×
Ad

ಸಿಆರ್‌ಝೆಡ್ ನಿಯಮಾವಳಿ ಸಡಿಲಿಕೆ : ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ರೆಸಾರ್ಟ್‌ಗಳು

ನಿತ್ಯ ಆತಂಕದಲ್ಲಿ ಮೀನುಗಾರರ ಬದುಕು

Update: 2025-11-10 18:35 IST

ಕಾಪು/ಉಡುಪಿ, ನ.9: ಕರಾವಳಿಯುದ್ದಕ್ಕೂ ಅನಧಿಕೃತ ಕಟ್ಟಡ, ಪ್ರತಿಮೆಗಳು ಹಾಗೂ ಇತರ ನಿರ್ಮಾಣವನ್ನು ನಿಯಂತ್ರಿಸಲು, ತೀರದ ರಕ್ಷಣೆ ಹಾಗೂ ಸುರಕ್ಷತೆ ಖಾತ್ರಿಗೊಳಿಸಲು ಮತ್ತು ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು 1991ರಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ ಕಠಿಣ ನಿಯಮಗಳ ಕರಾವಳಿ ನಿಯಂತ್ರಣ ವಲಯಕ್ಕೆ ಪ್ರಭಾವಿಗಳ, ಬಂಡವಾಳಶಾಹಿ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾಗಳ ಒತ್ತಡದಿಂದ 2011 ಹಾಗೂ 2018ರಲ್ಲಿ ತಿದ್ದುಪಡಿ ಮಾಡಲಾಗಿದೆ. ಆ ಮೂಲಕ ಕಾನೂನನ್ನು ದುರ್ಬಲಗೊಳಿಸಿದ್ದು, ಇದೀಗ ಪ್ರವಾಸೋದ್ಯಮದ ಹೆಸರಿನಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ರೆಸಾರ್ಟ್‌ಗಳು ಕರಾವಳಿಯಲ್ಲಿ ತಲೆತಲಾಂತರದಿಂದ ವಾಸಿಸುತ್ತಿರುವ ಕಡಲ ತೀರದ ಜನರ ಅದರಲ್ಲೂ ವಿಶೇಷವಾಗಿ ಸಾಂಪ್ರದಾಯಿಕ ಮೀನುಗಾರರ ನಿತ್ಯದ ಸಹಜ ಬದುಕನ್ನು ಆತಂಕಕ್ಕೊಡ್ಡುತ್ತಿವೆ.

ದಶಕದ ಹಿಂದೆ ಕಾಪು ತಾಲೂಕಿನ ಸಮುದ್ರ ತೀರ ಪ್ರದೇಶಗಳಲ್ಲಿ ತೀರಾ ವಿರಳವಾಗಿದ್ದ ರೆಸಾರ್ಟ್‌ಗಳ ಸಂಖ್ಯೆ ಇದೀಗ ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಬೇಕಾಬಿಟ್ಟಿಯಾಗಿ ಹೆಚ್ಚುತ್ತಿದೆ. ಇದರಿಂದ ಕಡಲ ತೀರದ ನೈಸರ್ಗಿಕ ಸೌಂದರ್ಯಕ್ಕೆ ದಕ್ಕೆ ಉಂಟಾಗುತ್ತಿದೆ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಾಪು, ಮೂಳೂರು ಪರಿಸರದಲ್ಲಿ ಈಗಾಗಲೇ ಐಷಾರಾಮಿ ರೆಸಾರ್ಟ್‌ಗಳು ನಿರ್ಮಾಣಗೊಂಡಿದ್ದು, ತಾಲೂಕಿನ ಪಡುಬಿದ್ರೆ, ಎರ್ಮಾಳು ತೆಂಕ, ಬಡಾ, ಉಚ್ಚಿಲ, ಮೂಳೂರು, ಕಾಪು ಮತ್ತು ಕೈಪುಂಜಾಲು ಭಾಗಗಳಲ್ಲಿ ಹತ್ತಾರು ಅದ್ದೂರಿಯ ರೆಸಾರ್ಟ್‌ಗಳು ನಿರ್ಮಾಣ ಹಂತದಲ್ಲಿವೆ. ಈ ಪೈಕಿ ಬಹುತೇಕ ಕಟ್ಟಡಗಳು ಸಮುದ್ರ ತೀರದಲ್ಲಿ ನಿರ್ಮಾಣಗೊಳ್ಳುತ್ತಿರುವುದು ಸ್ಥಳೀಯ ಮೀನುಗಾರರ ಚಿಂತೆಗೆ ಕಾರಣವಾಗಿದೆ.

