ಕುಸಿಯುತ್ತಿರುವ ರೀಚ್, ಸೈಲೆಂಟ್ ಬ್ಯಾನ್: ಇನ್ಸ್ಟಾಗ್ರಾಮ್ ನಲ್ಲಿ ತೀವ್ರಗೊಂಡ ಕಂಟೆಂಟ್ ಬ್ಲಾಕ್ ಪ್ರಕ್ರಿಯೆ
►ಖುಷಿ ಮೆಹ್ರೋತ್ರಾ - newslaundry. com ವರದಿ
Photo: PTI
48 ಗಂಟೆಗಳಲ್ಲಿ ಎಂಟು ಇನ್ಸ್ಟಾಗ್ರಾಮ್ ಪೋಸ್ಟ್ ಗಳು ಡಿಲೀಟ್! 7,72,000 ಫಾಲೋವರ್ಸ್ ಗಳನ್ನು ಹೊಂದಿರುವ ಸ್ವತಂತ್ರ ಪತ್ರಕರ್ತ ಮತ್ತು ಶಿಕ್ಷಣತಜ್ಞ ರಾಘವ್ ತ್ರಿವೇದಿ ಅವರಿಗೆ ತಮ್ಮ ವೀಡಿಯೊಗಳನ್ನು ಸಾಲಾಗಿ ತೆಗೆದುಹಾಕಿದಾಗ, 'ನನ್ನ ವಿಷಯಗಳನ್ನು ಯಾಕೆ ತೆಗೆದುಹಾಕಲಾಗುತ್ತಿದೆ?' ಎಂಬ ಪ್ರಶ್ನೆ ಕಾಡತೊಡಗಿದೆ.
"ನನ್ನ ಎಂಟು ವೀಡಿಯೊಗಳನ್ನು ತೆಗೆದುಹಾಕಲಾಗಿದೆ. ನಾನು ಯಾವುದೇ ವೀಡಿಯೊ ಅಪ್ಲೋಡ್ ಮಾಡಿದರೂ ಅದು 30ರಿಂದ 35 ನಿಮಿಷಗಳಲ್ಲಿ ಭಾರತದಲ್ಲಿ ಬ್ಲಾಕ್ ಆಗುತ್ತದೆ. ನಿನ್ನೆ ನಾನು ಆರು ವೀಡಿಯೊಗಳನ್ನು ಅಪ್ಲೋಡ್ ಮಾಡಿದೆ. ಇಂದು ಇನ್ನೆರಡು ವೀಡಿಯೊಗಳನ್ನು ಅಪ್ಲೋಡ್ ಮಾಡಲು ಯತ್ನಿಸಿದೆ. ಆದರೆ ಅವುಗಳನ್ನೂ ಬ್ಲಾಕ್ ಮಾಡಲಾಗಿದೆ" ಎಂದು ತ್ರಿವೇದಿ ನ್ಯೂಸ್ಲಾಂಡ್ರಿಗೆ ತಿಳಿಸಿದ್ದಾರೆ.
ಸ್ಪಷ್ಟ ವಿವರಣೆಯಿಲ್ಲದೆ ಮೆಟಾ ಪ್ಲಾಟ್ಫಾರ್ಮ್ ಗಳಲ್ಲಿ ತಮ್ಮ ಪೋಸ್ಟ್ ಗಳನ್ನು ತೆಗೆದುಹಾಕಲಾಗಿದೆ ಮತ್ತು ಖಾತೆಗಳನ್ನು ನಿಯಂತ್ರಿಸಲಾಗಿದೆ ಎಂದು ದೂರಿದ ಹಲವು ಸ್ವತಂತ್ರ ಪತ್ರಕರ್ತರು, ಕಂಟೆಂಟ್ ಕ್ರಿಯೇಟರ್ ಗಳು ಮತ್ತು ಮಾಧ್ಯಮ ಸಂಸ್ಥೆಗಳಲ್ಲಿ ತ್ರಿವೇದಿ ಕೂಡ ಒಬ್ಬರು. ಈ ವರದಿಯಲ್ಲಿ 'ನಿಯಂತ್ರಿತ' (restricted) ಅಥವಾ 'ಭಾರತದಲ್ಲಿ ಬ್ಲಾಕ್ ಮಾಡಲಾದ' ಪೋಸ್ಟ್ ಗಳನ್ನು ಭಾರತದಲ್ಲಿರುವ ಬಳಕೆದಾರರು ವೀಕ್ಷಿಸಲು ಸಾಧ್ಯವಿಲ್ಲ.
'ಸಾಫ್ಟ್ವೇರ್ ಫ್ರೀಡಂ ಲಾ ಸೆಂಟರ್' (SFLC.in) ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ಮೆಟಾ ಪ್ಲಾಟ್ಫಾರ್ಮ್ ಗಳು, ಎಕ್ಸ್, ರೆಡ್ಡಿಟ್ ಮತ್ತು ಯೂಟ್ಯೂಬ್ ಗಳಲ್ಲಿ ಒಟ್ಟು 268 ಪೋಸ್ಟ್ ನಿಯಂತ್ರಣ ಹಾಗೂ 83 ಖಾತೆ ನಿಯಂತ್ರಣ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಇನ್ಸ್ಟಾಗ್ರಾಮ್ ನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ನಿಯಂತ್ರಣಗಳು ವರದಿಯಾಗಿದ್ದು, 174 ಪೋಸ್ಟ್ ಗಳು ಮತ್ತು 59 ಖಾತೆಗಳನ್ನು ನಿಯಂತ್ರಿಸಲಾಗಿದೆ ಎಂದು SFLC.in ವರದಿ ತಿಳಿಸಿದೆ.
