Photo Credit : PTI

ಶುಕ್ರವಾರ (ಅಕ್ಟೋಬರ್ 30) ಬದರೀನಾಥದಿಂದ ಡೆಹ್ರಾಡೂನ್‌ ಗೆ ಹಿಂತಿರುಗುತ್ತಿದ್ದ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದಿಂದಾಗಿ ಪತನಗೊಂಡು, ಪೈಲಟ್ ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ.

ಈ ದುರಂತವು ಭಾರತದ ಅತ್ಯಂತ ಸವಾಲಿನ ವಾಯು ಸಂಚಾರ ಪ್ರದೇಶಗಳಲ್ಲಿ ಒಂದಾದ ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಹಾರಾಟದ ಸುರಕ್ಷತೆಯ ಕುರಿತು ಮತ್ತೆ ಆತಂಕ ಮೂಡಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಈ ಹಿಮಾಲಯದ ರಾಜ್ಯದಲ್ಲಿ ಅನೇಕ ಹೆಲಿಕಾಪ್ಟರ್ ಅಪಘಾತಗಳು, ತುರ್ತು ಲ್ಯಾಂಡಿಂಗ್ ಗಳು ಮತ್ತು ಇತರ ಸುರಕ್ಷತಾ ಘಟನೆಗಳು ಸಂಭವಿಸಿವೆ. ಇದರಿಂದಾಗಿ ಹೆಲಿಕಾಪ್ಟರ್ ಆಧಾರಿತ ಧಾರ್ಮಿಕ ಪ್ರವಾಸೋದ್ಯಮದ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಕಳೆದ ವರ್ಷದ ಜುಲೈನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ಸಂಸತ್ತಿಗೆ ನೀಡಿದ ಮಾಹಿತಿಯ ಪ್ರಕಾರ, 2020ರಿಂದ ದೇಶದಲ್ಲಿ ಸಂಭವಿಸಿದ 12 ಹೆಲಿಕಾಪ್ಟರ್ ಅಪಘಾತಗಳಲ್ಲಿ ಏಳು ಉತ್ತರಾಖಂಡದಲ್ಲೇ ನಡೆದಿವೆ. ಈ ಅಪಘಾತಗಳಲ್ಲಿ ಜೀವ ಕಳೆದುಕೊಂಡವರ ಸಂಖ್ಯೆಯೂ ಹೆಚ್ಚಿದೆ. ಒಟ್ಟು 30 ಜನರಲ್ಲಿ 21 ಜನರು ಉತ್ತರಾಖಂಡದಲ್ಲಿ ನಡೆದ ಘಟನೆಗಳಲ್ಲಿ ಸಾವಿಗೀಡಾಗಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳು ನಡೆಸುವ ಹೆಲಿಕಾಪ್ಟರ್ ಸೇವೆಗಳು ಉತ್ತರಾಖಂಡದ ಧಾರ್ಮಿಕ ಪ್ರವಾಸೋದ್ಯಮದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಹಿಮಾಲಯದಲ್ಲಿನ ದೇವಾಲಯಗಳಿಗೆ ಭಕ್ತರು ಬೇಗನೆ ತಲುಪಲು ಇವು ಸಹಕಾರಿಯಾಗಿವೆ. ಚಾರ್ಧಾಮ್ ಯಾತ್ರಾ ಮಾರ್ಗವು ಅತ್ಯಂತ ಜನಪ್ರಿಯವಾಗಿದ್ದರೂ, ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಎಂದು ಹೆಸರು ಪಡೆದಿದೆ.

