ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಎಲ್ಲಿದ್ದಾರೆ?
ಅವರ ಕ್ಷೇತ್ರದ ಮತದಾರ ಅಶ್ರಫ್ ರನ್ನು ಮಂಗಳೂರಿನಲ್ಲಿ ಗುಂಪು ಹತ್ಯೆ ಮಾಡಲಾಗಿದೆ.
ಪ್ರಿಯಾಂಕಾ ಗಾಂಧಿ ಅವರನ್ನು ನಾಲ್ಕು ಲಕ್ಷ ಮತಗಳ ಭಾರೀ ಅಂತರದಿಂದ ಗೆಲ್ಲಿಸಿದ ಕ್ಷೇತ್ರದ ಮತದಾರ ಮಂಗಳೂರಿನಲ್ಲಿ ಮತಾಂಧರ ಗುಂಪಿನಿಂದ ಅಮಾನುಷವಾಗಿ ಕೊಲೆಯಾಗಿದ್ದಾರೆ. ವಯನಾಡ್ ನ ಅಮಾಯಕ ಮಾನಸಿಕ ಅಸ್ವಸ್ಥ ಅಶ್ರಫ್ ನನ್ನ ಮಂಗಳೂರಿನ ಹಿಂದುತ್ವವಾದಿಗಳ ಗುಂಪು ಒಟ್ಟು ಸೇರಿ ಭಯಾನಕವಾಗಿ ಥಳಿಸಿ ಕೊಂದೇ ಹಾಕಿದೆ.
ಬೇಡ ಬೇಡ ಎಂದು ಸ್ಥಳೀಯರು ಗೋಗರೆದರೂ ಕೇಳದೆ ಹೊಡೆದೂ ಹೊಡೆದೂ ಕೊಂದಿದ್ದಾರೆ. ಆ ಅಮಾನುಷ ಕೃತ್ಯವನ್ನು ಅಲ್ಲಿಂದಲ್ಲಿಗೆ ಮುಗಿಸಲು ಮಂಗಳೂರು ಪೊಲೀಸರು ತಮ್ಮಿಂದಾಗುವ ಎಲ್ಲ ಪ್ರಯತ್ನವನ್ನೂ ಮಾಡಿದ್ದಾರೆ. ಯಾವುದೋ ಅಪಘಾತದಿಂದಲೋ, ಕುಡಿತದಿಂದಲೋ, ಇನ್ನೇನೋ ಆಗಿ ಅಸಹಜ ಸಾವು ಸಂಭವಿಸಿದೆ, ಮೈಮೇಲೆ ತರಚಿದ ಗಾಯಗಳಿವೆ ಎಂಬಂತೆ ಬಿಂಬಿಸಿ ಪ್ರಕರಣವನ್ನು ಸಮಾಧಿ ಮಾಡಲು ಮುಂದಾಗಿದ್ದಾರೆ.
ಮಾಧ್ಯಮಗಳ ನಿರಂತರ ಪ್ರಯತ್ನ, ಸಾಮಾಜಿಕ, ರಾಜಕೀಯ ಮುಖಂಡರ ಸಕಾಲಿಕ ಮಧ್ಯ ಪ್ರವೇಶದಿಂದ ಅಶ್ರಫ್ ಭಯಾನಕವಾಗಿ ಕೊಲೆಯಾಗಿರುವುದು ಎಲ್ಲರಿಗೂ ಗೊತ್ತಾಗಿದೆ. ಮೂವತ್ತು ಮಂದಿ ಸೇರಿ ಹಲ್ಲೆ ನಡೆಸಿ ಸಾಯುವವರೆಗೂ ಹೊಡೆದು ಕೊಂದಿದ್ದಾರೆ ಎಂಬ ಭೀಕರ ಮಾಹಿತಿ ಹೊರಬಿದ್ದಿದೆ.
ಪೋಲೀಸರ ನಿಷ್ಕ್ರಿಯತೆ ಹಾಗು ಪ್ರಕರಣವನ್ನು ಮುಗಿಸಿ ಹಾಕುವ ಹುನ್ನಾರ ಎಲ್ಲರೆದುರು ಬಯಲಾಗಿದೆ. ಇಷ್ಟೆಲ್ಲಾ ಆಗಿರುವಾಗ ಆ ಅಮಾಯಕ ಮಾನಸಿಕ ಅಸ್ವಸ್ಥ ಪಾಕಿಸ್ತಾನ ಜಿಂದಾಬಾದ್ ಹೇಳಿದ್ದ ಎಂದು ರಾಜ್ಯದ ಗೃಹ ಸಚಿವ ಡಾ ಪರಮೇಶ್ವರ್ ಹೇಳಿಕೆ ಕೊಟ್ಟು ಇನ್ನಷ್ಟು ರಾಡಿ ಎಬ್ಬಿಸಿದ್ದಾರೆ. ಪ್ರಕರಣದ ತನಿಖೆಯ ಹಾದಿ ತಪ್ಪಿಸಲು ಕೊಡುಗೆ ನೀಡಿದ್ದಾರೆ.
