×
Ad

ಕೇರಳಕ್ಕೆ ಅಕ್ರಮವಾಗಿ ಎಂ.ಸ್ಯಾಂಡ್ ಸಾಗಣೆ: ಸಾರ್ವಜನಿಕರ ಆರೋಪ

Update: 2024-03-04 13:16 IST

ಗುಂಡ್ಲುಪೇಟೆ, ಮಾ.4: ಸಂಜೆಯಾಗುತ್ತಿದ್ದಂತೆ ಅಕ್ರಮವಾಗಿ ರಾಜ್ಯದ ಗಡಿ ಗುಂಡ್ಲುಪೇಟೆಯಿಂದ ಕೇರಳಕ್ಕೆ ಎಂ.ಸ್ಯಾಂಡ್ ತುಂಬಿದ ಟಿಪ್ಪರ್ ಲಾರಿಗಳು ಹೆಚ್ಚಿನ ಪ್ರಮಾಣದಲ್ಲಿ ರಾಜಧನ ವಂಚಿಸಿ ತೆರಳುತ್ತಿವೆ. ಇದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟವಾಗುವ ಜೊತೆಗೆ ರಾಜ್ಯದ ಸಂಪತ್ತು ನೆರೆಯ ಕೇರಳದ ಪಾಲಾಗುತ್ತಿದೆ ಎಂದು ಸಾರ್ವಜನಿಕರು ಹಾಗು ವಿವಿಧ ಸಂಘಟನೆ ಮುಖಂಡರ ಆರೋಪವಾಗಿದೆ.

ತಾಲೂಕಿನ ಗಡಿ ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ಕೇರಳಕ್ಕೆ ಸಂಜೆ ಮತ್ತು ರಾತ್ರಿ ವೇಳೆ ಎಂ.ಸ್ಯಾಂಡ್ ತುಂಬಿದ ಟಿಪ್ಪರ್ಗಳು ಯಾವುದೇ ತಪಾಸಣೆ ಇಲ್ಲದೆ ರಾಜಾರೋಷಾವಾಗಿ ಸಂಚಾರ ಮಾಡುತ್ತಿದ್ದು, ಒಂದು ಲಾರಿಗೆ ರಾಯಲ್ಟಿ ತೆಗೆದುಕೊಂಡು ಹತ್ತಾರು ಲಾರಿಗಳು ಸಂಚರಿಸುತ್ತಿವೆ. ಜೊತೆಗೆ ರಾಯಲ್ಟಿ ಪ್ರಮಾಣ 20ಟನ್ ಇದ್ದರೂ, 50ಕ್ಕೂ ಹೆಚ್ಚು ಟನ್ ಎಂ.ಸ್ಯಾಂಡ್ ತುಂಬಿಕೊಂಡು ಲಾರಿಗಳು ಕೇರಳ ರಾಜ್ಯಕ್ಕೆ ತೆರಳುತ್ತಿವೆ. ಹೀಗಿದ್ದರೂ ಕೂಡ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಮೌನಕ್ಕೆ ಶರಣಾಗಿದೆ ಎಂದು ಸ್ಥಳೀಯರ ಆರೋಪವಾಗಿದೆ.