ಯಾತ್ರೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಹೆಲಿಕಾಪ್ಟರ್ ಹಾರಾಟಗಳು, ಕ್ಷಣಾರ್ಧದಲ್ಲಿ ಬದಲಾಗುವ ಹವಾಮಾನ, ದುರ್ಗಮ ಭೂಪ್ರದೇಶ ಹಾಗೂ ಸುರಕ್ಷತಾ ನಿಯಮಗಳ ಜಾರಿಯಲ್ಲಿನ ಕೊರತೆಗಳು ಇಲ್ಲಿನ ಹೆಲಿಕಾಪ್ಟರ್ ಪ್ರಯಾಣವನ್ನು ಅಪಾಯಕಾರಿಯಾಗಿಸಿವೆ ಎಂದು ತಜ್ಞರು ತಿಳಿಸಿದ್ದಾರೆ. ಪರಿಣಾಮವಾಗಿ, ಹೆಲಿಕಾಪ್ಟರ್ ಪ್ರವಾಸೋದ್ಯಮದ ಬೆಳವಣಿಗೆಗೆ ತಕ್ಕಂತೆ ಅಗತ್ಯ ಸುರಕ್ಷತಾ ವ್ಯವಸ್ಥೆಗಳು ರೂಪುಗೊಂಡಿವೆಯೇ ಎಂಬ ಸಂಶಯಗಳು ವ್ಯಕ್ತವಾಗಿವೆ.

ಕಳೆದ ಬೇಸಿಗೆಯಲ್ಲಿ ಕೇವಲ ಒಂದೆರಡು ತಿಂಗಳಲ್ಲಿ ಕನಿಷ್ಠ ಐದು ಹೆಲಿಕಾಪ್ಟರ್ ಅವಘಡಗಳು ಸಂಭವಿಸಿದಾಗ ಈ ಸಮಸ್ಯೆಯ ತೀವ್ರತೆ ಸ್ಪಷ್ಟವಾಯಿತು. ಇದರಲ್ಲಿ ಕೆಲವು ಪ್ರಾಣಾಪಾಯ ಉಂಟುಮಾಡಿದ ದುರಂತಗಳೂ ಸೇರಿದ್ದವು. ತಕ್ಷಣವೇ ಕಾರ್ಯಪ್ರವೃತ್ತರಾದ ರಾಜ್ಯ ಆಡಳಿತ, ಅದರ ವಿಮಾನಯಾನ ಪ್ರಾಧಿಕಾರ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA), ಸುರಕ್ಷತಾ ತಪಾಸಣೆ ಹಾಗೂ ಹೆಲಿಕಾಪ್ಟರ್ ಕಾರ್ಯಾಚರಣೆಗಳ ತಾತ್ಕಾಲಿಕ ತಡೆ ಸೇರಿದಂತೆ ಹಲವು ಕ್ರಮಗಳನ್ನು ಘೋಷಿಸಿದವು.

►ಉತ್ತರಾಖಂಡದ ಭೂಪ್ರದೇಶ ಮತ್ತು ಹವಾಮಾನದ ಸವಾಲುಗಳು

ಚಾರ್ಧಾಮ್ ಯಾತ್ರೆಯ ಹೆಚ್ಚಿನ ಮಾರ್ಗವು ಕಡಿದಾದ ಪರ್ವತಗಳಿಂದ ಸುತ್ತುವರಿದ ಆಳವಾದ ಕಣಿವೆಗಳ ಮೂಲಕ ಹಾದುಹೋಗುತ್ತದೆ. ವಾತಾವರಣವು ದಿಢೀರನೆ ಹದಗೆಟ್ಟಾಗ, ಗೋಚರತೆ ಕಡಿಮೆಯಾದಾಗ ಅಥವಾ ತಾಂತ್ರಿಕ ತೊಂದರೆ ಎದುರಾದಾಗ ಹೆಲಿಕಾಪ್ಟರ್‌ ಗೆ ತಿರುಗಲು ಜಾಗವಿಲ್ಲದೆ ಹಾರಾಟ ನಡೆಸುವುದು ಅತ್ಯಂತ ಸವಾಲಿನ ಕೆಲಸವಾಗುತ್ತದೆ.

