×
Ad

ಪ್ರಜಾಪ್ರಭುತ್ವಕ್ಕೆ ಬದ್ಧವಾಗಿರುವ ‘ವಾರ್ತಾಭಾರತಿ’

Update: 2025-08-29 10:54 IST

ಸಾಮಾನ್ಯವಾಗಿ ಪ್ರಜಾಪ್ರಭುತ್ವಕ್ಕೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಮೂರು ಕಂಬವಾದರೆ ಪತ್ರಿಕಾಂಗವನ್ನು ನಾಲ್ಕನೇ ಕಂಬವೆಂದು ಪರಿಗಣಿಸಲಾಗುತ್ತದೆ. ಮೂರು ಕಾಲಿನಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ತುಂಬಾ ಕಷ್ಟ ಮತ್ತು ಅದು ತಂತಿ ಮೇಲಿನ ನಡಿಗೆ. ಆದ್ದರಿಂದ ಪತ್ರಿಕಾಂಗವೆಂಬ ನಾಲ್ಕನೇ ಕಾಲೊಂದು ಇರಬೇಕು. ಈ ನಾಲ್ಕನೇ ಕಾಲು ಮೇಲಿನ ಮೂರು ಕಾಲುಗಳ ಹೊರೆಯನ್ನು ಕಡಿಮೆ ಮಾಡಿ ಇಡೀ ಸೌಧವನ್ನು ಗಟ್ಟಿಯಾಗಿ ನಿಲ್ಲಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಹೀಗೆಂದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಷ್ಪಕ್ಷ ಮಾಧ್ಯಮಗಳಿಗೆ ಎಲ್ಲಿಲ್ಲದ ಮಹತ್ವ ಪ್ರಾಪ್ತವಾಯಿತು. ಜನತೆಯ ಒಳಿತಿಗಾಗಿ ನಾಡಿನ ಸಾಕ್ಷಿಪ್ರಜ್ಞೆಯಂತೆ ಪತ್ರಿಕಾಂಗವು ಈವರೆಗೆ ಕೆಲಸ ಮಾಡುತ್ತ ಬಂದಿದ್ದವು. ರಾಜಕೀಯ ಒಳಗೊಂಡಂತೆ ಯಾರೇ ದಾರಿ ತಪ್ಪಿದರೆ ಅವರನ್ನು ಸರಿ ದಾರಿಗೆ ತರುವ ಸಾಮಾಜಿಕ ಶಿಕ್ಷಕನಂತೆ ಇವು ಕಾರ್ಯ ನಿರ್ವಹಿಸುತ್ತ ಬರುವುದಿತ್ತು. ಆದ್ದರಿಂದಲೇ ಜನರು ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳನ್ನು ದೈವವಾಣಿಯಂತೆ ಬರ ಮಾಡಿಕೊಳ್ಳುವುದಿತ್ತು.

ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಪತ್ರಿಕೆಗಳು ಗುರುತರ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬಂದದ್ದು ಈಗ ಇತಿಹಾಸ. ಮಾಧ್ಯಮ ಕ್ಷೇತ್ರಗಳು ಪ್ರಿಂಟ್ ಮೀಡಿಯಾದಿಂದ ಡಿಜಿಟಲ್ ಮೀಡಿಯಾಕ್ಕೆ ವಿಸ್ತರಿಸಿಕೊಂಡಿರುವ ಈ ಹೊತ್ತಲ್ಲಿ ಅವುಗಳ ಮೇಲಿನ ಹೊಣೆಗಾರಿಕೆ ಇನ್ನಷ್ಟು ಗುರುತರವಾಗಿದೆ. ದೇಶದಲ್ಲಿ ಕೋಮುವಾದಿ ಫ್ಯಾಶಿಸ್ಟ್ ರಾಜಕಾರಣವು ನವಉದಾರವಾದಿ ಆರ್ಥಿಕ ನೀತಿಗಳೊಂದಿಗೆ ಕೈ ಜೋಡಿಸಿದಾಗಿನಿಂದ ಮಾಧ್ಯಮಗಳು ಪ್ರಜೆಗಳ ಬದಲಿಗೆ ಬಂಡವಾಳಶಾಹಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಿಟ್ಟಿದ್ದು ಈ ಹೊತ್ತಿನ ಬಹು ದೊಡ್ಡ ದುರಂತವಾಗಿದೆ. ಕರ್ನಾಟಕದಲ್ಲಿಯಂತೂ ಪತ್ರಿಕೆಗಳು ಒಳಗೊಂಡಂತೆ ಇಲೆಕ್ಟ್ರಾನಿಕ್ ಮೀಡಿಯಾಗಳೆಲ್ಲ ಹೆಚ್ಚು ಕಡಿಮೆ ಮಾಲಕರ ಮುಖವಾಣಿಯಾಗಿ ದಿವಾಳಿಯಾಗಿದ್ದನ್ನು ನೋಡಿದ್ದೇವೆ. ಇವುಗಳ ನಡುವೆಯೂ ಕೆಲವು ಮೀಡಿಯಾಗಳು ಅಪವಾದಗಳಾಗಿ ಈವರೆಗೂ ಗಟ್ಟಿಯಾಗಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧವಾಗಿ ಉಳಿದುಕೊಂಡು ಬಂದಿವೆ ಎಂಬುದೇ ಸಮಾಧಾನದ ಸಂಗತಿ. ಅವುಗಳ ಪೈಕಿ ‘ವಾರ್ತಾಭಾರತಿ’ಯೂ ಒಂದೆಂದು ಪರಿಗಣಿಸಬಹುದು.

