×
Ad

ನೋಡುಗರನ್ನು ಮಂತ್ರಮುಗ್ಧಗೊಳಿಸುವ ತೀರ್ಥಕೆರೆ ಫಾಲ್ಸ್‌ನ ಚಿತ್ತಾರ

Update: 2025-11-10 10:38 IST

ಚಿಕ್ಕಮಗಳೂರು: ಕಾಫಿನಾಡು ಎಂದೇ ಖ್ಯಾತಿಗೆ ಪಾತ್ರವಾಗಿರುವ ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರ ಸ್ವರ್ಗವಾಗಿದೆ. ಭೌಗೋಳಿಕವಾಗಿ ಗಿರಿಶಿಖರಗಳ ಬೀಡಾಗಿರುವ ಜಿಲ್ಲೆ ನೂರಾರು ಪ್ರವಾಸಿ ತಾಣಗಳ ತವರೂರಾಗಿದೆ.

ಜಿಲ್ಲಾದ್ಯಂತ ಈ ಬಾರಿ ಉತ್ತಮ ಮಳೆಯಾಗಿರುವ ಪರಿಣಾಮ ಮಲೆನಾಡು ಭಾಗದಲ್ಲಿರುವ ಝರಿ ಜಲಪಾತಗಳಿಗೆ ಜೀವಕಳೆ ಬಂದಿದ್ದು, ಈ ಝರಿ ಜಲಪಾತಗಳು ಸದ್ಯ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗುತ್ತಿವೆ. ಜಿಲ್ಲೆಯಲ್ಲಿರುವ ನೂರಾರು ಝರಿ ಜಲಪಾತಗಳ ಪೈಕಿ ಕೊಪ್ಪ ತಾಲೂಕಿನ ಜಯಪುರ ಸಮೀಪದ ಜಯಪುರ-ಕಳಸ ರಾಜ್ಯ ಹೆದ್ದಾರಿಯ ಕೌಳಿ ಗ್ರಾಮದ ಬಳಿ ಇರುವ ತೀರ್ಥಕೆರೆ ಜಲಪಾತವೂ ಒಂದು. ಉತ್ತಮ ಮಳೆಯ ಪರಿಣಾಮ ತೀರ್ಥಕೆರೆ ಫಾಲ್ಸ್ ಮೈದುಂಬಿ ಹರಿಯುತ್ತಾ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

ಜಯಪುರ-ಕಳಸ ರಾಜ್ಯ ಹೆದ್ದಾರಿಯ ಕೌಳಿ ಗ್ರಾಮ ಸಮೀಪದಲ್ಲಿ ರಸ್ತೆಗೆ ಅಂಟಿಕೊಂಡೇ ಧುಮ್ಮಿಕ್ಕುತ್ತಿರುವ ತೀರ್ಥಕೆರೆ ಫಾಲ್ಸ್ ದಟ್ಟ ಅರಣ್ಯ ಮತ್ತು ಕಾಫಿ ತೋಟವೊಂದಕ್ಕೆ ಹೊಂದಿಕೊಂಡು ಸುಮಾರು 40ಅಡಿ ಎತ್ತರದಿಂದ ಕಪ್ಪು ಬಂಡೆ ಕಲ್ಲಿನ ಮೇಲೆ ಭೋರ್ಗರೆಯುತ್ತಾ ಇಳಿದು ಬರುವ ಪರಿ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ.

ಭೋರ್ಗರೆಯುತ್ತಾ ಹರಿಯುವ ಜಲಪಾತದ ನೀರಿನ ಶಬ್ದ, ಹಿನ್ನೆಲೆಯಲ್ಲಿ ಕೇಳಿಬರುವ ಪ್ರಾಣಿ ಪಕ್ಷಿಗಳ ಕಲರವ, ಸುಂದರ ಹಸಿರು ಕಾಡಿನ ವಾತಾವರಣ ಪ್ರವಾಸಿಗರ ಮೈಮನವನ್ನು ಪುಳಕಗೊಳಿಸುತ್ತದೆ.

ಜಯಪುರ ಪಟ್ಟಣದಿಂದ ಕೇವಲ 6 ಕಿ.ಮೀ. ದೂರದಲ್ಲಿರುವ ಈ ಫಾಲ್ಸ್ ರಸ್ತೆ ಬದಿಯಲ್ಲೇ ಇದ್ದರೂ ಪ್ರಚಾರದ ಕೊರತೆಯಿಂದಾಗಿ ಪ್ರವಾಸಿಗರಿಂದ ದೂರವೇ ಉಳಿದಿದೆ. ಶೃಂಗೇರಿ, ಹೊರನಾಡಿನಂತಹ ಧಾರ್ಮಿಕ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಲು ಬರುವ ಪ್ರವಾಸಿಗರು ಜಯಪುರದಿಂದ ಕೊಗ್ರೆ ಮಾರ್ಗವಾಗಿ ಕಳಸ ರಸ್ತೆಯಲ್ಲಿ ಸಂಚರಿಸಿದಲ್ಲಿ ಕೌಳಿ ಗ್ರಾಮ ಸಮೀಪದಲ್ಲಿ ತೀರ್ಥಕೆರೆ ಫಾಲ್ಸ್ ಕಣ್ಣಿಗೆ ಬೀಳುತ್ತದೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರು ಜಲಪಾತದ ಮುಂದೆ ವಾಹನ ನಿಲ್ಲಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡೇ ಮುಂದೆ ಸಾಗುತ್ತಾರೆ.

ಫಾಲ್ಸ್ ತಲುಪುವುದು ಹೇಗೆ?

ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಈ ಫಾಲ್ಸ್ ಸುಮಾರು 80 ಕಿ.ಮೀ. ದೂರದಲ್ಲಿದ್ದು, ಚಿಕ್ಕಮಗಳೂರು-ಶೃಂಗೇರಿ ರಸ್ತೆಯಲ್ಲಿ ಸಿಗುವ ಜಯಪುರ ಪಟ್ಟಣ ಸಮೀಪದ ಮಕ್ಕಿಕೊಪ್ಪದಿಂದ 3 ಕಿ.ಮೀ. ಸಾಗಿದಲ್ಲಿ ತೀರ್ಥಕೆರೆ ಫಾಲ್ಸ್ ರಸ್ತೆ ಬದಿಯಲ್ಲೇ ಸಿಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಲ್.ಶಿವು, ಚಿಕ್ಕಮಗಳೂರು

contributor

Similar News