×
Ad

‘‘ಉಸ್ಮಾನ್ ಅಲಿ ಖಾನ್ ತೀರಿಕೊಂಡರು, ನನ್ನ ಗಂಡ ಉದ್ಯೋಗವನ್ನೂ ಕಳೆದುಕೊಂಡರು’’

ಅವರು ಇದನ್ನು ಎರಡು ಸಮುದಾಯಗಳ ಕಾದಾಟದ ಗಲಭೆಯೆಂದು ಚರ್ಚಿಸಲೇ ಇಲ್ಲ. ಅದು ಹಿಂದೂಗಳ ಏಕಮುಖಿ ದಾಳಿಯಾಗಿತ್ತು ಎಂದೇ ಅವರು ಹೇಳಿದರು. ಯಾಕೆಂದರೆ ಈ ಹಿಂಸೆಗೆ ಕಾರಣಗಳೇ ಇರಲಿಲ್ಲ. ದಾಳಿಕೋರರನ್ನು ‘ಹಿಂದಾವ’ ಎಂದು ಗುರುತಿಸಿದರು. ಆದರೆ ಅವರ ಉದ್ದೇಶ ಏನು ಎಂದು ಅರ್ಥವಾಗಲಿಲ್ಲ. ತಮಗೆ ಅವರೊಂದಿಗೆ ಶತ್ರುತ್ವ ಬಿಡಿ, ಯಾವ ಸಂಬಂಧವೂ ಇರಲಿಲ್ಲ. ಇವರ್ಯಾರಿಗೂ ದಾಳಿಕೋರರ ಪರಿಚಯವೇ ಇರಲಿಲ್ಲ. ಆ ದಾಳಿಕೋರರು ಹಳ್ಳಿಯ ಮುಸ್ಲಿಮರನ್ನಷ್ಟೇ ಗುರುತಿಸಿ ಸುಟ್ಟು ಹಾಕಿ, ಕೊಂದಿದ್ದರು. ‘‘ಯಾರು ಇದನ್ನು ಮಾಡಿದರು, ಯಾಕೆ ಮಾಡಿದರೆಂಬುದೇ ನಮಗೆ ಗೊತ್ತಿಲ್ಲ, ಅವರೆಲ್ಲಾ ಬೇರೆ ಹಳ್ಳಿಗಳಿಂದ ಬಂದಿದ್ದರು’’ ಎಂಬ ಮಾತು ಎಲ್ಲರ ಹೇಳಿಕೆಗಳಲ್ಲೂ ಪುನರಾವರ್ತನೆಯಾಗುತ್ತಿತ್ತು.

Update: 2023-09-16 10:26 IST

ಸರಣಿ - 2

1998ರಿಂದ ಹಳೆಯ ಆಂಧ್ರಪ್ರದೇಶದಲ್ಲಿ ಸೆಪ್ಟಂಬರ್ 17 ಉತ್ಕಟ ಭಾವನೆಗಳನ್ನು ಪ್ರಚೋದಿಸುತ್ತಿದೆ. ಹಿಂದೂ ಬಲಪಂಥ ಇದನ್ನು ಮುಸ್ಲಿಮ್ ಅಸಫ್ ಜಾಹಿಯ ದೌರ್ಜನ್ಯವೆಂದು ಅಜರಾಮರಗೊಳಿಸಲು ಯತ್ನಿಸುತ್ತಿದೆ.

ಈ ಸಂದರ್ಭದಲ್ಲಿ ‘ವಿಮೋಚನಾ’ ಕಥನದಿಂದಾಚೆ ಪೊಲೀಸ್ ಕಾರ್ಯಾಚರಣೆಯ ನೆನಪು, ವ್ಯಾಖ್ಯೆ ತೆರೆದುಕೊಂಡಿತು. ನಾನು 1997-98ರಲ್ಲಿ ತೆಲಂಗಾಣದ ವಯಸ್ಸಾದ ಹೆಂಗಸರ ಸಂದರ್ಶನ ಮಾಡಿದ್ದೆ. ಅದರಲ್ಲಿ ಈ ಕಾರ್ಯಾಚರಣೆಯ ಭಿನ್ನ ಅನುಭವಗಳನ್ನು ದಾಖಲಿಸಿದ್ದೆ. ಅವರೆಲ್ಲಾ 1920-30ರ ದಶಕಗಳಲ್ಲಿ ಹುಟ್ಟಿದವರು, ಯಾವುದೇ ರಾಜಕೀಯ/ ಚಳವಳಿಗಳಲ್ಲಿ ತೊಡಗಿಸಿಕೊಂಡವರಲ್ಲ. ಆದರೆ ತಮ್ಮ ತಮ್ಮ ಕುಟುಂಬಗಳಲ್ಲಿ, ಕಾರ್ಯಾಚರಣೆ, ರಝಾಕಾರರು, ಬಾಂಬು ಅಂತ ಕೌಟುಂಬಿಕವಾಗಿ ಈ ಹಿಂಸೆಯನ್ನು ಅನುಭವಿಸಿ ಮಾತನಾಡುತ್ತಾ ಬೆಳೆದವರು.

