×
Ad

ಜನದನಿಯಾಗಿರುವ ‘ವಾರ್ತಾಭಾರತಿ’

Update: 2025-08-29 12:12 IST

ಜನಪರ ಆಶಯಗಳನ್ನು ಕಾಯುವ ಕಾವಲುಗಾರ ಎಂಬ ಆಶಯದೊಂದಿಗೆ ‘ಸುದ್ದಿ ಸಂಗಾತಿ’ ವಾರಪತ್ರಿಕೆಯು 1986ರಲ್ಲಿ ಶುರುವಾದಾಗ ನಾಡಿನ ಪ್ರಗತಿಪರರು ಅತ್ತ ಆಸೆಗಣ್ಣಿನಿಂದ ನೋಡಿದರು. ಅದಾಗಲೇ ಲಂಕೇಶ್ ಪತ್ರಿಕೆ ಜನಮನ ಗೆದ್ದು ವಿರೋಧ ಪಕ್ಷಕ್ಕಿಂತಲೂ ಒಂದು ಕೈ ಮೇಲೆಂಬಂತೆ ಜನಪರ ಆಶಯಗಳನ್ನು ಕಾಯುತ್ತಿತ್ತು. ಆ ಮಧ್ಯೆ ಕನ್ನಡದಲ್ಲಿ ಮಿಂಚಿ ಮರೆಯಾದ ತನಿಖಾ ಪತ್ರಿಕೋದ್ಯಮಕ್ಕೆ ಮತ್ತೆ ಮತ್ತೆ ಜೀವತುಂಬುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಕನ್ನಡ ಪತ್ರಿಕೋದ್ಯಮದಲ್ಲಿ ಇಂತಹ ಪತ್ರಿಕೆಗಳ ಸಾಲಿನಲ್ಲಿ ನಿಲ್ಲುವ ಜನದನಿಯ ಮತ್ತೊಂದು ದಿನಪತ್ರಿಕೆಯೆಂದರೆ ‘ವಾರ್ತಾಭಾರತಿ’.

ಪತ್ರಿಕಾರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ನಂಬಿದ್ದೇವೆ. ನಾಲ್ಕನೇ ಅಂಗವು ಮೊದಲ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸರಿದಾರಿಯಲ್ಲಿ ಮುನ್ನಡೆಯಲು ಸದಾ ಎಚ್ಚರಿಸುತ್ತಿರುತ್ತದೆ. ಅಂತಹ ಜಾಗೃತಿಯನ್ನು ಕೊಡಲು ಸಾಧ್ಯವಾಗುವುದು ಪತ್ರಿಕಾಧರ್ಮವನ್ನು ಬದ್ಧತೆಯಿಂದ ಪಾಲಿಸಿದಾಗ ಮಾತ್ರ. ‘ವಾರ್ತಾಭಾರತಿ’ಗೆ ಅಂತಹ ಬದ್ಧತೆಯಿದೆ, ಜನಪರ ಕಾಳಜಿಯಿದೆ, ಸಾಮಾಜಿಕ ಜವಾಬ್ದಾರಿಯಿದೆ. ಆ ಮೂಲಕ ಸದಾ ಜನರ ದನಿಯಾಗಿದೆ. ಇದೀಗ ತನ್ನ ಪ್ರಕಟಣೆಯ ಇಪ್ಪತ್ತಮೂರನೇ ವರ್ಷಕ್ಕೆ ಕಾಲಿಡುವ ಸಂಭ್ರಮದಲ್ಲಿ ವಾರ್ತಾಭಾರತಿಯಿದೆ. ಇಂತಹ ನೂರಾರು ವರ್ಷಗಳ ಸಂಭ್ರಮಾಚರಣೆಯನ್ನು ‘ವಾರ್ತಾಭಾರತಿ’ ಕಾಣಲಿ ಎಂದು ಆಶಿಸುತ್ತೇನೆ.