ಎರ್ಮಾಳು ಹಾಗೂ ಉಚ್ಚಿಲ ಪ್ರದೇಶಗಳಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳು ಕಡಲ ತೀರದ ನೈಸರ್ಗಿಕ ಸೌಂದರ್ಯವನ್ನೇ ಬದಲಿಸಿವೆ. ಕೆಲವು ರೆಸಾರ್ಟ್‌ಗಳು ತೀರ ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡುತ್ತಿವೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಬಹುತೇಕ ರೆಸಾರ್ಟ್‌ಗಳು ಪ್ರಭಾವಿಗಳ ಮಾಲಕತ್ವದಲ್ಲಿವೆ ಎಂಬ ಮಾತು ಸ್ಥಳೀಯ ವಲಯಗಳಲ್ಲಿ ಹರಿದಾಡುತ್ತಿದೆ.

ಎರ್ಮಾಳಿನಲ್ಲಿ ಚರಂಡಿ ನಿರ್ಮಾಣ ವಿವಾದ :

ಎರ್ಮಾಳ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಐಷಾರಾಮಿ ರೆಸಾರ್ಟೊಂದರ ಭಾಗವಾಗಿ ಸಮುದ್ರ ತೀರದಲ್ಲೇ ತಡೆಗೋಡೆ ನಿರ್ಮಿಸಿ ಬುದ್ಧ ವಿಗ್ರಹವೊಂದನ್ನು ನಿಲ್ಲಿಸಲಾಗಿದೆ. ತೆಂಕ ಎರ್ಮಾಳು ಪ್ರದೇಶದಲ್ಲೂ ಒಂದು ರೆಸಾರ್ಟ್ ಮಾಲಕರು ಸರಕಾರಿ ಜಾಗದಲ್ಲಿದ್ದ ತೋಡನ್ನು ವಿಸ್ತರಿಸಿ ಕಾಂಕ್ರಿಟ್ ಚರಂಡಿ ಕಾಮಗಾರಿ ಕೈಗೊಂಡಿದ್ದಾರೆ. ಈ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಮೀನುಗಾರಿಕೆಗೆ ತೊಂದರೆಯಾಗುತ್ತಿದೆ ಎಂಬ ಸ್ಥಳೀಯರ ಹಾಗೂ ಮೀನುಗಾರರ ದೂರು ಅರಣ್ಯರೋದನವಾಗಿದೆ.

ಭೂಮಿ ದರ ದುಪ್ಪಟ್ಟು :

ಒಂದು ಕಾಲದಲ್ಲಿ ಸಮುದ್ರ ತೀರದಲ್ಲಿ ಜಾಗದ ದರ ತೀರಾ ಕಡಿಮೆ ಇದ್ದು, ಖರೀದಿಸುವವರೇ ಇರಲಿಲ್ಲ. ಯಾವಾಗ ಸಿಆರ್‌ಝೆಡ್ ಕಾನೂನು ತಿದ್ದುಪಡಿಯ ಮೂಲಕ ದುರ್ಬಲಗೊಂಡಿತೋ ಏಕಾಏಕಿ ಕಡಲತೀರದ ಭೂಮಿ ದರ ಏಕಾಏಕಿ ಹೆಚ್ಚಿದೆ. ಈಗಿನ ದರ ಒಂದು ಸೆಂಟ್ಸ್‌ಗೆ 10 ಲಕ್ಷ ರೂ.ವನ್ನೂ ಮೀರಿದೆ. ಹೀಗಾಗಿ ಸ್ಥಳೀಯರು ಹೆಚ್ಚಿನ ದರಕ್ಕೆ ಭೂಮಿಯನ್ನು ಮಾರಾಟ ಮಾಡಿ ಬೇರೆ ಕಡೆ ಸ್ಥಳಾಂತರಗೊಳ್ಳುತ್ತಿದ್ದರೆ, ಜಾಗ ಖರೀದಿಸಿದ ಧಣಿ ರೆಸಾರ್ಟ್ ನಿರ್ಮಿಸುತ್ತಿದ್ದಾರೆ.

