×
Ad

ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಕಣ್ಮನ ಸೆಳೆಯುವ ದಬೆದಬೆ ಫಾಲ್ಸ್‌

Update: 2025-08-11 08:15 IST

ಚಿಕ್ಕಮಗಳೂರು: ಮಳೆಗಾಲ ಶುರುವಾಯಿತೆಂದರೆ ಸಾಕು ಕಾಫಿನಾಡಿನಲ್ಲಿನ ಝರಿ ಜಲಪಾತಗಳಿಗೆ ಜೀವಕಳೆ ಬರುತ್ತದೆ. ಇವುಗಳ ಮನಮೋಹಕ ಸೌಂದರ್ಯ ಕಣ್ತುಂಬಿಕೊಳ್ಳಲು ನಾಡಿನ ಮೂಲೆ ಮೂಲೆಗಳಿಂದ ಪ್ರವಾಸಿಗರ ದಂಡು ಕಾಫಿನಾಡಿಗೆ ಹರಿದು ಬರುವುದು ಸಾಮಾನ್ಯ.

ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿರುವ ದಬೆದಬೆ ಫಾಲ್ಸ್ ಅಥವಾ ಕಾಮೇನಹಳ್ಳಿ ಜಲಪಾತ ಉತ್ತಮ ಮಳೆಯ ಕಾರಣದಿಂದಾಗಿ ಮೈದುಂಬಿ ಧುಮ್ಮಿಕ್ಕುತ್ತಿದೆ. ಡೈಮಂಡ್ ಜಲಪಾತ, ದಬೆದಬೆ ಜಲಪಾತ ಎಂಬಿತ್ಯಾದಿ ಹೆಸರಿನಿಂದ ಈ ಫಾಲ್ಸ್ ಸ್ಥಳೀಯರಿಂದ ಕರೆಸಿಕೊಳ್ಳುತ್ತಿದೆ. ಜಿಲ್ಲೆಯ ಮುಳ್ಳಯ್ಯನಗಿರಿ, ಬಾಬಾ ಬುಡಾನ್‌ಗಿರಿ ಇರುವ ಚಂದ್ರದ್ರೋಣ ಗಿರಿಶ್ರೇಣಿಯಲ್ಲಿ ಈ ಬಾರಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ದಬೆದಬೆ ಫಾಲ್ಸ್ ಜೀವಕಳೆ ಪಡೆದುಕೊಂಡಿದೆ. ನಿಸರ್ಗ ನಿರ್ಮಿತ ರೌದ್ರರಮಣೀಯ ಬಂಡೆ ಕಲ್ಲುಗಳ ನಡುವೆ ಕರುಚಲು ಕಾಡು ಸೀಳಿಕೊಂಡು ಸುಮಾರು 60-70 ಅಡಿ ಎತ್ತರದಿಂದ ಭೋರ್ಗರೆಯುತ್ತ ಧುಮ್ಮಿಕ್ಕಿ ಹರಿಯುತ್ತಿರುವ ಈ ಫಾಲ್ಸ್‌ನ ಮನಮೋಹಕ ದೃಶ್ಯ ಕಣ್ಮನಸೆಳೆಯುತ್ತದೆ.

ಕಾಫಿನಾಡಿಗೆ ಬರುವ ಪ್ರವಾಸಿಗರು ಹೆಬ್ಬೆ, ಕಲ್ಲತ್ತಿಗಿರಿ , ಝರಿ, ಬಂಡಾಜೆ ಫಾಲ್ಸ್‌ಗೆ ಹೋಗಲು ಇಷ್ಟ ಪಡುತ್ತಾರೆ. ಆದರೆ ಕಾಫಿನಾಡಿನ ಮಂದಿ ಮಾತ್ರ ವೀಕೆಂಡ್ ಬಂತೆಂದರೆ ಟ್ರಕ್ಕಿಂಗ್ ಮಾಡಿಕೊಂಡು ಸ್ನೇಹಿತರ ಬಳಗದೊಂದಿಗೆ ದಬೆದಬೆ ಫಾಲ್ಸ್ ನ ಮನಮೋಹಕ ದೃಶ್ಯ ವೀಕ್ಷಿಸುತ್ತ ಮೈಮರೆಯುತ್ತಾರೆ. ಈ ಫಾಲ್ಸ್ ಚಿಕ್ಕಮಗಳೂರು ತಾಲೂಕಿನಿಂದ ಸುಮಾರು 30ಕಿ.ಮೀ. ದೂರದಲ್ಲಿದೆ. ಈ ಸುಂದರ ಜಲಪಾತಕ್ಕೆ ಹೋಗುವುದು ಕೂಡ ಸವಾಲೇ ಸರಿ. ಕೊಂಚ ಮೈ ಮರೆತರೂ ಅಪಾಯ ಕಟ್ಟಿಟ್ಟಬುತ್ತಿ.

