ರೇರಾ ಕಾಯ್ದೆ ಉಲಂಘನೆ: ಬಿಲ್ಡರ್‌ಗಳಿಂದ 870.87 ಕೋಟಿ ರೂ. ವಸೂಲಾತಿ ಬಾಕ್
PC: istockphoto
ಬೆಂಗಳೂರು : ರೇರಾ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣಗಳಲ್ಲಿ ಬಿಲ್ಡರ್‌ಗಳಿಂದ ಕಂದಾಯ ಬಾಕಿ ವಸೂಲಾತಿ ಮಾಡಲು 870.87 ಕೋಟಿ ರೂ. ಬಾಕಿ ಇರುವುದು ಇದೀಗ ಬಹಿರಂಗವಾಗಿದೆ.
ಹಲವು ವರ್ಷಗಳಿಂದಲೂ ಪ್ರವರ್ತಕರು ಮತ್ತು ಬಿಲ್ಡರ್‌ಗಳು ಕೋಟ್ಯಂತರ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದ್ದರೂ ನಿರಾತಂಕವಾಗಿ ಹೊಸ ಯೋಜನೆಗಳಿಗೆ ರೇರಾ ಅನುಮತಿ ನೀಡುತ್ತಿದೆ.
ವಿಶೇಷವೆಂದರೆ ಬಾಕಿದಾರ ಬಿಲ್ಡರ್‌ಗಳ ಹೊಸ ಯೋಜನೆಗೆ ಅನುಮೋದನೆ ನೀಡದೇ ಇರುವುದಕ್ಕೆ ರೇರಾ ಕಾಯ್ದೆ ಮತ್ತು ನಿಯಮಗಳಲ್ಲಿ ಅವಕಾಶವೇ ಇಲ್ಲ. ಹೀಗಾಗಿ ಬಾಕಿದಾರ ಬಿಲ್ಡರ್‌ಗಳು, ಪ್ರವರ್ತಕರು ತಮ್ಮ ಬಾಕಿ ಮೊತ್ತವನ್ನು ಪಾವತಿಸದೆಯೇ ಹೊಸ ಯೋಜನೆಗಳಿಗೆ ರೇರಾದಿಂದ ಅನುಮತಿ ದೊರೆಯುತ್ತಿದೆ. ಬೇಬಾಕಿ ಪ್ರಮಾಣ ಪತ್ರ ಪಡೆಯವುದನ್ನು ಕಡ್ಡಾಯಗೊಳಿಸಲು ರೇರಾವು ಸೂಕ್ತ ನಿಯಮಗಳನ್ನೂ ರೂಪಿಸಿಲ್ಲ.
ಹೀಗಾಗಿ ಇದು ನಿಯಂತ್ರಣದ ಶಿಸ್ತಿಗೆ ಧಕ್ಕೆ ತಂದಿದೆ. ಖರೀದಿದಾರರ ಹಿತಾಸಕ್ತಿಗೆ ಹಾನಿಯಾಗಿದೆ ಮತ್ತು ರೇರಾದ ವಿಶ್ವಾಸಾರ್ಹತೆಯನ್ನು ಕುಗ್ಗಿಸಿದೆ. ಹೀಗಿದ್ದರೂ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಕಾಯ್ದೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವು ಸಭೆಗಳು ನಡೆಯುತ್ತಲೇ ಇವೆ. ಆದರೂ ರೇರಾ ಕಾಯ್ದೆಗೆ ಬಲತುಂಬುವ ನಿಟ್ಟಿನಲ್ಲಿ ತೀವ್ರ ಕ್ರಮಗಳನ್ನು ಕೈಗೊಳ್ಳುತ್ತಲೇ ಇಲ್ಲ.
ಹೀಗಾಗಿಯೇ ಪ್ರವರ್ತಕರು ಮತ್ತು ಬಿಲ್ಡರ್‌ಗಳು, ಭೂ ಕಂದಾಯ ಬಾಕಿ ಮೊತ್ತವನ್ನು ಪಾವತಿಸುತ್ತಿಲ್ಲ. ಅಲ್ಲದೇ ರೇರಾ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಇಂತಹ ಪ್ರಕರಣಗಳಲ್ಲಿ ಭೂ ಕಂದಾಯ ರೂಪದಲ್ಲಿ ದಂಡ ವಸೂಲಿ ಮಾಡಲು ರೇರಾ ಕಾಯ್ದೆಯಲ್ಲಿ ಅವಕಾಶಗಳಿವೆ. ಆದರೂ ವಸೂಲಾತಿ ಮಾಡುವಲ್ಲಿ ರಾಜ್ಯದ ಜಿಲ್ಲಾಧಿಕಾರಿಗಳು ವಿಫಲವಾಗಿದ್ದಾರೆ.