‘‘ನೀವು ಸದಾ ಜಾಗೃತರಾಗಿಲ್ಲದಿದ್ದರೆ, ಸುದ್ದಿಪತ್ರಿಕೆಗಳು ಶೋಷಣೆಗೊಳಗಾದವರನ್ನು ದ್ವೇಷಿಸುತ್ತಾ ಶೋಷಣೆ ಮಾಡುವವರನ್ನು ಪ್ರೀತಿಸುತ್ತವೆ’’ ಎಂಬ ಎಚ್ಚರಿಕೆಯನ್ನು ನಾಗರಿಕರಿಗೆ ಕೊಟ್ಟವರು ಅಮೆರಿಕದ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಕಪ್ಪು ಜನರ ನಾಯಕ ಮಾಲ್ಕಮ್ ಎಕ್ಸ್. ಅಂತಹ ಎಚ್ಚರಿಕೆಯ ಮಾತನ್ನು ತನ್ನ ಒಡಲಲ್ಲಿಟ್ಟುಕೊಂಡು ಶೋಷಣೆಗೊಳಗಾದವರ ಪರವಾದ ವಕಾಲತ್ತಿನ ಸುದ್ದಿಗಳನ್ನು ಪ್ರಕಟಿಸುತ್ತಾ ಜನದನಿಯಾಗಿರುವ ‘ವಾರ್ತಾಭಾರತಿ’ಯ ಬರಹಗಾರರ ಗುಂಪಿನಲ್ಲಿ ನಾನೂ ಕೂಡ ಇರುವುದು ನನಗೆ ಸಂತಸದ ವಿಷಯವಾಗಿದೆ. ಹತ್ತಾರು ಗೆಳೆಯರು ಸೇರಿದ ಕಡೆ ನನ್ನ ಗೆಳೆಯರು ನನ್ನನ್ನು ಇತರರಿಗೆ ಪರಿಚಯಿಸುವುದು ಇವರು ‘ವಾರ್ತಾಭಾರತಿ’ಗೆ ಬರೆಯುತ್ತಿರುತ್ತಾರೆ ಎಂದು. ಅಂತಹ ಗುರುತನ್ನು ನನಗೆ ‘ವಾರ್ತಾಭಾರತಿ’ ತಂದುಕೊಟ್ಟಿದೆ.

ಮೊದಮೊದಲಿಗೆ ಬೇರೆ ಪತ್ರಿಕೆಗಳಿಗೆ ಬರೆಯುತ್ತಿದ್ದ ನಾನು ವಾರ್ತಾಭಾರತಿಯ ಬರಹಗಾರನಾದೆ. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್, ರಾಗಿ ಲಕ್ಷ್ಮಣಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್, ಕುದ್ಮುಲ್ ರಂಗರಾವ್, ಮೀಸಲಾತಿ ಲೇಖನಗಳು, ದಲಿತ ವಿದ್ಯಾರ್ಥಿಗಳ ಸಮಸ್ಯೆಗಳು, ವೈದ್ಯಕೀಯ ನೊಬೆಲ್ ಪ್ರಶಸ್ತಿಗಳ ಬರಹಗಳು ಮುಂತಾಗಿ ನನ್ನ ಲೇಖನಗಳು ‘ವಾರ್ತಾಭಾರತಿ’ಯಲ್ಲಿ ಪ್ರಕಟವಾದವು. ಯುವಜನತೆಗೆ ನಾನು ದಾಟಿಸಬೇಕಿದ್ದ ನನ್ನ ಚಿಂತನೆಗಳು, ವಿಜ್ಞಾನದ ಸಂವಹನ, ವಿಶ್ಲೇಷಣೆಗಳು, ಅರುಹುಗಳಿಗೆ ‘ವಾರ್ತಾಭಾರತಿ’ಯು ವೇದಿಕೆಯಾಯಿತು.

ಜನವರಿ 4, 2015ರಲ್ಲಿ ‘ವಾರ್ತಾಭಾರತಿ’ಯಲ್ಲಿ ಪ್ರಕಟವಾದ ನನ್ನ ‘ಜನಪರ ವಿಜ್ಞಾನಿ ರಾಗಿ ಲಕ್ಷ್ಮಣಯ್ಯ’ ಎಂಬ ಲೇಖನವು 2021-22ರ ಸಾಲಿನಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಬಿ.ಕಾಂ. ವಿದ್ಯಾರ್ಥಿಗಳಿಗೆ ಕನ್ನಡ ವಿಷಯದ ಅಧ್ಯಾಯವಾಯಿತು. ಆ ಮೂಲಕ ರಾಗಿ ಲಕ್ಷ್ಮಣಯ್ಯನವರು ಪ್ರಸಕ್ತ ತಲೆಮಾರಿನ ಸಾವಿರಾರು ವಿದ್ಯಾರ್ಥಿಗಳಿಗೆ ತಲುಪಿದರು. ನನ್ನೆಲ್ಲಾ ಪ್ರಕಟಿತ ಲೇಖನಗಳನ್ನು ಸಂಕಲಿಸಿ ‘ನಿಮಗೆ ನೀವೇ ಬೆಳಕಾಗಿ’ ಎಂಬ ಕೃತಿಯನ್ನು ನಾನು ಪ್ರಕಟಿಸಿದಾಗ ಅಲ್ಲಿ ಈ ಲೇಖನವೂ ಪ್ರಕಟವಾಯಿತು.

ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಜನ್ಮದಿನದ ಸವಿನೆನಪಿಗಾಗಿ ಜೂನ್ 2020ರಲ್ಲಿ ಬರೆದ ವಿಶೇಷ ಲೇಖನವು ಓದುಗರ ಗಮನ ಸೆಳೆಯಿತು. ಅಲ್ಲಿ ನೂರಕ್ಕೂ ಹೆಚ್ಚು ಸಾಧನೆಗಳ ಪಟ್ಟಿಯಿತ್ತು. ಲೇಖನವನ್ನು ಹಿಗ್ಗಿಸಿ ಪುಟ್ಟ ಪುಸ್ತಕವಾಗಿ ಪ್ರಕಟಿಸಿದರೆ ಹೊಸ ತಲೆಮಾರಿಗೆ ನಾಲ್ವಡಿಯವರ ಸಾಧನೆಗಳನ್ನು ಅರಿಯುವ ಪ್ರಾಥಮಿಕ ಸರಳ ಪುಸ್ತಕವಾಗಬಹುದೆಂದು ಒತ್ತಾಯ ಬಂತು. ಇನ್ನಷ್ಟು ಸಂಶೋಧನೆಯ ಮೂಲಕ 48 ಪುಟಗಳ ಕೃತಿ ಸಿದ್ಧವಾಗಿ ಪ್ರೊ. ಕಾಳೇಗೌಡ ನಾಗವಾರ ಅವರು ಮುನ್ನುಡಿ ಬರೆದರು.

ಇತ್ತೀಚೆಗೆ ಪೂರ್ಣಿಮಾ ಹೆಗ್ಗಡೆಯವರು ಆ ಕೃತಿಯನ್ನು ಮರುಮುದ್ರಿಸಿ ಸರಕಾರದ ಶಾಲೆಗಳಿಗೆ ಉಚಿತವಾಗಿ ಹಂಚಿದರು. ‘ವಾರ್ತಾಭಾರತಿ’ಯಿಂದಾಗಿ ನಾಲ್ವಡಿಯವರ ಸಾಧನೆಗಳು ಇನ್ನಷ್ಟು ಜನರಿಗೆ ತಲುಪುವಂತಾಯಿತು.

ಕೋಟಿಗಾನಹಳ್ಳಿ ರಾಮಯ್ಯನವರ ಬುಡ್ಡಿದೀಪ ಪ್ರಕಾಶನದಿಂದ 2019ರಲ್ಲಿ ಹೊರಬಂದ ‘ಮಹಾನದಿಯ ಉಗಮ’ ಎಂಬ ಡಾ. ಅಂಬೇಡ್ಕರ್‌ರವರ ಕುರಿತ ನನ್ನ ಪ್ರಕಟಿತ ಲೇಖನಗಳ ಸಂಕಲನದ ಕೃತಿಯಲ್ಲಿ ‘ವಾರ್ತಾಭಾರತಿ’ಯಲ್ಲಿ ಪ್ರಕಟವಾಗಿದ್ದ ಏಳು ಲೇಖನಗಳು ಸೇರಿಕೊಂಡವು.