ಈ ವೈವಿಧ್ಯಮಯ ಅನುಭವಗಳಲ್ಲಿ ತಿಂಗಳುಗಟ್ಟಲೆ ಕಾಡಲ್ಲಿ ಬದುಕಿದ್ದು, ಗಲಭೆಗಳನ್ನು ನೋಡಿದ್ದು ಕೊಲೆ, ಸುಲಿಗೆಗಳೇ ಕಾರ್ಯಾಚರಣೆಯ ನೆನಪುಗಳಾಗಿ ಕೂತಿವೆ. ಆ ಕಾಲದ ಅವರ ಮಾತುಕತೆಯಲ್ಲಿ ವಿಮೋಚನೆ, ಸ್ವಾತಂತ್ರ್ಯ ಎಂಬ ಪದಗಳು ಬರಲೇ ಇಲ್ಲ. (ನಾನೇ ಕೆದಕಿದಾಗಲೂ)

ಬೀದಿಯಲ್ಲಿ ಗುಂಡು, ಬಾಂಬು ಸ್ಫೋಟಗಳೆಲ್ಲಾ ತಾವಿದ್ದ ಕಿಲಾ ವಾರಂಗಲ್‌ನಲ್ಲಿ ಭೀಕರವಾಗಿದ್ದರೂ ಆ ಹಳ್ಳಿಯನ್ನು ಈ ಹೆಂಗಸರು ತೊರೆಯಲಿಲ್ಲ. ಅಷ್ಟೆಲ್ಲಾ ಭಯಭೀತಿ ಬೆದರಿಕೆಗಳಿದ್ದರೂ ತೊರೆಯುವ ಸ್ಥಿತಿಯಲ್ಲೇ ಅವರಿರಲಿಲ್ಲ. ಎಲ್ಲಿಗೆಂದು ಹೋಗುವುದು?

ತನ್ನ ಉಳಿದ ಸಹ ಕಾರ್ಮಿಕರು ‘ರಕ್ತಪಿಪಾಸು ರಝಾಕಾರರಿಗೆ’ ಹೆದರಿ ಊರು ಬಿಟ್ಟು ಓಡಿ ಹೋದರೂ ಮಾದಿಗ ಕೃಷಿ ಕೂಲಿಕಾರಳಾಗಿದ್ದ ಶಾಂತಮ್ಮ ಮಾತ್ರ ಊರಲ್ಲೇ ಉಳಿದರು. ದುಡಿಯದಿದ್ದರೆ ಉಣ್ಣಲು ಗತಿ ಇಲ್ಲ ಎಂದು ಆಕೆ ಹೇಳಿದ್ದಳು. ತೆಲಗಾ ಜಾತಿಗೆ ಸೇರಿದ ವೀರಮ್ಮ ಕೂಡಾ ಕೃಷಿ ಕಾರ್ಮಿಕಳು. ಕೂಲಿಯ ಮೇಲೆಯೇ ಅವಲಂಬಿತವಾದ ಕಾರಣ, ನಾವ್ಯಾರೂ ಊರು ಬಿಡಲಿಲ್ಲ ಎಂದು ಆಕೆ ಹೇಳಿದರು. ತಮ್ಮ ಮನೆ ಸಮೀಪ ಈ ಪಡೆ ಬಂದಾಗ ಭಯವಾದರೂ ಇದ್ದಲ್ಲೇ ಇದ್ದೆವು ಎಂದು ಆಕೆ ನೆನಪಿಸಿಕೊಂಡಳು. ಸಮೀಪದ ಬೆಟ್ಟಗಳಲ್ಲಿ ಬಂದೂಕುಧಾರಿಗಳು ಬೀಡುಬಿಟ್ಟಿದ್ದನ್ನೂ ನೆನಪಿಸಿಕೊಂಡರು.

ವಿಚಿತ್ರ ಎಂದರೆ ಮುಸ್ಲಿಮರಷ್ಟೇ ನಮ್ಮೂರಲ್ಲಿ ಊರು ಬಿಟ್ಟದ್ದು ಎಂದಾಕೆ ಹೇಳಿದಳು. ಎರುಕಳ ಸಮುದಾಯಕ್ಕೆ ಸೇರಿದ ಪೋಷಮ್ಮ ಮಾತ್ರ ತನ್ನ ಇಡೀ ಕುಟುಂಬ ಕಾಡಿಗೆ ಪಲಾಯನ ಮಾಡಿ ತನ್ನ ಎರಡು ಮಕ್ಕಳು ಹುಟ್ಟಿದ ಮೇಲಷ್ಟೇ (ಅಂದರೆ 2-3ವರ್ಷ) ವಾಪಸಾಗಿದ್ದಾಗಿ ಹೇಳಿದಳು. ಹೆಚ್ಚಿನವರು ಬಂದೂಕಿನ ಸದ್ದು, ಬಾಂಬುಗಳ ಸ್ಫೋಟದ ಸದ್ದು ಕೇಳಿದ್ದರಷ್ಟೇ ಹೊರತು ಹಿಂಸೆಯ ನೇರ ಅನುಭವ ಪಡೆದಿರಲಿಲ್ಲ. ಸಾಕಷ್ಟು ದೀರ್ಘ ಸಮಯ ಈ ಹಿಂಸೆಯ ಅವಧಿ ಎಂಬುದು ಅವರ ಅಭಿಮತವಾಗಿತ್ತು. ರಝಾಕಾರರ ಕಾರುಬಾರು ಹೈದರಾಬಾದ್ ಪೊಲೀಸರಿಗೆ ಪೂರಕವಾಗಿ, ಜಮೀನ್ದಾರರಿಗೆ ಬೆಂಬಲವಾಗಿ 1947-48ರ ಅವಧಿಯಲ್ಲಿ (ಸೆಪ್ಟಂಬರ್ 17ಕ್ಕೆ ಅಂತ್ಯ ಕಂಡಿತು) ಕ್ರಿಯಾಶೀಲವಾಗಿದ್ದರೆ, ವಿಲೀನವನ್ನು ಸಾಧ್ಯಗೊಳಿಸಿದ ಭಾರತದ ಸೈನ್ಯ ಇನ್ನೂ ಕೆಲವು ವರ್ಷ ಅಲ್ಲೇ ಉಳಿದಿತ್ತು. ಈ ಸಮಯದಲ್ಲಿ ತೆಲಂಗಾಣದ ಹಳ್ಳಿಗಳ ನೂರಾರು ರೈತರನ್ನು ಬಂಧಿಸಿತ್ತು. ಹತ್ತಾರು ರೈತರನ್ನು ಸಾಯಿಸಿತ್ತು.