ವಾರ್ತಾಭಾರತಿ ದಿನ ಪತ್ರಿಕೆ ಪ್ರಾರಂಭವಾಗಿ ಕೇವಲ 22 ವರ್ಷಗಳು ಸಂದಿದ್ದರೂ ಅಲ್ಪ ಅವಧಿಯಲ್ಲಿಯೇ ಗಣನೀಯ ಸಾಧನೆ ಮಾಡಿದೆ. ಈ ಸಂದರ್ಭದಲ್ಲಿ ಅಭಿನಂದಿಸುತ್ತಲೇ ಅದು ಇನ್ನೂ ಉತ್ತರೋತ್ತರವಾಗಿ ವರ್ಧಿಸಲಿ ಎಂದು ಆಶಿಸುತ್ತೇನೆ. ಕಾರಣ ಈ ಪತ್ರಿಕೆ ಪತ್ರಿಕಾ ವ್ಯವಸಾಯದ ನಿಷ್ಪಕ್ಷತೆಯನ್ನು ಛಲ ತೊಟ್ಟು ಕಾಪಾಡಿಕೊಂಡು ಬರುತ್ತಿರುವುದು ವಿದಿತವಷ್ಟೇ. 2001ರ ದಶಕದಲ್ಲಿ ಪತ್ರಿಕೆಗಳೆಲ್ಲ ಕೋಮುವಾದಿ ರಾಜಕಾರಣದತ್ತ ಪ್ರಶ್ನಾತೀತವಾಗಿ ವಾಲಿಕೊಂಡ ಅತ್ಯಂತ ಸಂಕಷ್ಟ ಸಮಯದಲ್ಲಿ ಜನತೆಯ ಧ್ವನಿಯಾಗಿ ‘ವಾರ್ತಾಭಾರತಿ’ ಎದ್ದು ಬಂದಿತು. ಕಲ್ಯಾಣ ಕರ್ನಾಟಕದಲ್ಲಿಯಂತೂ ಇಲ್ಲಿನವರ ಗೋಳು ಕೇಳುವವರೇ ಇಲ್ಲ ಎಂಬ ದುರ್ಭರ ಸ್ಥಿತಿಯಲ್ಲಿ ದೂರದ ಕರಾವಳಿಯಿಂದ ಪ್ರಕಟವಾಗುತ್ತಿದ್ದ ‘ವಾರ್ತಾಭಾರತಿ’ಯ ಡಿಜಿಟಲ್ ಮತ್ತು ಪ್ರಿಂಟ್ ಮೀಡಿಯಾ ನಮ್ಮ ಭಾಗದ ಸುದ್ದಿಗಳನ್ನು ನಿಷ್ಪಕ್ಷವಾಗಿ ಪ್ರಕಟಿಸಿ ಬೆನ್ನಿಗೆ ನಿಂತಿದೆ. ಎಡ, ಬಲ, ಮಧ್ಯಮ ಇತ್ಯಾದಿ ಯಾವ ಕಡೆಯೂ ವಾಲದೆ ತನ್ನ ಪತ್ರಿಕಾ ಧರ್ಮಕ್ಕೆ ಬದ್ಧವಾಗಿ ಇದ್ದದ್ದನ್ನು ಇದ್ದಂತೆ ಜನರ ಎದುರು ತೆರೆದು ಇಟ್ಟಿತು. ವಿಶೇಷವಾಗಿ ಪ್ರಧಾನ ಮಾಧ್ಯಮಗಳು ಗಂಭೀರವಾದ ಯಾವ ಪ್ರಮಾದಗಳನ್ನು ಪರಿಗಣಿಸದೆ ಅವಜ್ಞೆ ಮಾಡಿದ್ದವೋ ಅಂಥವುಗಳನ್ನು ಸಾಹಸ ಪಟ್ಟು ಹೆಕ್ಕಿ ತೆಗೆದು ಇಲ್ಲಿನ ವರದಿಗಾರರು ಸುದ್ದಿ ಮಾಡಿದ್ದೂ ಇದೆ. ಬಹುತ್ವ ಭಾರತ ಸಂಸ್ಕೃತಿ ಉತ್ಸವದಂಥ ಚಾರಿತ್ರಿಕ ಕಾರ್ಯಕ್ರಮವೇ ಇರಬಹುದು, ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಸಂವಿಧಾನ ವಿರೋಧಿ ನಡೆಗಳೇ ಇರಬಹುದು, ಮೊನ್ನೆ ಅದೇ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಹಬ್ಬಿಸುತ್ತಿದ್ದ ಸುಳ್ಳು ಸುದ್ದಿಗಳ ತನಿಖೆ ಮಾಡಿ ಪ್ರಕಟಿಸಿದ್ದ ನೈಜ ಸಂಗತಿಗಳ ವರದಿ ಇರಬಹುದು, ಬಸವಕಲ್ಯಾಣದಲ್ಲಿ ಬಂಗಾಲಿಪೀರ್ ದರ್ಗಾದ ಸ್ಥಳ ವಿವಾದ ಘಟನೆ, ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿ ಅನವಶ್ಯಕವಾಗಿ ಎಬ್ಬಿಸಲು ಹೊರಟಿದ್ದ ಕೋಮುದ್ವೇಷದ ವರದಿ ಇರಬಹುದು ಇಂಥ ಸುದ್ದಿಗಳ ನೈಜತೆಯನ್ನು ಪತ್ತೆ ಹಚ್ಚಿ ವಾಸ್ತವ ಸಂಗತಿಗಳನ್ನು ತೆರೆದಿಟ್ಟದ್ದು ಪತ್ರಿಕೆಗೆ ಗೌರವ ತಂದು ಕೊಟ್ಟಿದೆ.

