್ನು ಇಸ್ರೇಲ್ ನಡೆಸಿದೆ.
ಆದರೆ ಅಮಾಯಕ ಫೆಲೆಸ್ತೀನಿಯರ ಮೇಲಿನ ಈ ಸಾವಿರಾರು ದಾಳಿಗಳ ಮೂಲಕ ನೆತನ್ಯಾಹು ಇಸ್ರೇಲಿಗಳ ವಿಶ್ವಾಸ ಗಳಿಸಲು ಸಾಧ್ಯವಿಲ್ಲ ಎಂಬುದೂ ಅಷ್ಟೇ ಸತ್ಯ. ಫೆಲೆಸ್ತೀನ್ ಮೇಲೆ ಅದೆಷ್ಟೇ ದಾಳಿ ನಡೆಸುತ್ತಿದ್ದರೂ ಇಸ್ರೇಲ್ ನೊಳಗೆ ನೆತನ್ಯಾಹು ಜನಪ್ರಿಯತೆ ಪಾತಾಳ ಸೇರಿದೆ. ಇಸ್ರೇಲ್ನಲ್ಲಿ ನೆತನ್ಯಾಹು ಬಗ್ಗೆ ಒಂದು ಬಗೆಯ ಅಸಹನೀಯತೆ ಗಟ್ಟಿಯಾಗಿ ಬೆಳೆಯತೊಡಗಿದೆ ಎಂಬುದೂ ಅಷ್ಟೇ ನಿಜ.
ನೆತನ್ಯಾಹು ಕೂಡ ವಿಶ್ವಗುರುವಿನ ಹಾಗೆಯೇ ಮಾಧ್ಯಮಗಳೆದುರು ಮಾತನಾಡುವುದೇ ಇಲ್ಲ. ನೆತನ್ಯಾಹು ಹೇಳಿದ್ದನ್ನೇ ಊದುವ ಇಸ್ರೇಲ್ನ ಮಡಿಲ ಮೀಡಿಯಾದ ಎದುರು ನೆತನ್ಯಾಹು ಕಾಣಿಸಿಕೊಂಡದ್ದು ಕಳೆದ ಏಪ್ರಿಲ್ನಲ್ಲಿ. ಅನಂತರ ಮತ್ತೆ ಮಾಧ್ಯಮಗಳ ಎದುರು ಬಂದಿದ್ದೇ ಇಲ್ಲ. ಆದರೆ, ಅಲ್ಲಿನ ದಿಟ್ಟ ಮಾಧ್ಯಮಗಳು ನೆತನ್ಯಾಹುವನ್ನು ಯಾವುದೇ ಮುಲಾಜಿಲ್ಲದೆ ಟೀಕಿಸಿವೆ. ಖಾರವಾಗಿಯೇ ಬರೆದಿವೆ. ನಿಷ್ಠುರ ಪ್ರಶ್ನೆಗಳನ್ನು ಕೇಳುತ್ತಿವೆ. ಅದಕ್ಕೆ ಉತ್ತರಿಸುವುದು ನೆತನ್ಯಾಹು ಗೆ ಸಾಧ್ಯವಾಗುತ್ತಿಲ್ಲ.
ಈ ಮೂವತ್ತು ದಿನಗಳಲ್ಲಿ ಜಗತ್ತು ಮಾತ್ರವಲ್ಲ, ಸ್ವತಃ ಇಸ್ರೇಲ್ ಕೂಡ ನೆತನ್ಯಾಹುವಿನ ಬಗ್ಗೆ ಕಟುವಾಗಿಯೇ ಪ್ರತಿಕ್ರಿಯಿಸಿದೆ. ನೆತನ್ಯಾಹು ರಾಜೀನಾಮೆಗೂ ಅಲ್ಲಿ ಆಗ್ರಹಗಳು ಕೇಳಿಬರುತ್ತಿವೆ. ಈ ಹಿಂದೆಯೇ ನೆತನ್ಯಾಹು ಕೆಳಗಿಳಿಯಬೇಕು ಎಂಬ ಪ್ರಬಲ ಆಗ್ರಹ ಇಸ್ರೇಲ್ ನಲ್ಲಿತ್ತು. ಆದರೆ ಗಾಝಾ ಆಕ್ರಮಣದ ಮೂಲಕ ಅದನ್ನು ಬದಲಾಯಿಸಬಲ್ಲೆ ಎಂದುಕೊಂಡಿದ್ದರು ನೆತನ್ಯಾಹು.
