×
Ad

ನಿವೃತ್ತಿಯಂಚಿನ ಶಿಕ್ಷಕರಿಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ 'ಭಾರ'

Update: 2025-09-26 09:15 IST

PC: PTI

ಬೆಂಗಳೂರು: ‘ಮೊನ್ನೆಯಷ್ಟೇ ಪರಿಶಿಷ್ಟರ ಒಳಮೀಸಲಾತಿ ಸಮೀಕ್ಷೆ ಪೂರೈಸಿ ಪಾಠ ಮಾಡಲು ಶಾಲೆಯ ದಾರಿ ಹಿಡಿದಿದ್ದ ನಮಗೆ, ಸರಕಾರ ದಸರಾ ರಜೆಗೂ ಬಿಡುವು ಕೊಡದೆ ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ’ ನಡೆಸುವಂತೆ ದೊಡ್ಡ ಜವಾಬ್ದಾರಿಯ ಮೂಟೆಯನ್ನೇ ಹೆಗಲಿಗಿಟ್ಟಿದೆ. ನಿವೃತ್ತಿಯ ಅಂಚಿನಲ್ಲಿರುವ ಬಹುತೇಕರಿಗೆ ಯಾವ ಪೂರ್ವಭಾವಿ ತರಬೇತಿಯನ್ನೂ ನೀಡದೆ ಏಕಾಏಕಿ ನವೀನ ಮಾದರಿಯ ಆ್ಯಪ್‌ಗಳ ಮೂಲಕ ಸಮೀಕ್ಷೆ ನಡೆಸಲು ನೇಮಿಸಿರುವುದು ‘ಈಜು ಬಾರದವನಿಗೆ ಸಮುದ್ರ ಮಧ್ಯದಲ್ಲಿ ಬಿಟ್ಟಂತಾಗಿದೆ’ ಎಂಬುದು ಜಾತಿಗಣತಿ ಕಾರ್ಯದಲ್ಲಿ ನಿಯೋಜಿಸಲಾದ ಹಿರಿಯ ಶಿಕ್ಷಕರು/ಗಣತಿದಾರರ ಅಳಲು.

ಪ್ರಸಕ್ತ ಕೃತಕ ಬುದ್ಧಿಮತ್ತೆ (ಎಐ) ಹಾಗೂ ತಾಂತ್ರಿಕ ಜಗತ್ತಿನ ಗಂಧವೇ ಗೊತ್ತಿಲ್ಲದ ಕಾಲದಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದವರಿಗೆ ಇವತ್ತಿನ ಆಧುನಿಕ ಆ್ಯಪ್‌ಗಳ ನಿರ್ವಹಣೆ ಕಷ್ಟವಾಗುತ್ತಿದೆ. ಆದ ಕಾರಣ ರಾಜ್ಯ ಸರಕಾರ 50 ವರ್ಷ ವಯಸ್ಸಿಗೂ ಮೇಲ್ಪಟ್ಟ ಶಿಕ್ಷಕರನ್ನು ಸಮೀಕ್ಷೆ ಕಾರ್ಯನಿಂದ ವಿಮುಕ್ತಿಗೊಳಿಸಬೇಕು. ಜೊತೆಗೆ 2-3 ವರ್ಷದೊಳಗಿನ ಮಗುವನ್ನು ಹೊಂದಿದ ಮಹಿಳಾ ಶಿಕ್ಷಕಿಯರಿಗೂ ಸಮೀಕ್ಷೆ ಕಾರ್ಯದಿಂದ ಕೈಬಿಡಬೇಕು ಎಂಬುದು ಅವರ ಒತ್ತಾಯ.

ರಾಜ್ಯದಲ್ಲಿ ಸೆ.22ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ನಡೆಸುತ್ತೇವೆಂದು ಸರಕಾರ ಅಧಿಕೃತವಾಗಿ ಘೋಷಿಸಿದಾಗಿನಿಂದಲೂ ವಿವಾದಕ್ಕೆ ಕಾರಣವಾಗಿದೆ. ಸಮೀಕ್ಷಾ ಕಾರ್ಯದಲ್ಲಿ ನಿಯೋಜಿಸಲಾದ ಶಿಕ್ಷಕರು ಮತ್ತು ಗಣತಿದಾರರು, ತಾಂತ್ರಿಕ ಸಮಸ್ಯೆಗಳು ಮತ್ತು ಸಮೀಕ್ಷೆಯ ನಿರ್ವಹಣೆಯಲ್ಲಿನ ಗೊಂದಲಗಳ ವಿರುದ್ಧ ನಿರಂತರವಾಗಿ ರಾಜ್ಯಾದ್ಯಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಸತತ ನಾಲ್ಕು ದಿನವೂ ಸಮೀಕ್ಷೆಗೆ ತೊಡಕು ಉಂಟಾಗಿದೆ.