ಕೆಲವು ಮೀಡಿಯಾಗಳು ಹಿಂದೂ-ಮುಸ್ಲಿಮರ ನಡುವೆ ಇಲ್ಲದ ದ್ವೇಷವನ್ನು ಹುಟ್ಟಿಸಿ ಕೋಮುದಂಗೆ ಹರಡಿಸಲು ಪ್ರಯತ್ನಿಸಿದಾಗ ‘ವಾರ್ತಾಭಾರತಿ’ ಪತ್ರಿಕಾ ಧರ್ಮವನ್ನು ಪಾಲಿಸಿ ವಾಸ್ತವವನ್ನು ಜನರ ಎದುರು ತೆರೆದು ಇಟ್ಟಿತು. ಇದರಿಂದಾಗಿ ಕಲ್ಯಾಣ ಕರ್ನಾಟಕದಲ್ಲಿ ಘಟಿಸಿಬಹುದಾದ ಅನೇಕ ಅವಘಡಗಳನ್ನು ತಪ್ಪಿಸಲು ಸಾಧ್ಯವಾಗಿದೆ. ಇಂಥ ಸತ್ಯಶೋಧ ಖರೇ ಸುದ್ದಿಗಳೇ ತ್ವೇಷಮಯ ವಾತಾವರಣ ಸೃಷ್ಟಿಯಾಗದಂತೆ ಎಚ್ಚರ ವಹಿಸಿವೆ.