ಪರ್ವತ ಪ್ರದೇಶಗಳು ಗಾಳಿಯ ದಿಕ್ಕು ಮತ್ತು ವೇಗದ ಮೇಲೂ ಪರಿಣಾಮ ಬೀರುತ್ತವೆ. ಗಾಳಿಯ ಹರಿವು ತಕ್ಷಣವೇ ಬದಲಾಗಿ, ವಿಮಾನವು ನಿಯಂತ್ರಣ ಕಳೆದುಕೊಳ್ಳುವ ಅಪಾಯವಿರುತ್ತದೆ. ಮೋಡಗಳ ಚಲನೆ, ಮಂಜು ಮತ್ತು ನಿರೀಕ್ಷಿಸದ ಮಳೆಯಿಂದಾಗಿ ಗೋಚರತೆಯಲ್ಲೂ ಕ್ಷಣಾರ್ಧದಲ್ಲಿ ಬದಲಾವಣೆಗಳಾಗುತ್ತವೆ. ಈ ಪ್ರದೇಶದ ಹೆಲಿಕಾಪ್ಟರ್ ಸೇವೆಗಳು ಮುಖ್ಯವಾಗಿ ಕಣ್ಣಿನಿಂದ ನೋಡಿ ಹಾರಿಸುವ ನಿಯಮಗಳ (Visual Flight Rules) ಆಧಾರದ ಮೇಲೆ ನಡೆಯುವುದರಿಂದ ಈ ಅಂಶಗಳು ಬಹಳ ಮುಖ್ಯವಾಗುತ್ತವೆ. ಈ ವ್ಯವಸ್ಥೆಯಲ್ಲಿ ಪೈಲಟ್ ಗಳು ಕಣ್ಣಿನಿಂದ ನೋಡುತ್ತಲೇ ನೆಲದ ಹಾದಿ ಮತ್ತು ಪರ್ವತಗಳ ಅಡೆತಡೆಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ.

ಇಲ್ಲಿ ಮತ್ತೊಂದು ಅಪಾಯಕಾರಿ ಸಂಗತಿಯೆಂದರೆ, ಪೈಲಟ್ ನ ನಿಯಂತ್ರಣದಲ್ಲಿದ್ದರೂ ವಿಮಾನವು ಪರ್ವತ ಅಥವಾ ಅಡೆತಡೆಗಳಿಗೆ ಡಿಕ್ಕಿ ಹೊಡೆಯುವುದು. 2025ರ ಜೂನ್ 15ರಂದು ಗೌರಿಕುಂಡ್ ಬಳಿ ನಡೆದ ಹೆಲಿಕಾಪ್ಟರ್ ಪತನಕ್ಕೆ ಇದೇ ಕಾರಣವೆಂದು ಪ್ರಾಥಮಿಕ ವರದಿಗಳು ಸೂಚಿಸಿದ್ದವು. ದಟ್ಟವಾದ ಮೋಡ ಮತ್ತು ಕನಿಷ್ಠ ಗೋಚರತೆಯ ನಡುವೆಯೂ ಹೆಲಿಕಾಪ್ಟರ್ ಹಾರಾಟ ನಡೆಸಿದ್ದು ಈ ದುರಂತಕ್ಕೆ ಕಾರಣವಾಗಿತ್ತು.

ಉತ್ತರಾಖಂಡದಲ್ಲಿ ಈ ಹಿಂದೆ ನಡೆದ ಅಪಘಾತಗಳ ನಂತರ ಎದುರಾದ ಅತ್ಯಂತ ಪ್ರಮುಖ ಸಮಸ್ಯೆಯೆಂದರೆ ನಿಖರವಾದ ಮತ್ತು ಸ್ಥಳೀಯ ಹವಾಮಾನ ಮಾಹಿತಿಯ ಕೊರತೆ. ಉದಾಹರಣೆಗೆ, ಗುಪ್ತಕಾಶಿಯಂತಹ ಮೂಲ ಸ್ಥಳದಲ್ಲಿರುವ ಹವಾಮಾನವು ಕೇದಾರನಾಥ ಅಥವಾ ಈ ಎರಡು ಸ್ಥಳಗಳನ್ನು ಸಂಪರ್ಕಿಸುವ ಕಣಿವೆಗಳಲ್ಲಿನ ನೈಜ ವಾತಾವರಣವನ್ನು ಪ್ರತಿಬಿಂಬಿಸುವುದಿಲ್ಲ. ಅಲ್ಲದೆ, ಒಂದು ಜಿಲ್ಲೆಯ ಸಾಮಾನ್ಯ ಹವಾಮಾನ ವರದಿಯು ಒಂದು ನಿರ್ದಿಷ್ಟ ಕಣಿವೆಯ ಮೂಲಕ ಸುರಕ್ಷಿತವಾಗಿ ಹಾರಾಟ ನಡೆಸಬಹುದೇ ಎಂಬುದನ್ನು ಪೈಲಟ್ನಿಗೆ ಖಚಿತವಾಗಿ ತಿಳಿಸಲು ಸಾಧ್ಯವಿಲ್ಲ.

