×
Ad

ವೀರಪ್ಪನ್ ವಿಶೇಷ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ: ಪರಿಶೀಲನಾ ವರದಿ ಕೋರಿಕೆ

Update: 2025-06-17 11:00 IST

ವೀರಪ್ಪನ್ 

ಬೆಂಗಳೂರು: ನರಹಂತಕ ವೀರಪ್ಪನ್ ವಿಶೇಷ ಕಾರ್ಯಾಚರಣೆಯಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿ, ಸಿಬ್ಬಂದಿ ಬಹುಮಾನಕ್ಕೆ ಅರ್ಹರಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಖಚಿತಪಡಿಸಿಕೊಂಡು ಪರಿಶೀಲನಾ ವರದಿಯನ್ನು ಸಲ್ಲಿಸಬೇಕು ಎಂದು ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯು ಅಧಿಕಾರಿಗಳಿಗೆ ಸೂಚಿಸಿದೆ.

ಅಲ್ಲದೆ 1993ರ ಆದೇಶದಲ್ಲಿ ಸತತ 15 ವರ್ಷಗಳಿಂದ ಕಾರ್ಯಾಚರಣೆಯಲ್ಲಿ ತೊಡಗಿದವರಿಗೆ ಬಹುಮಾನ ನೀಡಲು ಅವಕಾಶ ನೀಡಿರುವ ಬಗ್ಗೆ ನಮೂದಿಸಿಲ್ಲ ಎಂಬ ಸಂಗತಿಯೂ ಇದೀಗ ಬಹಿರಂಗವಾಗಿದೆ.

ಎಂ. ರಾಜೇಂದ್ರ ಮತ್ತು ಎ.ಟಿ. ವೆಂಕಟೇಗೌಡ ಮತ್ತಿತರರು ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿ (10982/2018, c/w 50155-167 dated 14.08.2024)ಗೆ ಸಂಬಂಧಿಸಿದಂತೆ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ವರದಿ ಸಲ್ಲಿಸಲು ನಿರ್ದೇಶಿಸಿದೆ.

2025ರ ಮೇ 2ರಂದು ಅಧಿಕಾರಿಗಳ ಸಭೆ ನಡೆದಿತ್ತು. ಈ ಸಭೆಯ ನಡಾವಳಿಗಳು ‘the-file.in’ಗೆ ಲಭ್ಯವಾಗಿವೆ.

‘ನರಹಂತಕ ವೀರಪ್ಪನ್ನನ್ನು 2004ರ ಅಕ್ಟೋಬರ್ 18ರಂದು ಸಂಹಾರ ಮಾಡಿದ ದಿನದಂದು ಎಸ್‌ಟಿಎಫ್‌ನಲ್ಲಿ ಕೆಲಸ ನಿರ್ವಹಿಸಿದಂತಹ ಅಧಿಕಾರಿ, ಸಿಬ್ಬಂದಿಯ ಪೈಕಿ ನ್ಯಾಯಾಲಯದ ಆದೇಶದಲ್ಲಿನ ಒಟ್ಟು 24 ಅಧಿಕಾರಿ, ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿದೆಯೇ ಎಂದು ಸರಕಾರವು 2005ರ ಜುಲೈ 8ರಂದು ಹೊರಡಿಸಿದ್ದ ಆದೇಶದಂತೆ ಬಹುಮಾನಕ್ಕೆ ಅರ್ಹರಿರುವ ಬಗ್ಗೆ ಪರಿಶೀಲಿಸಿ ಖಚಿತಪಡಿಸಿಕೊಂಡು ಎರಡು ದಿನದೊಳಗಾಗಿ ಆರ್ಥಿಕ ಇಲಾಖೆಯು ಕೋರಿರುವ ಮಾಹಿತಿ ಅನುಸಾರ ಮಾಹಿತಿ ಒದಗಿಸಬೇಕು’ ಎಂದು ಚಾಮರಾಜನಗರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸಿಬ್ಬಂದಿ ಮತ್ತು ನೇಮಕಾತಿ ವಿಭಾಗದ ಎಪಿಸಿಸಿಎಫ್ ಅವರಿಗೆ ಸೂಚಿಸಿರುವುದು ನಡಾವಳಿಯಿಂದ ಗೊತ್ತಾಗಿದೆ.

ಈ ಬಹುಮಾನಕ್ಕೆ ಅರ್ಹರಿರುವ ಅಧಿಕಾರಿ, ಸಿಬ್ಬಂದಿ ಮತ್ತು ಇದಕ್ಕೆ ಎಷ್ಟು ವೆಚ್ಚವಾಗಲಿದೆ ಎಂಬ ಸಂಪೂರ್ಣ ಮಾಹಿತಿ ಒದಗಿಸಬೇಕು ಎಂದೂ ನಿರ್ದೇಶಿಸಲಾಗಿದೆ. 2004ರ ಅಕ್ಟೋಬರ್ 18ರಂದು ಕೆಲಸ ನಿರ್ವಹಿಸಿರುವ ಬಗ್ಗೆ ಹಾಜರಾತಿ ಪುಸ್ತಕ ಅಥವಾ ಟಾಸ್ಕ್

ಫೋರ್ಸ್‌ಗೆ ನಿಯುಕ್ತಿಗೊಳಿಸಿದ ಆದೇಶದ ಅನ್ವಯ ಖಚಿತಪಡಿಸಿಕೊಳ್ಳಬೇಕು ಎಂದೂ ಸಹ ಸೂಚಿಸಿರುವುದು ತಿಳಿದು ಬಂದಿದೆ.

