'ನನ್ನ ಬದುಕು ಇಲ್ಲೇ ಹೂತುಹೋಗಿದೆ': ಅಮೆರಿಕ–ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ ಕುಟುಂಬದ 12 ಮಂದಿಯನ್ನು ಕಳೆದುಕೊಂಡ ಇರಾನ್ ನ ವ್ಯಕ್ತಿಯ ಕರುಣಾಜನಕ ಕಥೆ
► 20 ದಿನಗಳ ಕಾಲ ಅವಶೇಷಗಳ ನಡುವೆ ಪ್ರೀತಿಪಾತ್ರರಿಗಾಗಿ ಹುಡುಕಾಟ ನಡೆಸಿದ ಹಮೀದ್ ಮಿರ್ಝಾಯಿ ► ಫಾತಿಮ ಕರೀಮ್ ಖಾನ್ – Aljazeera. com ವರದಿ
Photo Credit : aljazeera
'ನನ್ನ ಬದುಕೇ ಇಲ್ಲಿ ಹೂತುಹೋಗಿದೆ. ಬಹುಶಃ ನನ್ನ ಬದುಕಿನ ಯಾವುದಾದರೂ ಒಂದು ತುಣುಕು ಸಿಗಬಹುದೇನೋ ಎಂಬ ಆಸೆಯಿಂದ ಪ್ರತಿದಿನ ಇಲ್ಲಿಗೆ ಬರುತ್ತೇನೆ. ಆದರೆ, ಇಲ್ಲಿ ಏನೂ ಉಳಿದಿಲ್ಲ...' ಇದು ಅಮೆರಿಕ–ಇಸ್ರೇಲ್ನ ಕ್ಷಿಪಣಿ ದಾಳಿಯಲ್ಲಿ ಕುಟುಂಬದ 12 ಸದಸ್ಯರನ್ನು ಕಳೆದುಕೊಂಡ ಇರಾನ್ನ ಹಮೀದ್ ಮಿರ್ಝಾಯಿ ಅವರ ಮನಕಲಕುವ ಮಾತುಗಳು.
ಟೆಹ್ರಾನ್ ನ ವಸತಿ ಕಟ್ಟಡವೊಂದರ ಮೇಲೆ ಮಾರ್ಚ್ 9ರಂದು ನಡೆದ ಭೀಕರ ದಾಳಿಯಲ್ಲಿ ಹಮೀದ್ ಅವರ 26 ವರ್ಷದ ಪತ್ನಿ ಮೊಹಾದೆಸೆಹ್ ಸೇರಿದಂತೆ ಕುಟುಂಬದ 12 ಮಂದಿ ಮೃತಪಟ್ಟಿದ್ದಾರೆ. ಮದುವೆಯಾಗಿ ಒಂದು ವರ್ಷವಷ್ಟೇ ಕಳೆದಿದ್ದ ಈ ಯುವ ದಂಪತಿ ಮಗುವನ್ನು ಪಡೆಯುವ ಕನಸು ಕಂಡಿದ್ದರು. ಆದರೆ, ಕ್ಷಣಮಾತ್ರದಲ್ಲಿ ನಡೆದ ದಾಳಿ ಅವರ ಬದುಕಿನ ಎಲ್ಲ ಕನಸುಗಳನ್ನು ನುಚ್ಚುನೂರು ಮಾಡಿದೆ.
ತಮ್ಮ ಮನೆ, ಕುಟುಂಬ ಹಾಗೂ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವಿನ ಅನುಭವವನ್ನು ಹಮೀದ್ ಅವರು Aljazeera ಜತೆ ಹಂಚಿಕೊಂಡಿದ್ದಾರೆ.
