ಯುವಜನರಲ್ಲಿ ಹೆಚ್ಚಾಗುತ್ತಿರುವ ಬೆನ್ನು ನೋವು; ವೈದ್ಯರು ನೀಡಿದ ಐದು ಸಲಹೆಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ | Photo Credit : magnific.com
ಪೆರ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಿರುವ ಡಾ. ಕೇಶವ್ ನಾಯ್ಕ್ ಅವರು ಯುವಜನರಲ್ಲಿ ಬೆನ್ನು ನೋವು ಹೆಚ್ಚಾಗುತ್ತಿರುವ ಕುರಿತು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ಯುವಜನರಲ್ಲಿ ಬೆನ್ನು ನೋವು ಹೆಚ್ಚಾಗಲು ಇತ್ತೀಚಿನ ಜೀವನಶೈಲಿ ಮುಖ್ಯ ಕಾರಣವಾಗುತ್ತಿದೆ ಎಂದು ಪೆರ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಿರುವ ಡಾ. ಕೇಶವ್ ನಾಯ್ಕ್ ಅವರು ಎಚ್ಚರಿಸಿದ್ದಾರೆ. ಅವರ ಪ್ರಕಾರ, ಹಿಂದಿನ ಕಾಲದಲ್ಲಿ ಹಿರಿಯ ವಯಸ್ಕರಲ್ಲಿ ವಯಸ್ಸು, ದೇಹದ ಭಂಗಿ ಮತ್ತು ಭಾರ ಹೊರುವುದರಿಂದ ಬೆನ್ನು ನೋವು ಕಾಣಿಸಿಕೊಳ್ಳುತ್ತಿತ್ತು. ಈಗಿನ ಕಾಲದಲ್ಲಿ ಜನರ ಜೀವನಶೈಲಿಯಿಂದಾಗಿ ಬೆನ್ನು ನೋವು ಉಂಟಾಗುವುದು ಕಂಡುಬರುತ್ತಿದೆ.
“ಕೂರುವ ಭಂಗಿ, ಒತ್ತಡ, ಮೊಬೈಲ್ ಅನ್ನು ನೇರವಾಗಿ ಹಿಡಿಯದೆ ಬಳಸುವುದು ಮತ್ತು ಕಂಪ್ಯೂಟರ್ ಬಳಕೆಯಿಂದಾಗಿ ಯುವಜನರಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಸಣ್ಣ ಮಕ್ಕಳಲ್ಲೂ ಬೆನ್ನು ನೋವು ಗಮನಿಸುತ್ತಿದ್ದೇವೆ. ಈಗಿನ ಮಕ್ಕಳು ಬೆನ್ನು ನೋವು ಮತ್ತು ಕಾಲು ನೋವು ಬರುತ್ತದೆ ಎಂದು ಹೇಳುತ್ತಾರೆ. ಅವರ ಜೀವನಶೈಲಿಯೇ ಅದಕ್ಕೆ ಕಾರಣ. ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ತರಗತಿಗಳು ಇರುವ ಕಾರಣ ನಿರಂತರವಾಗಿ ಕೂರುತ್ತಾರೆ. ಅದೂ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಮಕ್ಕಳು ಬೆನ್ನಿನ ಮೇಲೆ 10-20 ಕೆ.ಜಿ. ತೂಕದ ಬ್ಯಾಗ್ ಹೊತ್ತುಕೊಂಡು ಬಗ್ಗಿಕೊಂಡು ನಡೆಯುತ್ತಿದ್ದಾರೆ. ಕಾಲೇಜು ಓದು ಆರಂಭಿಸುವವರೆಗೂ ಹೀಗೆ ಬಗ್ಗಿ ನಡೆಯುವುದು ಅವರ ಸ್ನಾಯುಗಳ ಮೇಲೆ ಪ್ರಭಾವ ಬೀರಿ ಡಿಸ್ಕ್ ಮೇಲೆ ಪರಿಣಾಮ ಬೀರುತ್ತದೆ. ನೇರವಾಗಿ ಇರುವ ಬೆನ್ನು ಬಾಗುವುದರಿಂದ ನೋವು ಬರುತ್ತದೆ. ಇದು ಸರ್ವೇಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುತ್ತಿದೆ” ಎನ್ನುತ್ತಾರೆ ಡಾ. ಕೇಶವ್ ನಾಯ್ಕ್.
