ಬೆಳಗಾವಿ ಅಧಿವೇಶನದಲ್ಲಿ 21 ವಿಧೇಯಕಗಳನ್ನು ಮಂಡಿಸಲು ಸಿದ್ಧತೆ
ಡಿ.8ರಿಂದ ಚಳಿಗಾಲದ ಅಧಿವೇಶನ
ಬೆಂಗಳೂರು : ಜನಾಂಗೀಯ ನಿಂದನೆ, ಭಾಷೆ, ಜನ್ಮಸ್ಥಳ, ಜಾತಿ, ಧರ್ಮ ಆಧರಿಸಿ ದ್ವೇಷದ ಅಪರಾಧ ಮತ್ತು ದ್ವೇಷ ಭಾಷಣ ಮಾಡುವುದನ್ನು ತಡೆಗಟ್ಟುವುದು ಮತ್ತು ಸಾಮಾಜಿಕ ಬಹಿಷ್ಕಾರ ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿ (ನಿಷೇಧ) ಮಸೂದೆ ಸಹಿತ ಒಟ್ಟು 21 ವಿಧೇಯಕಗಳನ್ನು ಮಂಡಿಸಲು ರಾಜ್ಯ ಕಾಂಗ್ರೆಸ್ ಸರಕಾರವು ಸಿದ್ಧತೆ ನಡೆಸಿದೆ.
ಬೆಳಗಾವಿಯಲ್ಲಿ ಡಿಸೆಂಬರ್ 8ರಿಂದ ನಡೆಯಲಿರುವ ಅಧಿವೇಶನದಲ್ಲಿ ಸಾಮಾಜಿಕ ಪರಿಣಾಮಗಳನ್ನು ಬೀರುವ ವಿಧೇಯಕಗಳನ್ನು ಮಂಡಿಸಲಿದೆ. ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು 2025ರ ನವೆಂಬರ್ 29ರಂದೇ ಸರಕಾರದ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಹಾಕಿದ್ದರು.
ಈ ಟಿಪ್ಪಣಿಯಲ್ಲಿನ ಸೂಚನೆ ಪ್ರಕಾರ 2025ರ ಡಿಸೆಂಬರ್ 2ನೇ ತಾರೀಕಿನೊಳಗೆ ಸಚಿವ ಸಂಪುಟ ಶಾಖೆಗೆ ವಿಧೇಯಕಗಳ ಪ್ರಸ್ತಾವವನ್ನು ಸಲ್ಲಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು ಒಳಾಡಳಿತ, ಸಿಬ್ಬಂದಿ ಆಡಳಿತ ಸುಧಾರಣೆ, ಕಂದಾಯ, ನಗರಾಭಿವೃದ್ಧಿ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪಶು ಸಂಗೋಪನೆ ಮೀನುಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ 2025ರ ಡಿಸೆಂಬರ್ 1ರಂದು ಸೂಚಿಸಿರುವುದು ಗೊತ್ತಾಗಿದೆ. ಸಚಿವ ಎಚ್.ಕೆ.ಪಾಟೀಲ್ ಮತ್ತು ಡಾ.ಶಾಲಿನಿ ರಜನೀಶ್ ಅವರು ಹೊರಡಿಸಿರುವ ಟಿಪ್ಪಣಿಯ ಪ್ರತಿಗಳು "the-file.in"ಗೆ ಲಭ್ಯವಾಗಿವೆ.
ಮುಖ್ಯಮಂತ್ರಿ ಗದ್ದುಗೆ ಸುತ್ತ ಬಿರುಸಿನ ರಾಜಕಾರಣ ನಡೆಯುತ್ತಿರುವ ಮಧ್ಯೆಯೇ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಂಡಿಸುತ್ತಿರುವ ಮಸೂದೆಗಳು ಚರ್ಚೆಗೆ ಗ್ರಾಸವಾಗಲಿದೆ.
ದ್ವೇಷ ಭಾಷಣವು ದೇಶದ ಜಾತ್ಯತೀತ ಸಂರಚನೆಗೆ ಹಾನಿ ಮಾಡುವಷ್ಟು ಸಮರ್ಥವಾಗಿರುವ ಗಂಭೀರ ಅಪರಾಧ ಎಂದು ಸುಪ್ರಿಂ ಕೋರ್ಟ್ ಇತ್ತೀಚೆಗಷ್ಟೇ ವ್ಯಾಖ್ಯಾನಿಸಿತ್ತು. ಜತೆಗೆ ಯಾವುದೇ ದೂರು ದಾಖಲಾಗದೆ ಇದ್ದರೂ ದ್ವೇಷ ಭಾಷಣ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ರಾಜ್ಯ ಕಾಂಗ್ರೆಸ್ ಸರಕಾರವು ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ ತಡೆಗಟ್ಟುವಿಕೆ ಮತ್ತು ಶಿಕ್ಷಿಸುವ ವಿಧೇಯಕವನ್ನು ರೂಪಿಸಿದೆ.