ಅಮಾನುಷವಾಗಿ ಹಲ್ಲೆಗೊಳಗಾಗಿ ಕೊಲೆಯಾದವನು ಮಾನಸಿಕ ಅಸ್ವಸ್ಥ ಎಂದು ಮಾಹಿತಿ ಸಿಗದ ಗೃಹ ಸಚಿವರಿಗೆ ಆತ ಪಾಕಿಸ್ತಾನ ಜಿಂದಾಬಾದ್ ಹೇಳಿದ ಎಂಬ ಮಾಹಿತಿ ಮಾತ್ರ ಸಿಕ್ಕಿದ್ದು ಬಹಳ ನಿಗೂಢವಾಗಿದೆ ಎಂದು ಮಂಗಳೂರಿಗರು ಹೇಳುತ್ತಿದ್ದಾರೆ.
ಜಿಲ್ಲೆಯ ಉಸ್ತುವಾರಿ ಸಚಿವರಂತೂ ಎಲ್ಲಿದ್ದಾರೆ ಎಂದೇ ಜನರಿಗೆ ಗೊತ್ತಾಗದ ಪರಿಸ್ಥಿತಿ ಇದೆ. ಅದರ ನಡುವೆ ಕೊಲೆಯಾಗಿ ಎರಡು ದಿನಗಳ ಬಳಿಕ ಅವರು ಕೊಟ್ಟಿರುವ ಹೇಳಿಕೆ ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ. ಕೊಲೆಯಾದ ಅಶ್ರಫ್ ನನ್ನು ಅವರು ಅನ್ಯ ಸಮುದಾಯದವನು ಎಂದು ಹೇಳಿದ್ದಾರೆ. ದಿನೇಶ್ ಗುಂಡೂರಾವ್ ಅವರಿಗೆ ಅಶ್ರಫ್ ಅನ್ಯ ಮತೀಯ ಆಗುವುದು ಹೇಗೆ ಎಂದು ಮಂಗಳೂರಿನ ಜನ ಕೇಳುತ್ತಿದ್ದಾರೆ.
ಈಗ ಕೊಲೆಯಾದ ಅಶ್ರಫ್ ಮೃತದೇಹವನ್ನು ಅವರ ಕುಟುಂಬಿಕರು ಬಂದು ವಯನಾಡ್ ಗೆ ತೆಗೆದುಕೊಂಡು ಹೋಗಿದ್ದಾರೆ. ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿಯವರು ಅಶ್ರಫ್ ಮನೆಗೆ ಭೇಟಿ ಕೊಡ್ತಾರಾ? ಅವರ ಮನೆಯವರಿಗೆ ಸಾಂತ್ವನ ಹೇಳುತ್ತಾರಾ? ಅಶ್ರಫ್ ಕೊಲೆಗಾರರಿಗೆ ಕಾನೂನು ಪ್ರಕಾರ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸುತ್ತಾರಾ?
ಕರ್ನಾಟಕದ ಗೃಹ ಸಚಿವರಿಗೆ ಫೋನ್ ಮಾಡಿ "ನಿಮ್ಮ ರಾಜ್ಯದಲ್ಲಿ ನನ್ನ ಕ್ಷೇತ್ರದ ಮತದಾರನ ಬರ್ಬರ ಕೊಲೆಯಾಗಿದೆ. ಪೊಲೀಸರು ಎರಡು ದಿನಗಳ ಕಾಲ ಅದನ್ನು ಸರಿಯಾಗಿ ತನಿಖೆ ಮಾಡದೆ ನಿರ್ಲಕ್ಷಿಸಿದ್ದಾರೆ. ಅದರ ನಡುವೆ ನೀವು ಕೊಲೆಯಾದವನು ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದ್ದಾನೆ ಎಂದು ಹೇಳಿಕೆ ಕೊಟ್ಟಿದ್ದೀರಿ" ಇದೆಲ್ಲ ಏನು ಎಂದು ಸಂಸದೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕರ್ನಾಟಕ ಸರಕಾರವನ್ನು ಪ್ರಶ್ನಿಸುತ್ತಾರಾ? ಇಷ್ಟೆಲ್ಲಾ ಆಗಿದ್ದರೂ ಮುಖ್ಯಮಂತಿಗಳಾಗಲಿ, ಉಪಮುಖ್ಯಮಂತ್ರಿಗಳಾಗಲಿ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ ಯಾಕೆ ಎಂದು ಪ್ರಿಯಾಂಕಾ ಗಾಂಧಿ ಕೇಳುತ್ತಾರಾ?
