‘ಮಹಿಳಾ ಕಿಸಾನ್ ದಿವಸ’ ಹಾಗೆಂದರೇನು?

Update: 2023-10-15 06:41 GMT
Editor : Ismail | Byline : ಕೆ.ಪಿ. ಸುರೇಶ

ನಮ್ಮ ಗ್ರಾಮ ಭಾರತದ ಮಹಿಳೆಯರ ಬಗ್ಗೆ ಇರುವ ಅಂಕಿ-ಅಂಶಗಳನ್ನು ನೋಡಿದರೆ ಎದೆ ಹಾರುತ್ತದೆ. ಬಡತನದ ಸೂಚ್ಯಂಕದಲ್ಲಿ 111ನೇ ಸ್ಥಾನಕ್ಕೆ ಈ ದೇಶ ಇಳಿದಿರುವ ದಾಖಲೆ ಸಾಕು. ರಕ್ತ ಹೀನತೆ, ಸೌಲಭ್ಯಗಳಿಂದ ವಂಚಿತವಾಗಿರುವುದು, ದಾರುಣ ದುಡಿಮೆಯ ಸ್ಥಿತಿಗತಿ- ಹೀಗೆ ಯಾವ ಆಯಾಮ ನೋಡಿದರೂ ಸರಕಾರದ ಅವಜ್ಞೆಗೂ, ಸಮಾಜ, ಕುಟುಂಬದ ಒತ್ತಡಕ್ಕೂ ಒಳಗಾಗಿ ನಲುಗಿರುವ ಈ ಮಹಿಳೆಯರ ಬಗ್ಗೆ ಅರ್ಥ ಪೂರ್ಣ ಯೋಜನೆಗಳೂ ಬಂದಿಲ್ಲ, ಉದ್ಯೋಗ ಖಾತರಿ ಬಿಟ್ಟು, ರಚನಾತ್ಮಕ ಕಾರ್ಯಕ್ರಮಗಳೂ ಯಶಸ್ವಿಯಾಗಿಲ್ಲ.

ಗ್ರಾಮ ಭಾರತದ ಕೃಷಿಯ ಮುಕ್ಕಾಲು ಪಾಲು ಕೆಲಸ ಮಹಿಳೆಯರದ್ದೇ. ಆದರೆ ಸರಕಾರಿ ದಾಖಲೆಗಳು ಇನ್ನೂಪುರುಷ ಪ್ರಧಾನವಾಗಿವೆ. ಪಹಣಿ ಪತ್ರದಿಂದ ಹಿಡಿದು ಎಲ್ಲದರಲ್ಲೂ ಪುರುಷರ ಪ್ರಾಧಾನ್ಯತೆ ಇದೆ. ಮಹಿಳೆಯೇ ಕೃಷಿ ಕುಟುಂಬದ ಯಜಮಾನಿಯಾಗಿರುವ ಪ್ರಮಾಣ ಕರ್ನಾಟಕದಲ್ಲಿ ಶೇ. 14 ಇದೆ ಎಂದು ಎಲ್ಲೋ ಓದಿದ ನೆನಪು. ಇದಕ್ಕೆ ಆಯಾ ಕುಟುಂಬದ ಔದಾರ್ಯ ಕಾರಣ ಅಲ್ಲ. ಹಳೇ ಮೈಸೂರಿನಲ್ಲಿ ಗಂಡ ತೀರಿಕೊಂಡಾಗ ಮಕ್ಕಳು ಮೈನರ್ ಆಗಿದ್ದರೆ ಇತ್ಯಾದಿ ಕಾರಣಕ್ಕೆ ಆತನ ಪತ್ನಿಯ ಹೆಸರಲ್ಲಿ ಪಹಣಿ ದಾಖಲಾಗುತ್ತಿತ್ತು. ಪೌತಿ ಖಾತೆ ಎಂದು ಇದನ್ನು ಕರೆಯುವುದಿದೆ.

