9 ವರ್ಷಗಳಿಂದ ತಪ್ಪಿಸಿಕೊಂಡಿದ್ದ ಪ್ರಶ್ನೆ ಅಲ್ಲಿ ಎದುರಾಯಿತು !
ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಒಂಬತ್ತು ವರ್ಷಗಳಿಂದ ತಪ್ಪಿಸಿಕೊಳ್ಳುತ್ತಿದ್ದ ಆ ಎರಡು ಪ್ರಶ್ನೆಗಳು ಕೊನೆಗೂ ಅವರೆದುರು ಬಂದೇ ಬಿಟ್ಟಿವೆ. ಅದೂ ಎಲ್ಲಿ ? ಇಲ್ಲಲ್ಲ, ಅಮೇರಿಕಾದಲ್ಲಿ !
ಅಮೇರಿಕದ ಅತಿಥಿಯಾಗಿ ಹೋದಾಗ ಇಡೀ ವಿಶ್ವದೆದುರು ಭಾರತದ ಪ್ರಧಾನಿ ಆ ಎರಡು ಪ್ರಶ್ನೆಗಳನ್ನು ಎದುರಿಸಬೇಕಾಗಿ ಬಂತು. ಆ ಮೂಲಕ ಈ ಮಹಾನ್ ದೇಶದ ಪ್ರಧಾನಿಗೆ ವಿಶ್ವವೇದಿಕೆಯಲ್ಲಿ ಮುಖಭಂಗವಾಗಿದೆ, ಮುಜುಗರವಾಗಿದೆ.
ಪ್ರಧಾನಿ ಅಮೇರಿಕ ಭೇಟಿಯ ಬಗ್ಗೆ ಭಟ್ಟಂಗಿ ಚಾನಲ್ ಗಳು, ಪತ್ರಿಕೆಗಳು ಅದೆಷ್ಟು ವರ್ಣರಂಜಿತವಾಗಿ ಬರೆದರೂ, ಅದೆಷ್ಟು ಡಿನ್ನರ್ ಗಳ, ಆಲಿಂಗನಗಳ ವಿಡಿಯೋಗಳನ್ನು ಪ್ರಸಾರ ಮಾಡಿದರೂ, ಆ ಎರಡು ಪ್ರಶ್ನೆಗಳು ಪ್ರಧಾನಿ ಮೋದಿಗೆ ಇನ್ನಿಲ್ಲದ ಇರಿಸು ಮುರುಸು ತಂದೊಡ್ಡಿವೆ, ಅವರಿಗೆ ಹಾಗು ಇಡೀ ದೇಶಕ್ಕೆ ಇದರಿಂದ ಅಮೇರಿಕಾದಲ್ಲಿ ದೊಡ್ಡ ಅವಮಾನವಾಗಿದೆ.
ಕಳೆದ ಒಂಬತ್ತು ವರ್ಷಗಳ ಆಡಳಿತ ವೈಖರಿ, ಅವರ ಸಚಿವರು, ಅವರ ಪಕ್ಷದ ನಾಯಕರು, ಸಂಘ ಪರಿವಾರ ಸಂಘಟನೆಗಳ ನಾಯಕರು, ಕಾರ್ಯಕರ್ತರು, ಐಟಿ ಸೆಲ್, ಭಟ್ಟಂಗಿ ಚಾನಲ್ ಗಳು ಎಲ್ಲರೂ ಒಟ್ಟಿಗೆ ಸೇರಿ ಅಮೇರಿಕಾದಲ್ಲಿ ಪ್ರಧಾನಿಗೆ ಹಾಗು ಈ ಮಹಾನ್ ದೇಶಕ್ಕೆ ತೀವ್ರ ಮುಜುಗರ ತಂದಿಟ್ಟರು. ಅಲ್ಲಿ ಅಮೇರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿಗೆ ಪತ್ರಕರ್ತೆ ಕೇಳಿದ ಪ್ರಶ್ನೆ ಹೀಗಿತ್ತು:
"ಪ್ರಧಾನಮಂತ್ರಿಗಳೇ, ಭಾರತವು ತಾನು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಆದರೆ ನಿಮ್ಮ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡಿದೆ, ಟೀಕಾಕಾರರ ಬಾಯಿ ಮುಚ್ಚಿಸಲಾಗಿದೆ ಎಂದು ಅನೇಕ ಮಾನವ ಹಕ್ಕುಗಳ ಗುಂಪುಗಳು ದೂರುತ್ತವೆ. ನೀವು ಶ್ವೇತಭವನದಲ್ಲಿ ಇದ್ದೀರಿ, ಇಲ್ಲಿ ಅನೇಕ ವಿಶ್ವ ನಾಯಕರು ಪ್ರಜಾಪ್ರಭುತ್ವವನ್ನು ರಕ್ಷಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳನ್ನು ಸುಧಾರಿಸಲು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ನೀವು ಮತ್ತು ನಿಮ್ಮ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದ್ದೀರಿ?"
