×
Ad

ಬಿಜೆಪಿ ಸರಕಾರದ ಅವಧಿಯಲ್ಲಿ ಉಪಕರ ವಸೂಲಿ: ಸರಕಾರಕ್ಕೆ ಜಮೆ ಆಗದ 117.51 ಕೋಟಿ ರೂ.

Update: 2025-05-24 10:30 IST

PC: istockphoto

ಬೆಂಗಳೂರು: 2019ರಲ್ಲೇ ಗ್ರಾಮ ಪಂಚಾಯತ್‌ಗಳಲ್ಲಿ ಶಿಕ್ಷಣ ಉಪಕರ ವಿಧಿಸುವುದನ್ನು ಸ್ಥಗಿತಗೊಂಡಿದ್ದರೂ ಹಿಂದಿನ ಬಿಜೆಪಿ ಸರಕಾರದ ಅವಧಿಯ 2022-23ರಲ್ಲಿ 171.82 ಕೋಟಿ ರೂ.ಗಳನ್ನು ವಸೂಲು ಮಾಡಲಾಗಿತ್ತು. ಮತ್ತೊಂದು ವಿಶೇಷವೆಂದರೆ ವಸೂಲಾಗಿದ್ದ 171.82 ಕೋಟಿ ರೂ.ನಲ್ಲಿ ಕೇವಲ 54.31 ಕೋಟಿ ರೂ. ಮಾತ್ರ ಸರಕಾರಕ್ಕೆ ಜಮೆ ಮಾಡಿದ್ದ ಪಂಚಾಯತ್‌ಗಳು 117.51 ಕೋಟಿ ರೂ.ಗಳನ್ನು ಸರಕಾರಕ್ಕೆ ಜಮೆಯನ್ನೇ ಮಾಡಿರಲಿಲ್ಲ.

ರಾಜ್ಯದ ಗ್ರಾಮ ಪಂಚಾಯತ್‌ಗಳಲ್ಲಿ ಆರೋಗ್ಯ, ಗ್ರಂಥಾಲಯ, ಭಿಕ್ಷುಕರ ಕರ, ಅಭಿವೃದ್ಧಿ ಕರ, ಶಿಕ್ಷಣ ಕರ ವಸೂಲಾಗಿರುವ 769.79 ಕೋಟಿ ರೂ.ಗಳನ್ನು ಸರಕಾರಕ್ಕೆ ಜಮೆ ಮಾಡಿಲ್ಲ. ಅದೇ ರೀತಿ 1,119 ಗ್ರಾಮ ಪಂಚಾಯತ್‌ಗಳು ವಸೂಲು ಮಾಡಿದ್ದ 6.02 ಕೋಟಿ ರೂ.ನಷ್ಟು ಆಂತರಿಕ ಆದಾಯದ ಮೊತ್ತವನ್ನು ಗ್ರಾಮ ಪಂಚಾಯತ್ ನಿಧಿಗೆ ಜಮೆ ಮಾಡಿಲ್ಲ. ಅದೇ ರೀತಿ ಬ್ಯಾಂಕ್ ಖಾತೆಯಿಂದ 3.06 ಕೋಟಿ ರೂ. ಡ್ರಾ ಮಾಡಿರುವ ಹಲವು ಗ್ರಾಮ ಪಂಚಾಯತ್‌ಗಳು ಸರಕಾರದ ಲೆಕ್ಕ ಶೀರ್ಷಿಕೆಗೆ ಜಮೆಯಾಗಿರಲಿಲ್ಲ.

ಹಿಂದಿನ ಬಿಜೆಪಿ ಸರಕಾರದ ಅವಧಿಯ (2022-23) ಗ್ರಾಮ ಪಂಚಾಯತ್‌ಗಳಿಗೆ ಸಂಬಂಧಿಸಿದಂತೆ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಿಡುಗಡೆ ಮಾಡಿರುವ ಲೆಕ್ಕ ಪರಿಶೋಧನೆ ವರದಿಯಲ್ಲಿ ಈ ಮಾಹಿತಿ ಇವೆ.