ಇದು ಬಿಟ್ಟರೆ ಸ್ವ ಇಚ್ಛೆಯಿಂದ ದ.ಕ.ದಂತಹ ಜಿಲ್ಲೆಯ ಕೆಲವು ಕಡೆ ಕೃಷಿ ಸಾಲಕ್ಕೆ ಜಾಮೀನು ಸುಲಭ ಆಗುತ್ತದೆ. ಸಾಲ ಜಾಸ್ತಿ ಸಿಗುತ್ತೆ ಅಂತ ಒಂದೋ ಎರಡೋ ಎಕರೆ ಮನೆಯಾಕೆಯ ಹೆಸರಿಗೆ ಮಾಡುವುದಿದೆ.ಜಮೀನು ಒಡೆತನದ ಔಪಚಾರಿಕ ದಾಖಲಾತಿಯ ಕತೆ ಇಷ್ಟು.

ಕೃಷಿಯಲ್ಲಿ ಮಹಿಳೆಯರ ದುಡಿಮೆ, ಪಾತ್ರವನ್ನು ಗುರುತಿಸುವ ಕೆಲಸವೇ ಆಗಿರಲಿಲ್ಲ. ಇನ್ನು ಆಕೆಯ ಸಾಮರ್ಥ್ಯ ವೃದ್ಧಿ, ಜ್ಞಾನದ ಆಳದ ಬಗ್ಗೆ ಗಮನ ಹರಿಯುವುದು ಹೇಗೆ ಸಾಧ್ಯ? ಜಗತ್ತಿನ ಯಾವ ಭಾಷೆಯಲ್ಲೂ ರೈತ ಎಂಬುದಕ್ಕೆ ಸ್ತ್ರೀಲಿಂಗ ಸಂವಾದೀ ಪದವೇ ಇಲ್ಲ. ರೈತ ಎಂಬ ಪದಕ್ಕೆ ಹಿಂದೆಯೋ ಮುಂದೆಯೋ ಮಹಿಳೆ ಅಂತ ಸೇರಿಸಬೇಕು! ಎಲ್ಲಾ ನಾಗರಿಕತೆಗಳೂ ಕೃಷಿಯನ್ನು ಪುರುಷ ಮುಷ್ಟಿಯ ವೃತ್ತಿ ಎಂದು ಪರಿಗಣಿಸಿದ್ದು ಸ್ಪಷ್ಟ.

ವೇತನದ ದೃಷ್ಟಿಯಿಂದ ಈಗಲೂ ಪುರುಷನಿಗೆ ಸಿಗುವ ಕೂಲಿಯ ಅರ್ಧ ಮಹಿಳೆಗೆ. ಆಕೆಗೆ ಮರ ಹತ್ತಲಾಗುತ್ತದೋ ಎಂಬಂತಹ ಕುಹಕದ ಪ್ರಶ್ನೆಗಳ ಮೂಲಕ ಇದನ್ನು ಸಮರ್ಥಿಸಲಾಗುತ್ತಿದೆ. ಉದ್ಯೋಗ ಖಾತರಿ ಯೋಜನೆಯೊಂದೇ ಮಹಿಳೆಗೆ ಪುರುಷನಷ್ಟೇ ವೇತನ ನೀಡುತ್ತಿದೆ.

ಗ್ರಾಮೀಣ ಜೀವನೋಪಾಯ ಸಂವರ್ಧನಾ ಅಭಿಯಾನ (ಸಂಜೀವಿನಿ)ವನ್ನು ಯುಪಿಎ ಸರಕಾರ ಆರಂಭಿಸಿದಾಗ ಅದರ ಹಿಂದೆ ಇದ್ದ ಒತ್ತಡ ಈ ಅಂತರವನ್ನು ಸರಿಪಡಿಸುವುದು. ಅದರ ಕೆಳಗೆ ಮಹಿಳಾ ಕಿಸಾನ್ ಸಶಕ್ತೀಕರಣ ಪರಿಯೋಜನಾ ಎಂಬ ಮಹತ್ವದ ಯೋಜನೆ ಆರಂಭಿಸಲಾಗಿತ್ತು. ಆಗಲೂ ಸಾಮಾಜಿಕವಾಗಿ, ಪಾರಂಪರಿಕವಾಗಿ ಮತ್ತು ಕಾನೂನಾತ್ಮಕವಾಗಿ ಉಳಿದಿರುವ ಪುರುಷಪ್ರಧಾನ ವ್ಯವಸ್ಥೆಯನ್ನು ಮೀರುವುದು ಹೇಗೆ? ಎಂಬ ಪ್ರಶ್ನೆ ಭೂತದಂತೆ ಎದುರಿಗೆ ಅಣಕಿಸುತ್ತಿತ್ತು. ಅಂದರೆ ಜಮೀನು ಯಾರ ಹೆಸರಲ್ಲಿದೆಯೋ ಅವನಿಗೇ ವ್ಯವಸ್ಥೆ ನೀಡುವ ಸಾಲ, ಸಹಾಯ ಧನ, ಎಲ್ಲವೂ ದೊರಕುತ್ತದೆ. ಮಹಿಳೆ ಇದನ್ನು ಪಡೆಯುವುದು ಹೇಗೆ?