ಎರ್ಮಾಳಿನ ತೀರ ಪ್ರದೇಶವಂತೂ ಸಂಪೂರ್ಣ ರೆಸಾರ್ಟ್ ಮಯವಾಗಿದೆ. ಇಲ್ಲಿ ಸಮುದ್ರಾಭಿಮುಖವಾಗಿ ಇದ್ದ ಪುಟ್ಟಪುಟ್ಟ ಸರಳ ವಾಸದ ಮನೆಗಳೆಲ್ಲಾ ಇಂದು ಮರೆಯಾಗಿ ಐಷಾರಾಮಿ, ಬಂಗ್ಲೆಯಾಕಾರದ ರೆಸಾರ್ಟ್‌ಗಳು ಅಲ್ಲಿ ತಲೆಯೆತ್ತುತ್ತಿವೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಅಲ್ಲಿರುವ ಮನೆಯವರಿಗೆ ವಿವಿಧ ರೀತಿಯ ಆಮಿಷವೊಡ್ಡಿ ಜಾಗಕ್ಕೆ ದರ ಕುದುರಿಸಿ, ಕೆಲವೊಮ್ಮೆ ಬೆದರಿಕೆಯ ಅಸ್ತ್ರವನ್ನು ಪ್ರಯೋಗಿಸಿಯೂ ಬಡಕುಟುಂಬಗಳು ಜಾಗ ನೀಡುವಂತೆ ಮಾಡುತ್ತಿರುವ ಆರೋಪಗಳೂ ಕೇಳಿಬರುತ್ತಿವೆ.

ಕಾಂಡ್ಲಾವನ ನಾಶ :

ರೆಸಾರ್ಟ್ ನಿರ್ಮಾಣದ ವೇಳೆ ಕಡಲ ತೀರದಲ್ಲಿ ಅನಧಿಕೃತ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಕೆಲವೆಡೆಗಳಲ್ಲಿ ಕಾಂಡ್ಲಾ ವನವನ್ನು ನಾಶಪಡಿಸಿ ಇವರ ನಿರ್ಮಾಣ ಕಾರ್ಯ ನಡೆಯುತ್ತದೆ. ಇದನ್ನು ಸಂಬಂಧಿಸಿದವರು ನೋಡಿಯೂ ನೋಡದಂತಿರುತ್ತಾರೆ ಎಂಬುದು ಸ್ಥಳೀಯರ ಆರೋಪ.

ಕಾಂಡ್ಲಾ ವನಗಳು ಸಮುದ್ರದ ರಕ್ಷಾ ಕವಚವಾಗಿದ್ದು, ಇದರಿಂದ ಸಮುದ್ರ ಹಾಗೂ ನದಿ ಕೊರೆತ ನಿಯಂತ್ರಿಸಲ್ಪಡುತ್ತವೆ ಎಂಬುದನ್ನು ವಿಜ್ಞಾನಿಗಳು ಈಗಾಗಲೇ ಘೋಷಿಸಿದ್ದು, ಕಡಲ್ಕೊರೆತ ತಡೆಗೆ ಕಾಂಡ್ಲಾ ವನಗಳನ್ನು ಹೆಚ್ಚೆಚ್ಚು ಬೆಳೆಯುವಂತೆ ಹೇಳಲಾಗುತ್ತಿದೆ. ಆದರೆ ರೆಸಾರ್ಟ್ ಮಾಫಿಯಾ ಇದಕ್ಕೆ ಮೂರುಕಾಸಿನ ಬೆಲೆ ನೀಡುತ್ತಿಲ್ಲ. ಕಾಂಡ್ಲಾ ವನ, ಸಣ್ಣಪುಟ್ಟ ಗಿಡಮರಗಳನ್ನು ನಾಶ ಮಾಡಿ ಅಲ್ಲಿ ಸೌಂದರ್ಯ, ಪ್ರವಾಸೋದ್ಯಮದ ಹೆಸರಿನಲ್ಲಿ ಕಟ್ಟಡ ಹಾಗೂ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಇದರಿಂದ ಭವಿಷ್ಯದಲ್ಲಿ ಪಶ್ಚಿಮ ಕರಾವಳಿ ತೀರದಲ್ಲಿ ಭಾರೀ ದೊಡ್ಡ ಅನಾಹುತ ಆಗುವ ಸಾಧ್ಯತೆಯೂ ಇದ್ದು, ತೀರದ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆಯಾಗಲಿದೆ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಮೀನುಗಾರಿಕೆಗೆ ಆತಂಕ :