ನ್ಯೂಸ್ ಲಾಂಡ್ರಿಯು ಸಂತ್ರಸ್ತ ಪತ್ರಕರ್ತರು, ಕ್ರಿಯೇಟರ್ ಗಳು ಮತ್ತು ಮಾಧ್ಯಮ ಸಂಸ್ಥೆಗಳೊಂದಿಗೆ ಮಾತನಾಡಿ, ತೆಗೆದುಹಾಕಲಾದ ವಿಷಯಗಳನ್ನು ಪರಿಶೀಲಿಸಿದೆ. ಜೊತೆಗೆ, ಪ್ಲಾಟ್ಫಾರ್ಮ್ ಗಳು ನೀಡಿದ ಕಾರಣಗಳು, ಕೆಲಸದ ಮೇಲಿನ ಪರಿಣಾಮ ಮತ್ತು ಅವರಿಗಿರುವ ಪರಿಹಾರದ ಮಾರ್ಗಗಳನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದೆ.
►ಜುಲೈನಲ್ಲೂ ಮೆಟಾದಿಂದ ಪೋಸ್ಟ್ ಗಳ ಡಿಲೀಟ್ ನಡೀತಿತ್ತು. ಹಾಗಾದರೆ ಅಕ್ಟೋಬರ್ ನಲ್ಲಿ ಬದಲಾಗಿದ್ದೇನು?
SFLC.inನ ಸ್ವಯಂಸೇವಕ ಕಾನೂನು ಸಲಹೆಗಾರ್ತಿ ಆಂಜೆಲಾ ಥಾಮಸ್ ನ್ಯೂಸ್ಲಾಂಡ್ರಿ ಜತೆ ಮಾತನಾಡಿದ್ದು, "ಕಾಕ್ರೋಚ್ ಜನತಾ ಪಾರ್ಟಿಯ (CJP) ಮೊದಲ ಪ್ರತಿಭಟನೆ ಮುಗಿದ ನಂತರ ಜುಲೈನಲ್ಲೂ ಪೋಸ್ಟ್ ಗಳನ್ನು ತೆಗೆದುಹಾಕಲಾಗಿತ್ತು. ಆದರೆ ಈ ತಿಂಗಳು ಪೋಸ್ಟ್ ಡಿಲೀಟ್ ಮಾಡುವ ಅಲೆ ಹತ್ತಾರು ಪಟ್ಟು ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ನೀಡಲಾದ ಪ್ರತಿಭಟನೆಯ ಕರೆಗಳನ್ನೂ ಸಹ ತೆಗೆದುಹಾಕಲಾಗಿದೆ" ಎಂದು ತಿಳಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲೇ ಅಕ್ಟೋಬರ್ ತಿಂಗಳ ಈ ಬ್ಲಾಕಿಂಗ್ ಅಲೆ ಕಾಣಿಸಿಕೊಂಡಿದೆ.
SFLC.in ನ್ಯೂಸ್ಲಾಂಡ್ರಿಯೊಂದಿಗೆ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಜುಲೈ 1ರಿಂದ ಜುಲೈ 31ರ ನಡುವೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಎಕ್ಸ್ ಪ್ಲಾಟ್ಫಾರ್ಮ್ ಗಳಲ್ಲಿ ಒಟ್ಟು 51 ಪೋಸ್ಟ್ ಗಳನ್ನು ತೆಗೆದುಹಾಕಲಾಗಿತ್ತು. ಆದರೆ ಅಕ್ಟೋಬರ್ ಒಂದೇ ತಿಂಗಳಲ್ಲಿ ಇನ್ಸ್ಟಾಗ್ರಾಮ್ ಒಂದರಲ್ಲೇ 174 ಪೋಸ್ಟ್ ಗಳನ್ನು ತೆಗೆದುಹಾಕಲಾಗಿದೆ. ಇದು ಜುಲೈನಲ್ಲಿ ಮೂರೂ ಪ್ಲಾಟ್ಫಾರ್ಮ್ ಗಳಿಂದ ತೆಗೆದುಹಾಕಲಾದ ಒಟ್ಟು ಪೋಸ್ಟ್ ಗಳಿಗಿಂತ ಮೂರು ಪಟ್ಟು ಹೆಚ್ಚಾಗಿದೆ.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಎಪ್ಸ್ಟೀನ್ ಫೈಲ್ಸ್ ಮತ್ತು ಅಂಕಿತಾ ಭಂಡಾರಿ ಕೊಲೆ ಪ್ರಕರಣ ಸೇರಿದಂತೆ ಇತರ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪೋಸ್ಟ್ ಗಳನ್ನೂ ತೆಗೆದುಹಾಕುತ್ತಿರುವುದನ್ನು SFLC.in ಗಮನಿಸಿದೆ ಎಂದು ಥಾಮಸ್ ಹೇಳಿದ್ದಾರೆ.
►ಖಾತೆಗಳ ಮೇಲೆ ನಿಯಂತ್ರಣ, ವೀಕ್ಷಕರನ್ನು ಕಳೆದುಕೊಂಡ ಕ್ರಿಯೇಟರ್ ಗಳು
ಇನ್ಸ್ಟಾಗ್ರಾಮ್ ನಲ್ಲಿ 5,66,000 ಫಾಲೋವರ್ಸ್ ಗಳನ್ನು ಹೊಂದಿರುವ 'ಮೊಲಿಟಿಕ್ಸ್' (Molitics) ಎಂಬ ಡಿಜಿಟಲ್ ಮಾಧ್ಯಮ ಸಂಸ್ಥೆಯು ಈ ವರ್ಷ ಮೆಟಾ ಪ್ಲಾಟ್ಫಾರ್ಮ್ ಗಳಲ್ಲಿ ಸರಣಿ ನಿಯಂತ್ರಣಗಳನ್ನು ಎದುರಿಸಿದೆ. ಮಾರ್ಚ್ ತಿಂಗಳಲ್ಲಿ ಇದರ ಫೇಸ್ಬುಕ್ ಪೇಜ್ ನಿಯಂತ್ರಿಸಲಾಗಿತ್ತು. ಅಕ್ಟೋಬರ್ 10ರಂದು ಇದರ ಇನ್ಸ್ಟಾಗ್ರಾಮ್ ಪೇಜ್ ಅನ್ನು ಭಾರತದಲ್ಲಿ ಬ್ಲಾಕ್ ಮಾಡಲಾಗಿತ್ತು.