‘ವಾರ್ತಾಭಾರತಿ’ ಕಲ್ಯಾಣ ಕರ್ನಾಟಕದಲ್ಲಿ ಎರಡು ಜವಾಬ್ದಾರಿಗಳನ್ನು ನಿಭಾಯಿಸಿದೆ. ಒಂದು ಪ್ರಧಾನ ಮಾಧ್ಯಮಗಳು ಅವಗಣಿಸಿದ ಆದರೆ ಬಹುಮುಖ್ಯವಾಗಿದ್ದ ಸುದ್ದಿಗಳನ್ನು ಹೆಕ್ಕಿ ತೆಗೆದು ಪ್ರಕಟಿಸಿದ್ದು. ಇನ್ನೊಂದು ಕೆಲವು ಕೋಮುವಾದಿ ಮೀಡಿಯಾಗಳು ಹರಡಿಸುತ್ತಿದ್ದ ಸುಳ್ಳು ಸುದ್ದಿಗಳನ್ನು ಬಯಲು ಮಾಡಿ ನೈಜ ಸಂಗತಿಯನ್ನು ಎತ್ತಿ ಹಿಡಿದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಇಂಬಾಗಿ ನಿಂತದ್ದು. ಮಾಧ್ಯಮಗಳಿಗೆ ಇರಬೇಕಾದ ಸೂಕ್ಷ್ಮ ಗ್ರಹಿಕೆ ಮತ್ತು ಜನಪರ ಮೌಲ್ಯಗಳ ಅನುಸಂಧಾನ ಇವೆರಡನ್ನು ‘ವಾರ್ತಾಭಾರತಿ’ ಪಾಲಿಸಿಕೊಂಡು ಬರುತ್ತಿದೆಯಾದ್ದರಿಂದ ಜನಪರ ಹೋರಾಟಗಾರರ ಮೆಚ್ಚುಗೆಗೆ ಪಾತ್ರವಾಗಿದೆ. ಪತ್ರಿಕೆಗಳು ಸಮಾಜದ ರಕ್ತ ನಾಡಿಗಳು ಇದ್ದಂತೆ. ರಕ್ತವೇ ಕಲುಷಿತವಾದರೆ ಜೀವಕ್ಕೆ ಕುತ್ತು ಕಟ್ಟಿಟ್ಟ ಬುತ್ತಿ ತಾನೆ! ಅಂತೆಯೇ ಪತ್ರಿಕೆಗಳು ಯಾವುದೇ ರಾಜಕೀಯ ಪಕ್ಷಗಳಿಗೆ ಅಡಿಯಾಳಾಗಿ ನಿಂತು ಅವುಗಳ ಮುಖವಾಣಿಯಾದರೆ ದೇಶದ ಭವಿಷ್ಯಕ್ಕೆ ಕುತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಪತ್ರಿಕೆಗಳು ಪಕ್ಷ ರಾಜಕಾರಣದ ಬಾಲಂಗೋಚಿಗಳಾದರೆ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ. ಕಾರಣ ಮಾಧ್ಯಮಗಳು ಜನಮಾನಸವನ್ನು ರೂಪಿಸುತ್ತವೆ ಮತ್ತು ನಿಯಂತ್ರಿಸುತ್ತವೆ. ಹೀಗಾಗಿ ಮಾಧ್ಯಮಗಳು ಜನತೆಗೆ ಬದ್ಧವಾಗಿರಬೇಕು ಹೊರತು ಲಾಭದಾಯಕ ಉದ್ದಿಮೆಗಳಿಗೆ ಅಲ್ಲ. ಅಷ್ಟಕ್ಕೂ ಮೀಡಿಯಾಗಳು ಲಾಭ ತರುವ ಉದ್ದಿಮೆಗಳಲ್ಲ. ಅವು ಜನತೆಯ ಅಂತಃಸ್ರೋತ ಅಭೀಪ್ಸೆಗಳಾಗಿರುತ್ತವೆ. ಮೀಡಿಯಾಗಳು ಪ್ರಕಟಣೆಯ ಖರ್ಚನ್ನು ಸಂಭಾಳಿಸಿಕೊಳ್ಳುತ್ತಲೇ ಜನಕಲ್ಯಾಣದ ಸೇವಾ ವಲಯಗಳಾಗಿ ನಿಲ್ಲಬೇಕು. ‘ವಾರ್ತಾಭಾರತಿ’ ಇನ್ನು ಮುಂದೆಯೂ ತನ್ನ ಜನಪರ ನಿಲುವು-ನೆಲೆಗಳನ್ನು ಕಾಪಿಟ್ಟುಕೊಂಡು ಪತ್ರಿಕಾ ಧರ್ಮವನ್ನು ಪಾಲಿಸಿಕೊಂಡು ಬರಲಿ ಎಂದು ಆಶಿಸುತ್ತೇನೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಮೀನಾಕ್ಷಿ ಬಾಳಿ

contributor

Similar News