ಈ ತೆಲಂಗಾಣದ ರೈತ ಹೋರಾಟದಲ್ಲಿ ತೊಡಗಿಸಿಕೊಳ್ಳದ ರೈತ ಮಹಿಳೆಯರಿಗೆ ‘ರಕ್ತಪಿಪಾಸು ರಝಾಕಾರ’ ನಿಝಾಮ್ ಪೊಲೀಸ್, ಬಂದೂಕು ಹಿಡಿದ ಸಂಘಂ ಸದಸ್ಯರು, ಭಾರತೀಯ ಸೈನಿಕರು- ಎಲ್ಲಾ ಆ ಸಂಕಷ್ಟದ ಕಾಲದ ಒಟ್ಟಾರೆ ಭೀತಿ ಹುಟ್ಟಿಸಿದ ಅವಧಿಯ ಭಾಗವೇ ಆಗಿದ್ದರು

ರಝಾಕಾರರು ಹಗಲು ಬಂದರೆ, ‘ಅವರು’ ರಾತ್ರಿ ಬರುತ್ತಿದ್ದರು. ಮಹಾರಾಷ್ಟ್ರದ ಗಡಿಯಂಚಿನ ಬೋಧಾನ್ ಹಳ್ಳಿಯಲ್ಲಿ ನೆಲೆಸಿದ್ದ ಮೂಲತಃ ಗುಂಟೂರಿನ ಇರಾವತಿ ಎಂಬಾಕೆ, ಮಹಾರಾಷ್ಟ್ರದಿಂದ ಬಂದು ಹತ್ತಾರು ಹಳ್ಳಿಗಳನ್ನು ಲೂಟಿ ಮಾಡುತ್ತಿದ್ದವರ ಬಗ್ಗೆ ಮಾತಾಡುತ್ತಲೇ ಇದ್ದಳು. ತಮ್ಮ ರಕ್ಷಣೆ ಮಾಡಿಕೊಳ್ಳಲು ಹಳ್ಳಿಗೆ ಹಳ್ಳಿಯೇ ಆರು ತಿಂಗಳು ಕಣ್ಗಾವಲು ಇರಿಸಿತ್ತು. ಪ್ರತಿದಿನ ಅಡುಗೆಯಾದ ಮೇಲೆ ಬೆಲೆಬಾಳುವ ವಸ್ತುಗಳನ್ನು ಮಣ್ಣಿನಲ್ಲಿ ಹೂತು ಹಾಕುತ್ತಿದ್ದುದನ್ನು ನೆನಪಿಸಿಕೊಂಡಳು. ‘ಅವರಲ್ಲಿ’ ಬಂದೂಕುಗಳಿದ್ದವಷ್ಟೇ ಅಲ್ಲ, ಕ್ರೌರ್ಯಕ್ಕೆ ಕುಖ್ಯಾತಿ ಪಡೆದಿದ್ದರು.

ಪಕ್ಕದ ಹಳ್ಳಿಯ ಸಿರಿವಂತ ಹೆಂಗಸೊಬ್ಬರನ್ನು ಘಾಸಿಗೊಳಿಸಿ, ಲೂಟಿ ಮಾಡಿ ಕೊಂದು ಹಾಕಲಾಗಿತ್ತು ಎಂದೂ ಆಕೆ ನೆನಪಿಸಿಕೊಂಡಳು.

ರಾತ್ರಿ ಬರುತ್ತಿದ್ದವರು ಮತ್ತು ರಝಾಕಾರರ ನಡುವೆ ಇದ್ದ ವ್ಯತ್ಯಾಸವನ್ನು ಆಕೆ ಸ್ಪಷ್ಟವಾಗಿ ಗುರುತಿಸಿದ್ದಳು. ‘‘ರಝಾಕಾರರು ಹಗಲು ಬಂದು ಒಂದೋ ಎರಡೋ ಅಕ್ಕಿ ಮೂಟೆ ಕೇಳುತ್ತಿದ್ದರು. ಹಗಲು ಬರುತ್ತಿದ್ದವರು ಮುಸ್ಲಿಮರೇನೂ ಆಗಿರಲಿಲ್ಲ. ಅವರೆಲ್ಲಾ ತಿಂಗಳ ಸಂಬಳಕ್ಕೆ ದುಡಿಯುತ್ತಿದ್ದ ಸಮವಸ್ತ್ರ ಧರಿಸಿದ ಕೆಳ ಜಾತಿಯವರಾಗಿದ್ದರು. ಅವರು ಬಂದು ಅನ್ನ ಆಹಾರ ಕೇಳುತ್ತಿದ್ದರು. ಅದೇನೋ ಪರವಾಗಿಲ್ಲ.’’