►ಮನೆಯಿಂದ ಹೊರಟ ಐದು ನಿಮಿಷಕ್ಕೆ ದಾಳಿ
'ಬಾಂಬ್ ದಾಳಿ ನಡೆದು ಏಳು ತಿಂಗಳು ಕಳೆದಿವೆ. ಇಂದಿಗೂ ಹಲವು ದಿನಗಳಲ್ಲಿ ನಿದ್ರೆಯಿಂದ ಎಚ್ಚರವಾದಾಗ, ಮತ್ತೆ ನನ್ನ ನಾಶವಾದ ಮನೆಯಲ್ಲೇ ಇದ್ದೇನೆ ಎಂಬ ಭಾವನೆ ಮೂಡುತ್ತದೆ. ನನ್ನ ಪ್ರೀತಿಪಾತ್ರರನ್ನು ಹುಡುಕುತ್ತಾ ಅಲ್ಲಿ ಅಲೆದಾಡುತ್ತಿರುವಂತೆ ಅನಿಸುತ್ತದೆ' ಎಂದು ಹಮೀದ್ ಹೇಳಿದ್ದಾರೆ.
ದಾಳಿಗೆ ತುತ್ತಾದ ಕಟ್ಟಡವನ್ನು ಅವರ ಅಜ್ಜ ಮತ್ತು ತಂದೆಯ ಚಿಕ್ಕಪ್ಪ ನಿರ್ಮಿಸಿದ್ದರು. ಕಟ್ಟಡದಲ್ಲಿನ ಅಪಾರ್ಟ್ಮೆಂಟ್ ಗಳನ್ನು ತಮ್ಮ ಮಕ್ಕಳ ನಡುವೆ ಹಂಚಿಕೊಂಡಿದ್ದರು. ಒಂದು ವರ್ಷದ ಹಿಂದೆ ಮದುವೆಯಾದ ಬಳಿಕ ಹಮೀದ್ ಮತ್ತು ಅವರ ಪತ್ನಿ ಅದೇ ಕಟ್ಟಡದ ಅಪಾರ್ಟ್ಮೆಂಟ್ ಗೆ ಸ್ಥಳಾಂತರಗೊಂಡಿದ್ದರು. ಆಗಷ್ಟೇ ಮಗುವನ್ನು ಪಡೆಯುವ ಸಿದ್ಧತೆಯನ್ನೂ ಆರಂಭಿಸಿದ್ದರು.
'ನಾವಿನ್ನೂ ಯವ್ವನದ ದಿನಗಳಲ್ಲಿದ್ದೆವು. ನಮ್ಮ ಮುಂದೆಯೇ ಇಡೀ ಜೀವನವಿತ್ತು. ಆದರೆ, ಅಷ್ಟರಲ್ಲೇ ಬಾಂಬ್ ದಾಳಿ ನಡೆಯಿತು' ಎಂದು ಅವರು ನೆನಪಿಸಿಕೊಂಡಿದ್ದಾರೆ.
ಮಾರ್ಚ್ 9ರಂದು ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೆಲಸದ ಸ್ಥಳಕ್ಕೆ ಹೋಗಿ ಬರಲೆಂದು ಹಮೀದ್ ಮನೆಯಿಂದ ಹೊರಟಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ ಪತ್ನಿ ಸಂದೇಶ ಕಳುಹಿಸಿ, ವಾಪಸ್ ಬರುವಾಗ ತಲೆನೋವಿಗೆ ಔಷಧ ತರುವಂತೆ ಕೇಳಿದ್ದರು. ಯಾವ ಔಷಧ ತರಬೇಕು ಎಂದು ತಿಳಿದುಕೊಳ್ಳಲು ಪತ್ನಿಗೆ ಕರೆ ಮಾಡಿದಾಗ ಆಕೆಯ ಫೋನ್ ಬ್ಯೂಸಿ ಇತ್ತು. ಅಂದು ಮನೆಗೆ ಅತಿಥಿಗಳು ಬರುವವರಿದ್ದ ಕಾರಣ ಅವರಿಗೂ ಕರೆ ಮಾಡಿದ್ದರು. ಅವರ ಫೋನ್ ಕೂಡ ಬ್ಯೂಸಿ ಇತ್ತು. ಹೀಗಾಗಿ, ಮತ್ತೆ ಪತ್ನಿಗೆ ಕರೆ ಮಾಡಲು ನಿರ್ಧರಿಸಿದ್ದರು.