2025ರ ಮಾಚ್‌ರ್ನಲ್ಲಿ ನಡೆದಿದ್ದ ಅಧಿವೇಶನದಲ್ಲಿ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಲಿಖಿತವಾಗಿ ನೀಡಿದ್ದ ಉತ್ತರದ ಪ್ರಕಾರ, 1,427 ಪ್ರಕರಣಗಳಲ್ಲಿ ಬಿಲ್ಡರ್, ಡೆವಲಪರ್‌ಗಳಿಂದ ಒಟ್ಟಾರೆ 666,97,40,187 ರೂ.ಯನ್ನು ವಸೂಲು ಮಾಡಬೇಕಿತ್ತು. ಆದರೀಗ 2025ರ ನವೆಂಬರ್ ಅಂತ್ಯಕ್ಕೆ ಈ ಪ್ರಕರಣಗಳ ಸಂಖ್ಯೆ 2,200ಕ್ಕೇರಿದೆ.
ಕೇಂದ್ರ ಸರಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನಿರ್ದೇಶನದಂತೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು ಕಾಯ್ದೆಯನ್ನು ಬಲಪಡಿಸುವ ಕುರಿತು 2025ರ ಅಕ್ಟೋಬರ್ 4ರಂದು ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿತ್ತು. ಈ ಸಭೆಯಲ್ಲಿ ಕಂದಾಯ ಬಾಕಿ ಕುರಿತು ವಿವರವಾಗಿ ಚರ್ಚೆಯಾಗಿದೆ. ಈ ಸಭೆಯಲ್ಲಿ ಚರ್ಚಿಸಲಾಗಿದ್ದ ಪ್ರಮುಖ ಅಂಶಗಳ ಕುರಿತಾಗಿ ಟಿಪ್ಪಣಿ ಹಾಳೆಗಳು "the-file.in"ಗೆ ಲಭ್ಯವಾಗಿವೆ.
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು ಕಂದಾಯ ಬಾಕಿ ವಸೂಲಾತಿಗೆ ಆದೇಶಗಳನ್ನು ಹೊರಡಿಸಿತ್ತು. 2018ರಿಂದ 2025ರ ಸೆ.30ರವರೆಗೆ ಒಟ್ಟು 2,200 ಪ್ರಕರಣಗಳ ಪೈಕಿ 970.10 ಕೋಟಿ ರೂ. ವಸೂಲಾತಿಗೆ ಬಾಕಿ ಇದೆ ಎಂಬ ಮಾಹಿತಿ ಒದಗಿಸಿತ್ತು. ಈ 970.10 ಕೋಟಿ ರೂ.ಯನ್ನು ವಸೂಲು ಮಾಡಲು ರೇರಾವು, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚಿಸಿತ್ತು.
ಈ ಪೈಕಿ 255 ಪ್ರಕರಣಗಳಲ್ಲಿ 99.23 ಕೋಟಿ ರೂ.ಯನ್ನು ಮಾತ್ರ ವಸೂಲಾಗಿದೆ. ಇನ್ನುಳಿದ 1,945 ಪ್ರಕರಣಗಳಲ್ಲೂ ರೇರಾ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಈ ಪ್ರಕರಣಗಳಲ್ಲಿ 325 ಪ್ರವರ್ತಕರು ಮತ್ತು ಬಿಲ್ಡರ್‌ಗಳು ಇದ್ದಾರೆ. ಇವರಿಂದ 870.87 ಕೋಟಿ ರೂ. ವಸೂಲು ಮಾಡಲು ಬಾಕಿ ಇರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಬಿಲ್ಡರ್‌ಗಳಿಂದ 870.87 ಕೋಟಿ ರೂ. ವಸೂಲಾತಿಗಾಗಿ ಬಾಕಿ ಇದೆ ಎಂಬ ಸಂಗತಿಯನ್ನು ರೇರಾ ಮತ್ತು ವಸತಿ ಇಲಾಖೆಯ ಸಚಿವ ಬಿ. ಝಡ್. ಝಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದಾರೆ. ಆದರೂ ವಸೂಲಾತಿ ಕಾರ್ಯಾಚರಣೆ ಬಿರುಸುಗೊಂಡಿಲ್ಲ.