ಕೆಲವು ದಿನಗಳ ನಂತರ ಪೇಜ್ ಅನ್ನು ಯಥಾಸ್ಥಿತಿಗೆ ತರಲಾಯಿತು ಎಂದು ಮೊಲಿಟಿಕ್ಸ್ ವರದಿಗಾರ್ತಿ ಗೀತಾಂಜಲಿ ದುಬೆ ತಿಳಿಸಿದ್ದಾರೆ. ಆದರೆ, ಸಂಸ್ಥೆಯ ಹಿನ್ನೆಲೆಯಲ್ಲಿ ಕೆಲಸ ಮಾಡುವ ಸ್ವತಂತ್ರ ಪತ್ರಕರ್ತರ ವೈಯಕ್ತಿಕ ಖಾತೆಗಳ ಮೇಲೆಯೂ ಈ ನಿಯಂತ್ರಣಗಳು ಪರಿಣಾಮ ಬೀರಿವೆ.
ದುಬೆ ಅವರ ವೈಯಕ್ತಿಕ ಇನ್ಸ್ಟಾಗ್ರಾಮ್ ಖಾತೆಯನ್ನು ಅಕ್ಟೋಬರ್ 23ರಂದು ಭಾರತದಲ್ಲಿ ನಿಯಂತ್ರಿಸಲಾಗಿತ್ತು ಹಾಗೂ ಅಕ್ಟೋಬರ್ 30ರ ರಾತ್ರಿ ಮರುಸ್ಥಾಪಿಸಲಾಯಿತು. ವೀಡಿಯೊ ಜರ್ನಲಿಸ್ಟ್ ಆಗಿ ಕಷ್ಟಪಟ್ಟು ಒಂದೂವರೆ ವರ್ಷದಲ್ಲಿ 1,12,000 ಫಾಲೋವರ್ಸ್ ಗಳನ್ನು ಗಳಿಸಿದ್ದಾಗಿ ಅವರು ಹೇಳಿದ್ದಾರೆ.
"ನಾನೊಬ್ಬ ವೀಡಿಯೊ ಜರ್ನಲಿಸ್ಟ್. ನನ್ನ ವರದಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಸಾರವಾಗುತ್ತವೆ. ಇನ್ಸ್ಟಾಗ್ರಾಮ್ ನಲ್ಲೇ ಅತಿ ಹೆಚ್ಚು ವೀಕ್ಷಕರಿದ್ದಾರೆ. ಆದರೆ, ಖಾತೆ ಬ್ಲಾಕ್ ಆದಾಗ ಕೇವಲ 2,500 ಫಾಲೋವರ್ಸ್ ಗಳಿರುವ ಬ್ಯಾಕಪ್ ಖಾತೆಯಲ್ಲಿ ನನ್ನ ವರದಿಗಳನ್ನು ತೋರಿಸಬೇಕಾಯಿತು. ನನ್ನ ಕೆಲಸವು ಹೆಚ್ಚಿನ ಜನರನ್ನು ತಲುಪುವ ಮಾರ್ಗವೇ ಇಲ್ಲದಂತಾಯಿತು" ಎಂದು ಖಾತೆ ಬ್ಲಾಕ್ ಆಗಿದ್ದಾಗ ಅವರು ಅಳಲು ತೋಡಿಕೊಂಡಿದ್ದರು. ಜೊತೆಗೆ, ವೀಕ್ಷಕರ ನಂಬಿಕೆಯನ್ನು ಮತ್ತೆ ಗಳಿಸುವುದು ಕಷ್ಟ ಎಂದಿದ್ದರು.
ತಮ್ಮ ಮುಖ್ಯ ಖಾತೆಯನ್ನು ಮರುಸ್ಥಾಪಿಸಲು ನೆರವು ಕೋರಿ ಅವರು 'ಇಂಟರ್ನೆಟ್ ಫ್ರೀಡಂ ಫೌಂಡೇಶನ್' ಅನ್ನು ಸಂಪರ್ಕಿಸಿದ್ದರು.
ವೀಡಿಯೊ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ವೀಡಿಯೊ ಬ್ಲಾಕ್ ಎದುರಿಸುತ್ತಿರುವ ರಾಘವ್ ತ್ರಿವೇದಿ ಅವರಿಗೆ ವೀಕ್ಷಕರ ಸಂಖ್ಯೆಯ ಮೇಲಾದ ಪರಿಣಾಮ ಗಂಭೀರವಾಗಿದೆ. ಅಕ್ಟೋಬರ್ ತಿಂಗಳಲ್ಲಿ ಅವರ ಇನ್ಸ್ಟಾಗ್ರಾಮ್ ರೀಚ್ 100 ಮಿಲಿಯನ್ನಿಂದ (10 ಕೋಟಿ) ನೇರವಾಗಿ 30 ಮಿಲಿಯನ್ಗೆ (3 ಕೋಟಿ) ಕುಸಿದಿದೆ.
ತಕ್ಷಣದ ಬ್ಲಾಕ್ಗಳ ಹೊರತಾಗಿ, ಪದೇ ಪದೇ ಪೋಸ್ಟ್ ಗಳನ್ನು ಡಿಲೀಟ್ ಮಾಡುವುದರಿಂದ ಮುಂದಿನ ವೀಡಿಯೊಗಳನ್ನು ಪ್ಲಾಟ್ಫಾರ್ಮ್ ಹಂಚಿಕೊಳ್ಳುವ (Algorithm) ವಿಧಾನದ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಅವರು ಶಂಕಿಸಿದ್ದಾರೆ.