ಒಮ್ಮೆ ನಾನು ಬರೆದ ವಿಜ್ಞಾನದ ಸಂಶೋಧನಾ ಲೇಖನವನ್ನು ವಿಜ್ಞಾನ ಬರಹಗಾರ ನಾಗೇಶ್ ಹೆಗಡೆಯವರು ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟಿಸಿದರು. ನನ್ನ ಪ್ರಾಧ್ಯಾಪಕ ವೃತ್ತಿಯ ಬೋಧನಾ ವಿಷಯವು ಶರೀರಕ್ರಿಯಾ ವಿಜ್ಞಾನವಾಗಿದ್ದರಿಂದ ಶರೀರಕ್ರಿಯಾ ವಿಜ್ಞಾನ ಅಥವಾ ವೈದ್ಯಕೀಯಕ್ಕೆ ಪ್ರತೀ ವರ್ಷ ಕೊಡಮಾಡುವ ನೊಬೆಲ್ ಪ್ರಶಸ್ತಿಗಳ ಕುರಿತು ಕನ್ನಡದ ಓದುಗರಿಗಾಗಿ ವಿವರವಾದ ಲೇಖನ ಬರೆಯಿರಿ ಎಂಬ ಸಲಹೆಯನ್ನಿತ್ತರು ನಾಗೇಶ್ ಹೆಗಡೆಯವರು. ಅಂತಹ ವೈದ್ಯಕೀಯ ನೊಬೆಲ್ ಪ್ರಶಸ್ತಿ ಕುರಿತ ವಿವರವಾದ ಪರಿಚಯಾತ್ಮಕ ಲೇಖನಗಳನ್ನು ನಾನು 2014ರಿಂದ ಆರಂಭಿಸಿ ಪ್ರತೀ ವರ್ಷವೂ 2023ರವರೆಗೆ ಬರೆದಾಗ ವಾರ್ತಾಭಾರತಿ ಪತ್ರಿಕೆಯು ಅಕ್ಟೋಬರ್ ತಿಂಗಳಲ್ಲಿ ಕಾಲ ಕಾಲಕ್ಕೆ ಅವುಗಳನ್ನು ಪ್ರಕಟಿಸಿದೆ. ಕನ್ನಡದ ಓದುಗರಿಗೆ ಅದರಿಂದ ವಿಜ್ಞಾನದ ಜ್ಞಾನ ಸಿಕ್ಕಿದೆ. ಕಾಲಮಿತಿಯಲ್ಲಿ ಅಂತಹ ಲೇಖನಗಳನ್ನು ಸಿದ್ಧಪಡಿಸಿ ‘ವಾರ್ತಾಭಾರತಿ’ಯಲ್ಲಿ ಪ್ರಕಟಣೆಗೆ ಕಳುಹಿಸುವುದೆಂದರೆ ನನಗದು ವಾರ್ಷಿಕ ಹಬ್ಬವಿದ್ದಂತೆ.

ಅಕ್ಟೋಬರ್ ಮೊದಲ ಸೋಮವಾರ ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಘೋಷಣೆಯಾಗುವ ವೈದ್ಯಕೀಯ ನೊಬೆಲ್ ಪ್ರಶಸ್ತಿಯ ವಿವರಗಳನ್ನು ಎಡಬಿಡದೆ ಕಲೆಹಾಕಿ, ಚಿಂತಿಸಿ, ಅಕ್ಷರ ರೂಪ ಕೊಟ್ಟು ನಾನು ಬರೆದ ಲೇಖನಗಳನ್ನು ಪ್ರಕಟಿಸಿದ ‘ವಾರ್ತಾಭಾರತಿ’ಗೆ ಆಭಾರಿ. ಇಲ್ಲಿಯವರೆಗೆ ಈ ಸರಮಾಲೆಯಲ್ಲಿ ಹನ್ನೊಂದು ಲೇಖನಗಳನ್ನು ಬರೆದಿರುವ ನಾನು ಇದೇ 2025ರ ಅಕ್ಟೋಬರ್‌ನಲ್ಲಿ 12ನೇ ಲೇಖನವನ್ನು ‘ವಾರ್ತಾಭಾರತಿ’ಗಾಗಿಯೇ ಬರೆಯುವ ದಿನಕ್ಕಾಗಿ ಎದುರು ನೋಡುತ್ತಿರುವೆನು. ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿರುವ ‘ವಾರ್ತಾಭಾರತಿ’ಯನ್ನು ವಿಶ್ವದಾದ್ಯಂತ ಲಕ್ಷಾಂತರ ಮಂದಿ ಓದುತ್ತಾರೆ.