ರೆಸಾರ್ಟ್‌ಗಳ ನಿರ್ಮಾಣದಿಂದ ಈಗ ತೀರಾದ ಆತಂಕದಲ್ಲಿರುವವರು ಕರಾವಳಿ ತೀರದ ಸಾಂಪ್ರದಾಯಿಕ ಮೀನುಗಾರರು. ಇವರ ಕುಲಕಸುಬೇ ಇದರಿಂದ ಇಲ್ಲವಾಗುವ ಭೀತಿ ಅವರನ್ನು ಕಾಡತೊಡಗಿದೆ. ಮೊದಲೇ ಬಲಿಷ್ಠ ಕಾರ್ಪೊರೇಟ್ ಕಂಪೆನಿಗಳಿಗೆ ಸರಕಾರಗಳು ಕರಾವಳಿ ತೀರವನ್ನು ಬಟ್ಟಲಲ್ಲಿಟ್ಟು ಧಾರೆ ಎರೆಯುತ್ತಿದ್ದರೆ, ಇದೀಗ ಅಳಿದುಳಿದ ಪ್ರದೇಶದಲ್ಲೂ ನಾಯಿಕೊಡೆಗಳಂತೆ ತಲೆ ಎತ್ತಿರುವ ರೆಸಾರ್ಟ್‌ನಿಂದ ಕೈರಂಪಣಿ, ನಾಡದೋಣಿಯಂಥ ಸಾಂಪ್ರದಾಯಿಕ ಮೀನುಗಾರಿಕೆ ಸಂಪೂರ್ಣ ಇಲ್ಲವಾಗುವ ಸಾಧ್ಯತೆ ನಿಚ್ಚಳವಾಗಿದೆ.

ಬಹುತೇಕ ಕಟ್ಟಡಗಳು ಸಮುದ್ರ ತೀರದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಗ್ಗೆ ನಾಡದೋಣಿ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಸಮುದ್ರದ ತೀರದಲ್ಲಿ ಕಟ್ಟಡ ನಿರ್ಮಿಸುತ್ತಿರುವುದರಿಂದ ಅಲ್ಲಿನ ನೈಸರ್ಗಿಕ ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ. ಇದರಿಂದ ತೀರದಲ್ಲಿ ಸಿಗುವ ವಿವಿಧ ಮೀನುಗಳು ದೂರಕ್ಕೆ ಹೋಗುವುದಲ್ಲದೇ, ಮಳೆಗಾಲದಲ್ಲಿ ಕಡಲ್ಕೊರೆತ ಉಂಟಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂಬುದು ಅವರ ಆತಂಕಕ್ಕೆ ಕಾರಣವಾಗಿದೆ.

‘ನಾವು ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತಿದ್ದೇವೆ. ಬೇಕಾಬಿಟ್ಟಿ ರೆಸಾರ್ಟ್‌ಗಳ ನಿರ್ಮಾಣ ದಿಂದ ಮೀನುಗಾರಿಕೆಗೆ ಸಮಸ್ಯೆ ಉಂಟಾಗಲಿದೆ ಎಂಬ ಆತಂಕವನ್ನು ಮೀನುಗಾರರು ವ್ಯಕ್ತಪಡಿಸುತಿದ್ದಾರೆ.

ಕಾಪು ತಾಲೂಕಿನಲ್ಲಿ ಕಾಪುವಿನಿಂದ ಪಡುಬಿದ್ರೆ ಬ್ಲೂಫ್ಲ್ಯಾಗ್ ಬೀಚ್‌ವರೆಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನೆಪದಲ್ಲಿ ಸಿಆರ್‌ಝೆಡ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಈಗ ಈ ಪ್ರದೇಶ ಸಿಆರ್‌ಝೆಡ್ ವಲಯ-2ರಲ್ಲಿ ಇದೆ. ಇದರಿಂದ ಇಲ್ಲಿ ಮನೆ ನಿರ್ಮಾಣ, ರೆಸಾರ್ಟ್ ಕಟ್ಟಡ ನಿರ್ಮಾಣಕ್ಕೆ ಅನುಮತಿ ಸುಲಭವಾಗಿ ಸಿಗುತ್ತದೆ. ಯಾವುದೇ ಕಟ್ಟಡ ನಿರ್ಮಾಣಕ್ಕೆ ಆನ್‌ಲೈನ್ ಮೂಲಕ ಸೂಕ್ತ ದಾಖಲೆ ಒದಗಿಸಿ ಸುಲಭದಲ್ಲಿ ಅನುಮತಿ ಪಡೆಯಬಹುದು.

ನಿಯಮಗಳನ್ನು ಮೀರಿ ಕಟ್ಟಡ ನಿರ್ಮಿಸಿರುವುದು ಕಂಡುಬಂದಲ್ಲಿ ಅಥವಾ ದೂರುಗಳು ಬಂದಲ್ಲಿ ಅಂತಹ ಕಟ್ಟಡ ಮಾಲಕರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಸಿಆರ್‌ಝೆಡ್ ಅಧಿಕಾರಿಗಳು ಹೇಳುತ್ತಾರೆ.