ನಾವು ಬಿಜೆಪಿಗಿಂತ ಭಿನ್ನವಾಗಿರ್ತೀವಿ, ನಮ್ಮ ಸರಕಾರ ಜನಪರವಾಗಿರುತ್ತೆ, ಅದರಡಿ ಎಲ್ಲ ಸಮುದಾಯಗಳಿಗೆ ಸಮಾನತೆ ಇರುತ್ತೆ, ನ್ಯಾಯ ಸಿಗುತ್ತೆ, ರಕ್ಷಣೆ ಸಿಗುತ್ತೆ, ಕಾನೂನು ಕೈಗೆತ್ತಿಕೊಳ್ಳುವ ಮತಾಂಧರನ್ನು ನಾವು ಹೆಡೆಮುರಿ ಕಟ್ಟತೀವಿ ಎಂದೆಲ್ಲ ಭರವಸೆ ಕೊಟ್ಟು ನಾವು ಅಧಿಕಾರಕ್ಕೆ ಬಂದಿದ್ದೇವೆ. ನಾನೂ ಅಲ್ಲಿಗೆ ಬಂದು ಸಾಕಷ್ಟು ಭಾಷಣ ಮಾಡಿದ್ದೇನೆ. ಕರ್ನಾಟಕದ ಮುಸ್ಲಿಮರು ಬಿಜೆಪಿ ಮಾತ್ರವಲ್ಲ ಜೆಡಿಎಸ್ ಅನ್ನೂ ಕೈಬಿಟ್ಟು ನಮ್ಮನ್ನು ಆಶೀರ್ವದಿಸಿದ್ದಾರೆ. ಆದರೆ ಅದರ ಬದಲಿಗೆ ನಾವು ಅವರಿಗೆ ಕೊಡ್ತಾ ಇರೋದೇನು ಎಂದು ಪ್ರಿಯಾಂಕಾ ಗಾಂಧಿ ಕರ್ನಾಟಕ ಸರಕಾರವನ್ನು ಕೇಳುತ್ತಾರಾ?
ವಯನಾಡ್ ಕಾಂಗ್ರೆಸ್ ನ ಮುಸ್ಲಿಂ ಕಾರ್ಯಕರ್ತರಿಗೆ ಸಿಗಬೇಕಾದ ಎಂಪಿ ಟಿಕೆಟ್ ಅನ್ನು ತಾನು ಪಡೆದು, ಅಲ್ಲಿನ ಮುಸ್ಲಿಮರ ಬೆಂಬಲ ಪಡೆದು, ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಸಂಸದೆಯಾದ ಪ್ರಿಯಾಂಕಾ ಗಾಂಧಿ ವಕ್ಫ್ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಪಾಸಾಗುವಾಗ ವಿದೇಶದಲ್ಲಿದ್ದರು.
ಈಗಲಾದರೂ ಅವರು ವಿದೇಶದಿಂದ ಬಂದಿದ್ದಾರಾ? ವಕ್ಫ್ ಬಗ್ಗೆ ಮಾತಾಡುವ ರಗಳೆಯೇ ಬೇಡ ಎಂದು ವಿದೇಶದಲ್ಲೇ ಠಿಕಾಣಿ ಹೂಡಿದ್ದಾರಾ? ಅವರು ವಾಪಸ್ ಬಂದಿದ್ದರೆ ವಯನಾಡ್ ಗೆ ಬಂದು ಅಶ್ರಫ್ ಮನೆಗೆ ಭೇಟಿ ಕೊಡಬೇಕು. ಅಶ್ರಫ್ ಕೊಲೆಯಲ್ಲಿ ಭಾಗವಹಿಸಿದ ರೂವಾರಿಯಿಂದ ಹಿಡಿದು ಪ್ರತಿಯೊಬ್ಬ ಆರೋಪಿಗೂ ಕಾನೂನು ಪ್ರಕಾರ ಅತ್ಯಂತ ಗರಿಷ್ಟ ಶಿಕ್ಷೆಯಾಗುವ ಹಾಗೆ ನೋಡಿಕೊಳ್ಳಬೇಕು.
ಅಷ್ಟೂ ಮಾಡದಿದ್ದರೆ ಪ್ರಿಯಾಂಕಾ ಗಾಂಧಿಯಂತಹ ಪ್ರಭಾವೀ ನಾಯಕಿಯನ್ನು ಗೆಲ್ಲಿಸಿದ್ದು ಯಾಕೆ ಎಂದು ವಯನಾಡ್ ಮತದಾರರು ವ್ಯಥೆಪಡುವ ಸ್ಥಿತಿ ನಿರ್ಮಾಣವಾಗುತ್ತದೆ.