"ನಿಮ್ಮ ಖಾತೆಗೆ ಸ್ಟ್ರೈಕ್ಗಳು ಬಂದಾಗ ಮತ್ತು ವೀಡಿಯೊಗಳನ್ನು ಸತತವಾಗಿ ತೆಗೆದುಹಾಕಿದಾಗ, ನಿಮ್ಮ ತಲುಪುವಿಕೆ ಕುಸಿಯುತ್ತದೆ. ಆಲ್ಗರಿದಮ್ ನಿಮ್ಮ ವೀಡಿಯೊಗಳನ್ನು ಬ್ಲಾಕ್ ಮಾಡಲಾಗಿದೆ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಬದಲಿಗೆ, ನಿಮ್ಮ ಕೊನೆಯ ಎಂಟು ವೀಡಿಯೊಗಳು ಒಂದು ಗಂಟೆಯಲ್ಲಿ ಕೇವಲ 20,000, 30,000 ಅಥವಾ 40,000 ವೀಕ್ಷಣೆಗಳನ್ನು ಮಾತ್ರ ಪಡೆದಿವೆ ಎಂಬುದನ್ನಷ್ಟೇ ಪರಿಗಣಿಸುತ್ತದೆ. ಸಾಮಾನ್ಯವಾಗಿ ನನ್ನ ವೀಡಿಯೊಗಳು 6 ಲಕ್ಷ, 7 ಲಕ್ಷ, 1 ಮಿಲಿಯನ್ ಅಥವಾ 2 ಮಿಲಿಯನ್ ವೀಕ್ಷಣೆಗಳನ್ನು ಪಡೆಯುತ್ತಿದ್ದವು" ಎಂದು ಅವರು ಹೇಳಿದ್ದಾರೆ.
►ಯಾವ ರೀತಿಯ ವಿಷಯಗಳನ್ನು ಡಿಲೀಟ್ ಮಾಡಲಾಗುತ್ತಿದೆ?
ಕಾಕ್ರೋಚ್ ಜನತಾ ಪಾರ್ಟಿ (CJP)ಯ ಮೊದಲ ಪ್ರತಿಭಟನೆಯ ಸಮಯದಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊ ಮಾಡಲು ಪ್ರಾರಂಭಿಸಿದ ಕಂಟೆಂಟ್ ಕ್ರಿಯೇಟರ್ ಆಲ್ಫಾ ವಿಶಾಲ್, ತಮ್ಮ ಆರು ವೀಡಿಯೊಗಳನ್ನು ಡಿಲೀಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. "ಪ್ರಧಾನಿ ಮೋದಿಯವರ ಹೆಸರಿರುವ ವೀಡಿಯೊಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ತೋರುತ್ತದೆ" ಎಂದು ಅವರು ಹೇಳಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈಗ ಲಭ್ಯವಿಲ್ಲದ ಎರಡು ವೀಡಿಯೊಗಳನ್ನು ವಿಶಾಲ್ ನ್ಯೂಸ್ಲಾಂಡ್ರಿಯೊಂದಿಗೆ ಹಂಚಿಕೊಂಡಿದ್ದಾರೆ. ಒಂದರಲ್ಲಿ, ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ತೆಗೆದುಹಾಕಿರುವುದರ ಬಗ್ಗೆ ಅವರು ಚರ್ಚಿಸಿದ್ದರು. ಆ ವೀಡಿಯೊದ ಆರಂಭದಲ್ಲಿ, "ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಎಷ್ಟು ಹೆದರಿದ್ದಾರೆಂದರೆ, ಅವರು ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದಲೇ ತೆಗೆದುಹಾಕಿದ್ದಾರೆ" ಎಂದಿತ್ತು.
ಇನ್ನೊಂದು ವೀಡಿಯೊದಲ್ಲಿ, ಮಾಜಿ ಕ್ರಿಕೆಟಿಗ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದ ಯೂಸುಫ್ ಪಠಾಣ್ ಅವರಿಗೆ ವಡೋದರಾದಲ್ಲಿನ 978 ಚದರ ಮೀಟರ್ ಜಮೀನಿನ ದೀರ್ಘಕಾಲದ ವಿವಾದವನ್ನು ಬಗೆಹರಿಸಲು ಗುಜರಾತ್ ಸರಕಾರ ವಿಶೇಷ ಜಮೀನು ಮಂಜೂರಾತಿಗೆ ಅನುಮೋದನೆ ನೀಡಿದ್ದರ ಬಗ್ಗೆ ಚರ್ಚಿಸಿದ್ದರು.
13,500 ಫಾಲೋವರ್ಸ್ ಗಳನ್ನು ಹೊಂದಿರುವ ತಮ್ಮ ಖಾತೆಯ ರೀಚ್ ನಲ್ಲಿ ಯಾವುದೇ ಕುಸಿತ ಕಂಡಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಆ ವೀಡಿಯೊಗಳನ್ನು ಮತ್ತೆ ಅಪ್ಲೋಡ್ ಮಾಡುವುದು ಅಪಾಯಕಾರಿ.
"ಡಿಲೀಟ್ ಆದ ಈ ವೀಡಿಯೊಗಳನ್ನು ನಾನು ಮತ್ತೆ ನನ್ನ ಪೇಜ್ ನಲ್ಲಿ ಅಪ್ಲೋಡ್ ಮಾಡಿದರೆ, ಮೆಸೇಜಿಂಗ್ ಮತ್ತು ಲೈವ್ ಬರುವ ಸೌಲಭ್ಯಗಳನ್ನು ಇನ್ಸ್ಟಾಗ್ರಾಮ್ ನಿಷ್ಕ್ರಿಯಗೊಳಿಸುವಂತಹ ನಿಯಂತ್ರಣಗಳನ್ನು ಹೇರುತ್ತದೆ" ಎಂದು ಅವರು ತಿಳಿಸಿದ್ದಾರೆ.