ಆದರೆ ಅಲ್ಲಿ ಆಗುತ್ತಿರುವುದೇ ಬೇರೆ. ಅಲ್ಲಿನ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಬರಹಗಳು ಎಷ್ಟು ಹರಿತವಾಗಿವೆ ಎಂಬುದಕ್ಕೆ ಉದಾಹರಣೆಗಳನ್ನು ಕೊಡುವುದಾದರೆ,
ಒಂದು ಬರಹದ ಶೀರ್ಷಿಕೆ, " ನನ್ನ ಕುಟುಂಬದ ನೆತ್ತರು ನೆತನ್ಯಾಹು ಕೈಗೆ ಮೆತ್ತಿದೆ" ಎಂದಿದೆ.
"ಇಲ್ಲಿಯವರೆಗೆ ನೆತನ್ಯಾಹು ಇಸ್ರೇಲ್ ತನ್ನ ಪ್ರಜಾಸತ್ತಾತ್ಮಕತೆ ಉಳಿಸಿಕೊಳ್ಳಲು ಹೋರಾಡಬೇಕಾದ ಸ್ಥಿತಿ ತಂದಿಟ್ಟಿದ್ದರು. ಈಗ ಅದು ತನ್ನನ್ನೇ ಉಳಿಸಿಕೊಳ್ಳುವುದಕ್ಕಾಗಿ ಹೋರಾಡುವಂತೆ ಮಾಡಿದ್ದಾರೆ" ಎಂದು ಮತ್ತೊಂದು ಬರಹ ಟೀಕಿಸಿದೆ.
" ನಾಳೆಯಲ್ಲ, ಮುಂದಿನ ವಾರವೂ ಅಲ್ಲ, ಈಗಲೇ ನೆತನ್ಯಾಹು ಹುದ್ದೆ ಬಿಡಬೇಕು" " ನೆತನ್ಯಾಹು ದುರ್ಬಲ ಮತ್ತು ಭಯಭೀತ. ಆತ ಮೊದಲು ತೊಲಗಬೇಕು" ಎಂಬಿತ್ಯಾದಿ ಬಗೆಗಳಲ್ಲಿ ನೆತನ್ಯಾಹು ರಾಜೀನಾಮೆಗೆ ಆಗ್ರಹಿಸಲಾಗುತ್ತಿದೆ.
"ರಾಜಕೀಯ ಉಳಿವಿಗಾಗಿ ನೆತನ್ಯಾಹು ಈ ಆಕ್ರಮಣ , ಮಾಡುತ್ತಿದ್ದು, ಇಸ್ರೇಲಿ ಜನತೆಗೆ ಮುಖ ತೋರಿಸಲಾಗದ ಸ್ಥಿತಿಯಲ್ಲಿದ್ದಾರೆ" ಎಂದೂ ಟೀಕಿಸಲಾಗಿದೆ. " ದಾಳಿ ಶುರುವಾಗಿ ಇಷ್ಟು ದಿನಗಳಾದ ಹೊತ್ತಲ್ಲೂ ಮೀಡಿಯಾಗಳ ಮುಂದೆ ಬರುವ ಧೈರ್ಯವಿಲ್ಲ" ಎಂದು ನೆತನ್ಯಾಹು ವಿರುದ್ಧ ವ್ಯಂಗ್ಯ ವ್ಯಕ್ತವಾಗುತ್ತಿದೆ.