ಅವರು ಹೇಳುವ ಪ್ರಕಾರ, ಐಟಿ ವೃತ್ತಿಪರರು ಮತ್ತು ಕಚೇರಿಗಳಲ್ಲಿ ಕೆಲಸ ಮಾಡುವವರಲ್ಲೂ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಸ್ವಲ್ಪ ಹೊತ್ತು ಕುಳಿತ ನಂತರ ಚಲನೆ ಮುಖ್ಯ. ನಡಿಗೆಯಿಂದ ನೋವು ಗುಣವಾಗಬಹುದು. ಬೆನ್ನು ನೋವಿಗೆ ಔಷಧಿ ಸೇವಿಸುವುದರಿಂದ ಪ್ರಯೋಜನವಿಲ್ಲ. ಜೀವನಶೈಲಿಯಲ್ಲಿ ಬದಲಾವಣೆ ಆಗಬೇಕಿದೆ.
►ಎಚ್ಚರಿಕೆಯ ಚಿಹ್ನೆಗಳು ಯಾವುವು?
ಎರಡು ಮೂರು ದಿನಗಳ ಕಾಲ ನಿಧಾನವಾಗಿ ನೋವು ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಗಂಭೀರವಾಗಿರುವುದಿಲ್ಲ. ಬಿದ್ದಾಗ, ಅಪಘಾತವಾದಾಗ ಅಥವಾ ಗಾಯವಾದಾಗ ಮಾತ್ರ ಗಂಭೀರ ನೋವು ಉಂಟಾಗುತ್ತದೆ. ಜೀವನಶೈಲಿಯಿಂದ ಉಂಟಾಗುವ ಇತರ ಬೆನ್ನು ನೋವುಗಳು ಸಾಮಾನ್ಯವಾಗಿ ನಿಧಾನವಾಗಿ ಕಾಣಿಸಿಕೊಳ್ಳುತ್ತವೆ. ಗೃಹಿಣಿಯರು ಸದಾ ಕೆಲಸ ಮಾಡುತ್ತಿರುವ ಕಾರಣ ಸ್ನಾಯುಗಳ ಮೇಲೆ ಪರಿಣಾಮ ಉಂಟಾಗಿ, ಅದು ಡಿಸ್ಕ್ ಗಳ ಮೇಲೂ ಪ್ರಭಾವ ಬೀರಬಹುದು. ಇಂತಹ ನೋವು ಕ್ರಮೇಣ ಕಾಣಿಸಿಕೊಳ್ಳಬಹುದು. ನಡಿಗೆಯಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.
ಜಿಮ್ ಗೆ ಹೋಗಿ ತೂಕ ಎತ್ತಬಹುದು. ಆದರೆ ಜಿಮ್ನಲ್ಲಿ ಭಾರ ಎತ್ತುವಾಗ ಹಠಾತ್ತನೆ ಎತ್ತಬಾರದು. ನೇರವಾಗಿ ಬಾಗಿ ಎತ್ತಲು ಹೋದರೆ ಸ್ನಾಯುಗಳಿಗೆ ಹಾನಿಯಾಗಬಹುದು. ಆಗ ನೋವು ಬರುತ್ತದೆ. ಮೊಣಕಾಲುಗಳನ್ನು ಬಗ್ಗಿಸಿ ನಿಧಾನವಾಗಿ ಎತ್ತಬೇಕು.
►ಸ್ಕ್ರೀನ್ ಟೈಮ್ ಹೆಚ್ಚಾಗಿರುವುದು ಕಾರಣವೇ?