ಈ ರೀತಿ ಪೋಸ್ಟ್ ತೆಗೆದುಹಾಕುವಿಕೆಯು ಕೇವಲ ಸರಕಾರದ ವಿರುದ್ಧದ ವಿಷಯಗಳಿಗೆ ಮಾತ್ರ ಸೀಮಿತವಾಗಿಲ್ಲ; ಇತರ ಪೋಸ್ಟ್ ಗಳ ಮೇಲೆಯೂ ಪರಿಣಾಮ ಬೀರಿದೆ.
ಕಂಟೆಂಟ್ ಕ್ರಿಯೇಟರ್ ಅಮಿತ್ ಕಿಲ್ಹೋರ್, ತಾವು ಜನವರಿ 31ರಂದು ಪೋಸ್ಟ್ ಮಾಡಿದ್ದ ರೀಲ್ಸ್ವೊಂದನ್ನು ಈ ತಿಂಗಳು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ. ಎಪ್ಸ್ಟೀನ್ ಫೈಲ್ಸ್ ಗೆ ಸಂಬಂಧಿಸಿದ ಚರ್ಚೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಬಂದಿದ್ದ ಸನ್ನಿವೇಶವನ್ನು ಆ ವೀಡಿಯೊ ವಿವರಿಸಿತ್ತು. ಆದರೆ, ಮೋದಿಯವರ ಹೆಸರು ಆ ದಾಖಲೆಗಳಲ್ಲಿ ಎಲ್ಲೂ ಇಲ್ಲ ಎಂಬುದನ್ನೂ ವೀಡಿಯೊದಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು.
"ಸರಕಾರ ವಿರೋಧಿ ವಿಷಯಗಳನ್ನು ಗುರಿಯಾಗಿಸಲಾಗುತ್ತಿದೆ ಎಂಬುದು ನಮಗೆ ಗೊತ್ತು. ಆದರೆ, ನನ್ನ ಸರಕಾರ ಪರ ವೀಡಿಯೊಗಳನ್ನು ಸಹ ಡಿಲೀಟ್ ಮಾಡುತ್ತಿರುವುದು ನನಗೆ ಆಶ್ಚರ್ಯ ತಂದಿದೆ" ಎಂದು ಕಿಲ್ಹೋರ್ ಹೇಳಿದ್ದಾರೆ.
ಇದರ ಜೊತೆಗೆ, ಗುರುಗ್ರಾಮದ ಗಾಲ್ಫ್ ಕೋರ್ಸ್ ಒಂದರಲ್ಲಿ ಮಹಿಳೆಯೊಬ್ಬರು ಮತ್ತೊಬ್ಬ ಮಹಿಳೆಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಿಸಿದ ತಮ್ಮ ಎರಡು ವೀಡಿಯೊಗಳನ್ನೂ ತೆಗೆದುಹಾಕಲಾಗಿದೆ ಎಂದು ಕಿಲ್ಹೋರ್ ಉಲ್ಲೇಖಿಸಿದ್ದಾರೆ. ಈ ವೀಡಿಯೊಗಳಿಗೂ ಸರಕಾರದ ಟೀಕೆಗೂ ಯಾವುದೇ ಸಂಬಂಧವಿರಲಿಲ್ಲ.
►ಪೋಸ್ಟ್ ಗಳ ಡಿಲೀಟ್ ಗೆ ಕೀವರ್ಡ್ಗಳೇ ಕಾರಣವೇ?
"ಮೆಟಾ ಸಂಸ್ಥೆಯು ಕಂಟೆಂಟ್ ತೆಗೆದುಹಾಕುವ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಿದೆ" ಎಂದು ಆಂಜೆಲಾ ಥಾಮಸ್ ಆರೋಪಿಸಿದ್ದಾರೆ. 'ECI', 'protest', 'SIR' ಮತ್ತು 'Rahul Gandhi' ಎಂಬಂತಹ ಪದಗಳನ್ನು ಹೊಂದಿದ್ದ ಪೋಸ್ಟ್ ಗಳನ್ನು ತೆಗೆದುಹಾಕಿರುವ ಮಾದರಿಯನ್ನು SFLC.in ವಿಶ್ಲೇಷಿಸಿದೆ ಎಂದು ಅವರು ತಿಳಿಸಿದ್ದಾರೆ.
ಕೆಲವು ನಿರ್ದಿಷ್ಟ ಕೀವರ್ಡ್ಗಳು ಈ ರೀತಿಯ ಪೋಸ್ಟ್ ಡಿಲೀಟ್ ಗೆ ಕಾರಣವಾಗಿರಬಹುದು ಮತ್ತು ಇವು ಯಾವುದೇ ಒಬ್ಬ ವ್ಯಕ್ತಿ ಅಥವಾ ಕಂಟೆಂಟ್ ಕ್ರಿಯೇಟರ್ ಗಳನ್ನು ಮಾತ್ರ ಗುರಿಯಾಗಿಸಿಕೊಂಡಿಲ್ಲ ಎಂದು ಅಮಿತ್ ಕಿಲ್ಹೋರ್ ಅಭಿಪ್ರಾಯಪಡುತ್ತಾರೆ.