ಕಲಬುರಗಿ, ಬಾಗಲಕೋಟೆ, ಗದಗ, ಕೊಡಗು, ತುಮಕೂರು, ರಾಯಚೂರು, ಬೀದರ್ ಸೇರಿದಂತೆ ರಾಜ್ಯ ಹಲವು ಜಿಲ್ಲೆಗಳಲ್ಲಿ ನೂರಾರು ಗಣತಿದಾರರು ಅಸಮಾಧಾನ ಹೊರಹಾಕಿದ್ದು, ಕೆಲವೆಡೆ ಪ್ರತಿಭಟನೆಗಳೂ ಜರಗಿವೆ. 60 ಪ್ರಶ್ನೆಗಳನ್ನು ಒಳಗೊಂಡಿರುವ ಸಮೀಕ್ಷೆಯನ್ನು ಆ್ಯಪ್‌ನಲ್ಲಿ ಭರ್ತಿ ಮಾಡಲು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದೆ ಮತ್ತು ಸಬ್‌ಮಿಟ್ ಮಾಡುವಾಗ ಪದೇ ಪದೇ ‘ಎರರ್’ ಬರುತ್ತಿದೆ ಎಂದು ಅನೇಕ ಗಣತಿದಾರರು ದೂರಿದ್ದಾರೆ.

ಸರಕಾರ ಸರಿಯಾದ ಸಿದ್ಧತೆ ಇಲ್ಲದೆ ಸಮೀಕ್ಷೆ ಕೈಗೊಂಡಿರುವುದು ಸಮಸ್ಯೆಗಳಿಗೆ ಕಾರಣವಾಗಿದೆ. ಇದರಿಂದ ಗಣತಿದಾರರ ಶ್ರಮ ವ್ಯರ್ಥವಾಗುತ್ತಿದೆ. ಸಮೀಕ್ಷಾ ಆ್ಯಪ್‌ನಲ್ಲಿ ಮನೆಗಳ ವಿಳಾಸ, ವಾಡ್‌ರ್ಗಳು ಸರಿಯಾಗಿ ನಮೂದಾಗಿಲ್ಲ. ಕೆಲವು ಶಿಕ್ಷಕರಿಗೆ ಬೇರೆ ಬೇರೆ ಪಟ್ಟಣ, ವಾರ್ಡ್‌ಗಳಲ್ಲಿ ಮನೆಗಳನ್ನು ಹಂಚಿಕೆ ಮಾಡಿದ್ದು ಪ್ರಯಾಣಿಸಲು ಕಷ್ಟವಾಗುತ್ತಿದೆ. ಮನೆಗಳ ಲೊಕೇಶನ್ ತಪ್ಪಾಗಿ ತೋರಿಸುತ್ತಿದೆ. ಹೊಸ ವರ್ಷನ್ ಆ್ಯಪ್ ತೆರೆಯಲು ಆಗುತ್ತಿಲ್ಲ. ಸಮೀಕ್ಷೆ ಮಾಡಿದರೂ ಸಬ್‌ಮಿಟ್ ಆಗುತ್ತಿಲ್ಲ, ಯುಎಚ್‌ಐಡಿ ನಂಬರ್‌ಗಳ ಕೊರತೆ ಸೇರಿದಂತೆ ಹತ್ತೂ ಹಲವು ಕಾರಣಗಳಿಂದಾಗಿ ಸಮೀಕ್ಷಾ ಕಾರ್ಯಕ್ಕೆ ಅಡ್ಡಿಯಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸುವವರೆಗೂ ಸಮೀಕ್ಷೆಯನ್ನು ಮುಂದೂಡಬೇಕೆಂಬುದು ನಿಯೋಜನೆಗೊಂಡ ಗಣತಿದಾರರು ಒತ್ತಾಯವಾಗಿದೆ.

