ತುಮಕೂರು: ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ದಾಸ್ತಾನು ಕೊರತೆ; ಸಿದ್ದಗಂಗಾ ಮಠದಿಂದ ಅಕ್ಕಿ ಸಾಲ

Update: 2024-02-19 03:52 GMT

ಸಿದ್ದಗಂಗಾ ಮಠ Photo: lingayatreligion.com

ಬೆಂಗಳೂರು: ತುಮಕೂರು ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿರುವ ಬಹುತೇಕ ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ದಾಸ್ತಾನು ಇಲ್ಲ. ಹೀಗಾಗಿ ವಿದ್ಯಾರ್ಥಿ ನಿಲಯಗಳ ನಿಲಯ ಪಾಲಕರು ತುಮಕೂರಿನ ಸಿದ್ದಗಂಗಾ ಮಠದಿಂದ ಅಕ್ಕಿಯನ್ನು ಸಾಲ ಪಡೆದಿರುವುದು ಇದೀಗ ಬಹಿರಂಗವಾಗಿದೆ.

ಅನ್ನಭಾಗ್ಯ ಯೋಜನೆ ಮೂಲಕ ಕರ್ನಾಟಕವನ್ನು ಹಸಿವು ಮುಕ್ತಗೊಳಿಸುತ್ತೇವೆ ಎಂದು ಕಾಂಗ್ರೆಸ್ ಸರಕಾರವು ಭರ್ಜರಿ ಪ್ರಚಾರ ಪಡೆದುಕೊಂಡಿರುವ ಬೆನ್ನಲ್ಲೇ ತುಮಕೂರು ಜಿಲ್ಲೆಯ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ವಾರ್ಡನ್‌ಗಳು ಸಿದ್ದಗಂಗಾ ಮಠದಿಂದ ಸಾಲ ಪಡೆದಿರುವುದು ಮುನ್ನೆಲೆಗೆ ಬಂದಿದೆ.

ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ದಾಸ್ತಾನು ಇಲ್ಲ ಎಂಬ ಕುರಿತು ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರಿಗೆ ಹಲವರು ದೂರು ನೀಡಿದ್ದರು. ಈ ದೂರನ್ನಾಧರಿಸಿ ಹಿಂದುಳಿದ ವರ್ಗಗಳ ಜಿಲ್ಲಾ ಮತ್ತು ತಾಲೂಕು ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸಿದ್ದರು. ಅಲ್ಲದೇ ಇವರೊಂದಿಗಿನ ಮಾತುಕತೆ ವೇಳೆಯಲ್ಲಿ ಅಕ್ಕಿ ದಾಸ್ತಾನು ಇಲ್ಲ, ಅದೇ ರೀತಿ ಅನುದಾನವೂ ಬಿಡುಗಡೆಯಾಗಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಅದೇ ರೀತಿ ಸಿದ್ದಗಂಗಾ ಮಠದಿಂದ ಅಕ್ಕಿಯನ್ನು ಸಾಲ ಪಡೆದಿರುವುದನ್ನು ಜಿಲ್ಲಾ ಮತ್ತು ತಾಲೂಕು ಕಲ್ಯಾಣಾಧಿಕಾರಿಗಳು ಖಚಿತಪಡಿಸಿದ್ದಾರೆ.

ಅಕ್ಕಿ ಕೊರತೆಗೆ ಸಂಬಂಧಿಸಿದಂತೆ ಹಾಸ್ಟೆಲ್‌ಗಳ ನಿಲಯಪಾಲಕರು ಮೇಲಾ ಧಿಕಾರಿಗಳಿಗೆ ದಾಸ್ತಾನಿನ ಕುರಿತು ಸಲ್ಲಿಸಿದ್ದ ಮಾಹಿತಿಯೂ "the-file.in"ಗೆ ಲಭ್ಯವಾಗಿದೆ.

