ನಲ್ಲೂರು ಗ್ರಾಮದ ಕಬ್ಬಿನ ಗದ್ದೆಯಲ್ಲಿ ಕಾಡಾನೆಗಳ ಠಿಕಾಣಿ
ಚಿಕ್ಕಮಗಳೂರು : ತಾಲೂಕಿನ ಆಲ್ದೂರು, ಮೂಡಿಗೆರೆ ಭಾಗದಲ್ಲಿ ಹಲವು ಮಂದಿಯನ್ನು ಬಲಿಪಡೆದಿರುವ ಒಂಟಿ ಸಲಗ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸಾರಗೋಡು, ಕುಂದೂರು ಅರಣ್ಯ ವ್ಯಾಪ್ತಿಯಲ್ಲಿ ಸಾಕಾನೆಗಳೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ಗುರುವಾರ ಬೆಳಗ್ಗೆ ನಗರ ಸಮೀಪದಲ್ಲಿರುವ ನಲ್ಲೂರು ಗ್ರಾಮದಲ್ಲಿ ಕಾಡಾನೆಗಳ ಗುಂಪು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಘಟನೆ ನಡೆದಿದ್ದು, ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ಬೆಳಗ್ಗೆ ೨ ಮರಿಯಾನೆಗಳೂ ಸೇರಿದಂತೆ ೮ ಕಾಡಾನೆಗಳು ನಲ್ಲೂರು ಗ್ರಾಮದ ಕಬ್ಬಿನ ಗದ್ದೆಗೆ ದಾಳಿ ನಡೆಸಿದ್ದವು. ಕಾಡಾನೆಗಳನ್ನು ಕಂಡ ಗ್ರಾಮಸ್ಥರು ಭಯಭೀತರಾಗಿ ಗ್ರಾಮದ ಜನರಿಗೆ ಮುನ್ನೆಚ್ಚರಿಕೆ ನೀಡಿ ಹೊಲ ಗದ್ದೆಗಳತ್ತ ತೆರಳದಂತೆ ಎಚ್ಚರಿಸಿದರು. ಸುದ್ದಿ ತಿಳಿದ ಅರಣ್ಯಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಬರುತ್ತಿದ್ದಂತೆ ಆಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ಪಡೆದು ಅರಣ್ಯಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದರು.
ಹಾಸನ ಜಿಲ್ಲೆಯ ಸಕಲೇಶಪುರ ಮೂಲಕ ಸಾರಗೋಡು ಅರಣ್ಯ ಸೇರಿಕೊಂಡಿದ್ದ ಆನೆಗಳ ಗುಂಪು ಆಲ್ದೂರು, ತೋರಣಮಾವು, ಗೌತಮೇಶ್ವರ ಮೂಲಕ ತೇಗೂರು ಗುಡ್ಡಕ್ಕೆ ಬಂದಿಳಿದಿವೆ. ಪಟಾಕಿ ಸಿಡಿಸುವ ಮೂಲಕ ಈ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕೆಲಸಕ್ಕೆ ಅರಣ್ಯಸಿಬ್ಬಂದಿ ಮುಂದಾಗಿದ್ದರು. ಹಗಲುವೇಳೆ ಕಾಡಿನಲ್ಲಿ ಕಾಲಕಳೆಯುವ ಈ ಕಾಡಾನೆಗಳು ಸಂಜೆಯಾಗುತ್ತಿದ್ದಂತೆ ರೈತರ ಹೊಲಗದ್ದೆಗಳಿಗೆ ನುಗ್ಗಿ ಪೈರುಗಳನ್ನು ಹಾಳುಗೆಡುವುತ್ತಿವೆ. ಕೆಲವು ದಿನಗಳ ಹಿಂದೆ ಹೆಣ್ಣಾನೆಯೊಂದು ಮರಿಗೆ ಜನ್ಮನೀಡಿದ್ದು, ಬುಧವಾರ ಮಧ್ಯರಾತ್ರಿ ವೇಳೆ ನಲ್ಲೂರು ಗ್ರಾಮದ ಕಬ್ಬಿನಗದ್ದೆಗೆ ದಾಳಿ ಇಟ್ಟಿವೆ. ಕಬ್ಬಿನಗದ್ದೆಯ ನಡುವೆ ಮರಿಯಾನೆಯೊಂದಿಗೆ ಕಾಡಾನೆಗಳು ಠಿಕಾಣಿ ಹೂಡಿರುವುದು ಡ್ರೋನ್ ಕ್ಯಾಮರಾದಲ್ಲಿ ಪತ್ತೆಯಾಗಿದೆ.