►ವಾಯು ಸಂಚಾರ ನಿರ್ವಹಣೆ ಮತ್ತು ನಿಯಂತ್ರಣದ ಕೊರತೆಗಳು

ಸಣ್ಣ ಕಣಿವೆಗಳಲ್ಲಿ ಒಂದೇ ಸಮಯದಲ್ಲಿ ಹಲವು ಹೆಲಿಕಾಪ್ಟರ್ ಗಳು ಹಾರಾಟ ನಡೆಸುವಾಗ ವಾಯು ಸಂಚಾರ ನಿರ್ವಹಣೆ (Air Traffic Management) ಅತ್ಯಂತ ಮುಖ್ಯವಾಗುತ್ತದೆ. ಸಾಮಾನ್ಯ ವಿಮಾನ ನಿಲ್ದಾಣಗಳಲ್ಲಿ ವಾಯು ಸಂಚಾರ ನಿಯಂತ್ರಕರು (ATC) ವಿಮಾನಗಳ ಚಲನೆಯನ್ನು ಸಂಯೋಜಿಸುತ್ತಾರೆ ಮತ್ತು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತಾರೆ. ಆದರೆ ಉತ್ತರಾಖಂಡದ ಕೆಲವು ಹೆಲಿಪ್ಯಾಡ್ ಗಳಲ್ಲಿ ಸೂಕ್ತ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆ ಇಲ್ಲದಿರುವುದರಿಂದ, ದುರ್ಗಮ ಪರ್ವತ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಕಾರ್ಯಾಚರಣೆಗಳು ವಿಭಿನ್ನವಾಗಿ ನಡೆಯುತ್ತವೆ.