ಅಕ್ಕಿ ಕೊರತೆ ಉಂಟಾಗಿರುವ ಕುರಿತು ನಿಲಯಪಾಲಕರು ಲಿಖಿತವಾಗಿ ಮಾಹಿತಿ ನೀಡಿದ್ದರೂ ಸರಕಾರವಾಗಲೀ ಇಲಾಖೆ ಮುಖ್ಯಸ್ಥರಾಗಲೀ ಇದುವರೆಗೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಿಲಯ ಪಾಲಕರು ಬೇರೆ ದಾರಿಯಿಲ್ಲದೇ ತುಮಕೂರಿನ ಸಿದ್ದಗಂಗಾ ಮಠದಿಂದಲೇ ಅಕ್ಕಿಯನ್ನು ಸಾಲ ಪಡೆದಿದ್ದಾರೆ ಎಂಬ ಮಾಹಿತಿಯು ತಿಳಿದು ಬಂದಿದೆ.

ಅಲ್ಲದೇ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಸಹ ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ದಾಸ್ತಾನು ಲಭ್ಯತೆ, ಕೊರತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿಯೂ ಇಲ್ಲ ಎಂದು ಗೊತ್ತಾಗಿದೆ.

ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯ ಹಲವು ಜಿಲ್ಲೆಗಳಲ್ಲಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ಮಾಸಿಕ ಬೇಡಿಕೆ ಪಟ್ಟಿಯಂತೆ ಅಕ್ಕಿ ಹಂಚಿಕೆಯಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಅಕ್ಕಿ ಹಂಚಿಕೆಯಾಗಿದ್ದರೂ ವಿದ್ಯಾರ್ಥಿ ನಿಲಯಗಳಿಗೆ ಬಿಡುಗಡೆ ಮಾಡಿಲ್ಲ. ಹೀಗಾಗಿ ಅಕ್ಕಿಯನ್ನು ಎತ್ತುವಳಿ ಮಾಡಿಲ್ಲ. ಮೇಲಾಧಿಕಾರಿಗಳ ನಿರ್ಲಕ್ಷ್ಯವೇ ಅಕ್ಕಿ ಪರದಾಟಕ್ಕೆ ಮೂಲ ಕಾರಣ ಎನ್ನಲಾಗಿದೆ.

‘ಜನವರಿಯಿಂದ ಮಾರ್ಚ್ ವರೆಗೆ ಅಕ್ಕಿಗಾಗಿ ಬೇಡಿಕೆ ಪಟ್ಟಿ ಸಲ್ಲಿಸಿದ್ದೆವು. ಇನ್ನೂ ಅಲಾಟ್ಮೆಂಟ್ ಆಗಿಲ್ಲ. ವೇಯ್ಟ್ ಮಾಡುತ್ತಿದ್ದೇವೆ. ಹೆಡ್ ಆಫೀಸ್‌ನಿಂದ ಇನ್ನೂ ಅನುದಾನ ಬಂದಿಲ್ಲ. ನಮ್ಮ ತಾಲೂಕಲ್ಲಿ ಹಣವಿಲ್ಲ. ಇದು ನಮ್ಮ ತಾಲೂಕಿನಲ್ಲಷ್ಟೇ ಅಲ್ಲ, ಇಡೀ ರಾಜ್ಯದ ಪರಿಸ್ಥಿತಿಯೂ ಇದೇ ರೀತಿ ಇದೆ,’ ಎಂದು ತಾಲೂಕು ಮಟ್ಟದ ಅಧಿಕಾರಿಯೊಬ್ಬರು ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರೊಂದಿಗೆ ನಡೆದ ಮಾತುಕತೆ ವೇಳೆಯಲ್ಲಿ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

ಪ್ರತೀ ವಿದ್ಯಾರ್ಥಿಗೆ ದಿನವೊಂದಕ್ಕೆ 58 ರೂ.ನಂತೆ ತಿಂಗಳಿಗೆ 1,750 ರೂ. ಸರಕಾರ ವೆಚ್ಚ ಮಾಡುತ್ತಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆ ಮೂಲಕ ವಿದ್ಯಾರ್ಥಿನಿಲಯಗಳು ತಲಾ ಕೆಜಿಗೆ 6.50 ರೂ.ನಿಂದ 7 ರೂ.ನಂತೆ ಅಕ್ಕಿ ಖರೀದಿಸುತ್ತವೆ ಎಂದು ತಿಳಿದು ಬಂದಿದೆ.