ಮೆಟಾದ ಕಂಟೆಂಟ್ ಪರಿಶೀಲನಾ ವ್ಯವಸ್ಥೆಯು ನಿರ್ದಿಷ್ಟ ಕೀವರ್ಡ್ ಗಳ ಆಧಾರದ ಮೇಲೆ ಪೋಸ್ಟ್ ಗಳನ್ನು ಗುರುತಿಸಿ ಬ್ಲಾಕ್ ಮಾಡುತ್ತಿದೆ ಎಂದು ರಾಘವ್ ತ್ರಿವೇದಿ ಸಹ ಆರೋಪಿಸಿದ್ದಾರೆ. ಈ ಕೀವರ್ಡ್ಗಳಲ್ಲಿ 'Modi', 'government', 'Constitution', 'Jantar Mantar', 'protest', 'accountability' ಮತ್ತು 'Rahul Gandhi' ಎಂಬ ಪದಗಳು ಸೇರಿರಬಹುದು ಎಂದು ಅವರು ಹೇಳಿದ್ದಾರೆ. ಸರಕಾರದ ಆರೋಗ್ಯ ಯೋಜನೆಗಳು, ಶಿಕ್ಷಣಕ್ಕಾಗಿ ರಕ್ತ ಮಾರಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಮತ್ತು ರಾಜಕೀಯ ವಿಶ್ಲೇಷಣೆಗೆ ಸಂಬಂಧಿಸಿದ ತಮ್ಮ ವೀಡಿಯೊಗಳನ್ನು ಈ ರೀತಿ ತೆಗೆದುಹಾಕಲಾಗಿದೆ ಎಂದು ಅವರು ಗುರುತಿಸಿದ್ದಾರೆ.
5 ಲಕ್ಷ ರೂಪಾಯಿವರೆಗೆ ಸೌಲಭ್ಯ ನೀಡುವ ಸರಕಾರದ ಆರೋಗ್ಯ ಕಾರ್ಡ್ ಗಳಲ್ಲಾಗಿರುವ ಅಕ್ರಮಗಳ ಕುರಿತ ವರದಿಯೊಂದು ಇದರಲ್ಲಿ ಸೇರಿತ್ತು. ಇನ್ನೊಂದು ವೀಡಿಯೊದಲ್ಲಿ ಉತ್ತರ ಪ್ರದೇಶದ ವಿದ್ಯಾರ್ಥಿಗಳು ಕಾಲೇಜು ಫೀಸ್ ಮತ್ತು ಕೊಠಡಿ ಬಾಡಿಗೆ ಕಟ್ಟಲು ರಕ್ತ ಮಾರಿಕೊಳ್ಳುತ್ತಿರುವ ವರದಿಗಳ ಬಗ್ಗೆ ಚರ್ಚಿಸಲಾಗಿತ್ತು.
"ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಯ ವೆಚ್ಚವನ್ನು ಭರಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಯನ್ನು ನಾವು ಕೇಳಬೇಕಿದೆ ಎಂಬುದನ್ನು ನಾನು ನನ್ನ ವರದಿಯಲ್ಲಿ ವಿವರಿಸಿದ್ದೆ" ಎಂದು ತ್ರಿವೇದಿ ಹೇಳಿದ್ದಾರೆ.
ತಾವು ಕಳೆದ ಒಂದು ವರ್ಷದಿಂದ ಇನ್ಸ್ಟಾಗ್ರಾಮ್ ನಲ್ಲಿ ಇದೇ ರೀತಿಯ ವರದಿಗಳನ್ನು ಪೋಸ್ಟ್ ಮಾಡುತ್ತಿದ್ದರೂ, ಈ ಪ್ರಮಾಣದಲ್ಲಿ ಸರಣಿ ಪೋಸ್ಟ್ ಗಳನ್ನು ಎಂದಿಗೂ ಡಿಲೀಟ್ ಮಾಡಿರಲಿಲ್ಲ ಎಂದಿದ್ದಾರೆ ಅವರು.
►ಪೋಸ್ಟ್ ಗಳ ಡಿಲೀಟ್ ಹಿಂದೆ ಕಾನೂನು ಮನವಿಗಳಿವೆಯೇ?
ಅಕ್ಟೋಬರ್ 27ರಂದು, ಸುಪ್ರೀಂ ಕೋರ್ಟ್ನಲ್ಲಿ ಭಾರತೀಯ ಚುನಾವಣಾ ಆಯೋಗವು ನೀಡಿದ ವಿವರಣೆ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ, ಫಾರ್ಮ್ 6 ಮತ್ತು ಪಶ್ಚಿಮ ಬಂಗಾಳದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ LiveLaw ಕಾನೂನು ವೆಬ್ಸೈಟ್ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದ ಪೋಸ್ಟ್ ಅನ್ನು ಬ್ಲಾಕ್ ಮಾಡಲಾಗಿತ್ತು. ಆದರೆ, ಕೆಲವು ಗಂಟೆಗಳ ನಂತರ ಆ ಪೋಸ್ಟ್ ಅನ್ನು ಯಥಾಸ್ಥಿತಿಗೆ ತರಲಾಯಿತು.
ತಾವು ಮೆಟಾಗೆ ಯಾವುದೇ ಮೇಲ್ಮನವಿ ಸಲ್ಲಿಸಿರಲಿಲ್ಲ ಎಂದು 'ಲೈವ್ಲಾ' ಸಂಪಾದಕ ಮನು ಸೆಬಾಸ್ಟಿಯನ್ ನ್ಯೂಸ್ಲಾಂಡ್ರಿಗೆ ತಿಳಿಸಿದ್ದಾರೆ.
"ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಕ್ಕಾಗಿ ಅವರು ಪೋಸ್ಟ್ ಅನ್ನು ವಾಪಸ್ ತಂದರೋ ಇಲ್ಲವೋ ತಿಳಿಯದು. 'ಕಾನೂನು ಮನವಿಯ ಮೇರೆಗೆ ಈ ರೀತಿ ಮಾಡಲಾಗಿದೆ' ಎಂಬ ಅವರ ನಿಗದಿತ ಉತ್ತರವನ್ನು ಹೊರತುಪಡಿಸಿ, ಪೋಸ್ಟ್ ಅನ್ನು ಯಾಕೆ ತೆಗೆದುಹಾಕಲಾಯಿತು ಅಥವಾ ಮರುಸ್ಥಾಪಿಸಲಾಯಿತು ಎಂಬುದಕ್ಕೆ ಯಾವುದೇ ಸ್ಪಷ್ಟ ವಿವರಣೆ ನೀಡಿರಲಿಲ್ಲ" ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 29ರಂದು ಇನ್ಸ್ಟಾಗ್ರಾಮ್ ನಲ್ಲಿದ್ದ 'ಲೈವ್ಲಾ'ದ ಇನ್ನೊಂದು ಪೋಸ್ಟ್ ಅನ್ನು ಸಹ ತೆಗೆದುಹಾಕಲಾಗಿದೆ ಎಂದು ನ್ಯೂಸ್ಲಾಂಡ್ರಿಗೆ ತಿಳಿದುಬಂದಿದೆ. SIR ವಿರುದ್ಧ ಬಾಕಿ ಇರುವ ಕಾನೂನು ಸವಾಲುಗಳನ್ನು ವಿವರಿಸುವ ಇನ್ನೊಂದು ವೀಡಿಯೊವನ್ನು ಇನ್ಸ್ಟಾಗ್ರಾಮ್ ಬ್ಲಾಕ್ ಮಾಡಿದೆ ಮತ್ತು "ಈ ವಿಷಯವನ್ನು ನಿಯಂತ್ರಿಸಲು ನಮಗೆ ಕಾನೂನು ಮನವಿ ಬಂದಿದೆ" ಎಂಬ ಕಾರಣ ನೀಡಲಾಗಿದೆ ಎಂದು 'ಲೈವ್ಲಾ' ಎಕ್ಸ್ನಲ್ಲಿ ತಿಳಿಸಿದೆ.
ದಿಲ್ಲಿ ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನು ತೆಗೆದುಹಾಕಲು ನೋಟಿಸ್ ಕಳುಹಿಸಿರುವುದನ್ನು ದಿಲ್ಲಿ ಪೊಲೀಸರ 'ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್' (IFSO) ಡೆಪ್ಯುಟಿ ಕಮಿಷನರ್ ಗೌರವ್ ತ್ಯಾಗಿ ಒಪ್ಪಿಕೊಂಡಿದ್ದಾರೆ. "ಕಳೆದ ತಿಂಗಳು BNSS ಅಡಿಯಲ್ಲಿ ಕಾನೂನುಬಾಹಿರವಾಗಿದ್ದ ವಿಷಯಗಳನ್ನು ತೆಗೆದುಹಾಕಲು ದಿಲ್ಲಿ ಪೊಲೀಸರು ಮೆಟಾಗೆ ಹಲವಾರು ಮನವಿಗಳನ್ನು ಕಳುಹಿಸಿದ್ದಾರೆ" ಎಂದು ಅವರು ಹೇಳಿದ್ದಾರೆ.
►ಸಂತ್ರಸ್ತ ಬಳಕೆದಾರರಿಗಿರುವ ಕಾನೂನು ಪರಿಹಾರಗಳೇನು?
ಮೆಟಾದ ಆಂತರಿಕ ವ್ಯವಸ್ಥೆಯ ಮೂಲಕ ತಮ್ಮ ಪೋಸ್ಟ್ ಡಿಲೀಟ್ ಆಗಿದ್ದರೆ, ಬಳಕೆದಾರರು ಮಾಹಿತಿ ತಂತ್ರಜ್ಞಾನ ನಿಯಮಗಳು 2021ರ ಅಡಿಯಲ್ಲಿ ಪ್ಲಾಟ್ಫಾರ್ಮ್ನ ಕುಂದುಕೊರತೆ ಅಧಿಕಾರಿಯನ್ನು ಸಂಪರ್ಕಿಸಬಹುದು ಎಂದು ದಿಲ್ಲಿ ಹೈಕೋರ್ಟ್ನ ವಕೀಲ ಕೃಷ್ಣೇಶ್ ಬಾಪಟ್ ತಿಳಿಸಿದ್ದಾರೆ. ಒಂದು ವೇಳೆ ಅಧಿಕಾರಿಯ ನಿರ್ಧಾರದಿಂದ ಅತೃಪ್ತರಾದರೆ, ಸರಕಾರದ ಕುಂದುಕೊರತೆ ಮೇಲ್ಮನವಿ ಸಮಿತಿಗೆ (GAC) ಮೇಲ್ಮನವಿ ಸಲ್ಲಿಸಬಹುದು.
ಆದರೆ, ಬಾಪಟ್ ಅವರು ಈ ವ್ಯವಸ್ಥೆಗಳ ಸ್ವಾಯತ್ತತೆಯನ್ನು ಪ್ರಶ್ನಿಸಿದ್ದಾರೆ.
"ಆರಂಭದಲ್ಲಿ ನಿಮ್ಮ ಪೋಸ್ಟ್ ಅನ್ನು ತೆಗೆದುಹಾಕಿದ ಸಂಸ್ಥೆಯನ್ನೇ ನೀವು ಸಂಪರ್ಕಿಸುತ್ತೀರಿ. ನಂತರದ ಮೇಲ್ಮನವಿ ಹಂತದಲ್ಲಿ, ನೀವು ಯಾವ ಸರಕಾರವನ್ನು ವಿಮರ್ಶಿಸುತ್ತಿದ್ದೀರೋ ಅದೇ ಸರಕಾರ ರಚಿಸಿದ ಸಂಸ್ಥೆಯ ಬಳಿಗೇ ಹೋಗಬೇಕಾಗುತ್ತದೆ. ಆದ್ದರಿಂದ ಈ ಶಾಸನಬದ್ಧ ಪ್ರಕ್ರಿಯೆಯಲ್ಲಿ ಸಂಪೂರ್ಣ ಸ್ವತಂತ್ರವಾದ ಪರಿಹಾರ ವ್ಯವಸ್ಥೆಯು ಇಲ್ಲ" ಎಂದು ಅವರು ಹೇಳಿದ್ದಾರೆ.