ರಾತ್ರಿ ಹಳ್ಳಿಗಳಿಗೆ ದಾಳಿಮಾಡುತ್ತಿದ್ದವರಾರು? ದಶಕದ ಮೇಲೆಯಷ್ಟೇ ಅವರು ಯಾರು ಅಂತ ನನಗೆ ಗೊತ್ತಾಗಿದ್ದು.ಹೈದರಾಬಾದ್ ಸಂಸ್ಥಾನವನ್ನು ‘ವಿಮೋಚನೆ’ಗೊಳಿಸಲು ಗೆರಿಲ್ಲಾ ದಾಳಿ ಮಾಡಲು ಸಂಸ್ಥಾನಾದ್ಯಂತ ಕ್ಯಾಂಪ್‌ಗಳನ್ನು ಸ್ಥಾಪಿಸಿ, ಗೆರಿಲ್ಲಾ ದಾಳಿ ನಡೆಸುತ್ತಿದ್ದ ‘ಸ್ವಾತಂತ್ರ್ಯ ಹೋರಾಟಗಾರರೇ’ ಈ ರಾತ್ರಿ ದಾಳಿಮಾಡುತ್ತಿದ್ದವರು. ರಝಾಕಾರರು ಹೈದರಾಬಾದ್ ಸಂಸ್ಥಾನದ ಸ್ವಾಯತ್ತತೆ ಉಳಿಸಲು ಹೋರಾಡುತ್ತಿದ್ದೇವೆ ಅಂದರೆ, ಇವರು ಹೈದರಾಬಾದ್‌ನ್ನು ವಿಮೋಚನೆಗೊಳಿಸುತ್ತಿದ್ದೇವೆ ಎನ್ನುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಇಬ್ಬರೂ ಗಲಭೆ ಸೃಷ್ಟಿಸಿದ್ದರು.

ಆಗಸ್ಟ್ 15, 1947ಕ್ಕೆ ಅಸ್ತಿತ್ವಕ್ಕೆ ಬಂದ ಭಾರತ ಸರಕಾರ ನೂರಾರು ರಾಜಸಂಸ್ಥಾನಗಳ ಮೇಲೆ ತನ್ನ ಭೌಗೋಳಿಕ ಪರಮಾಧಿಕಾರವನ್ನು ಸ್ಥಾಪಿಸುವ ಜವಾಬ್ದಾರಿ ಹೊಂದಿತ್ತು. ನಿಜಾಮನ ಸ್ವಾತಂತ್ರ್ಯದ ಮಂಡನೆ ಈ ಯೋಜನೆಗೆ ಎದುರಾದ ಬೆದರಿಕೆಯಾಗಿತ್ತು. ಇರಾವತಿ ಹೇಳಿದ ಈ ‘ಸ್ವಾತಂತ್ರ್ಯ ಹೋರಾಟಗಾರರು’ ಈ ಸಂದರ್ಭದಲ್ಲಿ ಮೂಡಿ ಬಂದವರು. ಹೈದರಾಬಾದಿನ ಕಾನೂನು ಸುವ್ಯವಸ್ಥೆಯನ್ನು ಭಂಗಿಸಿ ನಿಜಾಮನು ವಿಲೀನಕ್ಕೆ ಒಪ್ಪುವಂತೆ ಮಾಡುವುದೇ ಇವರ ಉದ್ದೇಶವಾಗಿತ್ತು.

ಹೈದರಾಬಾದ್ ಸಂಸ್ಥಾನವನ್ನು ನಿಭಾಯಿಸುವುದೇ ಕಷ್ಟವಾಗುವಂತೆ ಭಯ, ಗಲಭೆ ಸೃಷ್ಟಿಸಲು ಭಾರತ ಸರಕಾರದ ಸಹಾಯದೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಸಂಸ್ಥಾನದಾದ್ಯಂತ ಕ್ಯಾಂಪುಗಳನ್ನು ಸ್ಥಾಪಿಸಿದರು ಎಂಬ ವಿವರ ಖಂಡೇರಾವ್ ಕುಲಕರ್ಣಿ ಮತ್ತು ಪಿ.ಎ. ರಾಮರಾವ್ ಅವರ ದಾಖಲೆಗಳಲ್ಲಿ ಗೋಚರಿಸುತ್ತದೆ. ಅದೂ ನಿಲುಗಡೆ ಒಪ್ಪಂದ ಜಾರಿಯಲ್ಲಿದ್ದು ಎರಡೂ ಪಕ್ಷಗಳ ಮಧ್ಯೆ ಮಾತುಕತೆ ನಡೆಯುತ್ತಿದ್ದಾಗಲೇ!

