×
Ad

ರಾಜ್ಯ ಸರಕಾರದ ಆದಾಯ ವೆಚ್ಚ, ಬಂಡವಾಳ ವೆಚ್ಚ, ಸ್ವೀಕೃತಿಗಳು ಇಳಿಕೆ

Update: 2025-06-16 11:15 IST

ಬೆಂಗಳೂರು: 2024-25ನೇ ಸಾಲಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಆದಾಯ ವೆಚ್ಚ, ಬಂಡವಾಳ ವೆಚ್ಚ ಮತ್ತು ಸ್ವೀಕೃತಿಗಳು ಗಣನೀಯವಾಗಿ ಕಡಿಮೆಯಾಗಿರುವುದು ಬಹಿರಂಗವಾಗಿದೆ.

ಅಲ್ಲದೇ ಫೆಬ್ರವರಿ 2025ರ ಹೊತ್ತಿಗೆ 5,106.56 ಕೋಟಿ (ಡೆಬಿಟ್) ನಿವ್ವಳ ವ್ಯತ್ಯಾಸವಿರುವುದನ್ನು ಮಹಾಲೇಖಪಾಲರು ಪತ್ತೆ ಹಚ್ಚಿದ್ದಾರೆ.

2024-25ನೇ ಸಾಲಿನ ಆರ್ಥಿಕ ಲೆಕ್ಕಗಳಿಗೆ ಸಂಬಂಧಿಸಿದಂತೆ ಪ್ರಧಾನ ಮಹಾಲೇಖಪಾಲರು 2025ರ ಮೇ 15ಕ್ಕೆ ರಾಜ್ಯ ಸರಕಾರಕ್ಕೆ ಈ ಸಂಬಂಧ ಪತ್ರವನ್ನು ಬರೆದಿದ್ದಾರೆ.ಈ ಪತ್ರವನ್ನಾಧರಿಸಿ ಹಣಕಾಸು ಲೆಕ್ಕಗಳಲ್ಲಿ ಸೇರ್ಪಡೆ ಮಾಡಿ ಮಹಾಲೇಖಪಾಲರಿಗೆ ಕಳಿಸಿಕೊಡಬೇಕು ಎಂದು ಅರ್ಥಿಕ ಇಲಾಖೆಯು ಸಹ 2025ರ ಜೂನ್ 9ರಂದು ಪತ್ರ ಬರೆದಿದೆ. ಈ ಎರಡೂ ಪತ್ರಗಳೂ ‘the-file.in’ಗೆ ಲಭ್ಯವಾಗಿವೆ.

ಫೆಬ್ರವರಿ 2025 ರ ಅಂತ್ಯದ ವೇಳೆಗೆ ಆದಾಯ ವೆಚ್ಚ, ಬಂಡವಾಳ ವೆಚ್ಚ ಮತ್ತು ಸ್ವೀಕೃತಿಗಳ ಸಮನ್ವಯವು ಗಣನೀಯವಾಗಿ ಕಡಿಮೆಯಾಗಿದೆ. ಲೆಕ್ಕ ಸಮನ್ವಯವು ಕ್ರಮವಾಗಿ ಶೇಕಡಾ 43, ಶೇಕಡಾ 27 ಮತ್ತು 32ರಷ್ಟಿದೆ ಎಂದು ಮಹಾಲೇಖಪಾಲರು ಪತ್ರದಲ್ಲಿ ಗಮನ ಸೆಳೆದಿರುವುದು ಗೊತ್ತಾಗಿದೆ.

ನಿಖರವಾದ ಖಾತೆಗಳು ಸರಿಯಾದ ಸಮನ್ವಯವನ್ನು ಅವಲಂಬಿಸಿರುತ್ತದೆ. 2025 ರ ಮೇ 30 ರೊಳಗೆ ಸಮನ್ವಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಅಗತ್ಯ ಸೂಚನೆಗಳನ್ನು ನೀಡಬೇಕು ಎಂದು ಮಹಾಲೇಖಪಾಲರು ಕೋರಿರುವುದು ತಿಳಿದು ಬಂದಿದೆ.

ಆರ್‌ಬಿಐ ಜೊತೆಗಿನ ನಗದು ಬಾಕಿ: ಆರ್‌ಬಿಐ ಜೊತೆಗಿನ ನಗದು ಬಾಕಿಯು 23,812.62 ಕೋಟಿ (ಡೆಬಿಟ್) ಮತ್ತು 28,919.10 ಕೋಟಿ (ಕ್ರೆಡಿಟ್) ವ್ಯತ್ಯಾಸವಿದೆ. ಇದರ ಪರಿಣಾಮವಾಗಿ ಫೆಬ್ರವರಿ 2025 ರ ಹೊತ್ತಿಗೆ 5,106.56 ಕೋಟಿ (ಡೆಬಿಟ್) ನಿವ್ವಳ ವ್ಯತ್ಯಾಸ ಕಂಡುಬಂದಿದೆ. ಈ ನಿಟ್ಟಿನಲ್ಲಿ ಸಮನ್ವಯವನ್ನು ತ್ವರಿತಗೊಳಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ಠೇವಣಿ ಖಾತೆಗಳು: ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಖಜಾನೆಗಳು ಮತ್ತು ಠೇವಣಿ ಖಾತೆಗಳ ನಿರ್ವಾಹಕರ ನಡುವೆ ಬಾಕಿಗಳನ್ನು ಸ್ವೀಕರಿಸಲಾಗಿಲ್ಲ. ಠೇವಣಿಗಳು, ಜಿಪಿಎಫ್, ಸಾಲಗಳು ಮುಂತಾದ ಸಾರ್ವಜನಿಕ ಖಾತೆ ಮುಖ್ಯಸ್ಥರು ಪ್ರತಿಕೂಲ ಬಾಕಿಗಳನ್ನು ಇತ್ಯರ್ಥಗೊಳಿಸಲು ಆರಂಭಿಕ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ವೈಯಕ್ತಿಕ ಠೇವಣಿ ಖಾತೆಗಳು: ಖಜಾನೆಗಳು ಮತ್ತು ಪಿಡಿ ಖಾತೆ ನಿರ್ವಾಹಕರ ನಡುವಿನ ಸಮನ್ವಯವನ್ನು ಪೂರ್ಣಗೊಳಿಸಬೇಕು. ಪರಿಶೀಲನಾ ಪ್ರಮಾಣಪತ್ರಗಳೊಂದಿಗೆ ವರದಿ ಸಲ್ಲಿಸಬೇಕು. ಈ ಕಚೇರಿಯ ದಾಖಲೆಗಳ ಪ್ರಕಾರ, 27 ನಿಷ್ಕ್ರಿಯ ಮತ್ತು 12 ಶೂನ್ಯ ಬ್ಯಾಲೆನ್ಸ್ ಪಿಡಿ ಖಾತೆಗಳು ಅಸ್ತಿತ್ವದಲ್ಲಿವೆ ಎಂದು ಪತ್ರದಲ್ಲಿ ಗಮನಸೆಳೆದಿರುವುದು ಗೊತ್ತಾಗಿದೆ.