ಚಿಕ್ಕಮಗಳೂರಿನಿಂದ ಮಲ್ಲೇನಹಳ್ಳಿ ಮಾರ್ಗವಾಗಿ 30 ಕಿ.ಮೀ. ಸಾಗಿ ಕಾಮೇನಹಳ್ಳಿಗೆ ಆಗಮಿಸಿದರೆ ಭೋರ್ಗರೆಯುವ ಜಲಪಾತದ ನಿನಾದ ಕಿವಿಗೆ ತಾಕುತ್ತದೆ. ಜಲಪಾತದ ಶಬ್ಧ ಅನುಸರಿಸಿ ಟ್ರಕ್ಕಿಂಗ್ ಮಾಡುತ್ತಾ ಬೆಟ್ಟ ಏರಿದರೆ ಜಲಪಾತದ ಅದ್ಭುತ ದೃಶ್ಯ ಕಣ್ಣೆದುರು ತೆರೆದುಕೊಳ್ಳುತ್ತದೆ. ಕಾಮೇನಹಳ್ಳಿ ಗ್ರಾಮದವರೆಗೆ ವಾಹನಗಳಲ್ಲಿ ತೆರಳಲು ರಸ್ತೆ ಸೌಲಭ್ಯವಿದೆ. ಅಲ್ಲಿ ವಾಹನ ಪಾರ್ಕ್ ಮಾಡಿ ಸುಮಾರು ಒಂದೂವರೆ ಕಿ.ಮೀ. ನಡೆದು ಕೊಂಡು ಹೋದರೆ ಈ ಪ್ರಕೃತಿಯ ನೈಜ ಸೊಬಗಿನಲ್ಲಿರುವ ಸುಮಾರು 60-70 ಅಡಿ ಎತ್ತರದಿಂದ ಧುಮುಕುವ ಫಾಲ್ಸ್ ಕಾಣ ಸಿಗುತ್ತದೆ.

ಇಲ್ಲಿನ ಹತ್ತಾರು ಬಂಡೆಗಳು ಡೈಮಂಡ್ ಆಕೃತಿಯಲ್ಲಿರುವುದರಿಂದ ಈ ಜಲಪಾತವನ್ನು ಡೈಮಂಡ್ ಜಲಪಾತ ಎಂದು ಹೇಳುತ್ತಾರೆ. ಕಲ್ಲಿನ ಮೇಲೆ ನಿರಂತರವಾಗಿ ಹರಿಯುವ ನೀರು ವಿವಿಧ ಆಕಾರದಲ್ಲಿ ಕಲ್ಲನ್ನು ಕೊರೆದಿದೆ. ಇಲ್ಲಿನ ವಿಶಿಷ್ಟ ಆಕೃತಿಯ ಬಂಡೆ ಕಲ್ಲುಗಳೂ ಪ್ರವಾಸಿಗರು, ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತವೆ.

ದಬೆದಬೆ ಜಲಪಾತಕ್ಕೆ ತೆರಳಲು 2 ಮಾರ್ಗಗಳಿದ್ದು, ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ, ಕುಮಾರಗಿರಿಯಿಂದ ಹೋದಲ್ಲಿ ಈ ಜಲಪಾತ ಸಿಗುತ್ತದೆ. ಇನ್ನು ಕಡೂರು ಮಾರ್ಗವಾಗಿ ಬರುವ ಪ್ರವಾಸಿಗರು ಸಖರಾಯಪಟ್ಟಣದ ಮೂಲಕ ದಬೆದಬೆ ಜಲಪಾತ ತಲುಪಬಹುದು. ಈ ಜಲಪಾತದ ಸೊಬಗು ಸವಿಯಲು ಬರುವ ಪ್ರವಾಸಿಗರು ಟ್ರಕ್ಕಿಂಗ್ ಮಾಡುವುದು ಅನಿವಾರ್ಯವಾಗಿದೆ.

ಕಾಫಿನಾಡು ನೂರಾರು ಝರಿ ಜಲಪಾತಗಳ ತವರಾಗಿದೆ. ಕಲ್ಲತ್ತಿಗಿರಿ, ಝರಿ ಫಾಲ್ಸ್, ಹೆಬ್ಬೆ, ಬಂಡಾಜೆ, ಸಿರಿಮನೆ, ಸೂರುಮನೆಯಂತಹ ಹಲವಾರು ಫಾಲ್ಸ್ ಗಳು ಜಿಲ್ಲೆಯಲ್ಲಿದ್ದರೂ ಬಯಲು ಭಾಗದ ಕಡೂರು ತಾಲೂಕಿನ ಕಾಮೇನಹಳ್ಳಿ ಗ್ರಾಮದಲ್ಲಿರುವ ದಬೆದಬೆ ಫಾಲ್ಸ್(ಕಾಮೇನಹಳ್ಳಿ ಫಾಲ್ಸ್) ತೆರೆಮರೆಯ ಕಾಯಿಯಂತಿದ್ದು, ಉತ್ತಮ ರಸ್ತೆ ಸಂಪರ್ಕದಂತಹ ಮೂಲಸೌಕರ್ಯಗಳ ಕೊರತೆಯಿಂದಾಗಿ ಈ ಸುಂದರ ಜಲಪಾತ ಜನಮಾನಸದಿಂದ ಕೊಂಚ ದೂರ ಉಳಿದಿದೆ.



Tags:    

Writer - -ಕೆ.ಎಲ್.ಶಿವು

contributor

Editor - -ಕೆ.ಎಲ್.ಶಿವು

contributor

Byline - ಕೆ.ಎಲ್. ಶಿವು

contributor

Similar News