ಈ ಸಂದರ್ಭದಲ್ಲಿ ಪ್ರಮುಖ ಸವಾಲೆಂದರೆ, ಹಲವು ಸಂಸ್ಥೆಗಳು ಒಂದೇ ಗಮ್ಯಸ್ಥಾನಕ್ಕೆ ವಿಮಾನ ಸೇವೆ ಒದಗಿಸುತ್ತವೆ ಮತ್ತು ಪೈಲಟ್ ಗಳು ರೇಡಿಯೊ ಸಂವಹನ ಹಾಗೂ ಇತರ ಸ್ಥಳಗಳಿಂದ ಸಿಗುವ ಮಾಹಿತಿಯನ್ನೇ ನೆಚ್ಚಿಕೊಂಡಿರುತ್ತಾರೆ. ಹಿಂದಿನ ಅಪಘಾತಗಳ ತನಿಖೆಯು ಜಂಟಿ ಸೌಲಭ್ಯಗಳಲ್ಲಿ ಕಾರ್ಯಾಚರಣೆಯ ಸುರಕ್ಷತೆ ಮತ್ತು ಉಸ್ತುವಾರಿಯ ಜವಾಬ್ದಾರಿಗಳ ಹಂಚಿಕೆಯ ಕುರಿತೂ ಪ್ರಶ್ನೆಗಳನ್ನು ಎತ್ತಿದೆ. ಮೂಲಸೌಕರ್ಯ ನಿರ್ವಹಣೆ ಮತ್ತು ಹಾರಾಟದ ಕಾರ್ಯಾಚರಣೆಗಳು ಬೇರೆ ಬೇರೆ ಜವಾಬ್ದಾರಿಗಳಾಗಿದ್ದು, ಹೆಲಿಪ್ಯಾಡ್ ನಿರ್ವಹಿಸುವ ಸಂಸ್ಥೆಯು ವಾಯು ಸಂಚಾರ ಸೇವೆ ಅಥವಾ ರಾಷ್ಟ್ರೀಯ ವಿಮಾನಯಾನ ನಿಯಂತ್ರಕ ಅಧಿಕಾರವನ್ನು ಹೊಂದಿರದಿರಬಹುದು.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ವಾಯುಪ್ರದೇಶವನ್ನು ನಿಯಂತ್ರಿಸುತ್ತದೆ ಮತ್ತು ವಿಮಾನಯಾನ ವಿಷಯವು ಕೇಂದ್ರ ಪಟ್ಟಿಯಲ್ಲಿದೆ. ಆದರೆ, 2013ರಲ್ಲಿ ಸ್ಥಾಪನೆಯಾದ ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (UCADA) ಹೆಲಿಕಾಪ್ಟರ್ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತದೆ. ಇತ್ತೀಚಿನ ಅಪಘಾತಗಳು ಈ ಪ್ರದೇಶದಲ್ಲಿ ಬಲವಾದ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆ ಇಲ್ಲದಿರುವಿಕೆ ಹಾಗೂ ಕೇಂದ್ರ ನಿಯಂತ್ರಕ ಮತ್ತು ರಾಜ್ಯ ಪ್ರಾಧಿಕಾರದ ನಡುವಿನ ಸಮನ್ವಯದ ಕೊರತೆಯನ್ನು ಎತ್ತಿ ತೋರಿಸಿವೆ.

ಕಳೆದ ವರ್ಷದ ಆಗಸ್ಟ್ ನಲ್ಲಿ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಕುರಿತ ಸಂಸದೀಯ ಖಾಯಂ ಸಮಿತಿ ನೀಡಿದ ವರದಿಯಲ್ಲಿ, "DGCA ತನ್ನ ಪಾತ್ರವನ್ನು ಮುಖ್ಯವಾಗಿ ಪರವಾನಗಿ ನೀಡುವ ಅಧಿಕಾರಕ್ಕೆ ಸೀಮಿತಗೊಳಿಸಿದೆ. ಅದು ಯುಸಿಎಡಿಎ ಸಂಸ್ಥೆಗೆ ಸುರಕ್ಷತಾ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆಯಾದರೂ, ದೈನಂದಿನ ಕಾರ್ಯಾಚರಣೆಯ ಮೇಲೆ ನೇರ ಮತ್ತು ನಿರಂತರ ಮೇಲ್ವಿಚಾರಣೆ ನಡೆಸುತ್ತಿಲ್ಲ. ಈ ವ್ಯವಸ್ಥೆಯು ನಿಯಮಗಳ ಏಕರೂಪತೆ, ರಾಷ್ಟ್ರೀಯ ಸುರಕ್ಷತಾ ನಿಯಮಗಳ ಪಾಲನೆ ಮತ್ತು ಅಪಘಾತ ಸಂಭವಿಸಿದಾಗ ಅಂತಿಮ ಜವಾಬ್ದಾರಿಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ" ಎಂದು ಉಲ್ಲೇಖಿಸಿದೆ.

