×
Ad

ರಾಜ್ಯಕ್ಕೆ 27,77,000 ಮೆಟ್ರಿಕ್ ಟನ್ ರಸಗೊಬ್ಬರಗಳ ಬೇಡಿಕೆ

Update: 2025-07-30 08:45 IST

ಬೆಂಗಳೂರು : ರಾಜ್ಯಕ್ಕೆ ಮುಂಗಾರು ಹಂಗಾಮಿನ ಇದೇ ಸೆಪ್ಟಂಬರ್‌ವರೆಗೆ ಯೂರಿಯಾ ಸೇರಿದಂತೆ ರಸಗೊಬ್ಬರಗಳು 27,77,000 ಮೆಟ್ರಿಕ್ ಟನ್‌ಗಳಷ್ಟು ಬೇಡಿಕೆ ಇದೆ. ಈ ಪೈಕಿ 2025ರ ಮೇ 26ವರೆಗೆ 15,88,311 ಮೆಟ್ರಿಕ್ ಟನ್‌ಗಳಷ್ಟು ಎಲ್ಲ ಬಗೆಯ ರಸಗೊಬ್ಬರಗಳು ರಾಜ್ಯದಲ್ಲಿ ಸರಬರಾಜು ಆಗಿದ್ದವು. ದಾಸ್ತಾನಿನಲ್ಲಿ ಮೇ ತಿಂಗಳಾಂತ್ಯಕ್ಕೆ 10,89,551 ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರಗಳು ದಾಸ್ತಾನಿನಲ್ಲೇ ಉಳಿದಿದ್ದವು.

ಬೆಳಗಾವಿ, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಉಳಿದೆಲ್ಲ ಜಿಲ್ಲೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೇ 18,632 ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರಗಳು ಉಳಿಕೆಯಾಗಿತ್ತು. ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಒಟ್ಟಾರೆ 2,34,247 ಮೆಟ್ರಿಕ್ ಟನ್ ಬೇಡಿಕೆ ಇತ್ತು. ಈ ಪೈಕಿ 1,45,348 ಮೆಟ್ರಿಕ್ ಟನ್ ಸರಬರಾಜು ಆಗಿತ್ತು. ಜೂನ್ ತಿಂಗಳವೊಂದರಲ್ಲೇ 78,472 ಮೆಟ್ರಿಕ್ ಟನ್‌ನಷ್ಟು ಬೇಡಿಕೆ ಇತ್ತು.

ಸರಬರಾಜಾಗಿದ್ದ ರಸಗೊಬ್ಬರಗಳ ಪೈಕಿ ಮೇ 26ರ ಅಂತ್ಯಕ್ಕೆ 4,98,760 ಮೆಟ್ರಿಕ್ ಟನ್ ರಸಗೊಬ್ಬರವು ಮಾರಾಟವಾಗಿತ್ತು. ಇನ್ನೂ 10,89, 551 ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರವು ದಾಸ್ತಾನಿನಲ್ಲಿ ಉಳಿದಿತ್ತು. ಎಪ್ರಿಲ್‌ನಿಂದ ಮೇವರೆಗೆ ಒಟ್ಟಾರೆ 8,36,937 ಮೆಟ್ರಿಕ್ ಟನ್‌ನಷ್ಟು ಕೊರತೆಯಿತ್ತು. ಕೆಲವು ರಸಗೊಬ್ಬರಗಳು ಬೇಡಿಕೆಗಿಂತಲೂ ಹೆಚ್ಚು ಪ್ರಮಾಣದಲ್ಲಿ ಸರಬರಾಜು ಆಗಿವೆ.