ಮನೆಯಿಂದ ಐದು ನಿಮಿಷಗಳ ದೂರದಲ್ಲಿದ್ದಾಗ ಸೀಟಿ ಹೊಡೆದಂತಹ ಶಬ್ದ ಕೇಳಿಸಿತು. ಮೊದಲ ಕ್ಷಿಪಣಿ ಅಪ್ಪಳಿಸಿತ್ತು. ಸ್ಫೋಟದ ತೀವ್ರತೆಗೆ ಭೂಮಿ ನಡುಗಿದಂತಾಯಿತು. ತಕ್ಷಣ ಪತ್ನಿಗೆ ಕರೆ ಮಾಡಲು ಪ್ರಯತ್ನಿಸಿದರೂ ಸಂಪರ್ಕ ಸಾಧ್ಯವಾಗಲಿಲ್ಲ. ಬಳಿಕ ಅಜ್ಜ, ತಂದೆ, ತಾಯಿ ಸೇರಿದಂತೆ ಕುಟುಂಬದ ಎಲ್ಲರಿಗೂ ಕರೆ ಮಾಡಿದರು. ಯಾರ ಫೋನ್ ಕೂಡ ಸಂಪರ್ಕಕ್ಕೆ ಸಿಗಲಿಲ್ಲ.
'ಆದರೂ ನಮ್ಮ ಮನೆಗೆ ಏನೂ ಆಗಿರಲಿಕ್ಕಿಲ್ಲ ಎಂದು ಭಾವಿಸಿದ್ದೆ. ನಮ್ಮ ಮನೆಯ ಮೇಲೆ ದಾಳಿ ನಡೆದಿರಲು ಸಾಧ್ಯವೇ ಇಲ್ಲ ಎಂದು ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತಿದ್ದೆ. ಬಹುಶಃ ನೆರೆಹೊರೆಯ ಬೇರೆ ಯಾವುದೋ ಜಾಗಕ್ಕೆ ಕ್ಷಿಪಣಿ ಬಿದ್ದಿರಬಹುದು ಎಂದುಕೊಂಡಿದ್ದೆ. ಹೇಗಾದರೂ ಮಾಡಿ ಮನೆ ತಲುಪಿ, ಕಟ್ಟಡ ಸುರಕ್ಷಿತವಾಗಿದೆಯೇ ಎಂದು ನೋಡಬೇಕೆಂಬ ಹಂಬಲವಷ್ಟೇ ನನ್ನಲ್ಲಿತ್ತು' ಎಂದು ಹೇಳಿದ್ದಾರೆ.
ಆದರೆ, ಕೆಲವೇ ನಿಮಿಷಗಳಲ್ಲಿ ಇನ್ನೂ ಐದು ಕ್ಷಿಪಣಿಗಳು ಅವರ ಮನೆಯ ಮೇಲೆ ಅಪ್ಪಳಿಸಿದ್ದವು.
►ಅಸ್ಥಿಪಂಜರದಂತಾದ ಕಟ್ಟಡ
ಹಮೀದ್ ಮನೆ ತಲುಪಿದಾಗ ನೆರೆಹೊರೆಯವರೆಲ್ಲರೂ ಮನೆಗಳಿಂದ ಹೊರಗೆ ಬಂದಿದ್ದರು. ಆದರೆ, ರಸ್ತೆಯ ಕಡೆಗೆ ಹೆಜ್ಜೆ ಇಡಲು ಅವರಿಗೆ ಧೈರ್ಯ ಸಾಲಲಿಲ್ಲ. ಕ್ಷಿಪಣಿಗಳು ತಮ್ಮ ಮನೆಯ ಮೇಲೆಯೇ ಬಿದ್ದಿರಬಹುದು ಎಂಬ ಆಲೋಚನೆಯೂ ಬಂದಿರಲಿಲ್ಲ. ಆದರೆ, ದೂರದಿಂದಲೇ ನೋಡಿದಾಗ ಕಟ್ಟಡದ ಅಸ್ಥಿಪಂಜರದಂತಹ ರಚನೆ ಮಾತ್ರ ಉಳಿದಿರುವುದು ಗೋಚರಿಸಿತು.