ಕತ್ತು ಬಗ್ಗಿಸಿ ಮೊಬೈಲ್ ಬಳಸುವುದು ಮತ್ತು ಕಂಪ್ಯೂಟರ್ ಬಳಕೆ ಹೆಚ್ಚಾಗಿರುವುದು ಬೆನ್ನಿನ ಮೇಲಿನ ಒತ್ತಡವನ್ನು ಹೆಚ್ಚಿಸಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
“ಮೊಬೈಲ್ ಅನ್ನು ನೇರವಾಗಿ ಹಿಡಿದು ಬಳಸಬೇಕು. ಕುತ್ತಿಗೆಯನ್ನು ಕೆಳಗೆ ಬಾಗಿಸಬಾರದು. ನಾವು ಇತ್ತೀಚೆಗೆ ಗಮನಿಸಿದಂತೆ, ಬಸ್ ನಿಲ್ದಾಣದಿಂದ ಆರಂಭಿಸಿ ಬಸ್ನಲ್ಲಿ ಕುಳಿತು ಮನೆ ಸೇರುವವರೆಗೂ ಕುತ್ತಿಗೆ ಕೆಳಗೆ ಬಾಗಿಸಿ ಮೊಬೈಲ್ ನಲ್ಲಿ ದೃಷ್ಟಿ ನೆಟ್ಟಿರುತ್ತಾರೆ. ಹೀಗೆ ಕತ್ತು ಬಗ್ಗಿಸಿ ನೋಡುವುದು ಮತ್ತು ಕುಳಿತ ಭಂಗಿಯಲ್ಲಿರುವುದರಿಂದ ಕಣ್ಣು, ಕುತ್ತಿಗೆ ಮತ್ತು ಬೆನ್ನಿನ ನೋವು ಕಾಣಿಸಿಕೊಳ್ಳುತ್ತದೆ” ಎಂದು ಅವರು ಹೇಳಿದ್ದಾರೆ.
“ಕಂಪ್ಯೂಟರ್ ನಲ್ಲಿ 5-6 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡಿದರೂ ಬೆನ್ನು ನೋವು ಬರುವ ಸಾಧ್ಯತೆ ಇರುತ್ತದೆ. ಮುಖ್ಯವಾಗಿ, ಕಂಪ್ಯೂಟರ್ನಲ್ಲಿ ಕೆಲಸ ಮಾಡುವಾಗ ಪರದೆ ಕಣ್ಣಿಗೆ ನೇರವಾಗಿರಬೇಕು. ದೇಹದ ಭಂಗಿ ನೇರವಾಗಿರಬೇಕು. ಕುಳಿತು ಮೊಬೈಲ್ ನೋಡುವಾಗ ಮೊಬೈಲ್ ಮುಖಕ್ಕೆ ಎದುರಾಗಿ ಇರಬೇಕು” ಎಂದು ಅವರು ಸಲಹೆ ನೀಡಿದ್ದಾರೆ.
ದೀರ್ಘಕಾಲ ಕೂರಬಾರದು. ಅಂದರೆ, ಮಧ್ಯೆ ಮಧ್ಯೆ ಸ್ವಲ್ಪ ಎದ್ದು ವರ್ಟಿಬ್ರಾಗಳಿಗೆ (Vertebrae) ಚಲನೆ ಸಿಗುವಂತೆ ಮಾಡಬೇಕು. ಇಲ್ಲದಿದ್ದರೆ ಇಂಟರ್ವರ್ಟಿಬ್ರಲ್ ಡಿಸ್ಕ್ ಪ್ರೊಲ್ಯಾಪ್ಸ್ (bulging disc) ಕಂಡುಬರಬಹುದು. ಏಕೆಂದರೆ, ಸಾಮಾನ್ಯವಾಗಿ ಒಂದು ಡಿಸ್ಕ್ನಿಂದ ಇನ್ನೊಂದು ಡಿಸ್ಕ್ವರೆಗೆ ವರ್ಟಿಬ್ರಾಗಳು ಮೃದುವಾಗಿರುತ್ತವೆ. ಅವುಗಳ ಮೇಲೆ ಒತ್ತಡ ಬಿದ್ದಾಗ ಸ್ಪೈನಲ್ ಡಿಸ್ಕ್ ಕಂಪ್ರೆಶನ್ (Spinal disc compression) ಉಂಟಾಗುತ್ತದೆ. ಇದರಿಂದ ವರ್ಟಿಬ್ರಲ್ ಪ್ರೊಲ್ಯಾಪ್ಸ್ ಕಾಣಿಸಿಕೊಳ್ಳಬಹುದು.
►ಬೆನ್ನು ನೋವನ್ನು ಗುರುತಿಸುವುದು ಹೇಗೆ?
ವೈದ್ಯರ ಪ್ರಕಾರ, “ಬೆನ್ನು ನೋವು ಕೆಲವೊಮ್ಮೆ ಸೊಂಟದಿಂದ ಕೆಳಗೆ ಕಾಲಿನವರೆಗೆ ಸೆಳೆತದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕಾಲು ನೇರ ಮಾಡಲು ಆಗುವುದಿಲ್ಲ. ಅದನ್ನು ಸಿಯಾಟಿಕಾ (sciatica pain) ನೋವು ಎಂದು ಕರೆಯಲಾಗುತ್ತದೆ. ತೊಡೆಯ ಭಾಗದಲ್ಲೂ ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆ ಕಂಡುಬಂದಾಗ ತುರ್ತಾಗಿ ವೈದ್ಯರನ್ನು ಸಂಪರ್ಕಿಸಬೇಕು. ಸ್ಕ್ಯಾನಿಂಗ್ ಅಥವಾ ಎಂಆರ್ಐ ಸ್ಕ್ಯಾನ್ ಮಾಡಿಸಬಹುದು.”