ರಾಜ್ಯದ 2,916 ಗ್ರಾಮ ಪಂಚಾಯತ್‌ಗಳು ವಾರ್ಷಿಕ ಆಯವ್ಯಯವನ್ನು ತಯಾರಿಸಿರಲಿಲ್ಲ ಮತ್ತು 1,363 ಗ್ರಾಮ ಪಂಚಾಯತ್‌ಗಳು ನಗದು ಪುಸ್ತಕವನ್ನೇ ನಿರ್ವಹಿಸಿರಲಿಲ್ಲ. ಹಾಗೂ ವಸೂಲಾತಿಯಲ್ಲಿ ಪಂಚಾಯತ್‌ಗಳ ನಿರ್ಲಕ್ಷ್ಯ, ಪಂಚಾಯತ್‌ಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ ಉಳಿಸಿಕೊಂಡಿರುವ ಮೊತ್ತ, ಶಾಸನಬದ್ಧ ತೆರಿಗೆಯಲ್ಲಿಯೇ ಕಡಿಮೆ ತೆರಿಗೆ ಕಟಾಯಿಸಿರುವುದು ಮೊಬೈಲ್ ಟವರ್ ವಾರ್ಷಿಕ ತೆರಿಗೆ ವಸೂಲು ಮಾಡದೇ ಇರುವ ಪ್ರಕರಣಗಳನ್ನು ಹೊರಗೆಳೆದಿರುವ ಲೆಕ್ಕ ಪರಿಶೋಧಕರು, ಗ್ರಾಮ ಪಂಚಾಯತ್‌ಗಳು ವಸೂಲು ಮಾಡುವ ಉಪ ಕರಗಳನ್ನು ಸರಕಾರಕ್ಕೆ ಜಮೆ ಮಾಡಿಲ್ಲ ಎಂಬ ಸಂಗತಿಯನ್ನು ಬಹಿರಂಗಪಡಿಸಿದೆ. ಇಲಾಖೆಯು ಸಲ್ಲಿಸಿರುವ ಲೆಕ್ಕಪರಿಶೋಧನೆ ವರದಿಯು "the-file.in"ಗೆ ಲಭ್ಯವಾಗಿದೆ.

ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 199ರ ಪ್ರಕಾರ ಗ್ರಾಮ ಪಂಚಾಯತ್‌ಗಳು ಭೂಮಿ, ಕಟ್ಟಡಗಳ ಮೇಲೆ ವಿಧಿಸುವ ತೆರಿಗೆಯ ಮೇಲೆ ಶೇ.15ರಷ್ಟು ಆರೋಗ್ಯ ಕರ, ಶೇ.06ರಷ್ಟು ಗ್ರಂಥಾಲಯ ಕರ, ಶೆ. 03ರಷ್ಟು ಭಿಕ್ಷುಕರ ಕರವನ್ನು ವಸೂಲು ಮಾಡಬೇಕು. ಮತ್ತು ವಸೂಲಾತಿಯಾದ ಈ ತೆರಿಗೆಯ ಮೊತ್ತವನ್ನು ಸಂಬಂಧಿಸಿದ ಲೆಕ್ಕ ಶೀರ್ಷಿಕೆಗಳಿಗೆ ವಿಳಂಬವಿಲ್ಲದೇ ಪಾವತಿಸಬೇಕು.

2019ರ ಮಾರ್ಚ್ 19ರಂದು ಹೊರಡಿಸಿದ್ದ ಸುತ್ತೋಲೆ ಪ್ರಕಾರ ಶಿಕ್ಷಣ ಉಪಕರವನ್ನು ವಿಧಿಸುವುದನ್ನು ಸ್ಥಗಿತಗೊಳಿಸಿದೆ. ಭೂಮಿ, ಕಟ್ಟಡಗಳ ಮೇಲೆ ವಿಧಿಸುವ ತೆರಿಗೆಯ ಮೇಲೆ ಪ್ರತೀ ಒಂದು ರೂಪಾಯಿಗೆ 10 ಪೈಸೆಯವರೆಗೆ ಶಿಕ್ಷಣ ಉಪ ಕರವನ್ನು ವಿಧಿಸಿ ವಸೂಲು ಮಾಡಲು ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಅವಕಾಶವಿಲ್ಲ. ಆದರೂ 2022-23ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯಲ್ಲಿ ಗ್ರಾಮ ಪಂಚಾಯತ್‌ಗಳು ಶಿಕ್ಷಣ ಉಪ ಕರವನ್ನು ವಸೂಲು ಮಾಡಿದ್ದವು.

ಆರೋಗ್ಯ ಹಾಗೂ ಭಿಕ್ಷುಕರ ಉಪ ಕರಗಳಲ್ಲಿ ಶೇ.10ರಷ್ಟನ್ನು ಗ್ರಾಮ ಪಂಚಾಯತ್‌ಗಳು ಉಪಯೋಗಿಸಿಕೊಂಡು ಇನ್ನುಳಿದ ಉಪ ಕರಗಳ ಮೊತ್ತವನ್ನು ಸಂಬಂಧಿಸಿದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಬೇಕು. ಆದರೆ ಬಹುತೇಕ ಗ್ರಾಮ ಪಂಚಾಯತ್‌ಗಳು ಉಪಕರಗಳ ಮೊತ್ತಗಳನ್ನು ಸರಕಾರದ ಸಂಬಂಧಿಸಿದ ಲೆಕ್ಕ ಶೀರ್ಷಿಕೆಗಳಿಗೆ ಜಮಾ ಮಾಡುತ್ತಿಲ್ಲ. ಹಿಂದಿನ ಸಾಲಿನಿಂದಲೂ ಪಂಚಾಯತ್ ನಿಧಿಯಲ್ಲೇ ಉಳಿಸಿಕೊಂಡಿವೆ. ಮತ್ತು ಬ್ಯಾಂಕ್ ಖಾತೆಯಿಂದ ಡ್ರಾ ಮಾಡಿ ಸರಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡದಿರುವ ಪ್ರಕರಣಗಳನ್ನೂ ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದು ಗೊತ್ತಾಗಿದೆ. ರಾಜ್ಯದ 7 ಜಿಲ್ಲೆಗಳಲ್ಲಿನ 222 ಪಂಚಾಯತ್‌ಗಳು ಬ್ಯಾಂಕ್ ಖಾತೆಯಿಂದ 3.06 ಕೋಟಿ ರೂ.ಮೊತ್ತವನ್ನು ಡ್ರಾ ಮಾಡಿ ಸರಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಿಲ್ಲ.