ಈ ಮಸೂದೆಯಲ್ಲೇನಿದೆ?: ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ ತಡೆಗಟ್ಟುವಿಕೆ ಮತ್ತು ಶಿಕ್ಷಿಸುವ ವಿಧೇಯಕ-2025ದ ಪ್ರಕಾರ ಅಪರಾಧಗಳ ಪಟ್ಟಿಯನ್ನು ವಿಧೇಯಕದಲ್ಲಿ ನಮೂದಿಸಿದೆ. ಇದರ ಪ್ರಕಾರ ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮ ಸ್ಥಳ, ಭಾಷೆ, ರೆಸಿಡೆನ್ಸ್, ಅಂಗವೈಕಲ್ಯ, ಬುಡಕಟ್ಟುವಿನ ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವ ಅಥವಾ ಪ್ರಚಾರ ಮಾಡುವ ವ್ಯಕ್ತಿ ಅಥವಾ ಗುಂಪಿಗೆ ಮೂರು ವರ್ಷಗಳ ಕಾಲ ಶಿಕ್ಷೆಗೆ ಗುರಿಪಡಿಸಲಿದೆ. ಅಥವಾ 5 ಸಾವಿರ ರೂ.ವರೆಗೆ ದಂಡ ಮತ್ತು ಈ ಎರಡನ್ನೂ ವಿಧಿಸಲಿದೆ.
ಅದೇ ರೀತಿ ಧಾರ್ಮಿಕ, ಜನಾಂಗೀಯ, ಜಾತಿ, ಸಮುದಾಯ, ಲಿಂಗ, ಹುಟ್ಟಿನ ಸ್ಥಳ, ಭಾಷೆ, ಅಂಗವೈಕಲ್ಯ, ಬುಡಕಟ್ಟಿನ ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವಂತೆ ಉದ್ದೇಶಪೂರ್ವಕವಾಗಿ ಪ್ರಕಟಿಸುವವರು, ಪ್ರಚಾರ ಮಾಡುವವರು ಅಥವಾ ಸಮರ್ಥಿಸುವವರು, ವಕಾಲತ್ತು ವಹಿಸುವವರನ್ನೂ ಶಿಕ್ಷೆಗೆ ಗುರಿಪಡಿಸಲಿದೆ.
ಯಾವುದೇ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿಯೂ ಇದರಲ್ಲಿ ಒಳಗೊಂಡಿದೆ. ಇದರ ಮಾಹಿತಿಯು ದತ್ತಾಂಶ, ಸಂದೇಶ, ಪಠ್ಯ, ಚಿತ್ರಗಳು, ಧ್ವನಿ, ಧ್ವನಿ, ಸಂಕೇತಗಳು, ಕಂಪ್ಯೂಟರ್ ಪ್ರೋಗ್ರಾಂಗಳು ಸಾಫ್ಟ್‌ವೇರ್ ಮತ್ತು ಡೇಟಾಬೇಸ್‌ಗಳು ಅಥವಾ ಮೈಕ್ರೋಫಿಲ್ಮ್‌ಗಳನ್ನು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧದ ವ್ಯಾಪ್ತಿಗೆ ಒಳಪಡಿಸಿದೆ.
ಅಲ್ಲದೇ ಯಾವುದೇ ನಿರ್ದಿಷ್ಟ ಇಲೆಕ್ಟ್ರಾನಿಕ್ ದಾಖಲೆಗಳಿಗೆ ಸಂಬಂಧಿಸಿ ಮಧ್ಯವರ್ತಿ ಎಂದರೆ, ಇನ್ನೊಬ್ಬ ವ್ಯಕ್ತಿಯ ಪರವಾಗಿ ಆ ದಾಖಲೆಯನ್ನು ಸ್ವೀಕರಿಸುವ, ಸಂಗ್ರಹಿಸುವ ಅಥವಾ ರವಾನಿಸುವ ಅಥವಾ ಆ ದಾಖಲೆಗೆ ಸಂಬಂಧಿಸಿದಂತೆ ಯಾವುದೇ ಸೇವೆಯನ್ನು ಒದಗಿಸುವ ಯಾವುದೇ ವ್ಯಕ್ತಿ ಮತ್ತು ಪ್ರಸಾರ ಮಾಡುವ ವಾಹಿನಿಗಳು (ಚಾನೆಲ್‌ಗಳು), ಟೆಲಿಕಾಂ ಸೇವಾ ಪೂರೈಕೆದಾರರು, ನೆಟ್‌ವರ್ಕ್ ಸೇವಾ ಪೂರೈಕೆದಾರರು, ಇಂಟರ್‌ನೆಟ್ ಸೇವಾ ಪೂರೈಕೆದಾರರು, ವೆಬ್‌ಹೋಸ್ಟಿಂಗ್ ಸೇವಾ ಪೂರೈಕೆದಾರರು, ಸಾಮಾಜಿಕ ಮಾಧ್ಯಮ ವೇದಿಕೆಗಳು, ಸರ್ಚ್ ಇಂಜಿನ್‌ಗಳು ಆನ್‌ಲೈನ್ ಪಾವತಿ ಸೈಟ್‌ಗಳು, ಆನ್‌ಲೈನ್-ಹರಾಜು ಸೈಟ್‌ಗಳು, ಆನ್‌ಲೈನ್-ಮಾರುಕಟ್ಟೆಗಳು ಮತ್ತು ಸೈಬರ್ ಕೆಫೆಗಳನ್ನೂ ಇದರ ವ್ಯಾಪ್ತಿಗೆ ಸೇರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿ ಗ್ರಾಮದ ಬಳಿ ಇರುವ ಶ್ರೀನಿವಾಸಪುರ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರದಲ್ಲಿ ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿತ್ತು. ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರಕಾರವು ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ವಿಧೇಯಕ 2025 ರೂಪಿಸಿತ್ತು.