ಅಕ್ಕಿ ಕೊರತೆಯಾಗಿರುವ ವಿದ್ಯಾರ್ಥಿ ನಿಲಯಗಳು

ತುಮಕೂರು ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯಗಳು, ಶಿರಾ ಗೇಟ್ ಸಮೀಪದ ಸಾಯಿ ಬಡಾವಣೆಯಲ್ಲಿರುವ ತಾಲೂಕಿನ ವಿದ್ಯಾರ್ಥಿ ನಿಲಯ, ದಿಬ್ಬೂರು, ಕ್ಯಾತ್ಸಂದ್ರದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಸ್ನಾತಕೋತ್ತರ ಮಹಿಳಾ ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ದಾಸ್ತಾನು ಇಲ್ಲ ಎಂಬುದು ತಿಳಿದು ಬಂದಿದೆ.

ಉಳಿದಂತೆ ಹಲವು ವಿದ್ಯಾರ್ಥಿ ನಿಲಯಗಳಲ್ಲಿ ಈ ತಿಂಗಳಿಗಷ್ಟೇ ಅಕ್ಕಿ ದಾಸ್ತಾನು ಇದೆ. ಇನ್ನೂ ವಿದ್ಯಾರ್ಥಿನಿಲಯಗಳಿಗೆ ಅಕ್ಕಿ ಪೂರೈಕೆಯಾಗಿಲ್ಲ ಎಂದು ಗೊತ್ತಾಗಿದೆ. ಹೀಗಾಗಿ ಈ ವಿದ್ಯಾರ್ಥಿ ನಿಲಯಗಳಲ್ಲಿನ 1,220 ವಿದ್ಯಾರ್ಥಿಗಳ ಊಟಕ್ಕೆ ಅಕ್ಕಿ ಇಲ್ಲದಂತಾಗಿದೆ ಎಂದು ಗೊತ್ತಾಗಿದೆ.

ವಿದ್ಯಾರ್ಥಿ ನಿಲಯದ ನಿಲಯ ಪಾಲಕರೊಬ್ಬರೂ ಸಹ ಕೇಂದ್ರದಿಂದ ತ್ರೈಮಾಸಿಕವಾಗಿ ಹಂಚಿಕೆಯಾದ ಅಕ್ಕಿಯನ್ನು ಎತ್ತುವಳಿ ಮಾಡಲೇಬೇಕು. ಮಾಡದಿದ್ದಲ್ಲಿ ಬೇಡಿಕೆ ಇಲ್ಲ ಎಂದು ಭಾವಿಸಿ ಮುಂದಿನ ತ್ರೈಮಾಸಿಕಕ್ಕೆ ಕೇಂದ್ರದಿಂದ ಅಕ್ಕಿ ಹಂಚಿಕೆಯಾಗುವುದಿಲ್ಲ ಎಂದು ಮಾಹಿತಿ ಒದಗಿಸಿದ್ದಾರೆ.

ವಿಶೇಷವೆಂದರೇ ಹಿಂದುಳಿದ ವರ್ಗಗಳ ಇಲಾಖೆಗೆ 2023-24ನೇ ಸಾಲಿನಲ್ಲಿ 3,072 ಕೋಟಿ ರೂ. ಅನುದಾನವಿದೆ. ಈ ಪೈಕಿ ಜನವರಿ 22ರ ಅಂತ್ಯಕ್ಕೆ 2,013.35 ಕೋಟಿ ರೂ.ಬಿಡುಗಡೆಯಾಗಿದೆ. ಇದರಲ್ಲಿ 1,194.91 ಕೋಟಿ ರೂ. ಖರ್ಚಾಗಿದೆ. ಇದು ಒಟ್ಟು ಅನುದಾನಕ್ಕೆ ಶೇ.38.89ರಷ್ಟು ಪ್ರಗತಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News