ಅದೇ ರೀತಿ 2005ರ ಜುಲೈ 8ರಂದು ಒಳಾಡಳಿತ ಇಲಾಖೆಯು ಹೊರಡಿಸಿದ್ದ ಆದೇಶ (ಎಚ್‌ಡಿ 33 ಪಿಒಪಿ 2005) ಅನ್ವಯ ಒಟ್ಟು 754 ಅಧಿಕಾರಿ, ಸಿಬ್ಬಂದಿಯ ಪೈಕಿ ಎಲ್ಲಾ ಅಧಿಕಾರಿಗಳಿಗೆ ನಿವೇಶನ ಹಂಚಲಾಗಿದೆಯೇ, ಹಂಚಿದ್ದಲ್ಲಿ ಯಾವ ಮಾನದಂಡಗಳನ್ನು ಅನ್ವಯಿಸಲಾಗಿದೆ, ನಿವೇಶನ ಹಂಚದಿದ್ದಲ್ಲಿ ಯಾವ ರೀತಿ ಕ್ರಮವಹಿಸಲಾಗಿದೆ ಮತ್ತು ಈ ಸಂಬಂಧ ಯಾವುದಾದರೂ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆಯೇ, ಇದ್ದಲ್ಲಿ ಪ್ರಸ್ತುತ ಹಂತದ ಮಾಹಿತಿಯನ್ನು ಒದಗಿಸಬೇಕು ಎಂದು ಒಳಾಡಳಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವುದು ಗೊತ್ತಾಗಿದೆ.

ವೀರಪ್ಪನ್ ವಿಶೇಷ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಒಟ್ಟು 299 ನೌಕರರಲ್ಲಿ ಎಂ. ರಾಜೇಂದ್ರ ಮತ್ತು ಎ.ಟಿ. ವೆಂಕಟೇಗೌಡ ಮತ್ತಿತರರು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ (10982/2018, c/w 50155-167 dated 14.08.2024) ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಒಟ್ಟು 14 ಅರ್ಜಿದಾರರು ಹಾಗೂ ಕಾಳೇಗೌಡ ಮತ್ತು ಇತರರು ಹೈಕೋರ್ಟ್‌ನಲ್ಲಿ (ರಿಟ್ ಅರ್ಜಿ 31605/2024) ಪ್ರಕರಣದಲ್ಲಿ 10 ಅರ್ಜಿದಾರರು ಸೇರಿ ಒಟ್ಟಾರೆ 24 ಅಧಿಕಾರಿ ನೌಕರರ ಮಾಹಿತಿಯನ್ನು ಒದಗಿಸಿತ್ತು.

ಅರ್ಜಿದಾರರುಗಳಿಗೆ ಪ್ರೋತ್ಸಾಹ ಧನ 35.00 ಲಕ್ಷ ರೂ. ಹಾಗೂ 2010ರ ಸರಕಾರದ ಆದೇಶದ ಅನ್ವಯ ನಿವೇಶನದ ಮಂಜೂರಾತಿಗಾಗಿ ಪ್ರತಿ ಚದರ ಅಡಿಗೆ 210 ರೂ.ನಂತೆ 63.00 ಲಕ್ಷ ಮತ್ತು ವಾರ್ಷಿಕ ವೇತನ ಭಡ್ತಿಗಾಗಿ 5.06 ಲಕ್ಷ ರೂ. ಸೇರಿ ಒಟ್ಟಾರೆ 103.60 ಲಕ್ಷ ರೂ.ಗಳ ಅವಶ್ಯಕತೆ ಇದೆ ಎಂದು ಅಂದಾಜಿಸಿರುವುದು ತಿಳಿದು ಬಂದಿದೆ.

‘ವೀರಪ್ಪನ್ ವಿಶೇಷ ಕಾರ್ಯಾಚರಣೆಯಲ್ಲಿ ಸತತವಾಗಿ 15 ವರ್ಷಗಳಿಂದ ಭಾಗವಹಿಸಿದ್ದ ಹಾಗೂ ಎಸ್‌ಟಿಎಫ್‌ನಲ್ಲಿ ಎಲ್ಲಾ ಅಧಿಕಾರಿ ಸಿಬ್ಬಂದಿ ಸೇರಿ ಒಟ್ಟಾರೆ 299 ಮಂದಿ ಭಾಗವಹಿಸಿದ್ದಾರೆ. ಇವರೆಲ್ಲರಿಗೂ ಬಹುಮಾನ ನೀಡಲು 1993ರ ಸರಕಾರ ಆದೇಶದ ಅನ್ವಯ ಅಂದಾಜಿಸಲಾಗುತ್ತಿದೆ’ ಎಂದು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಭೆಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಸರಕಾರದ ಪ್ರಧಾನ ಕಾರ್ಯದರ್ಶಿ ಅವರು ‘ಸತತ 15 ವರ್ಷಗಳಿಂದ ಕಾರ್ಯಾಚರಣೆಯಲ್ಲಿ ತೊಡಗಿದವರಿಗೆ ಬಹುಮಾನ ನೀಡಲು ಅವಕಾಶ ನೀಡಿರುವ ಬಗ್ಗೆ ಆದೇಶದಲ್ಲಿ ನಮೂದಿಸಿಲ್ಲ’ ಎಂದು ಸಭೆಯ ಗಮನಕ್ಕೆ ತಂದಿರುವುದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ.ಮಹಾಂತೇಶ್

contributor

Similar News