ಬೆನ್ನು ನೋವಿಗೆ ಸಂಬಂಧಿಸಿ ವೈದ್ಯರು ಈ ಕೆಳಗಿನ ಸಲಹೆಗಳನ್ನು ನೀಡಿದ್ದಾರೆ.
1. ದೀರ್ಘಕಾಲದ ಬೆನ್ನು ನೋವಿಗೆ ಆರೋಗ್ಯಕರ ಅಭ್ಯಾಸ
ನೋವು ಇದ್ದಾಗ ವಾರಗಟ್ಟಲೆ ಸುಮ್ಮನಿರಬಾರದು. ತಕ್ಷಣವೇ ಫಿಸಿಯೋಥೆರಪಿ ಮಾಡಿಸುವ ಅಥವಾ ಮಸಾಜ್ ಮಾಡಿಸುವ ಮೊದಲು ನೋವು ಬರಲು ಕಾರಣವೇನು ಎಂಬುದನ್ನು ಪರಿಶೀಲಿಸಬೇಕು.
ದೀರ್ಘಕಾಲ ನೋವು ಇದ್ದರೆ ಮೊದಲಿಗೆ ಎಕ್ಸ್ರೇ ಅಥವಾ ಎಂಆರ್ಐ ಸ್ಕ್ಯಾನ್ ಮಾಡಿಸಿ ಫಿಸಿಯೋಥೆರಪಿ ಮಾಡಬಹುದು. ಸಪೋರ್ಟ್ ಡಿಸ್ಕ್ ಬಳಸಬಹುದು. ಬೆನ್ನು ನೋವಿನಿಂದ ಕೂರಲು ಸಾಧ್ಯವಾಗದಿದ್ದರೆ ಅಥವಾ ಡಿಸ್ಕ್ ಬಲ್ಜ್ ಆಗಿದ್ದರೆ ವೈಸ್ಟ್ ಬೆಲ್ಟ್ ಬಳಸಬಹುದು. ವೈಸ್ಟ್ ಬೆಲ್ಟ್ ಇಮ್ಮೊಬಿಲೈಸೇಶನ್ಗೆ ನೆರವಾಗುತ್ತದೆ. ಅಕ್ಕಪಕ್ಕಕ್ಕೆ ಬಾಗದಂತೆ ಬೆಂಬಲವಾಗಿ ಬಳಸಲಾಗುತ್ತದೆ. ಇದರಿಂದ ತಕ್ಷಣ ನೋವಿಗೆ ಪರಿಹಾರ ಸಿಗುತ್ತದೆ. ಒಂದು ವಾರ ಅಥವಾ 15 ದಿನಗಳ ಕಾಲ ಬಳಸಿದರೆ ಬೆನ್ನಿನ ಸ್ನಾಯುಗಳ ಮೇಲೆ ಒತ್ತಡ ಬೀಳುವುದಿಲ್ಲ. ಹೀಗಾಗಿ ನೋವಿನಿಂದ ಪರಿಹಾರ ಸಿಗುತ್ತದೆ.
2. ಬೆನ್ನು ನೋವು ಬಾರದಂತೆ ಜೀವನಶೈಲಿಯಲ್ಲಿ ಬದಲಾವಣೆ
ಕೂರುವ ಭಂಗಿ ಸರಿಯಾಗಿರಬೇಕು. ಮಂಚದ ಮೇಲೆ ಮಲಗಿ ಮೊಬೈಲ್ ನೋಡಬಾರದು. ಎತ್ತರದ ದಿಂಬು ಇಟ್ಟು ಮಲಗಬಾರದು. ಕುಳಿತು ಮಾಡುವ ಕೆಲಸವನ್ನು ಮಲಗಿ ಮಾಡಬಾರದು. ಸಿಕ್ಕಿದ ಸಮಯದಲ್ಲೆಲ್ಲ ಮೊಬೈಲ್ ನೋಡುತ್ತಿದ್ದರೆ ಕುತ್ತಿಗೆಗೂ ಬೆನ್ನಿಗೂ ಒತ್ತಡ ಬೀಳುತ್ತದೆ.