ತಪಾಸಣೆಯೇ ಇಲ್ಲ: ರಾಜ್ಯದ ಗಡಿ ಮೂಲೆಹೊಳೆ ಚೆಕ್ ಪೋಸ್ಟ್ ಮಾರ್ಗವಾಗಿ ಅಧಿಕ ಭಾರ ಹೊತ್ತು ಹತ್ತಾರು ಟಿಪ್ಪರ್ ಲಾರಿಗಳು ಎಂ.ಸ್ಯಾಂಡ್ ತುಂಬಿಕೊಂಡು ಸಂಚಾರ ಮಾಡುತ್ತಿವೆ. ಹೀಗಿದ್ದರೂ ಕೂಡ ಅರಣ್ಯ ಇಲಾಖೆ, ಪೊಲೀಸರು ಮತ್ತು ಗಣಿ ಇಲಾಖೆ ಅಧಿಕಾರಿಗಳು ಯಾವೊಂದು ವಾಹನವನ್ನು ತಡೆದು ತಪಾಸಣೆ ನಡೆಸುತ್ತಿಲ್ಲ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಅಧಿಕಾರಿಗಳ ಸೋಗಿನಲ್ಲಿಯೇ ಸಾಗಣೆ ಆರೋಪ: ಪ್ರತಿನಿತ್ಯ ಅಲರ್ಟ್ ಆಗುವ ಕೇರಳ ಉದ್ಯಮಿಗಳು ಗುಂಡ್ಲುಪೇಟೆಯಿಂದ ಟನ್ ಗಟ್ಟಲೆ ಎಂ.ಸ್ಯಾಂಡ್ ಸಾಗಣೆ ಮಾಡುತ್ತಿದ್ದಾರೆ. ಇದಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಕೆಲ ಅಧಿಕಾರಿಗಳೇ ಸಾತ್ ನೀಡುತ್ತಿದ್ದಾರೆ. ಇದರಿಂದ ಎಂ.ಸ್ಯಾಂಡ್ ಮತ್ತು ಬಿಳಿಕಲ್ಲು ಸಾಗಣೆ ಮಾಫಿಯವಾಗಿ ಮಾರ್ಪಾಡಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅಕ್ರಮವಾಗಿ ಎಂ.ಸ್ಯಾಂಡ್ ಹೆಚ್ಚಿನ ಪ್ರಮಾಣದಲ್ಲಿ ಸಾಗಣೆಯಾಗುತ್ತಿರುವ ಹಿನ್ನೆಲೆ ರಾಜ್ಯದ ಸಂಪತ್ತು ನೆರೆಯ ಕೇರಳದವರ ಪಾಲಾಗುತ್ತಿದೆ. ಇದು ಹೀಗಿಯೇ ಮುಂದುವರಿದರೆ ಸರಕಾರಕ್ಕೆ

ಕೋಟ್ಯಂತರ ರೂ. ರಾಜಧನ ನಷ್ಟವಾಗಲಿದೆ. ಆದ್ದರಿಂದ ಸ್ಥಳೀಯ ಶಾಸಕ ಎಚ್.ಎಂ.ಗಣೇಶಪ್ರಸಾದ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಈ ದಂಧೆಗೆ ಕಡಿವಾಣ ಹಾಕಬೇಕೆಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.

 ಎಗ್ಗಿಲ್ಲದೆ ಬಿಳಿಕಲ್ಲು ಸಾಗಣೆ 

ಗುಂಡ್ಲುಪೇಟೆಯಿಂದ ಕೇರಳಕ್ಕೆ ಎಂ.ಸ್ಯಾಂಡ್ ಜೊತೆಗೆ ಬಿಳಿಕಲ್ಲು ಕೂಡ ಅಕ್ರಮವಾಗಿ ಹಗಲು-ರಾತ್ರಿ ಎನ್ನದೆ ಎಗ್ಗಿಲ್ಲದೆ ಸಾಗಣೆಯಾಗುತ್ತಿದೆ. ಒಂದಕ್ಕೆ ಫರ್ಮಿಟ್ ತೆಗೆದುಕೊಂಡು ಅಧಿಕ ಲಾರಿ ಸಂಚಾರ ಮಾಡುತ್ತಿದೆ. ಇದರಿಂದ ತಾಲೂಕಿನ ಖನಿಜ ಸಂಪತ್ತು ಬೇರೆಯವರ ಪಾಲಾಗುತ್ತಿದೆ. ಹೀಗಿದ್ದರೂ ಕೂಡ ಗಣಿಗಾರಿಕೆ ಇಲಾಖೆ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದ ಸ್ಥಳೀಯರು ಆರೋಪಿಸಿದ್ದಾರೆ.

ಪರ್ಮಿಟ್ ಇಲ್ಲದೆ ಕೇರಳಕ್ಕೆ ಎಂ.ಸ್ಯಾಂಡ್ ತುಂಬಿಕೊಂಡು ತೆರಳುವ ಟಿಪ್ಪರ್ ಲಾರಿಗಳನ್ನು ತಪಾಸಣೆ ನಡೆಸಿ ಅಕ್ರಮ ಕಂಡು ಬಂದರೆ ಲಾರಿಗಳನ್ನು ಸೀಜ್ ಮಾಡುವ ಜೊತೆಗೆ ಸೂಕ್ತ ಕ್ರಮ ಜರುಗಿಸಲಾಗುವುದು.

- ಪದ್ಮಜಾ, ಗಣಿ ಇಲಾಖೆ ಡಿಡಿ, ಚಾಮರಾಜನಗರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ರಾಜ್ ಗೋಪಾಲ್ ಹಾಲಹಳ್ಳಿ

contributor

Similar News