ಮನೆಯ ಬಳಿ ತಲುಪಿದಾಗ ಎಲ್ಲವೂ ಬೆಂಕಿಗೆ ಆಹುತಿಯಾಗಿತ್ತು. ಎರಡನೇ ಮಹಡಿಯಲ್ಲಿದ್ದ ಪತ್ನಿಯನ್ನು ಹುಡುಕಬೇಕೆಂಬುದೊಂದೇ ಯೋಚನೆ ಅವರ ಮನಸ್ಸಿನಲ್ಲಿತ್ತು. ಆದರೆ, ಮೇಲಕ್ಕೆ ಹೋಗಲು ಮೆಟ್ಟಿಲುಗಳೇ ಉಳಿದಿರಲಿಲ್ಲ. ಮೊದಲ ಮಹಡಿಯಲ್ಲಿ ಕೆಲವು ನೆರೆಹೊರೆಯವರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ರೆಡ್ ಕ್ರೆಸೆಂಟ್ ಸಂಸ್ಥೆಯ ಸಿಬ್ಬಂದಿ ಅವರನ್ನು ರಕ್ಷಿಸಲು ನೆರವಾದರು.
'ಹುಡುಕಾಟ ಮುಂದುವರಿಸಿದರೆ ಅವಶೇಷಗಳ ಅಡಿಯಲ್ಲಿ ನನ್ನ ಕುಟುಂಬದವರೂ ಜೀವಂತವಾಗಿ ಸಿಗಬಹುದು ಎಂದು ಭಾವಿಸಿದ್ದೆ. ಆದರೆ, ಯಾರೂ ಸಿಗಲಿಲ್ಲ. ಮೊದಲ ಗಂಟೆಯಲ್ಲಾಗಲಿ, ನಂತರದ ಗಂಟೆಗಳಲ್ಲಾಗಲಿ ಯಾರೂ ಪತ್ತೆಯಾಗಲಿಲ್ಲ. ರಾತ್ರಿ ವೇಳೆಗೆ ಕಟ್ಟಡದಲ್ಲಿ ಬೇರೆ ಯಾರೂ ಸಿಗಲಿಲ್ಲ. ನನ್ನ ಕುಟುಂಬದ 12 ಮಂದಿ ನಾಪತ್ತೆಯಾಗಿದ್ದರು. ಆದರೂ ಆ ಸ್ಥಳವನ್ನು ಬಿಟ್ಟು ಹೋಗಲು ಮನಸ್ಸಾಗಲಿಲ್ಲ' ಎಂದು ಅವರು ಹೇಳಿದ್ದಾರೆ.
►20 ದಿನಗಳ ಕಾಲ ಅವಶೇಷಗಳ ನಡುವೆ ಹುಡುಕಾಟ
ದಾಳಿಯ ರಾತ್ರಿ, ಮರುದಿನ ಮತ್ತು ನಂತರದ ಪ್ರತಿದಿನವೂ ಹಮೀದ್ ತಮ್ಮ ಮನೆಗೆ ಮರಳುತ್ತಿದ್ದರು. ಸತತ 20 ದಿನಗಳ ಕಾಲ ಅವಶೇಷಗಳ ನಡುವೆ, ಕ್ಷಿಪಣಿಗಳು ಅಪ್ಪಳಿಸಿದ ಹಾಗೂ ಸ್ಫೋಟ ಸಂಭವಿಸಿದ ಕುರುಹುಗಳ ನಡುವೆ ತಮ್ಮ ಪ್ರೀತಿಪಾತ್ರರನ್ನು ಹುಡುಕಾಡಿದರು. ಆದರೆ, ಯಾರೂ ಸಿಗಲಿಲ್ಲ.