ವರದಿಯು ಮುಂದುವರಿದು, "ಚಾರ್ ಧಾಮ್ ವಲಯದಲ್ಲಿ ಹೆಲಿಕಾಪ್ಟರ್ ಕಾರ್ಯಾಚರಣೆಯ ಪ್ರಸ್ತುತ ಸ್ಥಿತಿಯು ಭಾರತದ ವಿಮಾನಯಾನ ಆಡಳಿತದಲ್ಲಿನ ದೊಡ್ಡ ಮತ್ತು ಅಪಾಯಕಾರಿ ಲೋಪವನ್ನು ತೋರಿಸುತ್ತದೆ. ದೇಶದ ಅತ್ಯಂತ ಅಪಾಯಕಾರಿ ವಿಮಾನಯಾನ ಚಟುವಟಿಕೆಯ ನೇರ ಮೇಲ್ವಿಚಾರಣೆಯಿಂದ ದೇಶದ ಅತ್ಯುನ್ನತ ನಿಯಂತ್ರಕ ಸಂಸ್ಥೆಯಾದ DGCA ಹಿಂದೆ ಸರಿದು, ಅನುಭವ ಮತ್ತು ಸಾಮರ್ಥ್ಯದ ಕೊರತೆ ಇರುವ ರಾಜ್ಯ ಮಟ್ಟದ ಸಂಸ್ಥೆಗೆ ಜವಾಬ್ದಾರಿ ವಹಿಸಿದಂತೆ ಕಾಣುತ್ತಿದೆ" ಎಂದು ಹೇಳಿದೆ.

►ವಾಣಿಜ್ಯ ಲಾಭಕ್ಕಾಗಿ ಸುರಕ್ಷತೆಯಲ್ಲಿ ರಾಜಿ?

ಉತ್ತರಾಖಂಡದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಬೆಳೆದಂತೆ ಹೆಲಿಕಾಪ್ಟರ್ ಕಾರ್ಯಾಚರಣೆಯೂ ಹೆಚ್ಚಾಗಿದೆ. ಹೆಲಿಕಾಪ್ಟರ್ ಸೇವೆಗಳು ದುರ್ಗಮ ಹಾದಿಯಿರುವ ದೇವಾಲಯಗಳನ್ನು ತಲುಪುವ ಸಮಯ ಮತ್ತು ಶ್ರಮವನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ. ವರ್ಷದಲ್ಲಿ ಕೇವಲ ಕೆಲವು ತಿಂಗಳು ಮಾತ್ರ ನಡೆಯುವ ಈ ಯಾತ್ರೆಯ ಸಮಯದಲ್ಲಿ ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಸಂಸ್ಥೆಗಳು ಕಡಿಮೆ ಸಮಯದಲ್ಲಿ ಹೆಚ್ಚು ಹಾರಾಟ ನಡೆಸಲು ಯತ್ನಿಸುತ್ತವೆ.

ಹೆಚ್ಚಿನ ಹೆಲಿಕಾಪ್ಟರ್ ಗಳು ಹಾರಾಟ ನಡೆಸುವಾಗ ಸೂಕ್ತ ಸಮನ್ವಯ, ನಂಬಿಕಸ್ಥ ಸಂವಹನ ವ್ಯವಸ್ಥೆ, ಆಗಮನ-ನಿರ್ಗಮನಕ್ಕೆ ಸ್ಪಷ್ಟ ನಿಯಮಗಳು ಮತ್ತು ನಿಖರವಾದ ಹವಾಮಾನ ಮಾಹಿತಿ ಅತ್ಯಗತ್ಯ. ಈ ವ್ಯವಸ್ಥೆಗಳು ಸರಿಯಾಗಿ ಇಲ್ಲದಿದ್ದರೆ, ಪೈಲಟ್ರು ಸರಿಯಾದ ಮಾಹಿತಿಯಿಲ್ಲದೆ ಅಪಾಯಕಾರಿ ವಾತಾವರಣದಲ್ಲಿ ಹೆಲಿಕಾಪ್ಟರ್ ಚಲಾಯಿಸಬೇಕಾಗುತ್ತದೆ.