ಜಮೆ ಆಗಿದ್ದೆಷ್ಟು?

392.22 ಕೋಟಿ ರೂ. ಮೊತ್ತದ ಆರೋಗ್ಯ ಕರ, 4.14 ಕೋಟಿ ರೂ. ಅಭಿವೃದ್ಧಿ ಕರ, 171.82 ಕೋಟಿ ರೂ. ಶಿಕ್ಷಣ ಕರ 163.02 ಕೋಟಿ ರೂ., ಗ್ರಂಥಾಲಯ ಕರ, 61.06 ಕೋಟಿ ರೂ. ಭಿಕ್ಷುಕರ ಕರ ಸೇರಿದಂತೆ ಒಟ್ಟಾರೆ 731.2 ಕೋಟಿ ರೂ..ಗಳನ್ನು ವಸೂಲು ಮಾಡಿತ್ತು. ಇದರಲ್ಲಿ ಆರಂಭಿಕ ಶಿಲ್ಕೂ ಸಹ ಒಳಗೊಂಡಿತ್ತು. ಈ ಪೈಕಿ ಸರಕಾರಕ್ಕೆ 18.38 ಕೋಟಿ ರೂ. ಜಮೆ ಮಾಡಿತ್ತು.

ಜಮೆ ಮಾಡಬೇಕಿದ್ದೆಷ್ಟು?

ವಸೂಲು ಮಾಡಿದ್ದ ಆರೋಗ್ಯ ಕರ ಮೊತ್ತ 392.22 ಕೋಟಿ ರೂ.ನಲ್ಲಿ ಕೇವಲ 8.84 ಕೋಟಿ ಮಾತ್ರ ಸರಕಾರಕ್ಕೆ ಜಮೆ ಮಾಡಿತ್ತು. ಇನ್ನು ಸರಕಾರಕ್ಕೆ 383.38 ಕೋಟಿ ರೂ. ಜಮೆ ಮಾಡಿರಲಿಲ್ಲ. ಅದೇ ರೀತಿ 4.14 ಕೋಟಿ ರೂ. ಮೊತ್ತದ ಅಭಿವೃದ್ಧಿ ಕರ ವಸೂಲು ಮಾಡಿದ್ದರೂ ಸಹ ಒಂದೇ ಒಂದು ಪೈಸೆಯನ್ನು ಜಮೆ ಮಾಡಿರಲಿಲ್ಲ. ಶಿಕ್ಷಣ ಕರವೆಂದು 171.82 ಕೋಟಿ ರೂ. ವಸೂಲು ಮಾಡಿದ್ದರೂ ಕೇವಲ 54.31 ಕೋಟಿ ರೂ. ಗಳನ್ನಷ್ಟೇ ಸರಕಾರಕ್ಕೆ ಜಮೆ ಮಾಡಿತ್ತು. 117.51 ಕೋಟಿ ರೂ.ಗಳನ್ನು ಜಮೆ ಮಾಡಿರಲಿಲ್ಲ.

ಅದೇ ರೀತಿ 163.02 ಕೋಟಿ ರೂ.ಗಳನ್ನು ಗ್ರಂಥಾಲಯ ಕರ ರೂಪದಲ್ಲಿ ವಸೂಲು ಮಾಡಿತ್ತಾದರೂ ಈ ಪೈಕಿ ಸರಕಾರಕ್ಕೆ ಜಮೆ ಮಾಡಿದ್ದು ಕೇವಲ 2.40 ಕೋಟಿಯನ್ನಷ್ಟೇ. 160.61 ಕೋಟಿ ರೂ.ಗಳನ್ನು ಸರಕಾರಕ್ಕೆ ಜಮೆ ಮಾಡಿರಲಿಲ್ಲ. ಭಿಕ್ಷುಕರ ಕರ ರೂದಪಲ್ಲಿ 61.06 ಕೋಟಿ ರೂ. ವಸೂಲು ಮಾಡಿದ್ದರೂ ಸರಕಾರಕ್ಕೆ 6.58 ಕೋಟಿ ರೂ. ಮಾತ್ರ ಜಮೆ ಮಾಡಿತ್ತು. ಇನ್ನುಳಿದ 54.47 ಕೋಟಿ ರೂ. ಸರಕಾರಕ್ಕೆ ಜಮೆಯಾಗಿರಲಿಲ್ಲ. ಒಟ್ಟು 769.73 ಕೋಟಿ ರೂ.ಗಳನ್ನು ಸರಕಾರಕ್ಕೆ ಜಮೆ ಮಾಡಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ.ಮಹಾಂತೇಶ್

contributor

Similar News