ದಾಳಿಯಲ್ಲಿ ಅವರ ಪತ್ನಿ ಮೊಹಾದೆಸೆಹ್, ಮನೆಗೆ ಅತಿಥಿಯಾಗಿ ಬಂದಿದ್ದ ಅವರ ಸಹೋದರನ ಪತ್ನಿ, ತಂದೆ-ತಾಯಿ, ಅಜ್ಜ-ಅಜ್ಜಿ, ಅತ್ತೆಯ ಪತಿ ಮತ್ತು ಅವರ ಮಗಳು, ಚಿಕ್ಕಪ್ಪ, ತಂದೆಯ ಸೋದರಸಂಬಂಧಿ, ಅವರ ಪತ್ನಿ ಹಾಗೂ ಮಗು ಮೃತಪಟ್ಟಿದ್ದರು. ಒಟ್ಟಾರೆ ಕುಟುಂಬದ 12 ಸದಸ್ಯರನ್ನು ಅವರು ಕಳೆದುಕೊಂಡಿದ್ದಾರೆ.
'ನನ್ನ ಕುಟುಂಬದ 12 ಮಂದಿ ಮೃತಪಟ್ಟಿದ್ದಾರೆ. ಆದರೂ ಜನರು ನನ್ನನ್ನು ನೀವು ಹೇಗಿದ್ದೀರಿ ಎಂದು ಕೇಳುತ್ತಾರೆ' ಎಂದು ಹಮೀದ್ ನೋವು ತೋಡಿಕೊಂಡಿದ್ದಾರೆ.
►ದಿನ ಕಳೆದಂತೆ ದುಃಖ ಹೆಚ್ಚುತ್ತಿದೆ
'ಅವರ ನೆನಪು ನನ್ನನ್ನು ಕಾಡುತ್ತಿದೆ. ದಿನ ಕಳೆದಂತೆ ನೆನಪುಗಳು ಇನ್ನಷ್ಟು ಹೆಚ್ಚಾಗುತ್ತಿವೆ. ಕಾಲ ಕಳೆದಂತೆ ದುಃಖ ಕಡಿಮೆಯಾಗಿ ಸ್ವಲ್ಪ ನೆಮ್ಮದಿ ಸಿಗಬಹುದು ಎಂದು ಆರಂಭದಲ್ಲಿ ಭಾವಿಸಿದ್ದೆ. ಆದರೆ, ಹಾಗಾಗಲಿಲ್ಲ. ದಿನ ಕಳೆದಂತೆ ನನ್ನ ಸ್ಥಿತಿ ಮತ್ತಷ್ಟು ಹದಗೆಡುತ್ತಿದೆ' ಎಂದು ಅವರು ಹೇಳಿದ್ದಾರೆ.
ಹಮೀದ್ ಕುಟುಂಬದ ಏಕೈಕ ಮಗ. ಅವರಿಗೆ ಸಹೋದರ ಅಥವಾ ಸಹೋದರಿಯರು ಇರಲಿಲ್ಲ. ಆದರೆ, ಜೀವನದುದ್ದಕ್ಕೂ ಒಟ್ಟಿಗೆ ವಾಸಿಸುತ್ತಿದ್ದ ದೊಡ್ಡ ವಿಸ್ತೃತ ಕುಟುಂಬವಿತ್ತು. ಎಲ್ಲರೂ ಪಕ್ಕಪಕ್ಕದಲ್ಲೇ ವಾಸಿಸುತ್ತಿದ್ದರು. ಕುಟುಂಬದ ಸದಸ್ಯರೊಂದಿಗೆ ವೃದ್ಧಾಪ್ಯವನ್ನೂ ಕಳೆಯುವ ಕನಸು ಅವರದಾಗಿತ್ತು.