ಈ ಪ್ರಶ್ನೆಗೆ ಪ್ರಧಾನಿ ನೀಡಿದ ಉತ್ತರ ಇದಾಗಿತ್ತು.
"ಜನ ಹೀಗೆ ಹೇಳಿ ಕೊಳ್ತಾರೆ ಅಂತ ನೀವು ಹೇಳಿದ್ದು ಕೇಳಿ ನನಗೆ ಆಶ್ಚರ್ಯವಾಯಿತು. ಹೇಳೋದು ಮಾತ್ರ ಅಲ್ಲ, ಭಾರತ ಪ್ರಜಾಪ್ರಭುತ್ವ ದೇಶವಾಗಿದೆ. ಬೈಡನ್ ಅವರು ಹೇಳಿದಂತೆ ಭಾರತ - ಅಮೇರಿಕ ಈ ಎರಡೂ ದೇಶಗಳ ಡಿ ಎನ್ ಎ ಯಲ್ಲೇ ಪ್ರಜಾಪ್ರಭುತ್ವವಿದೆ. ಪ್ರಜಾಪ್ರಭುತ್ವ ನಮ್ಮ ಸ್ಪೂರ್ತಿಯಾಗಿದೆ. ಅದು ನಮ್ಮ ನರನಾಡಿಗಳಲ್ಲೇ ಇದೆ. ನಾವು ಪ್ರಜಾಪ್ರಭುತ್ವವನ್ನೇ ಬದುಕುತ್ತೇವೆ. ನಮ್ಮ ಪೂರ್ವಜರು ಅದನ್ನೇ ನಮ್ಮ ಸಂವಿಧಾನದಲ್ಲಿ ನೀಡಿದ್ದಾರೆ. ನಮ್ಮ ಸರಕಾರವೂ ಪ್ರಜಾಪ್ರಭುತ್ವದ ಆಧಾರದಲ್ಲೇ ರಚನೆಯಾದ ಸಂವಿಧಾನದ ಪ್ರಕಾರವೇ ನಡೆಯುತ್ತಿದೆ. ನಮ್ಮ ಸಂವಿಧಾನ ಹಾಗು ನಮ್ಮ ಸರಕಾರದಲ್ಲಿ ಯಾವುದೇ ಧರ್ಮ, ಜಾತಿ, ಲಿಂಗ ಹಾಗು ವರ್ಗಗಳ ಬೇಧ ಮಾಡೋದಿಲ್ಲ. ಪ್ರಜಾಪ್ರಭುತ್ವದ ಮಾತಾಡುವಾಗ ಮಾನವೀಯ ಮೌಲ್ಯಗಳು ಇಲ್ಲದಿದ್ದರೆ, ಮಾನವೀಯತೆ ಇಲ್ಲದಿದ್ದರೆ, ಮಾನವ ಹಕ್ಕುಗಳು ಇಲ್ಲದಿದ್ದರೆ ಅದು ಪ್ರಜಾಪ್ರಭುತ್ವವೇ ಅಲ್ಲ. ನಾವು ಪ್ರಜಾಪ್ರಭುತ್ವ ಅಂತ ಹೇಳಿದ ಮೇಲೆ, ಅದನ್ನು ಸ್ವೀಕರಿಸಿದ ಮೇಲೆ, ಆ ಪ್ರಕಾರವೇ ಬದುಕುತ್ತಿರುವಾಗ ಅಲ್ಲಿ ಬೇಧಭಾವದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಗಾಗಿ ಭಾರತ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ , ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ - ಈ ಮೂಲಭೂತ ಸಿದ್ಧಾಂತದ ಮೇಲೆಯೇ ನಾವು ನಡೆಯುತ್ತೇವೆ. ಸರಕಾರದ ಸೌಲಭ್ಯಗಳು ಎಲ್ಲರಿಗೂ ಸಿಗುತ್ತವೆ. ಯಾರ್ಯಾರು ಅದಕ್ಕೆ ಅರ್ಹರು ಅವರೆಲ್ಲರಿಗೂ ಸಿಗುತ್ತೆ. ಹಾಗಾಗಿ ಭಾರತದ ಪ್ರಜಾಪ್ರಭುತ್ವದಲ್ಲಿ ಧರ್ಮ, ಜಾತಿ, ವಯಸ್ಸು, ಭೂಭಾಗ - ಇವುಗಳ ಆಧಾರದಲ್ಲಿ ಯಾವುದೇ ಬೇಧಭಾವ ಮಾಡೋದಿಲ್ಲ".
