ಬೇಗೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ
ಗುಂಡ್ಲುಪೇಟೆ, ಮಾ.4: ಕಬಿನಿ ಕುಡಿಯುವ ನೀರು ಸರಬರಾಜಿನ ಮೋಟಾರ್ಗಳು ಕೆಟ್ಟಿರುವುದರಿಂದ ಕೆಲವು ದಿನಗಳಿಂದ ಬೇಗೂರು ಗ್ರಾಮದಲ್ಲಿ ಕುಡಿಯುವ ನೀರಿಗೆ ಜನರು ಬವಣೆ ಪಡುವಂತಾಗಿದೆ ಎಂದು ಗ್ರಾಮಸ್ಥರ ಆರೋಪವಾಗಿದೆ.
ಗುಂಡ್ಲುಪೇಟೆ ತಾಲೂಕಿನಲ್ಲಿ ಬೇಗೂರು ಅತ್ಯಂತ ದೊಡ್ಡ ಹೋಬಳಿ ಕೇಂದ್ರವಾಗಿದ್ದು, ಸುಮಾರು 4-5 ಸಾವಿರ ಜನಸಂಖ್ಯೆ ಹೊಂದಿದೆ. ಈಗ ಇಲ್ಲಿನ ಜನರು ಕುಡಿಯುವ ನೀರಿಗೆ ಹಾಹಾಕಾರ ಪಡುವಂತಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವುದು ಇದೇ ಮೊದಲೇನಲ್ಲ. ಈ ಸಮಸ್ಯೆ ಆಗಿಂದಾಗ್ಗೆ ತಲೆದೋರುತ್ತಲೇ ಇದ್ದರೂ ಚುನಾಯಿತ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಶಾಶ್ವತವಾಗಿ ಕುಡಿಯುವ ನೀರು ಒದಗಿಸುವ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಲಕ್ಷಾಂತರ ರೂ. ಆದಾಯವಿರುವ ಗ್ರಾಪಂ ಆಡಳಿತ ಮಂಡಳಿ ಜನರ ನೀರಿನ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಕೇವಲ ಕಬಿನಿ ನೀರಿನ ಸರಬರಾಜನ್ನೇ ನೆಚ್ಚಿಕೊಂಡಿರುವ ಅಧಿಕಾರಿಗಳು ಹೊಸದಾಗಿ ಬೋರ್ವೆಲ್ ಕೊರೆಯಿಸಿ ಸಮರ್ಪಕವಾಗಿ ನೀರು ಸರಬರಾಜಿಗೆ ವ್ಯವಸ್ಥೆ ಮಾಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಎರಡು ರಾಟೆಬಾವಿಗಳನ್ನು ಆಶ್ರಯಿಸುವಂತಾಗಿದೆ. ಬಾವಿಯಲ್ಲಿನ ನೀರನ್ನೇ ಗ್ರಾಮದ ಜನರು ನೆಚ್ಚಿಕೊಂಡಿದ್ದಾರೆ.
ಮೂರು ದಿನಗಳಿಗೊಮ್ಮೆ ಬರುವ ನೀರು: ಗ್ರಾಮದ ಪ್ರತೀ ಬೀದಿಗೂ ಒಂದು ಗಂಟೆಯಂತೆ 3 ದಿನಗಳಿಗೂಮ್ಮೆ ನೀರುಬಿಡಲಾಗುತ್ತಿದ್ದು, ಹಬ್ಬಗಳ ಸಂದರ್ಭದಲ್ಲಂತೂ ಜನರ ಕಷ್ಟ ಹೇಳತೀರದಾಗಿದೆ.
4-5 ದಿನಗಳಿಂದ ನೀರಿನ ಮೋಟರ್ ದುರಸ್ತಿ ಕಾರ್ಯ ನಡೆದಿದೆ. ಇದೀಗ ರಿಪೇರಿಯಾಗಿದ್ದು, ನೀರನ್ನು ಈಗಾಗಲೇ ಸರಬರಾಜು ಮಾಡಲಾಗಿದೆ. ಜೊತೆಗೆ ಹೊಸ ಬೋರ್ವೆಲ್ ಕೊರೆಸಲು ಅನುಮತಿ ಇಲ್ಲದ ಕಾರಣ ಹಳೆಯ ಬೋರ್ವೆಲ್ಗಳನ್ನೇ ದುರಸ್ತಿಪಡಿಸಿ ನೀರು ನೀಡಲಾಗುತ್ತಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಜಲಜೀವನ್ ಮಿಷನ್ ಯೋಜನೆಯ ಪೈಪ್ಲೈನ್ ಕಾಮಗಾರಿ ಮುಗಿಯಲಿದ್ದು ಕೆಲವೇ ತಿಂಗಳುಗಳಲ್ಲಿ ಪ್ರತಿನಿತ್ಯ ಗ್ರಾಮದಲ್ಲಿರುವ ಪ್ರತೀ ಮನೆಗೆ ನೀರನ್ನು ಸರಬರಾಜು ಮಾಡಲಾಗುವುದು.
ಗುರುಪ್ರಸಾದ್, ಪಿಡಿಒ, ಬೇಗೂರು ಗ್ರಾಪಂ
ಬೇಗೂರು ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮದಲ್ಲಿ ಕುಡಿಯುವ ನೀರಿನ ಬಗ್ಗೆ ಗಮನಹರಿಸದೆ ಸಾರ್ವಜನಿಕರ ಕುಂದು ಕೊರತೆಯ ನಿರ್ವಹಣೆಯಲ್ಲಿ ಎಡವಿದಂತೆ ಕಾಣುತ್ತಿದೆ. ನಿತ್ಯ ಕುಡಿಯುವ ನೀರನ್ನು ಬಿಡದೆ, 3 ದಿನಗಳಿಗೊಮ್ಮೆ ಬಿಟ್ಟರೆ ಜನರ ಪರಿಸ್ಥಿತಿ ಏನಾಗಬೇಕು. ಮುಂದಿನ ದಿನಗಳಲ್ಲಿ ಟ್ಯಾಂಕರ್ನಲ್ಲಿ ನೀರಿನ ವ್ಯವಸ್ಥೆ ಮಾಡಬೇಕು.
ಅಶೋಕ್ ರಾಜ್, ಅಧ್ಯಕ್ಷರು, ಕರ್ನಾಟಕ ಪ್ರಜಾಶಕ್ತಿ ವೇದಿಕೆ