1948ರಲ್ಲಿ ಭಾರತ ಸರಕಾರ ಹೈದರಾಬಾದ್ ಮೇಲೆ ತಂದ ಶ್ವೇತಪತ್ರದಲ್ಲಿ ಈ ವೈಫಲ್ಯವನ್ನು ಕಾಣಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಕಾರ್ಯಾಚರಣೆಗೆ ಈ ತರ್ಕವೇ ಆಧಾರವಾಯಿತು. ಈ ದಾಳಿಗಳು ನಿರ್ದಿಷ್ಟ ಒಂದು ದಿನ ಏಕಾಏಕಿ ನಿಂತುಹೋಯಿತು ಎಂದು ಇರಾವತಿ ನೆನಪಿಸಿಕೊಳ್ಳುತ್ತಾರೆ. ಆದಿನ ರಝಾಕಾರರ ಸಮವಸ್ತ್ರ, ಚಾಕು, ಬಂದೂಕಗಳ ರಾಶಿಯೇ ಹಳ್ಳಿಗಳಲ್ಲಿ ಬಿದ್ದಿದ್ದವು. ಸೈನ್ಯವು ಬಹಳಷ್ಟು ಮುಸ್ಲಿಮರನ್ನು ಕೂಡಿಹಾಕಿ ಅವರಿಗೆ ಹೊಡೆಯಲಾಯಿತು. ಇದಾದ ಮೇಲೆ ನಾಂದೇಡ್‌ನಿಂದ ಮುಸ್ಲಿಮರು ಪ್ರವಾಹದೋಪಾದಿಯಲ್ಲಿ ನಿರಾಶ್ರಿತರಾಗಿ ಬಂದು ಕೂಲಿನಾಲಿ ಉದ್ಯೋಗದಲ್ಲಿ ತೊಡಗಿದರು. ಒಬ್ಬ ಮೀನುಮಾರುವವ ಅವಳಲ್ಲಿ, ತಾನು 60 ಕಾರ್ಮಿಕರಿದ್ದ ಮಿಲ್ ಮಾಲಕನಾಗಿದ್ದೆ. ಲೂಟಿಮಾಡಿ ನನ್ನನ್ನು ಓಡಿಸಲಾಯಿತು ಎಂದು ಹೇಳಿದ್ದನ್ನು ಸ್ಪಷ್ಟವಾಗಿ ನೆನಪಿಸಿಕೊಂಡಳು. ತುಂಬಾ ಮುಸ್ಲಿಮರು ತಮ್ಮ ಕುಟುಂಬಗಳನ್ನು ಕಳೆದುಕೊಂಡಿದ್ದರು. ಉಸ್ಮಾನ್ ಅಲಿ ಖಾನ್ ತೀರಿಕೊಂಡರು. ನನ್ನ ಗಂಡ ಕೆಲಸ ಕಳೆದುಕೊಂಡ.

ಖಿಲಾ ವಾರಂಗಲ್ಲಿನ ಮಹಿಳೆಯರು ನಿರ್ದಿಷ್ಟವಾಗಿ ಕೇಳಿದ ಮೇಲೆಯಷ್ಟೇ ಈ ಕಾರ್ಯಾಚರಣೆ ಬಗ್ಗೆ ಮಾತಾಡಿದರು. ಆದರೆ ಹಳೇ ಹೈದರಾಬಾದಿನ ಏರಿಯಾಗಳ ಮಹಿಳೆಯರು, ತಮ್ಮ ಕುಟುಂಬ ಅನುಭವಿಸಿದ ಸಂಕಷ್ಟದ ಬಗ್ಗೆ ಕೇಳಿದ ತಕ್ಷಣ ಮಾತಾಡಲು ಶುರು ಮಾಡಿದರು. ನಾನು ಮಾತಾಡಿಸಿದ ಹತ್ತರಲ್ಲಿ ಐದು ಮಹಿಳೆಯರು ನಗರಕ್ಕೆ ವಲಸೆ ಬಂದಿದ್ದರು. ನಿಖರವಾಗಿ ಹೇಳುವುದಾದರೆ ಬೀದರ್‌ನ ಕಲ್ಯಾಣದಿಂದ ಓಡಿ ಬಂದಿದ್ದರು. ಕಾರ್ಯಾಚರಣೆ ಅವರ ಬದುಕಿನ ಅತ್ಯಂತ ದೊಡ್ಡ ವಿಕೋಪವಾಗಿತ್ತು. ಅವರ ಬಾಳುವೆ ಸಂಕಷ್ಟದ ಕೂಪಕ್ಕೆ ಬೀಳಲು ಕಾರಣವಾಗಿತ್ತು.

‘ಡೇಂಜರ್ಸ್ ಆಫ್ ಎ ಸಿಂಗಲ್ ಸ್ಟೋರಿ’ ಈ ಸರಣಿಯು 1948ರ ಹೈದರಾಬಾದ್ ಪೊಲೀಸ್ ಕಾರ್ಯಾಚರಣೆಯನ್ನು ಪರ್ಯಾಯ ದೃಷ್ಟಿಕೋನದಿಂದ ನೋಡುತ್ತದೆ. ಈ ದೃಷ್ಟಿಕೋನಗಳು, ಹೈದರಾಬಾದ್ ವಿಲೀನವನ್ನು ‘ವಿಮೋಚನೆ’ ಎಂಬುದಾಗಿ ಬಿಂಬಿಸುವ ಪ್ರಧಾನವಾಹಿನಿಯ ವ್ಯಾಖ್ಯಾನವನ್ನು ಪ್ರಶ್ನಿಸುತ್ತವೆ, ಮಾರ್ಪಡಿಸುತ್ತವೆ ಮತ್ತು ಅದಕ್ಕೆ ಸೂಕ್ಷ್ಮ ಅಂಶಗಳನ್ನು ಸೇರಿಸುತ್ತವೆ. ಚಾಲ್ತಿಯಲ್ಲಿರುವ ವ್ಯಾಖ್ಯಾನವನ್ನು ವಿಭಜನವಾದಿ ರಾಜಕೀಯವನ್ನು ಇನ್ನಷ್ಟು ಬಲಪಡಿಸಲು ಬಳಸಲಾಗುತ್ತಿದೆ. ‘ಖಿಡ್ಕಿ ಕಲೆಕ್ಟಿವ್’ನ ಸ್ವಾತಿ ಶಿವಾನಂದ್, ಯಾಮಿನಿ ಕೃಷ್ಣ ಮತ್ತು ಪ್ರಮೋದ್ ಮಂಡಾಡೆ ಈ ಸರಣಿಯನ್ನು ನಿರೂಪಿಸಿದ್ದಾರೆ. ‘ಖಿಡ್ಕಿ ಕಲೆಕ್ಟಿವ್’, ಇತಿಹಾಸ, ರಾಜಕೀಯ ಮತ್ತು ಸಂಸ್ಕೃತಿ ಕುರಿತು ಸಾರ್ವಜನಿಕ ಸಂವಾದವನ್ನು ರೂಪಿಸುವುದಕ್ಕೆ ಬದ್ಧವಾಗಿರುವ ವಿದ್ವಾಂಸರ ಬಳಗವಾಗಿದೆ.

ಮುಸ್ಲಿಮ್ ಗಂಡಸರನ್ನು ಹೊಲಗದ್ದೆಗಳಿಂದ ಎಳೆದು ಸಾಯಿಸಿದ್ದನ್ನು ಆಯಿಷಾ ಬೀ ನೆನಪಿಸಿಕೊಂಡರು. ಆಕೆ ತನ್ನ ಗಂಡ, ಮಾವ ಮತ್ತು ಭಾವಂದಿರನ್ನು ಕಳೆದುಕೊಂಡಿದ್ದರು. ಅವರ ಮನೆ, ಆಸ್ತಿ ಪಾಸ್ತಿ, ಮಾವಿನ ತೋಪು ಎಲ್ಲವನ್ನೂ ನುಂಗಿ ಹಾಕಲಾಗಿತ್ತು.

ಈ ನಗರಕ್ಕೆ ಓಡಿ ಬಂದು ಆಕೆ ಬಹಾದುರ್ ಯಾರ್ ದೇವ್ಡಿಯಲ್ಲಿ ಆಶ್ರಯ ಪಡೆದು ಅಂತೂ ಬೀಡಿ ಹೊಸೆಯುವ ಕೆಲಸ ಆಕೆಗೆ ದಕ್ಕಿತು. ದರ್ಜಿ ಕುಟುಂಬದ ಅಮೀನಾಬಿಳದ್ದು ಕೂಡಾ ಇಂಥದೇ ದುರಂತ. ಆಕೆಯ ಮಾವನ ತಮ್ಮನನ್ನು ಜೋಳದ ಹೊಲದಿಂದ ಎತ್ತಿ ಹಾಕಿಕೊಂಡು ಹೋಗಲಾಗಿತ್ತು. ಆತ ಮತ್ತೆ ಪತ್ತೆಯಾಗಲೇ ಇಲ್ಲ. ಅವಳ ಕುಟುಂಬವೂ ನಗರಕ್ಕೆ ವಲಸೆ ಬಂದಿತು. ಝರೀನಾ ಬೇಗಂ ಕೂಡಾ ಈ ಗಲಭೆಯ ದಳ್ಳುರಿಯಲ್ಲಿ ಹಲವಾರು ಪುರುಷ ಸಂಬಂಧಿಕರನ್ನು ಕಳೆದುಕೊಂಡಿದ್ದಳು. ಆಕೆ ಓಡಿ ನಗರಕ್ಕೆ ಬಂದಿದ್ದಳು. ಎಷ್ಟೋ ತಿಂಗಳುಗಳ ಬಳಿಕ ಆಕೆಯ ಗಂಡ ಆಕೆಗೆ ಸಿಕ್ಕಿದ. ಕೃಷಿ ಕೂಲಿಕಾರಳಾಗಿದ್ದ ಚಾಂದ್ ಬೀ ಕೂಡಾ ತನ್ನ ಕುಟುಂಬದ ಹಲವಾರು ಪುರುಷ ಸದಸ್ಯರನ್ನು ಕಳೆದುಕೊಂಡು, ಬಳಿಕ ಈ ನಗರಕ್ಕೆ ಓಡಿ ಬಂದಿದ್ದಳು.

ಅವರು ಇದನ್ನು ಎರಡು ಸಮುದಾಯಗಳ ಕಾದಾಟದ ಗಲಭೆಯೆಂದು ಚರ್ಚಿಸಲೇ ಇಲ್ಲ. ಅದು ಹಿಂದೂಗಳ ಏಕಮುಖಿ ದಾಳಿಯಾಗಿತ್ತು ಎಂದೇ ಅವರು ಹೇಳಿದರು. ಯಾಕೆಂದರೆ ಈ ಹಿಂಸೆಗೆ ಕಾರಣಗಳೇ ಇರಲಿಲ್ಲ. ದಾಳಿಕೋರರನ್ನು ‘ಹಿಂದಾವ’ ಎಂದು ಗುರುತಿಸಿದರು. ಆದರೆ ಅವರ ಉದ್ದೇಶ ಏನು ಎಂದು ಅರ್ಥವಾಗಲಿಲ್ಲ. ತಮಗೆ ಅವರೊಂದಿಗೆ ಶತ್ರುತ್ವ ಬಿಡಿ, ಯಾವ ಸಂಬಂಧವೂ ಇರಲಿಲ್ಲ. ಇವರ್ಯಾರಿಗೂ ದಾಳಿಕೋರರ ಪರಿಚಯವೇ ಇರಲಿಲ್ಲ. ಆ ದಾಳಿಕೋರರು ಹಳ್ಳಿಯ ಮುಸ್ಲಿಮರನ್ನಷ್ಟೇ ಗುರುತಿಸಿ ಸುಟ್ಟು ಹಾಕಿ, ಕೊಂದಿದ್ದರು. ‘‘ಯಾರು ಇದನ್ನು ಮಾಡಿದರು, ಯಾಕೆ ಮಾಡಿದರೆಂಬುದೇ ನಮಗೆ ಗೊತ್ತಿಲ್ಲ, ಅವರೆಲ್ಲಾ ಬೇರೆ ಹಳ್ಳಿಗಳಿಂದ ಬಂದಿದ್ದರು’’ ಎಂಬ ಮಾತು ಎಲ್ಲರ ಹೇಳಿಕೆಗಳಲ್ಲೂ ಪುನರಾವರ್ತನೆಯಾಗುತ್ತಿತ್ತು.

ಅವರ ನೆನಪುಗಳೆಲ್ಲಾ ಆತ್ಮೀಯ, ಕೌಟುಂಬಿಕ ಖಾಸಗಿ ಘಟನೆಗಳಿಗೆ ಸಂಬಂಧಿಸಿದ್ದಾಗಿತ್ತು. (ಮದುವೆ, ಹೆರಿಗೆ-ಹೀಗೆ) ಆದರೆ ಭಾರತದ ಸೈನ್ಯದ ಆಗಮನಕ್ಕೂ ದಂಗೆ, ಜಗಳ, ಓಡಿ ಹೋಗುವುದಕ್ಕೂ ಸ್ಪಷ್ಟ ಸಂಬಂಧ ಅವರಿಗೆ ಕಂಡಿತ್ತು. ಅದು ತಂದ ವಿನಾಶದ ಅನುಭವವೂ ಅಷ್ಟೇ ದಟ್ಟವಾಗಿತ್ತು. ತಮಗೆ ಸಾಂತ್ವನ ದೊರಕಬೇಕಾದ ಗಳಿಗೆಯಲ್ಲಿ ಭಾರತದ ಪ್ರಭುತ್ವ ಗೈರು ಹಾಜರಾಗಿತ್ತು. ವರ್ಷ ಕಾಲ ಹೈದರಾಬಾದಿನ ಖಾಸಗಿ ಮನೆಗಳಲ್ಲಿ, ಮಸೀದಿಗಳಲ್ಲಿ ವಾಸ ಮಾಡಬೇಕಾಗಿ ಬಂದಿತ್ತು. ಮರಳಿ ತಮ್ಮ ಮನೆ, ಹಳ್ಳಿಗಳಿಗೆ ಭೇಟಿ ನೀಡುವುದೂ ಸಾಧ್ಯವಾಗಲಿಲ್ಲ. ತಮ್ಮ ಸದ್ಯದ ಬಡತನ ಸಂಕಷ್ಟಗಳಿಗೆಲ್ಲಾ ಈ ಅನಾಹುತವೇ ಕಾರಣ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಅಲ್ಲಿ ಬಹು ಬಗೆಯ ‘ಸ್ವಾತಂತ್ರ್ಯ ಹೋರಾಟಗಾರ’ರಿದ್ದರು. ರಝಾಕಾರರು ಹೈದರಾಬಾದ್ ಸಂಸ್ಥಾನ ಮತ್ತು ಗ್ರಾಮೀಣ ತೆಲಂಗಾಣದ ಭೂಮಾಲಕ ವರ್ಗವನ್ನು ರಕ್ಷಿಸಲು ಸೃಷ್ಟಿಯಾಗಿದ್ದರು. ಗಡಿ ಗುಂಟ ಇದ್ದ ‘ಭಾರತದ ಸ್ವಾತಂತ್ರ್ಯ ಹೋರಾಟಗಾರರು’ ‘ಮುಸ್ಲಿಮ್ ದೊರೆಯ ಕಪಿಮುಷ್ಟಿಯಿಂದ’ ಹೈದರಾಬಾದ್ ಸಂಸ್ಥಾನವನ್ನು ವಿಮೋಚನೆಗೊಳಿಸಲು ಸೃಷ್ಟಿಯಾಗಿದ್ದರು. ಪೊಲೀಸ್ ಕಾರ್ಯಾಚರಣೆಯ ಬಳಿಕ ಸಿಕ್ಕಿದ ಹೊಸ ಬಗೆಯ ಸ್ವಾತಂತ್ರ್ಯದ ಅವಕಾಶ ಬಳಸಿಕೊಂಡ ಹಿಂಸಾತ್ಮಕ ದುಷ್ಟಪಡೆಗಳು ‘ಹಿಂದೂ ಶಕ್ತಿ’ಯನ್ನು ಸ್ಥಾಪಿಸಲು ಮುಸ್ಲಿಮರ ಮೇಲೆ ದಾಳಿ ನಡೆಸಿದರು.

ಸಾಮಾನ್ಯ ಮಹಿಳೆಯರಿಗೆ ಈ ಪೊಲೀಸ್ ಕಾರ್ಯಾಚರಣೆ ಭಯಗ್ರಸ್ತ, ಅಪಾರ ನೋವಿನ ಘಾತಕ ಘಟನೆಯಾಗಿತ್ತು. ಜಾತಿ ಲಿಂಗದ ಶ್ರೇಣಿಯಲ್ಲಿ ಈ ಮಹಿಳೆಯರು ಎಲ್ಲಿದ್ದಾರೆ ಎಂಬುದರ ಮೇಲೆ ಇದರ ದಾರುಣತೆಯ ಪ್ರಮಾಣ ನಿರ್ಧಾರವಾಗಿತ್ತು. ಸೆಪ್ಟಂಬರ್ 17ರ ಸಂಭ್ರಮಾಚರಣೆ ಬಗ್ಗೆ ಇರಾವತಿ ನೆನಪಿಸಿಕೊಂಡಳು. ಆದರೆ ಉಳಿದ ಮಹಿಳೆಯರು ನೆನಪಿಸಿಕೊಳ್ಳಲಿಲ್ಲ. ಅವರ ಇಡೀ ಅನುಭವ ಕಥನಗಳಲ್ಲಿ ಸ್ವತಂತ್ರ, ಸ್ವಾತಂತ್ರ್ಯ ಪದಗಳೇ ಗೈರಾಗಿದ್ದವು

ಖಿಲಾ ವಾರಂಗಲ್ಲಿನ ಮಹಿಳೆಯರಿಗೆ ಈ ಕಾರ್ಯಾಚರಣೆಯ ವರ್ಷಗಳು ಬಲು ಕಷ್ಟದ ಸುದೀರ್ಘ ಅವಧಿಯಾಗಿತ್ತು. ಆದರೆ ಬೀದರಿನ ಮಹಿಳೆಯರಿಗೆ ಈ ಕಾರ್ಯಾಚರಣೆ ತಮ್ಮ ಬದುಕನ್ನೇ ಸಂಕಷ್ಟ, ದಾರಿದ್ರ್ಯ, ಅನಾಥ ಸ್ಥಿತಿಗೆ ತಳ್ಳಿದ ಘಟನೆಯಾಗಿತ್ತು. ಅದರೆ ಗ್ರಾಮೀಣ ಮಹಿಳೆಯರಿಗೆ ಈ ನೆನಪು ರಝಾಕಾರರ ಸುತ್ತ ಹೆಣೆದಿತ್ತು. ಆದರೆ ನಿಜಾಮಾಬಾದಿನ ಮೇಲ್ಜಾತಿಯವರಿಗೆ ನೆನಪುಗಳೆಲ್ಲಾ ‘ನಮ್ಮ ಸೈನ್ಯ’ ಬರುವವರೆಗೂ ಸ್ವರಕ್ಷಣೆ ಮಾಡಿಕೊಂಡಿದ್ದರ ಸುತ್ತ ಹೆಣೆದಿತ್ತು.

ಈ ಎರಡರಲ್ಲೂ ಮುಸ್ಲಿಮರನ್ನು ‘ಅನ್ಯಗೊಳಿಸುವ’ ಪ್ರಕ್ರಿಯೆ ಸಾಮಾನ್ಯ ಸಂಗತಿ. ಮುಸ್ಲಿಮ್ ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಂಡಾಗ ಇದನ್ನು ಅನುಮೋದಿಸಿದ್ದರು. ಅವರಿಗೆ ಈ ಕಾರ್ಯಾಚರಣೆ ವಿವರಿಸಲು ಸಾಧ್ಯವೇ ಇಲ್ಲದ, ಅರ್ಥವೇ ಆಗದ, ಅತಾರ್ಕಿಕ ಹಿಂಸೆಯಷ್ಟೇ ಆಗಿತ್ತು.

***

(ಸುನೀತಾ ಅವರು ಲಿಂಗ, ಅಲ್ಪಸಂಖ್ಯಾತ, ವಲಸೆಗಳು ಹೆಣೆದ ವಿಷಯಗಳ ಕುರಿತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸಕ್ತ ಅವರು ತೆಲುಗು ಪ್ರದೇಶದ ಮುಸ್ಲಿಮ್ ರಾಜಕೀಯದ ಕುರಿತು ಕೃತಿ ರಚನೆಯಲ್ಲಿ ತೊಡಗಿದ್ದಾರೆ.)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಎ. ಸುನೀತಾ

contributor

Similar News