ರೇರಾ ಸಭೆಯಲ್ಲಿ ಪ್ರವರ್ತಕರು, ಬಿಲ್ಡರ್‌ಗಳಿಂದ ಕಂದಾಯ ವಸೂಲಾತಿಗೆ ಬಾಕಿ ಇರುವ ಪ್ರಕರಣಗಳ ಬಗ್ಗೆ ಮರು ಪಾವತಿ ಪರಿಹಾರ ಎಂದು ವರ್ಗೀಕರಿಸಿ ಮಾಹಿತಿ ನೀಡುವಂತೆ ಸೂಚಿಸಿತ್ತು. ಅಲ್ಲದೇ ಅವಧಿ ಮೀರಿದ ಹಾಗೂ ಸ್ಥಗಿತಗೊಂಡ ಯೋಜನೆಗಳ ವಿವರಗಳನ್ನು ಸಲ್ಲಿಸಬೇಕು ಎಂದು ಸಭೆಯು ಸೂಚಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.
ಸುಮಾರು 8 ವರ್ಷಗಳಿಂದ ಬಾಕಿದಾರ ಪ್ರವರ್ತಕರು, ಬಿಲ್ಡರ್‌ಗಳಿಂದ 870.87 ಕೋಟಿ ರು ಬಾಕಿ ವಸೂಲಾತಿ ಮಾಡಿಲ್ಲ. ಈ ಬಗ್ಗೆ ತೀವ್ರ ಕ್ರಮ ಕೈಗೊಳ್ಳುವ ಅಗತ್ಯವಿದ್ದರೂ ಸಹ ಸರಕಾರ ಆಸಕ್ತಿ ವಹಿಸಿಲ್ಲ. ಬಾಕಿದಾರ ಪ್ರವರ್ತಕರು, ಬಿಲ್ಡರ್‌ಗಳು ಹೊಸ ಯೋಜನೆಯ ನೋಂದಣಿಗಾಗಿ ಪ್ರಾಧಿಕಾರಕ್ಕೆ ಸಲ್ಲಿಸುವ ಅರ್ಜಿಗಳಿಗೆ ಅನುಮೋದನೆ ನೀಡದೇ ಇರುವುದಕ್ಕೆ ರೇರಾ ಕಾಯ್ದೆ ಮತ್ತು ನಿಯಮಗಳಲ್ಲಿ ಅವಕಾಶವಿಲ್ಲ ಎಂಬ ಸಂಗತಿಯನ್ನು ರೇರಾ ಕಾರ್ಯದರ್ಶಿ ಸಭೆಯ ಮುಂದಿಟ್ಟಿರುವುದು ಗೊತ್ತಾಗಿದೆ.
’ಬಾಕಿದಾರ ಪ್ರವರ್ತಕರು, ಬಿಲ್ಡರ್ಗಳ ಮಾಹಿತಿಯನ್ನು ನಗರಾಭಿವೃದ್ದಿ ಇಲಾಖೆಗೆ ಕಳಿಸಿ ಸ್ವಾಧೀನಾನುಭವ ಪತ್ರ ಮತ್ತು ಸಿ ಸಿ ನೀಡುವ ಸಮಯದಲ್ಲಿ ರೇರಾದಿಂದ ಬೇಬಾಕಿ ಪ್ರಮಾಣ ಪತ್ರ ಪಡೆಯವುದನ್ನು ಕಡ್ಡಾಯಗೊಳಿಸಲು ಸೂಕ್ತ ನಿಯಮಗಳನ್ನು ತರಲು ಸರಕಾರಕ್ಕೆ ಪ್ರಸ್ತಾವ ಮಂಡಿಸಬೇಕು,’ ಎಂದು ಸಭೆಯು ಸೂಚಿಸಿರುವುದು ತಿಳಿದು ಬಂದಿದೆ.ಅದೇ ರೀತಿ ಯೋಜನೆಗಳನ್ನು ಪೂರ್ಣಗೊಳಿಸದ ಪ್ರವರ್ತಕರು ಮತ್ತು ಬಿಲ್ಡರ್‌ಗಳಿಗೆ ಹಣವನ್ನು ಬ್ಯಾಂಕ್‌ನಿಂದ ಬಿಡುಗಡೆ ಮಾಡುವುದನ್ನು ನಿಯಂತ್ರಿಸಲು ಬಾಕಿದಾರ ಬಿಲ್ಡರ್‌ಗಳ ಪಟ್ಟಿಯನ್ನು ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿಗೆ ಒದಗಿಸಲು ನಿರ್ದೇಶಿಸಿದೆ.