ಯಾವ, ಯಾವ ಮನೆಗಳ ಸಮೀಕ್ಷೆ ಮಾಡಬೇಕು ಎಂಬ ಹೆಸರು ನೀಡಿದರೆ ಆಯಾ ಊರಿನ ನಿವಾಸಿಗಳೇ ಆಗಿರುವ ಶಿಕ್ಷಕರು ಸಮೀಕ್ಷೆಯನ್ನು ಸುಗಮವಾಗಿ ಮಾಡುತ್ತಾರೆ. ಆ್ಯಪ್‌ನಲ್ಲಿ ಸಂಖ್ಯೆ ನೀಡಲಾಗಿದ್ದು, ಅದನ್ನು ಜಿಯೋ ಟ್ಯಾಗ್ ಮಾಡಲಾಗಿದೆ. ಅದನ್ನು ಒತ್ತಿದರೆ ಮನೆ ತೋರಿಸುತ್ತದೆ ಎನ್ನುವುದು ಅಧಿಕಾರಿಗಳ ಮಾತು. ಆದರೆ, ಆ್ಯಪ್‌ನಲ್ಲಿರುವ ಸಂಖ್ಯೆಯನ್ನು ಒತ್ತಿದರೆ ಅದು ಮನೆಯ ವಿಳಾಸ ತೋರಿಸುತ್ತಿಲ್ಲ. ಬೇರೆ, ಬೇರೆ ಕಡೆ ಮನೆ ತೋರಿಸುತ್ತಿದೆ ಎಂಬುದು ತುಮಕೂರಿನ ಗಣತಿದಾರರೊಬ್ಬರ ಮಾತಾಗಿದೆ.

ಸದ್ಯ, ಹೈಕೋರ್ಟ್ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ಹಸಿರು ನಿಶಾನೆ ತೋರಿದ್ದು, ರಾಜ್ಯ ಸರಕಾರ ನಿವೃತ್ತಿ ಅಂಚಿನ ಶಿಕ್ಷಕರಿಗೆ ವಿಮುಕ್ತಿ ನೀಡಿ ಬಹುಬೇಗನೆ ಸಮೀಕ್ಷೆಯ ತಾಂತ್ರಿಕ ಸಮಸ್ಯೆಗಳು ಮತ್ತು ನಿರ್ವಹಣೆಯಲ್ಲಿನ ಗೊಂದಲಗಳನ್ನು ನಿವಾರಿಸಿದರೆ ಸುಸೂತ್ರ ಸಮೀಕ್ಷೆ ನಡೆದು ಪಕ್ಕಾ ಅಂಕಿ-ಅಂಶಗಳು ಹೊರಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಮೀಕ್ಷೆದಾರರಿಗೆ ಯಾವುದೇ ಅಡಚಣೆ ಎದುರಾದರೆ ಮಾಹಿತಿ ಹಂಚಿಕೊಳ್ಳುವಂತೆ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿದೆ. ಅಲ್ಲಿ ಸಮಸ್ಯೆ ಹೇಳಿಕೊಂಡರೆ ಯಾರೂ ಪ್ರತಿಕ್ರಿಯಿಸುತ್ತಿಲ್ಲ. ಎಷ್ಟೋ ಹೊತ್ತಿನವರೆಗೆ ಆ್ಯಪ್ ಆನ್ ಮಾಡಲು ಸಾಧ್ಯವಾಗುವುದೇ ಇಲ್ಲ. ಆನ್ ಆದರೂ ಎಲ್ಲ ಪ್ರಶ್ನೆಗಳಿಗೆ ಉತ್ತರ ಪಡೆಯುವುದರೊಳಗಾಗಿ ನಡುವೆಯೇ ನೆಟ್‌ವರ್ಕ್ ಕಡಿತವಾಗುತ್ತದೆ. ಮತ್ತೇ ಮೊದಲಿನಿಂದ ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ ಎಂಬುದು ಸಮೀಕ್ಷೆದಾರರ ದೂರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಯೋಗೇಶ್ ಮಲ್ಲೂರು

contributor

Similar News