ಜನಸಂದಣಿ ಹೆಚ್ಚಿರುವ ಸಮಯದಲ್ಲಿ, ಮೂಲ ಹೆಲಿಪ್ಯಾಡ್ ಗಳಿಂದ ದೇವಾಲಯಗಳ ಹತ್ತಿರದ ಹೆಲಿಪ್ಯಾಡ್ ಗಳಿಗೆ ಹೆಲಿಕಾಪ್ಟರ್ ಗಳು ಸತತವಾಗಿ ಸಂಚರಿಸುತ್ತವೆ. ಕಡಿಮೆ ಅವಧಿಯ ಈ ಪ್ರವಾಸೋದ್ಯಮದಲ್ಲಿ ಪ್ರತಿದಿನ ಗರಿಷ್ಠ ಸಂಖ್ಯೆಯ ಹಾರಾಟ ನಡೆಸುವ ಒತ್ತಡ ಸಂಸ್ಥೆಗಳ ಮೇಲಿರುತ್ತದೆ.

ವಾಣಿಜ್ಯ ಹಿತಾಸಕ್ತಿಗಳಿಂದಾಗಿ ಸುರಕ್ಷತಾ ನಿಯಮಗಳು ಮತ್ತು ಕಾರ್ಯಾಚರಣೆಯ ನಿರ್ಧಾರಗಳಲ್ಲಿ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂಬ ಆತಂಕಗಳು ಮುಂದುವರಿದಿವೆ. ಮಸುಕಾದ ಹವಾಮಾನದಲ್ಲೂ ಹಾರಾಟ ನಡೆಸುವುದು, ತಾಂತ್ರಿಕ ತಪಾಸಣೆಗಳನ್ನು ಸರಿಯಾಗಿ ಮಾಡದಿರುವುದು ಮತ್ತು ತಾಂತ್ರಿಕ ಮುನ್ನೆಚ್ಚರಿಕೆಗಳಿದ್ದರೂ ಹಾರಾಟ ಮುಂದುವರಿಸುವುದಕ್ಕೆ ಈ ಲಾಭದ ಆಸೆ ಕಾರಣವಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಇಂತಹ ಸವಾಲಿನ ಮಾರ್ಗಗಳಲ್ಲಿ ಪೈಲಟ್ ಗಳು ಆಯಾಸವೂ ಒಂದು ಪ್ರಮುಖ ಅಪಾಯಕಾರಿ ಅಂಶವಾಗಿದೆ. ದುರ್ಗಮ ಭೂಪ್ರದೇಶ ಮತ್ತು ಕೆಟ್ಟ ಹವಾಮಾನದಲ್ಲಿ ಸತತವಾಗಿ ಹಾರಾಟ ನಡೆಸುವುದರಿಂದ ಪೈಲಟ್ ಗಳು ನಿರಂತರವಾಗಿ ವಾತಾವರಣ, ಪರ್ವತಗಳು, ಹೆಲಿಕಾಪ್ಟರ್ ಸಾಮರ್ಥ್ಯ ಮತ್ತು ವಾಯು ಸಂಚಾರವನ್ನು ಗಮನಿಸುತ್ತಿರಬೇಕಾಗುತ್ತದೆ. ಇದು ಅವರ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ.

DGCA ಮಾರ್ಗದರ್ಶಿಯು ಧಾರ್ಮಿಕ ಯಾತ್ರೆಯ ಹೆಲಿಕಾಪ್ಟರ್ ಹಾರಾಟದ ಸುರಕ್ಷತಾ ನಿಯಮಗಳನ್ನು ಒಳಗೊಂಡಿದೆ. ಸಂಸ್ಥೆಗಳು ಅಗತ್ಯ ಕಾರ್ಯಾಚರಣೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಈ ಚೌಕಟ್ಟು ಕಡ್ಡಾಯಗೊಳಿಸುತ್ತದೆ. ಆದರೆ, ಹೆಲಿಕಾಪ್ಟರ್ ಅಪಘಾತಗಳು ಮರುಕಳಿಸುತ್ತಿರುವುದು ಈ ನಿಯಮಗಳು ಎಷ್ಟು ಪರಿಣಾಮಕಾರಿಯಾಗಿ ಜಾರಿಯಾಗುತ್ತಿವೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor