ಬೀದರ್ ಜಿಪಂ ಕಚೇರಿ ಆವರಣದಲ್ಲಿ ಅನೈರ್ಮಲ್ಯ; ಗಬ್ಬೆದ್ದು ನಾರುತ್ತಿರುವ ಶೌಚಾಲಯ
ಬೀದರ್ : ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯವು ಗಬ್ಬೆದ್ದು ನಾರುತ್ತಿದ್ದು, ಸಾರ್ವಜನಿಕರು ಶೌಚ ಮಾಡುವುದಕ್ಕೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಇಡೀ ಜಿಲ್ಲೆಯನ್ನು ಸ್ವಚ್ಛವಾಗಿಡಬೇಕು ಎಂದು ಸಂದೇಶ ಸಾರುವ ಹಾಗೂ ಉಪದೇಶ ನೀಡುವ ಅಧಿಕಾರಿಗಳ ತಾಣ ಈ ಜಿಲ್ಲಾ ಪಂಚಾಯತ್ ಕಚೇರಿಯಾಗಿದೆ. ಇಲ್ಲಿ ಸ್ವಚ್ಛ ಭಾರತ ಅಭಿಯಾನದ ಕಚೇರಿ ಕೂಡ ಇದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಪ್ರಮುಖ ಅಧಿಕಾರಿಗಳ ಕಚೇರಿ ಇರುವ ಸ್ಥಳ ಇದಾಗಿದೆ. ಆದರೆ ಈ ಜಿಲ್ಲಾ ಪಂಚಾಯತ್ ಆವರಣದ ಶೌಚಾಲಯ ಪ್ರವೇಶಿಸಿದರೆ ವಾಂತಿ ಮಾಡಿಕೊಳ್ಳುವುದು ಖಂಡಿತ.
ಶೌಚಾಲಯದ ಪೈಪ್ ಲೈನ್ ವ್ಯವಸ್ಥೆ ಸಮರ್ಪಕವಾಗಿಲ್ಲ. ಶೌಚ ಮಾಡಿದರೆ ಸರಿಯಾಗಿ ನೀರು ಹೊರಗಡೆ ಹೋಗುತ್ತಿಲ್ಲ. ಶೌಚಾಲಯವು ಸಂಪೂರ್ಣವಾಗಿ ತುಂಬಿದೆ. ಮಳೆ ನೀರು ಅಲ್ಲಿ ಸೋರುತ್ತಿದೆ.
ಜಿಲ್ಲಾ ಪಂಚಾಯತ್ ನ ಶೌಚಾಲಯದ ಹದಗೆಟ್ಟ ಪರಿಸ್ಥಿತಿ ಒಂದು ಕಡೆಯಾದರೆ ಆವರಣದಲ್ಲಿರುವ ಕೆಲವೊಂದು ಕಡೆಗೆ ಶುಚಿತ್ವದ ಕೊರತೆ ಇದೆ. ಎಲ್ಲೆಂದರಲ್ಲಿ ಕಸ ಬಿದ್ದಿದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯ ಗೋಡೆಯ ಪಕ್ಕದಲ್ಲಿಯೇ ರಾಶಿ ರಾಶಿ ಕಸ ಬಿದ್ದಿರುವುದು ಕಂಡು ಬರುತ್ತದೆ. ಕಚೇರಿಯ ಆವರಣದ ತುಂಬ ಅಲ್ಲಲ್ಲಿ ಕಸ ತುಂಬಿದ ಬಕೆಟ್, ಚೀಲಗಳು ಬಿದ್ದಿವೆ. ಹಾಗೆಯೇ ಅವರಣದಲ್ಲಿನ ಚರಂಡಿಯು ಸಂಪೂರ್ಣವಾಗಿ ಭರ್ತಿಯಾಗಿದ್ದು, ಅದರ ತುಂಬೆಲ್ಲ ಕಸವೇ ತುಂಬಿಕೊಂಡಿದೆ.