ಈ ಯೋಜನೆಗೆ ಈ ತಡೆಗೋಡೆಯನ್ನು ಒಡೆಯುವುದು ಸಾಧ್ಯವಾಗಲಿಲ್ಲ. ಆದರೆ ಬೈಪಾಸ್ ಮಾಡುವ ಉಪಾಯ ಹುಡುಕಿತು. ಸ್ವಸಹಾಯ ಸಂಘಗಳ ವೇದಿಕೆಯ ಮೂಲಕ ತರಬೇತಿ, ಅಷ್ಟಿಷ್ಟು ವಸ್ತು ಸಹಾಯ ನೀಡುವುದು ಸಾಧ್ಯವಾಯಿತು.

ಈ ಮಹಿಳಾ ಸ್ವಸಹಾಯ ಸಂಘಗಳು ಈಗ ಬಹುತೇಕ ಎಷ್ಟು ಗಟ್ಟಿಯಾಗಿವೆಯೆಂದರೆ ಮುಕ್ಕಾಲು ಪಾಲು ಜಮೀನು ಒಡೆತನ ಇರುವ ಗಂಡಸರಿಗೆ ಹಂಗಾಮಿನಲ್ಲಿ ಬೇಕಾದ ಸಾಲ ಒದಗಿಸುವುದು ಆಯಾ ‘ಯಜಮಾನನ’ ಪತ್ನಿಯೇ. ನಾಲ್ಕಾರು ದಿನ ಬ್ಯಾಂಕಿಗೆ ಎಡತಾಕಿ ದಾಖಲೆಗಳ ಬೆಟ್ಟ ಒದಗಿಸಿ, ನಿರಾಕ್ಷೇಪಣಾ ಪತ್ರ ತರುವಲ್ಲಿಗೆ ದಿನ ಉರುಳಿರುತ್ತದೆ. ಮಳೆ ಬಂದ ಎರಡನೇ ದಿನಕ್ಕೆ ಉಳುಮೆಗೆ ಬೇಕಾದ ಟ್ರಾಕ್ಟರ್ ಬಾಡಿಗೆಗೆ ಹಣ ಒದಗಿಸುವುದು ಈ ಮನೆಯಾಕೆ. ತನ್ನ ಸ್ವಸಹಾಯ ಸಂಘದಿಂದ ಪಡೆದುಕೊಂಡ ಸಾಲದ ಮೂಲಕ.ಈ ವಾಸ್ತವ ಎಲ್ಲೂ ಪ್ರತಿಫಲನಗೊಳ್ಳುತ್ತಿಲ್ಲ.

ಬಹುತೇಕ ಮಹಿಳೆಯರು ರಾಸಾಯನಿಕ ಕೀಟನಾಶಕ ಬಳಸುವುದಕ್ಕೆ ವಿರುದ್ಧವಾಗಿದ್ದಾರೆ ಎಂಬುದನ್ನು ಹಲವಾರು ಅಧ್ಯಯನಗಳು ಒತ್ತಿ ಹೇಳಿವೆ. ಆದರೆ ಪುರುಷಪ್ರಧಾನ ಅಹಂ ಹೇಗಿದೆಯೆಂದರೆ ಈ ವಿಷಕಾರಿ ಬಳಕೆಯ ದುಡುಕು ಕೆಲಸ ಕೈಗೊಳ್ಳುವುದೇ ರೈತ ಪುರುಷ.