ಸಚಿವ ಸಂಪುಟ ಪ್ರಸ್ತಾವದಲ್ಲೇನಿದೆ?
ವಿಧಾನಸಭೆ ಸದಸ್ಯರಿಂದ ಚುನಾಯಿತರಾದ ವಿಧಾನ ಪರಿಷತ್ ಸದಸ್ಯರಿಗೆ ಚುನಾವಣೆ ಕ್ಷೇತ್ರವಿರುವುದಿಲ್ಲ. ವಿಧಾನ ಪರಿಷತ್ ಸದಸ್ಯರು ಮಂಡಳಿಯ ಅಧಿಕಾರ ವ್ಯಾಪ್ತಿಯೊಳಗಿನ ಜಿಲ್ಲೆಯನ್ನು ನೋಡಲ್ ಜಿಲ್ಲೆಯೆಂದು ಆಯ್ಕೆ ಮಾಡಿಕೊಂಡರೆ ಅಂತಹವರನ್ನು ಮಂಡಳಿಯ ಸದಸ್ಯರಂದು ಪರಿಗಣಿಸಿ ಅವರಿಗೂ ಇತರ ಸದಸ್ಯರಿಗೆ ದೊರೆಯುವ ಸ್ಥಾನಮಾನ, ಸೌಲಭ್ಯಗಳು, ಅನುದಾನ ಮತ್ತು ಮಾನ್ಯತೆ ದೊರೆಯುವಂತೆ ಮಾಡಬೇಕಿದೆ. ಹೀಗಾಗಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧಿನಿಯಮ 1991ಕ್ಕೆ ತಿದ್ದುಪಡಿ ತರಬೇಕು ಎಂದು ಯೋಜನೆ ಇಲಾಖೆಯು ಪ್ರಸ್ತಾವಿಸಿದೆ.
ಸಾಮಾಜಿಕ ಬಹಿಷ್ಕಾರ ನಿಷೇಧ ಮಸೂದೆಯಲ್ಲೆೇನಿದೆ?
ರಾಜ್ಯದಲ್ಲಿ ಯಾರೇ ವ್ಯಕ್ತಿಯು ತನ್ನ ಸಮುದಾಯದ ಯಾರೇ ವ್ಯಕ್ತಿಯ ಮೇಲೆ ಯಾವುದೇ ರೀತಿಯ ಸಾಮಾಜಿಕ ಬಹಿಷ್ಕಾರವನ್ನು ಹೇರುವುದು ಅಥವಾ ಹೇರಲು ಕಾರಣಕರ್ತನಾದರೇ ಅಥವಾ ಸಾಮಾಜಿಕ ಬಹಿಷ್ಕಾರವನ್ನು ಆಚರಿಸಿರುವುದು ಸಾಬೀತಾದರೇ ಅಂತಹ ವ್ಯಕ್ತಿಗಳ ವಿರುದ್ಧ ಮೂರು ವರ್ಷ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂ. ದಂಡ ವಿಧಿಸಲಿದೆ. ರಾಜ್ಯದಲ್ಲಿ ಒಬ್ಬ ವ್ಯಕ್ತಿ ಅಥವಾ ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸುವುದು, ತಡೆಗಟ್ಟುವುದು ಮತ್ತು ಪರಿಹಾರ ನೀಡುವ ಉದ್ದೇಶದಿಂದ ಈ ವಿಧೇಯಕವನ್ನು ರೂಪಿಸಿದೆ. ಸಾಮಾಜಿಕ ಬಹಿಷ್ಕಾರ ಹೇರಿಕೆ ಮಾಡುವುದು ಸಹ ಇನ್ನು ಮುಂದೆ ಅಪರಾಧವಾಗಲಿದೆ. ಈ ಅಪರಾಧ ಸಾಬೀತಾದರೇ ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಅಥವಾ ಒಂದು ಲಕ್ಷ ರೂ.ಗಳಿಗೆ ವಿಸ್ತರಿಸಬಹುದಾದ ದಂಡ ಅಥವಾ ಇವರೆಡನ್ನೂ ಸೇರಿಸಿ ಜೈಲು ಶಿಕ್ಷೆಯನ್ನು ವಿಧಿಸಲು ಅವಕಾಶ ಕಲ್ಪಿಸಿಕೊಂಡಿದೆ.