3. ಮಲಗಿ ವಿಶ್ರಾಂತಿ ತೆಗೆದುಕೊಳ್ಳುವುದು
ಫ್ರ್ಯಾಕ್ಚರ್ ಆದರೆ ಮಾತ್ರ ತಾತ್ಕಾಲಿಕವಾಗಿ ನೋವು ಕಡಿಮೆಯಾಗಲು ಮಲಗಿ ವಿಶ್ರಾಂತಿ ತೆಗೆದುಕೊಳ್ಳಬಹುದು. ಯಾವುದೇ ಸಮಸ್ಯೆ ಇಲ್ಲದೆ ಬೆನ್ನು ನೋವೆಂದು ಸದಾ ಮಲಗಿದ್ದರೆ ಸ್ನಾಯುಗಳು ಬಿಗಿಯಾಗಬಹುದು. ಬೋನ್ ಕಂಪ್ರೆಶನ್ (bone compression) ಆಗುತ್ತದೆ. ವಯಸ್ಸಾದ ನಂತರ ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ಮೃದುವಾಗುತ್ತವೆ. ಆಗ ವೈದ್ಯರನ್ನು ಕಾಣಬೇಕು ಮತ್ತು ಅವರು ಕ್ಯಾಲ್ಸಿಯಂ ಮಾತ್ರೆಗಳನ್ನು ಸೂಚಿಸಬಹುದು. ಯಾವುದೇ ಔಷಧಿ ತೆಗೆದುಕೊಂಡರೂ ವೈದ್ಯರ ಸಲಹೆಯ ಮೇರೆಗೆ ಮಾತ್ರ ತೆಗೆದುಕೊಳ್ಳಬೇಕು.
4. ವ್ಯಾಯಾಮದಿಂದ ಬೆನ್ನು ನೋವು ಸಾಧ್ಯತೆಯೇ?
ವ್ಯಾಯಾಮದಿಂದ ಬೆನ್ನು ನೋವು ಬರುವುದಿಲ್ಲ. ಹಠಾತ್ತನೆ ಸುದೀರ್ಘ ಅವಧಿಯ ವ್ಯಾಯಾಮ ಮಾಡುವುದರಿಂದ ತೊಂದರೆಯಾಗಬಹುದು. ಯೋಗ ಅಥವಾ ವ್ಯಾಯಾಮವನ್ನು ಹಂತ ಹಂತವಾಗಿ ಮಾಡಬೇಕು. ಅತಿಯಾಗಿ ಮಾಡಬಾರದು.
ನುರಿತ ತಜ್ಞರಿಂದ ವ್ಯಾಯಾಮ ಮಾಡಬೇಕು. ಅತಿಯಾದ ವ್ಯಾಯಾಮ ಮಾಡಬಾರದು. ನಿಯಮಿತ ನಡಿಗೆ ಉತ್ತಮ. ಬೆಳಿಗ್ಗೆ ನಡೆದಾಡುವುದು ಉತ್ತಮ. ಬೆಳಗಿನ ವ್ಯಾಯಾಮ ನವೋಲ್ಲಾಸ ನೀಡುತ್ತದೆ. ಇಡೀ ದೇಹಕ್ಕೆ ವ್ಯಾಯಾಮ ಸಿಗಬಹುದು.
5. ಅತಿಯಾದ ಭಾರ ಹೊರುವುದರಿಂದ ಬೆನ್ನು ನೋವು
ಅತಿಯಾದ ಭಾರ ಹೊರುವುದರಿಂದ ನೋವು ಬರಬಹುದು. ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತ್ರ ಭಾರ ಹೊರಬೇಕು. ಸಣ್ಣ ಮಕ್ಕಳು ಬ್ಯಾಗ್ ಅಥವಾ ಶ್ರಮಿಕರು ಗೋಣಿಚೀಲಗಳನ್ನು ಹೊರುವಾಗ ಅಗತ್ಯಕ್ಕಿಂತ ಹೆಚ್ಚು ಭಾರ ಹೊತ್ತರೆ ನೋವು ಬರಬಹುದು. ಅಭ್ಯಾಸ ಇದ್ದರೆ ಸರಿ. ಅಭ್ಯಾಸ ಇಲ್ಲದವರು ಅತಿಯಾದ ಭಾರ ಹೊರಬಾರದು.