‘ಅನೇಕ ಕಟ್ಟಡ ಬಿಲ್ಡರ್, ಪ್ರವರ್ತಕರು, ಅಭಿವೃದ್ಧಿಕಾರರು ರಿಯಲ್ ಎಸ್ಟೇಟ್ ಕಾಯ್ದೆ 2016ರ ಅಡಿಯಲ್ಲಿ ಕಟ್ಟಡ ಯೋಜನೆ ಪೂರ್ಣಗೊಳಿಸದೇ ಉಳಿಸಿಕೊಂಡ ಬಾಕಿ ಮೊತ್ತ, ರೇರಾದಿಂದ ವಿಧಿಸಲಾದ ದಂಡ, ಅಥವಾ ಇನ್ನಿತರ ಅಧಿನಿಯಮಗಳ ಉಲ್ಲಂಘನೆಗಳಿರುವ ಸ್ಥಿತಿಯಲ್ಲಿಯೇ ಹೊಸ ರಿಯಲ್ ಎಸ್ಟೇಟ್ ಯೋಜನೆಗಳನ್ನು ಆರಂಭಿಸಲು ಅವರಿಗೆ ಅನುಮೋದನೆ ನೀಡಲಾಗುತ್ತಿದೆ,’ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ 2025ರ ಅಕ್ಟೋಬರ್ 29ರಂದು ಬರೆದಿದ್ದ ಟಿಪ್ಪಣಿಯಲ್ಲಿ ವಿವರಿಸಿದ್ದರು.
ಭೂ ಕಂದಾಯ ಬಾಕಿ ಕುರಿತು ವಿಧಾನಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ವಸತಿ ಸಚಿವ ಬಿ. ಝಡ್.ಝಮೀರ್ ಅಹ್ಮದ್ ಖಾನ್ ಅವರು ಭೂ ಕಂದಾಯ ಬಾಕಿ ಇರುವ ಮೊತ್ತದ ಅಂಕಿ ಅಂಶದ ಮಾಹಿತಿ ಒದಗಿಸಿದ್ದರು. ಆದರೆ ಬಹುಕೋಟಿಗಳಷ್ಟು ಬಾಕಿ ಉಳಿಸಿಕೊಂಡಿರುವ ಬಿಲ್ಡರ್, ಡೆವಲಪರ್‌ಗಳ ವಿವರಗಳನ್ನು ಒದಗಿಸಿರಲಿಲ್ಲ.
2024 ರ ಡಿಸೆಂಬರ್ 31ರ ಅಂತ್ಯಕ್ಕೆ ಒಟ್ಟು 1,660 ಪ್ರಕರಣಗಳಲ್ಲಿ 750,85,87,682 ಕೋಟಿ ರೂ. ಮೊತ್ತವನ್ನು ಭೂ ಕಂದಾಯ ಬಾಕಿ ಎಂದು 278 ಬಿಲ್ಡರ್‌ಗಳಿಗೆ ವಸೂಲಾತಿ ಆದೇಶ ಹೊರಡಿಸಿತ್ತು. 1,660 ಪ್ರಕರಣಗಳ ಪೈಕಿ 103 ಪ್ರಕರಣಗಳಲ್ಲಿ ಲೋಕ ಅದಾಲತ್‌ನಲ್ಲಿ ರಾಜಿ ಮೂಲಕ 54,66,59,913 ರೂ.ಯನ್ನು ವಸೂಲಿ ಮಾಡಿದೆ. ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ 130 ಪ್ರಕರಣಗಳಲ್ಲಿ 37,21,87,582 ರೂ.ಯನ್ನು ವಸೂಲಿ ಮಾಡಿತ್ತು.
ಒಟ್ಟು 233 ಪ್ರಕರಣಗಳಿಂದ ಒಟ್ಟು 91,88,47,495 ರು.ಗಳನ್ನು ವಸೂಲಿ ಮಾಡಲಾಗಿದೆ. ಉಳಿದ 1,427 ಪ್ರಕರಣಗಳಲ್ಲಿ ಒಟ್ಟಾರೆ 666,97,40,187 ರೂ. ಭೂ ಕಂದಾಯ ಬಾಕಿ ಇತ್ತು.