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕಚೇರಿ ಮುಂಭಾಗದಲ್ಲಿ ಪಾರಿವಾಳಗಳು ಹೊಲಸು ಮಾಡಿದ್ದು ಹಾಗೆಯೇ ಇದ್ದು, ಸ್ವಚ್ಛ ಮಾಡಲಿಲ್ಲ. ಹಾಗೆಯೇ ಕಚೇರಿಯ ಗೋಡೆಯ ಮೇಲೆಲ್ಲ ಅಲ್ಲಲ್ಲಿ ಗುಟ್ಕಾ ತಿಂದು ಉಗುಳಿದ ಕಲೆಗಳು ಕಾಣುತ್ತಿದ್ದು, ವಾಸನೆ ಬರುತ್ತಿದೆ. ಸ್ವಚ್ಛ ಭಾರತ ಮಾಡೋಣ ಎಂದು ಹೇಳುವ ಅಧಿಕಾರಿಗಳ ಕಚೇರಿಯೇ ಈ ರೀತಿ ಹೊಲಸಿನಿಂದ ಕೂಡಿದರೆ ಹಳ್ಳಿಗಳ ಪಾಡೇನು ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಕಚೇರಿ ಕಟ್ಟಡದ ಗೋಡೆಗಳ ಮೇಲೆಲ್ಲ ಮಳೆ ನೀರು ಸೋರುತ್ತಿದೆ. ಕೆಲವೊಂದು ಕಡೆಗೆ ಗೋಡೆಗಳು ಬಿರುಕು ಬಿಟ್ಟಿವೆ. ಗೋಡೆಗಳ ಮೇಲ್ಭಾಗದಲ್ಲ ಮಳೆ ನೀರಿನಿಂದ ಪಾಚಿಗಟ್ಟಿದ್ದು, ಕಟ್ಟಡದ ಬಣ್ಣ ಮಾಸಿ ಹೋಗಿದೆ.
ಜಿಲ್ಲೆಯ ಬಹುತೇಕ ಮುಖ್ಯ ಅಧಿಕಾರಿಗಳು ಜಿಲ್ಲಾ ಕಚೇರಿಯಲ್ಲಿರುತ್ತಾರೆ. ಆದರೆ ಯಾರು ಕೂಡ ಶೌಚಾಲಯದ ಸ್ವಚ್ಛತೆ, ಆವರಣದಲ್ಲಿನ ಸ್ವಚ್ಛತೆ, ತಮ್ಮ ಕಚೇರಿ ಮುಂದಿರುವ ಕಸದ ರಾಶಿ ಹಾಗೂ ಕಟ್ಟಡದ ಗೋಡೆಗಳ ಕಡೆಗೆ ಗಮನ ಹರಿಸದಿರುವುದು ವಿಪರ್ಯಾಸ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಬೀದರ್ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಶೌಚಾಲಯ ದುರ್ವಾಸನೆ ಬರುತ್ತಿದೆ. ಇಲ್ಲಿ ಸ್ವಚ್ಛ ಮಾಡುವ ವ್ಯವಸ್ಥೆ ಇಲ್ಲ. ಇಡೀ ಜಿಲ್ಲೆ ನೋಡಿಕೊಳ್ಳುವ ಜಿಲ್ಲಾ ಪಂಚಾಯತ್ ಕಚೇರಿಯಲ್ಲೇ ಈ ಪರಿಸ್ಥಿತಿ ಇದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನವೇ ಕಾರಣ. ಈಗಲಾದರೂ ಅಧಿಕಾರಿಗಳು ಎಚ್ಛೆತ್ತು ಶೌಚಾಲಯದ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
- ರಾಜಕುಮಾರ್ ಭಟ್ಟಾರೆ, ಜೆಡಿಎಸ್ ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ
ಬೀದರ್ ಜಿಪಂ ಕಚೇರಿಗೆ ಪ್ರತಿನಿತ್ಯ ತುಂಬಾ ಜನ ಬರುತ್ತಾರೆ. ಆದರೆ ಇಲ್ಲಿನ ಶೌಚಾಲಯದಲ್ಲಿ ಸ್ವಚ್ಛತೆಯಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಳ್ಳಬೇಕು.
- ಸಿದ್ದಣ್ಣ, ನಾಗೂರ್ ಗ್ರಾಮದ ನಿವಾಸಿ