ಒಮ್ಮೆ ಫೆಲೆಸ್ತೀನ್ ಮೇಲಿನ ಆಕ್ರಮಣ ಮುಗಿದ ಬಳಿಕ ಏನಾದೀತು?. ಆಗ ನೆತನ್ಯಾಹು ಅವರಿಗೆ ಇಸ್ರೇಲಿಗಳ ಹತ್ತು ಹಲವು ಪ್ರಶ್ನೆಗಳು ಎದುರಾಗಲಿವೆ. 2009 ರಿಂದ ಇಲ್ಲಿಯವರೆಗೆ 14 ವರ್ಷಗಳ ಕಾಲ ಪ್ರಧಾನಿಯಾಗಿರುವ ನೆತನ್ಯಾಹು, ಇಸ್ರೇಲಿ ಇತಿಹಾಸದಲ್ಲಿಯೇ ಈ ಸ್ಥಾನದಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ ನಾಯಕ. 1996ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದರು. ಮೂರು ಅವಧಿಗೆ ಪ್ರಧಾನಿಯಾಗಿದ್ದಾರೆ. ಆದರೆ ಅವರ ಅತಿರೇಕಗಳೇ ಅವರನ್ನು ತಿಂದುಹಾಕುವ ಸ್ಥಿತಿ ಅಲ್ಲಿ ತಲೆದೋರಿದೆ. ಅವರ ಭಾರೀ ಭ್ರಷ್ಟಾಚಾರದ ಬಗ್ಗೆ ಹಲವು ಗಂಭೀರ ಆರೋಪಗಳಿವೆ. ಅದರ ವಿರುದ್ಧ ಅಲ್ಲಿನ ಜನರು ಈ ಹಿಂದೆ ಬೀದಿಗೂ ಇಳಿದಿದ್ದರು.
ವೆಸ್ಟ್ ಬ್ಯಾಂಕ್ ಮತ್ತು ಗಾಝಾದಲ್ಲಿ ನೆತನ್ಯಾಹು ಅನುಸರಿಸಿದ ನೀತಿ ಮತ್ತು ಈ ಪ್ರದೇಶಗಳಲ್ಲಿ ಅವರು ದಬ್ಬಾಳಿಕೆ ನಡೆಸುತ್ತಿರುವ ರೀತಿಯನ್ನು ವಿಶ್ವದಾದ್ಯಂತ ಯಹೂದಿಗಳು ಮತ್ತು ಯಹೂದಿಯೇತರರು ವಿರೋಧಿಸುತ್ತಿದ್ದಾರೆ. ಅದೇ ವೇಳೆ ಇಸ್ರೇಲ್ ಜನರೂ ನೆತನ್ಯಾಹು ಬಗ್ಗೆ ಅಸಹ್ಯಪಟ್ಟುಕೊಂಡಿದ್ದಾರೆ. ತೀವ್ರ ಅಸಹನೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.
9/11 ರ ನಂತರ ಅಮೆರಿಕ ಮಾಡಿದ ತಪ್ಪನ್ನು, ಯಾರ ಮಾತನ್ನೂ ಕೇಳದೆ ಇರುವ ಮೂಲಕ ಇಸ್ರೇಲ್ ಮಾಡಬಾರದು ಎಂದು ನೆತನ್ಯಾಹು ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದರು. ಆದರೆ ನೆತನ್ಯಾಹು ಅವರು ಅಮೆರಿಕ ಅಥವಾ ಇಸ್ರೇಲ್‌ನ ಇತಿಹಾಸದ ತಪ್ಪುಗಳಿಂದ ಪಾಠ ಕಲಿಯುವ ಮನಃಸ್ಥಿತಿಯವರಂತೆ ಕಾಣಿಸುತ್ತಿಲ್ಲ.