‘2024-25ನೇ ಸಾಲಿನ ಹೊಸ ಯೋಜನೆಗಳಿಗೆ ಮತ್ತು ಬದ್ಧ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಪ್ರಧಾನ ಮಹಾಲೇಖಪಾಲರ ಅರೆ ಸರ್ಕಾರಿ ಪತ್ರದಲ್ಲಿ ಮಾಹಿತಿ ಕೋರಲಾಗಿದೆ. 2024-25ನೇ ಸಾಲಿನ ಹಣಕಾಸು ಲೆಕ್ಕಗಳಲ್ಲಿ ಸೇರ್ಪಡಿಸುವ ಸಲುವಾಗಿ ಮಹಾಲೇಖಪಾಲರು ಕೋರಿರುವ ಮಾಹಿತಿಯನ್ನು ಪ್ರಧಾನ ಮಹಾಲೇಖಪಾಲರಿಗೆ ಕಳಿಸಿಕೊಡಬೇಕು,’ ಎಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಆರ್ಥಿಕ ಇಲಾಖೆಯು 2025ರ ಜೂನ್ 9ರಂದು ಕೋರಿದೆ.

ಫೆ.2025ರ ಅಂತ್ಯಕ್ಕೆ ರಾಜ್ಯದ ಲೆಕ್ಕ: 2025 ಫೆ.ಅಂತ್ಯಕ್ಕೆ ರಾಜ್ಯ ಸರಕಾರವು ಸ್ವಂತ ತೆರಿಗೆ ರಾಜಸ್ವದಡಿಯಲ್ಲಿ 1,57,108.82 ಕೋಟಿ ರೂ. ಸಂಗ್ರಹಿಸಿತ್ತು. ವಾಣಿಜ್ಯ ತೆರಿಗೆಯಲ್ಲಿ 92,934.11 ಕೋಟಿ ರೂ., ರಾಜ್ಯ ಅಬಕಾರಿ ಆದಾಯವು 32,381.43 ಕೋಟಿ ರೂ. ಇತ್ತು. ಮೋಟಾರು ವಾಹನ ತೆರಿಗೆಯಲ್ಲಿ 10,720.06 ಕೋಟಿ ರೂ., ಮುದ್ರಾಂಕ ಮತ್ತು ನೋಂದಣಿ ಶುಲ್ಕ 20.151.74 ಕೋಟಿ ರೂ. ಇತ್ತು.

ಇತರ 921.48 ಕೋಟಿ ರೂ., ಸ್ವಂತ ತೆರಿಗೇಯತರ ರಾಜಸ್ವ 13,652.20 ಕೋಟಿ ರೂ., ಕೇಂದ್ರ ಸರಕಾರದ ತೆರಿಗೆ ಹಂಚಿಕೆ 43,054.08 ಕೋಟಿ ರೂ., ಕೇಂದ್ರ ಸರಕಾರದಿಂದ ಸಹಾಯಾನುದಾನ 12,629.60 ಕೋಟಿ ರೂ. ಇತ್ತು.

ರಾಜಸ್ವ ಸ್ವೀಕೃತಿಯಲ್ಲಿ 2,26,444.71 ಕೋಟಿ ರೂ., ಋಣೇತರ ಬಂಡವಾಳ ಜಮೆಯಲ್ಲಿ 60.41 ಕೋಟಿ ರೂ., ಸಾಲಗಳ ವಸೂಲಾತಿಯಿಂದ 41 ಕೋಟಿ ರೂ., ವಿವಿಧ ಬಂಡವಾಳ ಜಮೆಗಳಡಿಯಲ್ಲಿ 19.41 ಕೋಟಿ ರೂ., ಒಟ್ಟು 2,26,505.11 ಕೋಟಿ ರೂ.ಗಳಷ್ಟಿತ್ತು. ಸಾರ್ವಜನಿಕ ಸಾಲ ಒಳಗೊಂಡಂತೆ ಒಟ್ಟು ಜಮೆಯಲ್ಲಿ 3,08,513.23 ಕೋಟಿ ರೂ. ಇತ್ತು ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ. ಮಹಾಂತೆೇಶ್

contributor

Similar News