ಹೆಬ್ಬಾಳ ಕೃಷಿ ಕ್ಯಾಂಪಸ್‌ನ ಆವರಣದ ಗ್ರಂಥಾಲಯಕ್ಕೆ ‘ವಾರ್ತಾಭಾರತಿ’ ಬರುವಂತೆ ಮಾಡಿದೆ. ನೂರಾರು ವಿದ್ಯಾರ್ಥಿಗಳು ಓದುತ್ತಾರೆ. ‘ವಾರ್ತಾಭಾರತಿ’ಯ ವಿಶೇಷಾಂಕವನ್ನು ಒಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರ ಗೃಹ ಕಚೇರಿಯಲ್ಲಿ ಬಿಡುಗಡೆ ಮಾಡಿದಾಗ ಪತ್ರಿಕೆಯ ಬರಹಗಾರನಾಗಿ ನಾನೂ ಭಾಗವಹಿಸಿದ್ದು ಅವಿಸ್ಮರಣೀಯ ದಿನ.

ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳ ಉದ್ದೇಶಗಳೆಂದರೆ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆ. ಇತರ ವಿಶ್ವವಿದ್ಯಾನಿಲಯಗಳ ಪ್ರಸಾರಾಂಗಕ್ಕೆ ಸರಿಸಮನಾದದ್ದು ಈ ವಿಸ್ತರಣೆ. ಕುವೆಂಪುರವರು ‘‘ದೇಹದ ಅಂಗವಾದ ಹೃದಯವು ದೇಹದ ಎಲ್ಲಾ ಅಂಗಗಳಿಗೆ ರಕ್ತ ಪರಿಚಲನೆ ಮಾಡುವಂತೆ ಪ್ರಸಾರಾಂಗವು ಪ್ರಕಟಿಸುವ ಸಾಹಿತ್ಯವು ಸಮಾಜದ ಎಲ್ಲ ಕಡೆಗೂ ತಲುಪುವಂತೆ ಮಾಡುತ್ತದೆ’’ ಎಂಬ ಚಿಂತನೆಯನ್ನು ಕೊಟ್ಟವರು. ಅದರಂತೆ, ಪಶುವೈದ್ಯಕೀಯ ವಿಜ್ಞಾನದ ಪ್ರಾಧ್ಯಾಪಕನಾಗಿ ನಾನು ಬರೆದು ‘ವಾರ್ತಾಭಾರತಿ’ಯಲ್ಲಿ ಪ್ರಕಟವಾದ ಲೇಖನಗಳ ಉಲ್ಲೇಖಗಳು ವಿಶ್ವವಿದ್ಯಾನಿಲಯದ ವಾರ್ಷಿಕ ವರದಿಯಲ್ಲಿ ಸ್ಥಾನ ಪಡೆದು ಸರಕಾರಕ್ಕೆ ಸಲ್ಲಿಕೆಯಾಗಿ ಹಲವು ಕಡೆ ಪಸರಿಸಿದವು. ಹೀಗೆ ‘ವಾರ್ತಾಭಾರತಿ’ಯ ಹರವು ವಿಸ್ತಾರವಾದದ್ದು. ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳ ವಿಸ್ತರಣಾ ಚಟುವಟಿಕೆಗಳನ್ನು ರೈತರಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸುವುದರಲ್ಲಿ ಪತ್ರಿಕಾ ಮಾಧ್ಯಮದ ಪಾತ್ರ ಪ್ರಮುಖವಾದದ್ದು.

ನನ್ನ ಲೇಖನಗಳನ್ನು ಪ್ರಕಟಿಸುವ ಮೂಲಕ ಬರವಣಿಗೆಯ ದಾಹವನ್ನು ‘ವಾರ್ತಾಭಾರತಿ’ಯು ತಣಿಸುತ್ತಾ ಬಂದಿದೆ. ನಾಡಿನ ಬಹುತೇಕ ಚಿಂತಕರ ಲೇಖನಗಳು ‘ವಾರ್ತಾಭಾರತಿ’ಯಲ್ಲಿ ಪ್ರಕಟವಾಗುವುದನ್ನು ಇಂದಿನ ತಲೆಮಾರು ಓದುತ್ತಿದೆ. ಉದಯೋನ್ಮುಖ ಬರಹಗಾರರಿಗೆ ವೇದಿಕೆಯಾಗಲಿ. ಒಂದು ಆರೋಗ್ಯಕರ ಸಮಸಮಾಜವನ್ನು ಕಟ್ಟಲು ‘ವಾರ್ತಾಭಾರತಿ’ ಇನ್ನಷ್ಟು ಶ್ರಮಿಸಲಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪ್ರೊ.ಎಂ.ನಾರಾಯಣ ಸ್ವಾಮಿ

contributor

Similar News