ಈ ಪ್ರಶ್ನೆಯನ್ನು ಪ್ರಧಾನಿಗೆ ಕೇಳಿದ್ದು ವಾಲ್ ಸ್ಟ್ರೀಟ್ ಜರ್ನಲ್ ಪತ್ರಕರ್ತೆ ಸಬ್ರಿನಾ ಸಿದ್ದಿಕಿ. ಆದರೆ ಪ್ರಧಾನಿ ಮೋದಿ ಆಕೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರಾ ? ಅವರು ನೀಡಿದ ಆ ಉತ್ತರದಲ್ಲಿ ಏನಿದೆ ?
ಕಳೆದ ಹಲವು ದಶಕಗಳಿಂದ ಈ ದೇಶದ ಪ್ರಧಾನಿಗಳು ಹೇಳುತ್ತಲೇ ಬಂದಿರುವ ವಾಕ್ಯಗಳನ್ನು ಪ್ರಧಾನಿ ಮೋದಿ ಆ ಪ್ರಶ್ನೆಗೆ ಉತ್ತರವಾಗಿ ಹೇಳಿದರು. "ಪ್ರಜಾಪ್ರಭುತ್ವದ ಸೌಂದರ್ಯದ ಬಗ್ಗೆ ಕೆಲವು ಸಾಲು ಹೇಳಿ ಪ್ರಧಾನಿಗಳೇ " ಎಂದು ಕೇಳಿದಾಗ ನೀಡಬೇಕಾಗಿದ್ದ ಉತ್ತರವನ್ನು ಪ್ರಧಾನಿ ಮೋದಿ ಈ ಪ್ರಶ್ನೆಗೆ ನೀಡಿದ್ದಾರೆ.
ನಿಮ್ಮ ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ನಡೆಯುತ್ತಿದೆಯೇ ಎಂದು ಆ ಪತ್ರಕರ್ತೆ ಕೇಳಿಲ್ಲ. ಆಕೆ ಕೇಳಿದ್ದು " ಈಗಾಗಲೇ ಅಲ್ಲಿ ತಾರತಮ್ಯ ನಡೆಯುತ್ತಿದೆ, ಟೀಕಾಕಾರರ ಬಾಯಿ ಮುಚ್ಚಿಸಲಾಗುತ್ತಿದೆ. ಅದನ್ನು ಸರಿಪಡಿಸಲು ಏನು ಮಾಡುತ್ತೀರಿ ಪ್ರಧಾನಿಗಳೇ " ಅಂತ.
ಈ ಪ್ರಶ್ನೆ ಕೇಳುವಾಗ ಪ್ರಧಾನಿ ಮುಖಭಾವ ಹೇಗಿತ್ತು ಎಂದು ನೋಡಿದರೆ ಅವರಿಗೆ ಈ ಪ್ರಶ್ನೆ ಅದೆಷ್ಟು ಮುಜುಗರ ತಂದಿದೆ ಎಂದು ಬಹಳ ಸ್ಪಷ್ಟವಾಗಿ ಗೊತ್ತಾಗಿ ಬಿಡುತ್ತದೆ.
ಏಕೆಂದರೆ, ಪ್ರಧಾನಿ ಬಳಿ ಆ ಪ್ರಶ್ನೆಗೆ ಕೊಡಲು ಉತ್ತರವೇ ಇಲ್ಲ. ಎಂಬತ್ತು ವರ್ಷದ ವೃದ್ಧ ಅಮೇರಿಕ ಅಧ್ಯಕ್ಷ ಜೋ ಬೈಡನ್ ಯಾವುದೇ ಟೆಲಿ ಪ್ರಾಂಪ್ಟರ್ ಇಲ್ಲದೆ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದರು, ಪ್ರಶ್ನೆಗಳಿಗೆ ಉತ್ತರಿಸಿದರು. ಆದರೆ ಪ್ರಧಾನಿ ಮೋದಿ ಹಿಂದಿಯಲ್ಲೇ ಮಾತಾಡುತ್ತಿದ್ದರೂ ಅಕ್ಕಪಕ್ಕ ಟೆಲಿಪ್ರಾಂಪ್ಟರ್ ಇಟ್ಟುಕೊಂಡಿದ್ದರು. ಇರಲಿ, ಪರ್ವಾಗಿಲ್ಲ. ಆದರೆ, ಟೆಲಿಪ್ರಾಂಪ್ಟರ್ ಪತ್ರಕರ್ತರ ಆ ಪ್ರಶ್ನೆಗೆ ಉತ್ತರವನ್ನು ಪ್ರಧಾನಿಗೆ ಒದಗಿಸಲು ಸಾಧ್ಯನಾ ?
ಭಾರತದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದ ಪ್ರಧಾನಿ, ಅಮೆರಿಕದಲ್ಲಿ ಅದನ್ನು ಎದುರಿಸಬೇಕಾಯಿತು. ಅವರು ಪತ್ರಿಕಾಗೋಷ್ಠಿ ಎದುರಿಸಿದ್ದೇ ಬಹುದೊಡ್ಡ ಸಂಗತಿ ಎಂಬಂತೆ ಅಲ್ಲಿನ ಹಿರಿಯ ಅಧಿಕಾರಿಗಳು ಹೇಳಿಕೆ ಕೊಟ್ಟಿದ್ದಾರೆ. ಅಲ್ಲಿನ ದೊಡ್ಡಮಾಧ್ಯಮಗಳೂ ಪ್ರಧಾನಿ ಮೋದಿ ಇದೇ ಮೊದಲ ಬಾರಿ ಪತ್ರಿಕಾಗೋಷ್ಠಿ ಮಾಡಿದ್ದಾರೆ ಎಂದು ವರದಿ ಮಾಡಿದ್ದಾರೆ. ಅದೆಷ್ಟು ನಾಚಿಕೆಗೇಡು...ಅಲ್ಲವೇ ?
ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನಿಗೆ ಪ್ರಶ್ನೆಗಳನ್ನೇ ಕೇಳದ ಹಾಗೆ ಅಥವಾ ಅತ್ಯಂತ ಕಡಿಮೆ ಪ್ರಶ್ನೆ ಕೇಳುವ ಹಾಗೆ ಮಾಡಲು ಭಾರತದ ಹಿರಿಯ ಅಧಿಕಾರಿಗಳು ಅಮೇರಿಕದ ಹಿರಿಯ ಅಧಿಕಾರಿಗಳೊಂದಿಗೆ ಅದೆಷ್ಟು ಹೆಣಗಾಡಿರಬಹುದು ಎಂದು ಊಹಿಸಿದರೇ ಬೇಸರವೆನಿಸುತ್ತದೆ. ಕೊನೆಗೆ ಉಭಯ ನಾಯಕರು ಒಟ್ಟು ಎರಡು ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಎಂದು ಹೇಳಲಾಯಿತು. ಆ ಒಂದು ಪ್ರಶ್ನೆಯೇ ಇಡೀ ಅಮೇರಿಕ ಭೇಟಿಯನ್ನೇ ಮಸುಕಾಗಿಸುವಷ್ಟು ಕಠಿಣವಾಗಿಬಿಟ್ಟವು.
ರಾಜ್ಯ ಸಚಿವರಾಗಿದ್ದು ಗೋಲಿ ಮಾರೋ ಕುಖ್ಯಾತಿಯ ಬಳಿಕ ಸಂಪುಟ ಸಚಿವರಾದವರು, ಗೋ ರಕ್ಷಣೆಯ ನೆಪದಲ್ಲಿ, ಲವ್ ಜಿಹಾದ್ ನೆಪದಲ್ಲಿ ದೇಶಾದ್ಯಂತ ಮುಸಲ್ಮಾರರ ಗುಂಪು ಹತ್ಯೆ , ಗುಂಪು ಹಲ್ಲೆ, ಲೂಟಿ ನಡೆಸಿದವರು, ಸಂತರ ವೇಷದಲ್ಲಿ ಬಂದು ಬೀದಿ ಬೀದಿಗಳಲ್ಲಿ ನಿಂತು ಮುಸಲ್ಮಾನರ ನರಮೇಧ ನಡೆಸಿ ಎಂದು ಬಹಿರಂಗವಾಗಿ ಕರೆ ಕೊಟ್ಟವರು, ನಮಗೆ ಮುಸಲ್ಮಾನರ ಓಟು ಬೇಡ - ಅವರ ಯಾವುದೇ ಕೆಲಸ ಮಾಡೋದಿಲ್ಲ ಎಂದ ಬಿಜೆಪಿ ನಾಯಕರು, ಮಾಡದ ಅಪರಾಧಕ್ಕಾಗಿ ವೈದ್ಯನನ್ನು, ವಿದ್ವಾಂಸರನ್ನು, ಹೋರಾಟಗಾರರನ್ನು, ಸಾಮಾಜಿಕ ಕಾರ್ಯಕರ್ತರನ್ನು, ಕಾಮಿಡಿಯನ್ ಗಳನ್ನು ಜೈಲಿಗೆ ಅಟ್ಟಿದ ಬಿಜೆಪಿ ಸರಕಾರಗಳು, ಅವರಿಗೆ ಜಾಮೀನು ಸಿಗದ ಹಾಗೆ ತಿಂಗಳುಗಟ್ಟಲೆ ಅಲ್ಲೇ ಇಟ್ಟವರು, ಲವ್ ಜಿಹಾದ್ , ಲ್ಯಾಂಡ್ ಜಿಹಾದ್ ನಡೆಯುತ್ತಿದೆ ಎಂದು ಹೇಳಿಕೆ ಕೊಡುತ್ತಿರುವ ಬಿಜೆಪಿ ಮುಖ್ಯಮಂತ್ರಿಗಳು, ಕಾನೂನಿನಲ್ಲಿ ಎಲ್ಲೂ ಇಲ್ಲದ ಬುಲ್ಡೋಜರ್ ಕಾರ್ಯಾಚರಣೆ ಮಾಡಿ ಎಲ್ಲರನ್ನೂ ಬೆಚ್ಚಿ ಬೀಳಿಸಿದವರು, ಪಂಕ್ಚರ್ ವಾಲಗಳು ಎಂದು ಮುಸಲ್ಮಾರರನ್ನು ಜರೆದ ಬಿಜೆಪಿ ಸಂಸದರು, ಕಿರುಕುಳ ನೀಡುವುದನ್ನೇ ಗುರಿಯಾಗಿಸಿ ಕಾನೂನು ಜಾರಿಗೆ ತಂದ ಬಿಜೆಪಿ ಮುಖ್ಯಮಂತ್ರಿಗಳು, ಅಮಾಯಕ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಅವಕಾಶ ತಪ್ಪಿಸಿದವರು..
ಹೀಗೆಯೇ ಇವರೆಲ್ಲರೂ ಒಟ್ಟಿಗೆ ಸೇರಿ ಅಮೇರಿಕಾದಲ್ಲಿ ಪ್ರಧಾನಿ ಮೋದಿ ಅವರು ಪ್ರಶ್ನೆಗೆ ಉತ್ತರಿಸಲು ಆಗದ ಹಾಗೆ ಮಾಡಿ ಬಿಟ್ಟರು. ಅವರಿಗೆ ಅವಮಾನ ಆಗುವ ಪರಿಸ್ಥಿತಿ ನಿರ್ಮಾಣ ಮಾಡಿಬಿಟ್ಟರು. ಆ ಮೂಲಕ ನಮ್ಮ ಈ ಮಹಾನ್ ದೇಶಕ್ಕೇ ಅಮೇರಿಕಾದಲ್ಲಿ ಅವಮಾನ ಮಾಡಿದರು. ಅವರ ಅಮೇರಿಕಾ ಭೇಟಿಯ ಹೊಳಪನ್ನು ಮಣ್ಣುಪಾಲು ಮಾಡಿ ಬಿಟ್ಟರು.
ಧರ್ಮದ, ಸಂಸ್ಕೃತಿಯ, ದೇಶದ ಹೆಸರಲ್ಲಿ ಜನರಲ್ಲಿ ದ್ವೇಷ ಬಿತ್ತಿದರೆ, ಅನುಮಾನ ಹರಡಿದರೆ, ಸುಳ್ಳು ಪ್ರಚಾರ ಮಾಡಿದರೆ, ಅಮಾಯಕರನ್ನು ಹಿಂಸಿಸಿದರೆ, ಮೋದಿ ಬೆಂಬಲಿಗರಿಗೆ ಇಲ್ಲಿ ಖುಷಿಯಾಗಬಹುದು. ಆದರೆ ವಿಶ್ವ ವೇದಿಕೆಯಲ್ಲಿ ಅದರಿಂದ ದೇಶಕ್ಕೆ, ದೇಶದ ಪ್ರಧಾನಿಗೆ ಅದೆಷ್ಟು ಅವಮಾನವಾಯಿತು ?