ರಿಯಲ್ ಎಸ್ಟೇಟ್ ಉದ್ದಿಮೆಗಳಿಂದಾಗಿ ಈ ಭಾಗದಲ್ಲಿ ಭೂಮಿಯ ದರ ಹೆಚ್ಚಾಗಿದ್ದು, ಬಂಡವಾಳ ಶಾಹಿಗಳು ರೆಸಾರ್ಟ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿ ಸಮುದ್ರ ತೀರದಲ್ಲಿರುವ ಕುಮ್ಕಿ ಜಾಗವನ್ನೂ ಅತಿಕ್ರಮಿಸಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಈ ಕುಮ್ಕಿ ಜಾಗದಲ್ಲಿ ಕೈರಂಪಣಿ ಹಾಗೂ ನಾಡದೋಣಿ ಮೀನುಗಾರಿಕೆ ನಡೆಸುವವರು ತಮ್ಮ ದೋಣಿಗಳನ್ನು ಇಡುತ್ತಿದ್ದರು. ಆದರೆ ಈಗ ಈ ಜಾಗದ ಅತಿಕ್ರಮಣದಿಂದ ದೋಣಿ ಇಡಲು ತೊಂದರೆ ಅನುಭವಿಸಬೇಕಾಗಿದೆ. ಯಾವುದೇ ಅಭಿವೃದ್ಧಿಗೆ ಸ್ವಾಗತ. ಇದರಿಂದ ಉದ್ಯೋಗ ದೊರಕುತ್ತದೆ. ಆದರೆ ಇಲ್ಲಿನ ಮೂಲ ಮೀನುಗಾರಿಕೆಗೆ ತೊಂದರೆಯಾದಲ್ಲಿ ನಮ್ಮ ವಿರೋಧ ಎಂದಿಗೂ ಇದ್ದೇ ಇದೆ.

-ಅಶೋಕ್ ಸಾಲ್ಯಾನ್, ಅಧ್ಯಕ್ಷರು, ಪಡುಬಿದ್ರೆ ಕಾಡಿಪಟ್ಣ ಮೊಗವೀರ ಮಹಾಸಭಾ

ಪ್ರವಾಸೋದ್ಯಮ ಹೆಸರಿನಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝೆಡ್) ನಿಯಮಗಳನ್ನು ಸಡಿಲಗೊಳಿಸಿರುವುದು ಕರಾವಳಿಯ ಪರಿಸರ, ಸಾಂಪ್ರದಾಯಿಕ ಮೀನುಗಾರರ ಬದುಕು ಹಾಗೂ ಕರಾವಳಿ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುವ ಸಾಧ್ಯತೆಯನ್ನು ಹೆಚ್ಚಿಸಿದೆ. ಅಲ್ಲದೆ ಕರಾವಳಿ ಪರಿಸರದ ಸಮತೋಲನಕ್ಕೆ ಸಮಸ್ಯೆ ಉಂಟಾಗುವುದು ಮಾತ್ರವಲ್ಲದೆ ತೀರ ಪ್ರದೇಶದಲ್ಲಿ ನೈಸರ್ಗಿಕ ಬದಲಾವಣೆಗಳೂ ಸಂಭವಿಸಬಹುದು. ಕರಾವಳಿ ಗ್ರಾಮಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯಾದ ನಾಡದೋಣಿ ಹಾಗೂ ಕೈರಂಪಣಿ ಮೀನುಗಾರಿಕೆ ಚಟುವಟಿಕೆಗಳು ತೀವ್ರವಾಗಿ ಅಡಚಣೆಯಾಗಲಿವೆ. ಸಮುದ್ರ ತೀರದ ಪ್ರದೇಶಗಳಲ್ಲಿ ಕಟ್ಟಡಗಳು ಹೆಚ್ಚಾಗುತ್ತಿರುವುದರಿಂದ ದೋಣಿಗಳನ್ನು ನಿಲುಗಡೆಗೊಳಿಸಲು ಸ್ಥಳಾವಕಾಶವೇ ಸಿಗದ ಸ್ಥಿತಿ ಉಂಟಾಗಲಿದೆ.

-ಪ್ರೇಮಾನಂದ ಕಲ್ಮಾಡಿ,ಪರಿಸರ ಪ್ರೇಮಿ ಉಡುಪಿ.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News