"ನನ್ನ ವೃದ್ಧಾಪ್ಯದಲ್ಲೂ ನನ್ನೊಂದಿಗೆ ಇರುತ್ತಾರೆ ಎಂದುಕೊಂಡಿದ್ದ ದೊಡ್ಡ ಕುಟುಂಬ ನನ್ನದಾಗಿತ್ತು. ನಮ್ಮ ಕುಟುಂಬದ ಎಲ್ಲರೂ ಜೀವನದುದ್ದಕ್ಕೂ ಒಟ್ಟಿಗೆ, ಅಕ್ಕಪಕ್ಕದಲ್ಲೇ ವಾಸಿಸುತ್ತಿದ್ದೆವು. ಆದರೆ, ಈಗ ಅವರೆಲ್ಲರೂ ಇಲ್ಲವಾಗಿದ್ದಾರೆ. ನಮ್ಮ ಕುಟುಂಬದ ಸದಸ್ಯರ ನಡುವೆ ಇದ್ದ ಪ್ರೀತಿಯೂ ಕಣ್ಮರೆಯಾಗಿದೆ."
'ಈಗ ಉಳಿದಿರುವುದು ನಾನು ಒಬ್ಬನೇ. ನನ್ನ ಕುಟುಂಬದಲ್ಲಿ ಬೇರೆ ಯಾರೂ ಇಲ್ಲ. ನಾನು ಸಂಪೂರ್ಣವಾಗಿ ಒಂಟಿಯಾಗಿದ್ದೇನೆ' ಎಂದು ಅವರು ಹೇಳಿದ್ದಾರೆ.
► ಯುದ್ಧದಿಂದ ಏನು ಸಿಗುತ್ತದೆ?
ಯುದ್ಧದಿಂದ ಒಳ್ಳೆಯದಾಗುತ್ತದೆ ಎಂದು ನಂಬುವವರಿಗೆ ತಮ್ಮ ಬದುಕೇ ಸಾಕ್ಷಿ ಎಂದು ಹಮೀದ್ ಹೇಳಿದ್ದಾರೆ.
'ಯುದ್ಧ ಒಳ್ಳೆಯದು ಎಂದು ಭಾವಿಸುವವರು ನನಗಾದ ದುರಂತವನ್ನು ನೋಡಲಿ. ಬಳಿಕ ತಮ್ಮನ್ನೇ ಒಂದು ಪ್ರಶ್ನೆ ಕೇಳಿಕೊಳ್ಳಲಿ: ಇದರಲ್ಲಿ ಒಳ್ಳೆಯದು ಅಂತ ಏನಿದೆ?' ಎಂದು ಅವರು ಪ್ರಶ್ನಿಸಿದ್ದಾರೆ.
"ನಾನು ಹುಟ್ಟಿ ಬೆಳೆದ ಕಟ್ಟಡವದು. ನನ್ನ ತಂದೆಯೂ ಅದೇ ಕಟ್ಟಡದಲ್ಲಿ ಹುಟ್ಟಿದ್ದರು. ಮುಂದೆ ನಮ್ಮ ಮಗು ಕೂಡ ಅದೇ ಮನೆಯಲ್ಲಿ ಹುಟ್ಟಬೇಕೆಂದು ನಾವು ಕನಸು ಕಂಡಿದ್ದೆವು. ಆದರೆ, ಕ್ಷಣಮಾತ್ರದಲ್ಲಿ ಆ ಕಟ್ಟಡವೇ ಧ್ವಂಸವಾಯಿತು. ಮನೆಯ ಜತೆಗೆ ನನ್ನ ಕುಟುಂಬವೂ ನಾಶವಾಯಿತು. ಅವರ ನೆನಪು ಕಾಡಿದಾಗ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎಂಬುದೇ ನನಗೆ ತೋಚುವುದಿಲ್ಲ" ಎಂದು ಹಮೀದ್ ನೋವು ತೋಡಿಕೊಂಡಿದ್ದಾರೆ.
►ಪ್ರತಿದಿನ ಅವಶೇಷಗಳ ಬಳಿಗೆ ಭೇಟಿ
ಮನೆ ನಾಶವಾಗಿ ಏಳು ತಿಂಗಳು ಕಳೆದಿದ್ದರೂ ಹಮೀದ್ ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆ ಜಾಗವನ್ನು ಬಿಟ್ಟು ಹೋಗಲು ಅವರ ಮನಸ್ಸು ಒಪ್ಪುತ್ತಿಲ್ಲ.