"ವಿಶೇಷವಾಗಿ ವ್ಯವಸ್ಥೆ ಮಾಡಲಾಗಿದ್ದ ಟೆಲಿಪ್ರಾಂಪ್ಟರ್ ಇದ್ದೂ ಪ್ರಧಾನಿ ತೀರಾ ನೀರಸ ಹಾಗು ಕಳಪೆ ಉತ್ತರ ಕೊಟ್ಟಿದ್ದಾರೆ. ಒಂದು ಜಾಗತಿಕ ವೇದಿಕೆಯಲ್ಲಿ ಇಂತಹ ಕಳಪೆ ನಿರ್ವಹಣೆ ಅಸ್ವೀಕಾರಾರ್ಹ. ಪ್ರಧಾನಿ ದೇಶದಲ್ಲಿ ಯಾಕೆ ಪತ್ರಿಕಾಗೋಷ್ಠಿ ಮಾಡೋದಿಲ್ಲ ಎಂಬುದು ಈಗ ಅರ್ಥವಾಗುತ್ತೆ" ಅಂತ ಹೇಳಿದ್ದಾರೆ ಕಾಂಗ್ರೆಸ್ ನಾಯಕ ಪವನ್ ಖೇರಾ.
ಇಲ್ಲಿ ಬುಲ್ಡೋಜರ್ ಬಾಬಾ ಅಂತ ಹಾರಾಡಿದವರನ್ನು ನೋಡಿ ಅಮೆರಿಕದ ನ್ಯೂಜೆರ್ಸಿಯಲ್ಲಿ ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಗೆ ಅಲ್ಲಿನ ಮೋದಿ ಭಕ್ತರು ಬುಲ್ಡೋಜರ್ ಹಿಡಿದುಕೊಂಡು ಅದರಲ್ಲಿ ಮೋದಿ ಹಾಗು ಆದಿತ್ಯನಾಥ್ ಫೋಟೋ ಅಂಟಿಸಿ ಮೆರವಣಿಗೆ ಮಾಡಿದರು. ಆಗ ಎಡಿಸನ್ ಹಾಗು ವುಡ್ ಬ್ರಿಡ್ಜ್ ನ ಮೇಯರ್ ಗಳು ಅವರಿಗೆ ಛೀಮಾರಿ ಹಾಕಿದರು. ಎಡಿಸನ್ ಮೇಯರ್ ಸಮೀಪ್ ಜೋಶಿ ಇದನ್ನು ಖಂಡಿಸಿ "ಇಂತಹ ತಾರತಮ್ಯದ ಪ್ರದರ್ಶನಕ್ಕೆ ಇಲ್ಲಿ ಅವಕಾಶವಿಲ್ಲ, ನೀವು ಇದಕ್ಕಾಗಿ ಕ್ಷಮೆ ಕೇಳಬೇಕು" ಎಂದಿದ್ದರು. ಈಗ ಮೋದಿ ಅಮೇರಿಕ ಭೇಟಿ ವೇಳೆಯೇ ಇಂತಹ ದ್ವೇಶಭಕ್ತ ಬಿಜೆಪಿ ಅಭಿಮಾನಿಗಳಿಂದ ದೇಶಕ್ಕೆ ಮತ್ತೆ ಕೆಟ್ಟ ಹೆಸರು ಬಂದಿದೆ.
ಆದರೆ ಇದನ್ನೆಲ್ಲಾ ಇಲ್ಲಿನ ಯಾವ ಚಾನಲ್ ನವರೂ ನಿಮಗೆ ಹೇಳೋದಿಲ್ಲ. "ನಿಮ್ಮ ಪರ್ಸ್ ಅಲ್ಲಿ ದುಡ್ಡಿರುತ್ತಾ ? ನೀವು ಇಷ್ಟೊಂದು ಕೆಲಸ ಮಾಡಿಯೂ ನಿಮಗೆ ಸುಸ್ತಾಗಲ್ಲ ಯಾಕೆ ? ನೀವು ಇಷ್ಟೊಂದು ಕೆಲಸ ಮಾಡಿದರೆ ವಿಶ್ರಾಂತಿ ತೆಗೆದುಕೊಳ್ಳೋದು ಯಾವಾಗ ? " ಅಂತ ಕೇಳೋ ಇಲ್ಲಿನ ಆಂಕರ್ ಗಳು ಹಾಗು ಚಾನಲ್ ಗಳು, ಅಮೇರಿಕಾದಲ್ಲಿ ಪ್ರಧಾನಿ ಮೋದಿಗೆ ಹಾಗು ದೇಶಕ್ಕೆ ಆಗಿರುವ ಅವಮಾನದ ಬಗ್ಗೆ ಏನೂ ಹೇಳೋದಿಲ್ಲ.
ಪ್ರಧಾನಿ ಭೇಟಿ ವೇಳೆಯೇ ನ್ಯೂಯಾರ್ಕ್ ನ ಬೀದಿ ಬೀದಿಗಳಲ್ಲೂ ಅವರಿಗೆ ಹಲವು ಕಠಿಣ ಪ್ರಶ್ನೆಗಳನ್ನು ಕೇಳಲಾಗಿತ್ತು. ಅಲ್ಲಿ ಅನಿವಾಸಿ ಭಾರತೀಯರ ಗುಂಪು ವಾಷಿಂಗ್ಟನ್‌ನಿಂದ ನ್ಯೂಯಾರ್ಕ್‌ವರೆಗೆ ವಿವಿಧ ವಿಷಯಗಳ ಕುರಿತು ಅಲ್ಲಿನ ಬೀದಿಗಳಲ್ಲಿ ಪ್ರಧಾನಿಯನ್ನು ವಿರೋಧಿಸುತ್ತಿತ್ತು. ಭಾರತದಲ್ಲಿ ನರೇಂದ್ರ ಮೋದಿ ಸರಕಾರದ ಅಲ್ಪಸಂಖ್ಯಾತ ವಿರೋಧಿ ಧೋರಣೆಯನ್ನು, ಅದರ ವೈಫಲ್ಯವನ್ನು ಅಲ್ಲಿ ಪ್ರಶ್ನಿಸಲಾಗಿತ್ತು. " ಉಮರ್ ಖಾಲಿದ್ ಅನ್ನು ಏಕೆ ಬಿಡುಗಡೆ ಮಾಡಲಿಲ್ಲ? ಮಹಿಳಾ ಕುಸ್ತಿಪಟುಗಳು ಏಕೆ ಮುಷ್ಕರಕ್ಕೆ ಕುಳಿತರು ? ಮಣಿಪುರದಲ್ಲಿ ಏಕೆ ಹಿಂಸಾಚಾರ ನಿಲ್ಲಿಸಿಲ್ಲ ? " ಸಹಿತ ಹಲವು ಪ್ರಶ್ನೆಗಳು ಈ ಟ್ರಕ್ ನಲ್ಲಿ ಇದ್ದವು. ಮೋದಿ ಸರ್ಕಾರ ಭಾರತದಲ್ಲಿ ನಿಷೇಧಿಸಿದ ಆ ಸಾಕ್ಷ್ಯಚಿತ್ರವನ್ನು ಸಹ ಅಲ್ಲಿ ಬೀದಿಯಲ್ಲೇ ತೋರಿಸಲಾಯಿತು. ಆದರೆ, ಭಟ್ಟಂಗಿ ಮೀಡಿಯಾಗಳು ಈ ಟ್ರಕ್ ಅನ್ನು ತೋರಿಸಲೇ ಇಲ್ಲ.
ಇಂತಹದೇ ಪ್ರಶ್ನೆಗಳನ್ನು ಅಮೇರಿಕ ಕಾಂಗ್ರೆಸ್‌ನ 75 ಸಂಸದರು ಬೈಡೆನ್ ಗೆ ಪತ್ರ ಬರೆದು ಕೇಳಿದ್ದಾರೆ. "ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಏಕೆ ಹತ್ತಿಕ್ಕಲಾಗುತ್ತಿದೆ " ಎಂದು ಮೋದಿಯವರನ್ನು ಕೇಳಿ. " ಭಾರತದಲ್ಲಿ ಮುಸ್ಲಿಮರ ಮೇಲೆ ಹಿಂಸಾಚಾರ ನಡೆಯುತ್ತಿದೆ, ತಾರತಮ್ಯ ಮಾಡಲಾಗುತ್ತಿದೆ. ಅದೇಕೆ ನಿಲ್ಲುತ್ತಿಲ್ಲ" ಎಂದು ಕೇಳಿ ಎಂದು ಅಮೆರಿಕ ಸಂಸತ್ತಿನ ಹಲವು ಪ್ರತಿನಿಧಿಗಳು ಆ ಪತ್ರದಲ್ಲಿ ಹೇಳಿದ್ದಾರೆ. ಅದೂ ಇಲ್ಲಿ ಸುದ್ದಿಯಾಗಿಲ್ಲ. ಆಗೋದೂ ಇಲ್ಲ.