ರಸಗೊಬ್ಬರ ಬೇಡಿಕೆ, ಪೂರೈಕೆ ಮತ್ತು ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಚಲುವರಾಯಸ್ವಾಮಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಮಧ್ಯೆ ನಡೆಯುತ್ತಿರುವ ಆರೋಪ ಪ್ರತ್ಯಾರೋಪದ ಮಧ್ಯೆಯೇ ರಸಗೊಬ್ಬರಕ್ಕೆ ಸಂಬಂಧಿಸಿದಂತೆ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒಗಳ ಸಮ್ಮೇಳನದಲ್ಲಿ ಕೃಷಿ ಇಲಾಖೆಯು ಮುಂಗಾರು ಹಂಗಾಮಿನ ರಸಗೊಬ್ಬರಗಳ ಬೇಡಿಕೆ ಹಾಗೂ ಸರಬರಾಜಿಗೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು ಒದಗಿಸಿದ್ದರು. ಇದರ ಪ್ರತಿಯು ‘ಣhe-ಜಿiಟe.iಟಿ’ಗೆ ಲಭ್ಯವಾಗಿದೆ. ಅಲ್ಲದೇ ಬೇಡಿಕೆಗೆ ಅನುಗುಣವಾಗಿ ಡಿಎಪಿ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಮತ್ತು ಬೇಡಿಕೆಗೆ ತಕ್ಕಂತೆ ಕೇಂದ್ರ ಸರಕಾರದಿಂದ ಬಿಡುಗಡೆಯಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ರಸಗೊಬ್ಬರಗಳ ಕೊರತೆ ಉಂಟಾದಲ್ಲಿ ಮತ್ತು ರಸಗೊಬ್ಬರವು ಅಗತ್ಯವಿರುವ ಜಿಲ್ಲೆಗಳಿಗೆ (250 ಕಿ ಮೀ ಒಳಗೆ) ಕಾಪು ದಾಸ್ತಾನಿನಿಂದ ವರ್ಗಾಯಿಸಲಾಗುವುದು ಎಂದು ಕೃಷಿ ಇಲಾಖೆಯು ಹೇಳಿತ್ತು. ಆದರೀಗ ಅಗತ್ಯವಿರುವ ಜಿಲ್ಲೆಗಳಿಗೆ ರಸಗೊಬ್ಬರಗಳನ್ನು ಸರಬರಾಜು ಮಾಡುವಲ್ಲಿ ಕೃಷಿ ಇಲಾಖೆಯು ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗೆಯೇ ಮುಂಗಾರು ಹಂಗಾಮು ಈ ಸಾಲಿನಲ್ಲಿ ಪ್ರಾರಂಭವಾಗುವುದರಿಂದ ಜೂನ್ ತಿಂಗಳ ಬೇಡಿಕೆಯಾದ 78,472 ಮೆಟ್ರಿಕ್ ಟನ್ ಕೂಡ ಜಿಲ್ಲೆಗಳಲ್ಲಿ ಮುಂಚಿತವಾಗಿಯೇ ಅವಶ್ಯಕವಾಗಿ ಬೇಕಿರುತ್ತದೆ ಎಂದು ಕೃಷಿ ಇಲಾಖೆಯು ಹೇಳಿತ್ತು. ಬೆಳಗಾವಿ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರಾರಂಭಿಕ ಶಿಲ್ಕು ಉಳಿಕೆಯಾಗಿದೆ. ಸ್ವಲ್ಪ ಮಟ್ಟಿಗೆ ಕೊರತೆ, ಅಧಿಕ ಪ್ರಮಾಣವಿರುವ ಜಿಲ್ಲೆಗಳಿಂದ ತೀರಾ ಅಗತ್ಯವಿರುವ ಜಿಲ್ಲೆಗಳಿಗೆ (250 ಕಿ ಮೀ ಪರಿಧಿಯೊಳಗೆ) ಕಾಪು ದಾಸ್ತಾನಿನಿಂದ ವರ್ಗಾಯಿಸಲಾಗುವುದು ಎಂದು ಇಲಾಖೆಯು ಸಭೆಗೆ ತಿಳಿಸಿತ್ತು.

ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ರಸಗೊಬ್ಬರ ಕೊರತೆಯ ಆತಂಕ ಎದುರಾಗಿರುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಜೆಪಿ ನಡ್ಡಾ ಅವರಿಗೆ ಪತ್ರ ಬರೆದಿದ್ದರು. ಕೇಂದ್ರ ಸರಕಾರ 2025ನೇ ಖಾರಿಫ್‌ಗೆ 11,17,000 ಮೆಟ್ರಿಕ್ ಟನ್ ಯೂರಿಯಾವನ್ನು ಹಂಚಿಕೆ ಮಾಡಿದೆ. ಅದರಲ್ಲಿ ಈವರೆಗೆ ಸರಬರಾಜು ಮಾಡಿರುವುದು ಕೇವಲ 5,16,959 ಮೆಟ್ರಿಕ್ ಟನ್ ಮಾತ್ರ. ಆದರೆ ಎಪ್ರಿಲ್‌ನಿಂದ ಜುಲೈವರೆಗೆ ರಾಜ್ಯದ ಯೂರಿಯಾದ ಅವಶ್ಯಕತೆ 6,80,655 ಮೆಟ್ರಿಕ್ ಟನ್ ಆಗಿದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಗಮನ ಸೆಳೆದಿದ್ದರು. ಇದಲ್ಲದೆ, ಕೆಲವು ರಸಗೊಬ್ಬರ ಕಂಪೆನಿಗಳು ಕೇಂದ್ರ ಸರಕಾರದ ಹಂಚಿಕೆಯ ಪ್ರಕಾರ ಯೂರಿಯಾ ಗೊಬ್ಬರವನ್ನು ಪೂರೈಸಲು ತಮ್ಮ ಅಸಮರ್ಥತೆಯನ್ನು ವ್ಯಕ್ತಪಡಿಸಿವೆ ಎಂದೂ ರಸಗೊಬ್ಬರ ಸಚಿವರಿಗೆ ಬರೆದ ಪತ್ರದಲ್ಲಿ ಅವರು ಉಲ್ಲೇಖಿಸಿದ್ದನ್ನು ಸ್ಮರಿಸಬಹುದು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ.ಮಹಾಂತೇಶ್

contributor

Similar News