'ನನ್ನ ಬದುಕೇ ಇಲ್ಲಿ ಹೂತುಹೋಗಿದೆ ಎಂದು ಅನಿಸುತ್ತದೆ. ನನ್ನ ಬದುಕಿನ ಯಾವುದಾದರೂ ಒಂದು ತುಣುಕು ಸಿಗಬಹುದೇನೋ ಎಂಬ ಆಸೆಯಿಂದ ಪ್ರತಿದಿನ ಇಲ್ಲಿಗೆ ಬರುತ್ತೇನೆ. ಆದರೆ, ಇಲ್ಲಿ ಏನೂ ಉಳಿದಿಲ್ಲ' ಎಂದು ಹೇಳಿದ್ದಾರೆ.
ತಮ್ಮ ಜೀವನದಲ್ಲಿ ಮಾಡಿದ ಪ್ರತಿಯೊಂದು ಕೆಲಸವೂ ಕುಟುಂಬದ ಸಂತೋಷಕ್ಕಾಗಿ ಆಗಿತ್ತು. ಆದರೆ, ಈಗ ಯಾರಿಗಾಗಿ ಏನನ್ನಾದರೂ ಮಾಡಬಹುದೋ ಅಂತಹ ಕುಟುಂಬವೇ ತಮ್ಮ ಬಳಿ ಇಲ್ಲ ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.
'ನಾನು ಏನು ಯೋಚಿಸುತ್ತಿದ್ದೇನೆ ಅಥವಾ ನನಗೆ ಹೇಗನಿಸುತ್ತಿದೆ ಎಂದು ಯಾರಾದರೂ ಕೇಳಿದರೆ ಉತ್ತರಿಸಲು ನನ್ನ ಬಳಿ ಮಾತುಗಳೇ ಇರುವುದಿಲ್ಲ. ನನ್ನ ಜೀವನದಲ್ಲಿ ನಾನು ಮಾಡಿದ ಪ್ರತಿಯೊಂದು ಕೆಲಸವೂ ನನ್ನ ಕುಟುಂಬದ ಸಂತೋಷಕ್ಕಾಗಿ. ಈಗ, ನಾನು ಯಾರಿಗಾಗಿ ಏನನ್ನಾದರೂ ಮಾಡಬಹುದೋ ಅಂತಹ ಕುಟುಂಬವೇ ನನ್ನ ಬಳಿ ಇಲ್ಲ.
'ಪ್ರತಿದಿನ ನನ್ನನ್ನೇ ಕೇಳಿಕೊಳ್ಳುತ್ತೇನೆ: ನಾನು ಇನ್ನೂ ಏಕೆ ಬದುಕಿದ್ದೇನೆ? ಇದಕ್ಕೆ ನನ್ನ ಬಳಿ ಉತ್ತರವಿಲ್ಲ.
'ನನ್ನ ಕುಟುಂಬದವರು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ. ಆದರೆ, ನಾನು ಇನ್ನೂ ಹೊರಗೆ ಓಡಾಡಿಕೊಂಡಿದ್ದೇನೆ. ಇದೊಂದನ್ನು ಹೊರತುಪಡಿಸಿದರೆ ನಾನೂ ಅವರಂತೆಯೇ ಸತ್ತಿದ್ದೇನೆ. ವ್ಯತ್ಯಾಸವಿಷ್ಟೇ, ಸತ್ತವರ ಪಟ್ಟಿಯಲ್ಲಿ ನನ್ನ ಹೆಸರಿಲ್ಲ. ಅಷ್ಟೇ' ಎಂದು ಹಮೀದ್ ತಮ್ಮ ಬದುಕಿನ ದುರಂತವನ್ನು ವಿವರಿಸಿದ್ದಾರೆ.
ಸೌಜನ್ಯ: Aljazeera.com