ಈಗ ಎಂದಿನಂತೆ ಮೋದಿ ಬೆಂಬಲಿಗ ಪಡೆ ಅದೆಲ್ಲ ಉದ್ದೇಶಪೂರ್ವಕವಾಗಿ ಕೇಳಿದ ರಾಜಕೀಯ ಪ್ರೇರಿತ ಪ್ರಶ್ನೆಗಳು ಎಂದು ಹೇಳಿದ್ದಾರೆ. ಅವರಿಗೆ ಹೀಗೆ ಹೇಳೋದು ಬಿಟ್ಟರೆ ಬೇರೆ ದಾರಿ ಇಲ್ಲ. ಅವರ ಬಳಿ ನಿಜಕ್ಕೂ ಬೇರೆ ಉತ್ತರವೇ ಇಲ್ಲ. ಅವರ ಈ ದ್ವೇಶಭಕ್ತಿ ಪ್ರಧಾನಿಗೆ ಅಂತರ್ ರಾಷ್ಟ್ರೀಯ ವೇದಿಕೆಯಲ್ಲಿ ಮುಜುಗರ ತಂದಿಟ್ಟಿತು. ನಮ್ಮ ದೇಶಕ್ಕೆ ಅವಮಾನ ಆಗಿ ಹೋಯಿತು.
ಇಷ್ಟು ಸಾಲದ್ದಕ್ಕೆ ಅಮೇರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ನೀಡಿರುವ ಹೇಳಿಕೆ ಇನ್ನಷ್ಟು ಮುಜುಗರ ತಂದಿಟ್ಟಿದೆ.
ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಒಬಾಮಾ, "ನಾನೀಗ ಮೋದಿಯವರೊಂದಿಗೆ ಮಾತುಕತೆ ನಡೆಸಿದ್ದರೆ, ನೀವು ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸದಿದ್ದರೆ, ಒಂದು ಹಂತದಲ್ಲಿ ಭಾರತ ಬೇರ್ಪಡುವ ಸಾಧ್ಯತೆಯಿದೆ " ಎಂದು ಹೇಳುತ್ತಿದ್ದೆ ಎಂದಿದ್ದಾರೆ". ಬಹುಸಂಖ್ಯಾತ ಹಿಂದೂ ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಮೋದಿ ಭೇಟಿ ವೇಳೆ ಪ್ರಸ್ತಾಪಿಸುವಂತೆ ಅವರು ಅಮೆರಿಕ ಅಧ್ಯಕ್ಷ ಬೈಡನ್ ಅವರಿಗೆ ಸಲಹೆಯನ್ನೂ ನೀಡಿದ್ದಾರೆ. ಅಮೇರಿಕ ಅಧ್ಯಕ್ಷರಾಗಿದ್ದಾಗ ಮೋದಿ ಅವರಿಗೆ ಅತ್ಯಂತ ಆಪ್ತ ಮಿತ್ರರಾಗಿದ್ದ, ಮೋದಿ "ಬರಾಕ್ " ಎಂದೇ ಕರೆಯುತ್ತಿದ್ದ ಒಬಾಮ ಹೀಗೆ ಹೇಳಿಬಿಟ್ಟಿದ್ದಾರೆ. ಎಷ್ಟು ನಾಚಿಕೆಗೇಡಿನ ವಿಷಯವಿದು.
ಭಾರತದಲ್ಲಿ ಪ್ರಧಾನಿಯೇ "ಗಲಭೆ ಮಾಡುವವರನ್ನು ಅವರ ಉಡುಪಿನಿಂದಲೇ ಗುರುತಿಸಬಹುದು" ಎಂದು ಹೇಳೋದು, ಅಮೇರಿಕಾದ ಪತ್ರಿಕಾ ಗೋಷ್ಠಿಯಲ್ಲಿ "ನಮ್ಮಲ್ಲಿ ಯಾವುದೇ ತಾರತಮ್ಯ ಇಲ್ಲವೇ ಇಲ್ಲ ಅಂತ ಹೇಳೋದು" ಇದು ಎಂತಹ ದ್ವಂದ್ವ ?.
ಇಲ್ಲಿ ಕಾಶ್ಮೀರ್ ಫೈಲ್ಸ್, ಕೇರಳ ಸ್ಟೋರಿಯಂತಹ ಸುಳ್ಳು ಸಿನಿಮಾಗಳನ್ನು ಪ್ರಧಾನಿಯೇ ವೇದಿಕೆಗಳಲ್ಲಿ ನಿಂತು ಹೊಗಳಿ ಪ್ರಚಾರ ಮಾಡೋದು, ಅಮೇರಿಕಾದಲ್ಲಿ "ನಾವು ಯಾವುದೇ ಧರ್ಮ, ಜಾತಿ ಅಂತ ಬೇಧಭಾವ ಮಾಡೋದಿಲ್ಲ" ಅಂತ ಹೇಳೋದು.
ಇದಕ್ಕೆ ಅಲ್ವಾ ಹೇಳೋದು.. ಹಿಪೋಕ್ರಸಿ ಕಿ ಭೀ ಸೀಮಾ ಹೋತಿ ಹೈ..