ಗಾಝಾವನ್ನು ನಾಶಪಡಿಸುವುದಕ್ಕೇ ನಿಂತಿದ್ದಾರೆ ನೆತನ್ಯಾಹು. ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲಲು ನಿಂತ ನೆತನ್ಯಾಹು ಗೆಲುವು ಯಾವ ಬಗೆಯದ್ದಾದೀತು?. ನೆತನ್ಯಾಹು ದೃಷ್ಟಿಯಲ್ಲಿ ಅದು ಗೆಲುವೇ ಆಗಿದ್ದರೆ, ಅನಂತರ ಏನಾಗಲಿದೆ?. ಒಂದು ಮಾತು ನಿಜ. ನೆತನ್ಯಾಹು ನೀತಿಯ ಬಗ್ಗೆ ಇಸ್ರೇಲ್ ಜನತೆಯನ್ನು ಕಾಡುತ್ತಿರುವ ಪ್ರಶ್ನೆಗಳೇ ನೆತನ್ಯಾಹುವಿಗೆ ಎದುರಾಗಲಿವೆ.
ಹಮಾಸ್ ದಾಳಿಯ ನೆಪದಲ್ಲಿ ಗಾಝಾದ ಮೇಲೆ ಮುಗಿಬಿದ್ದಿರುವ ನೆತನ್ಯಾಹು ಈಗ ಎದುರಿಸಬೇಕಿರುವ ಪ್ರಶ್ನೆಯೆಂದರೆ, " ಹಮಾಸ್ ದಾಳಿ ಏಕೆ ನಡೆಯಿತು" ಎಂಬುದು. "ಹಮಾಸ್ ದಾಳಿ ನಡೆದುದಕ್ಕೆ ನೆತನ್ಯಾಹು ನೀತಿ ಎಷ್ಟರ ಮಟ್ಟಿಗೆ ಹೊಣೆಗಾರ " ಎಂಬ ಪ್ರಶ್ನೆ ಸಣ್ಣದಲ್ಲ. ಪ್ರಧಾನಿಯಾದ ಬಳಿಕ ವರ್ಷಗಳಿಂದ ಮಾಧ್ಯಮಗಳಿಂದ ತಪ್ಪಿಸಿಕೊಂಡಿರುವ ನೆತನ್ಯಾಹು ಮುಂದೊಂದು ದಿನ ಮಾಧ್ಯಮಗಳ ಮುಂದೆ ಬರಲೇಬೇಕಾಗುತ್ತದೆ.
ಬರೀ ತನ್ನ ಪ್ರತಿಷ್ಠೆಗಾಗಿ ಗಾಝಾದ ಸಾವಿರಾರು ಮಕ್ಕಳನ್ನು, ಹಸುಳೆಗಳನ್ನು, ಮಹಿಳೆಯರನ್ನು ಕೊಂದಿರುವ ನೆತನ್ಯಾಹು, ಆಶ್ರಯಕ್ಕೆ, ಆರೈಕೆಗೆ ಇದ್ದ ಆಸ್ಪತ್ರೆಗಳನ್ನೂ ಬಿಡದೆ ಬಾಂಬ್ ದಾಳಿ ಮಾಡಿರುವ ನೆತನ್ಯಾಹು, ಇಡೀ ಗಾಝಾವನ್ನು ಮಸಣ ಮಾಡಿ ಗೆದ್ದವನಂತೆ ಬೀಗುವ ನೆತನ್ಯಾಹು ತನ್ನ ಕೈಗೆ ಮೆತ್ತಿಕೊಂಡ ಸಾವಿರ ಸಾವಿರ ಅಮಾಯಕ ಜೀವಗಳ ನೆತ್ತರನ್ನು ತೊಳೆದುಕೊಳ್ಳುವುದು ಸಾಧ್ಯವೆ?. ಸ್ವತಃ ಇಸ್ರೇಲ್ ನ ಜನರೇ ಇಂಥದೊಂದು ಪ್ರಶ್ನೆಯನ್ನು ಮುಂದಿಟ್ಟಾಗ ನೆತನ್ಯಾಹು ಬಳಿ ಉತ್ತರವಿರುತ್ತದೆಯೆ?