ಪ್ರಸಕ್ತ ನಲ್ಲೂರು ಗ್ರಾಮದ ಕಬ್ಬಿನ ಗದ್ದೆಯಲ್ಲಿ ಮರಿಯಾನೆಗಳೊಂದಿಗೆ ಬೀಡು ಬಿಟ್ಟಿರುವ ಕಾಡಾನೆಗಳು ಜಾಗಬಿಟ್ಟು ಕದಲುತ್ತಿಲ್ಲ. ಮರಿಯಾನೆ ತಾಯಿಯೊಂದಿಗೆ ನಡೆದಾಡಲು ಶುರು ಮಾಡಿದಾಕ್ಷಣ ೫-೮ ಕಾಡಾನೆಗಳು ಅಲ್ಲಿಂದ ಹೊರಬರುವ ಸಾಧ್ಯತೆಗಳಿವೆ. ಈಗ ಗದ್ದೆಯಲ್ಲಿ ಸಿಗುವ ಆಹಾರವನ್ನು ಸೇವಿಸಿ ಮರಿಯಾನೆಗೆ ತೊಂದರೆಯಾಗದಂತೆ ಸುತ್ತುವರಿದು ರಕ್ಷಣೆ ನೀಡುವ ಕಾರ್ಯದಲ್ಲಿ ಆನೆಗಳು ನಿರತವಾಗಿವೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಲ್ಲೂರು ಗ್ರಾಮದಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ. ಗ್ರಾಮದ ಜಮೀನುಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿರುವುದರಿಂದ ರೈತರ ಬೆಳೆ ನಾಶವಾಗುತ್ತಿವೆ. ಜಮೀನನ್ನು ಗುತ್ತಿಗೆಗೆ ಪಡೆದುಕೊಂಡಿರುವ ರಾಜಣ್ಣ ಎಂಬವರು ಕಬ್ಬಿನ ಬೆಳೆ ನಾಶವಾಗುವ ಭೀತಿಯಲ್ಲಿದ್ದಾರೆ. ಆನೆಗಳಿಂದಾಗಿ ಜನರು ಒಂಟಿಯಾಗಿ ತಿರುಗಾಡಲು ಸಾಧ್ಯವಾಗುತ್ತಿಲ್ಲ. ಕಳೆದ ಒಂದು ತಿಂಗಳಿಂದ ಜಮೀನು ಕಡೆಗೆ ಹೋಗಲು ರೈತರಿಗೆ ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಶಾಲೆಗೆ ರಜೆ: ಗ್ರಾಮದ ಜಮೀನೊಂದರಲ್ಲಿ ಕಾಡಾನೆಗಳ ಗುಂಪು ಬೀಡುಬಿಟ್ಟಿರುವುದರಿಂದ ಅರಣ್ಯ ಇಲಾಖೆಯವರು ಆನೆಗಳು ಗ್ರಾಮದತ್ತ ಮುಖ ಮಾಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಜನರು ಊರಿನ ಹೊರಗೆ ಬಾರದಂತೆ ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಮೀಪದ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ.
ಅಧಿಕಾರಿಗಳಿಗೆ ತರಾಟೆ: ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ ಎಸ್ಪಿ ಡಾ.ವಿಕ್ರಮ್ ಆಮಟೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಕಳೆದೊಂದು ತಿಂಗಳಿಂದ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಎರಡು ತಿಂಗಳಲ್ಲಿ ಇಬ್ಬರನ್ನು ಸಾಯಿಸಿವೆ. ಅರಣ್ಯಾಧಿಕಾರಿಗಳು ಏನು ಮಾಡಿದ್ದಾರೆ? ಜನರು ಭಯದ ವಾತಾವರಣದಲ್ಲಿ ಜೀವನ ಕಳೆಯುತ್ತಿದ್ದಾರೆ. ಜನರಿಗೆ ಹೆಚ್ಚು ಕಡಿಮೆಯಾದರೆ ನೀವೆ ಹೊಣೆಯಾಗಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲಂದೂರು, ಮತ್ತಾವರದಲ್ಲಿ ತಿರುಗಾಡುತ್ತಿದ್ದ ಕಾಡಾನೆಗಳು ಈಗ ಚಿಕ್ಕಮಗಳೂರು ನಗರ ಸಮೀಪಕ್ಕೆ ಬಂದಿವೆ. ಅರಣ್ಯಾಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಇತ್ತೀಚೆಗೆ ಇಬ್ಬರನ್ನು ಬಲಿ ಪಡೆದ ಕಾಡಾನೆಯ ಸೆರೆಗೆ ಮಾತ್ರ ಅಧಿಕಾರಿಗಳು ಒತ್ತು ನೀಡುತ್ತಿದ್ದಾರೆ. ಬೇರೆ ಆನೆಗಳನ್ನು ಕಾಡಿಗಟ್ಟಲು ಮುಂದಾಗಿಲ್ಲ. ಜನರ ಜೀವಕ್ಕೆ ಅಪಾಯ ಬಂದೊದಗುವ ಮೊದಲೇ ಕಾಡಾನೆಗಳ ಗುಂಪನ್ನು ಕಾಡಿಗೆ ಅಟ್ಟಬೇಕು. ಆನೆಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.