ನ್ಯಾಯಾಲಯಗಳ ಮೂಲಕ ಪರಿಹಾರ ಕಂಡುಕೊಳ್ಳುವ ಮಾರ್ಗವೂ ಸೀಮಿತವಾಗಿದೆ. ಕೇವಲ ಸೋಷಿಯಲ್ ಮೀಡಿಯಾ ವೇದಿಕೆಯನ್ನು ಒದಗಿಸುವುದು ಸಾರ್ವಜನಿಕ ಕರ್ತವ್ಯ ನಿರ್ವಹಣೆ ಎನಿಸುವುದಿಲ್ಲ ಎಂದು ಅಭಿಪ್ರಾಯಪಟ್ಟ ದಿಲ್ಲಿ ಹೈಕೋರ್ಟ್, ಅಕ್ಟೋಬರ್ 29ರಂದು ಇನ್ಸ್ಟಾಗ್ರಾಮ್ ಖಾತೆಗಳ ಅಮಾನತನ್ನು ಸಂವಿಧಾನದ ವಿಧಿ 226ರ ಅಡಿಯಲ್ಲಿ 'ರಿಟ್ ಅರ್ಜಿ'ಯ ಮೂಲಕ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.
ಪೂರ್ವಭಾವಿ ನೋಟಿಸ್ ನೀಡದೆ ತಮ್ಮ ಇನ್ಸ್ಟಾಗ್ರಾಮ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಸಾರ್ಥಕ್ ಭಗತ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವ ಬದಲು, ಸಾರ್ಥಕ್ ಅವರ ಬಾಕಿ ಇರುವ ಮೇಲ್ಮನವಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ GACಗೆ ಹೈಕೋರ್ಟ್ ಸೂಚಿಸಿದೆ.
"ಸಂವಿಧಾನದ ವಿಧಿ 19ರ ಅಡಿಯಲ್ಲಿ ವಾಕ್ ಸ್ವಾತಂತ್ರ್ಯದ ಮೇಲೆ ವಿಧಿಸಲಾಗುವ ಸಮಂಜಸವಾದ ನಿರ್ಬಂಧಗಳಿಗೆ ಸರಿಯಾದ ಆಲೋಚನೆ ಮತ್ತು ವಿವೇಚನೆಯ ಅಗತ್ಯವಿರುತ್ತದೆ. ಒಂದು ಖಾಸಗಿ ಸಂಸ್ಥೆಯು ತನ್ನ ಪ್ಲಾಟ್ಫಾರ್ಮ್ ನಲ್ಲಿ ನಿರ್ಬಂಧ ವಿಧಿಸುವಾಗಲೂ, ವಿಷಯವನ್ನು ಪರಿಶೀಲಿಸಲು ಮನುಷ್ಯರ ಒಳಗೊಳ್ಳುವಿಕೆ ಅಗತ್ಯವಿರುತ್ತದೆ" ಎಂದು ಬಾಪಟ್ ಹೇಳಿದ್ದಾರೆ.
ವಿಶೇಷವಾಗಿ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳಿದ್ದಾಗ ಸ್ವಯಂಚಾಲಿತ ಪರಿಶೀಲನಾ ವ್ಯವಸ್ಥೆಯ ಅಗತ್ಯತೆಯನ್ನು ಒಪ್ಪಿಕೊಂಡರೂ, ಮೆಟಾ ಇತ್ತೀಚೆಗೆ ಜಾರಿಗೊಳಿಸಿದ ಪೋಸ್ಟ್ ಡಿಲೀಟ್ ಹಾಗೂ ನಿರ್ಬಂಧಗಳು ಸನ್ನಿವೇಶದ ಸೂಕ್ತ ಪರಿಶೀಲನೆಯಿಲ್ಲದೆ ನಡೆದಿವೆ ಎಂದು ಅವರು ಆರೋಪಿಸಿದ್ದಾರೆ.
"ನೀವು ಸಂಪೂರ್ಣ ಖಾತೆಯನ್ನು ತೆಗೆದುಹಾಕಿದಾಗ ಅಥವಾ ನಿಯಂತ್ರಿಸಿದಾಗ, ನಿಮಗೆ ಅಭ್ಯಂತರವಿರುವ ಒಂದು ನಿರ್ದಿಷ್ಟ ಪೋಸ್ಟ್ ಅನ್ನು ಮಾತ್ರ ನೀವು ನಿಯಂತ್ರಿಸುತ್ತಿಲ್ಲ. ಬದಲಿಗೆ, ಆ ವ್ಯಕ್ತಿ ಇದುವರೆಗೆ ವ್ಯಕ್ತಪಡಿಸಿದ ಎಲ್ಲವನ್ನೂ ತೆಗೆದುಹಾಕುತ್ತಿದ್ದೀರಿ ಮತ್ತು ಭವಿಷ್ಯದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಕಸಿದುಕೊಳ್ಳುತ್ತಿದ್ದೀರಿ" ಎಂದು ಬಾಪಟ್ ಹೇಳಿದ್ದಾರೆ.
ಪೋಸ್ಟ್ ನಿಯಂತ್ರಣಗಳು ಮತ್ತು ಡಿಲೀಟ್ ಕುರಿತು ಮೆಟಾ ಸಂಸ್ಥೆಯಿಂದ ನ್ಯೂಸ್ಲಾಂಡ್ರಿ ಪ್ರತಿಕ್ರಿಯೆ ಕೋರಿದ್ದು, ಇಲ್ಲಿಯವರೆಗೆ ಉತ್ತರ ಬಂದಿಲ್ಲ.
ಸೌಜನ್ಯ: newslaundry.com