ನಾನೇ ಹತ್ತಿರದಿಂದ ಗಮನಿಸಿದ ಹಾಗೆ ಯಾವುದೇ ಕೃಷಿ ವಿವರಗಳನ್ನು ಮಹಿಳೆಯರಿಗೆ ಹೇಳಿದರೆ ಅವರು ತಕ್ಷಣ ಕಲಿತುಕೊಳ್ಳುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಪಾರಂಪರಿಕವಾಗಿ ಬಂದ ಬಹುಬೆಳೆ, ಆಹಾರ ಭದ್ರತೆಯ ಕೃಷಿ ಪದ್ಧತಿಗಳ ಜ್ಞಾನ ಅವರಲ್ಲಿ ಉಳಿದಿದೆ.

ಅಕ್ಟೋಬರ್ 15ರಂದು ಮಹಿಳಾ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತಿದೆ. ಅಸಲಿಗೆ ಸರಕಾರಕ್ಕೆ ಇದು ನೆನಪೇ ಇಲ್ಲ. ಜಾತಿ ಶ್ರೇಷ್ಠರ ದಿನಾಚರಣೆ ನೆನಪಿಟ್ಟು ರಜಾ ಘೋಷಿಸುವ ಸರಕಾರಕ್ಕೆ ಮಹಿಳೆಯ ಹಕ್ಕು ಮತ್ತು ಸಾಮರ್ಥ್ಯವನ್ನು ಜಾಗೃತಗೊಳಿಸುವ ಈ ದಿನ ಮುಖ್ಯವಾಗಬೇಕು ಎಂದು ಅನ್ನಿಸಿಲ್ಲ.

ರಾಷ್ಟ್ರಮಟ್ಟದಲ್ಲಿ ಮಹಿಳಾ ಕಿಸಾನ್ ಅಧಿಕಾರ ಮಂಚ್(ಮಕಾಮ್) ಎಂಬ ವೇದಿಕೆ ಕಳೆದ ಕೆಲವು ವರ್ಷಗಳಿಂದ ಸಕ್ರಿಯವಾಗಿ ಈ ನಿಟ್ಟಿನಲ್ಲಿ ಹೋರಾಡುತ್ತಾ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.

ನಮ್ಮಲ್ಲೇ ಈ ದಿನಾಚರಣೆಯ ಹಂಗಿಲ್ಲದೇ ವನಜಾ ರಾಮಪ್ರಸಾದ್ ತಮ್ಮ ಗ್ರೀನ್ ಫೌಂಡೇಶನ್ ಅಡಿಯಲ್ಲಿ ಮಹಿಳೆಯರ ಮೂಲಕ ದೇಸೀ ತಳಿ ಉಳಿಸಿ ಹೆಚ್ಚಿಸಿ ಹಂಚುವ ಕೆಲಸ ಶುರು ಮಾಡಿ ಎರಡು ದಶಕಗಳೇ ಕಳೆದಿವೆ.

ಇಂತಹ ಹಲವು ಸಂಸ್ಥೆಗಳು ಮಹಿಳೆಯರ ಒಕ್ಕೂಟ, ಸ್ವಸಹಾಯ ಸಂಘಗಳ ಮೂಲಕ ಒಂದಷ್ಟು ಮಾದರಿಗಳನ್ನು ಸೃಷ್ಟಿಸಿವೆ. ಆದರೆ ಇವು ಯಾವುದೂ ವ್ಯಾಪಕವಾಗುವಷ್ಟು ಪ್ರಭಾವಿಯಾಗಿಲ್ಲ.

ಸರಕಾರ ಇಂತಹ ಮಾದರಿಗಳನ್ನು ಇಟ್ಟುಕೊಂಡು ಆಸ್ತಿಯಲ್ಲಿ ಜಂಟಿ ಖಾತೆಯಂತಹ ಆಡಳಿತಾತ್ಮಕ ಸುಧಾರಣೆ ತರುವುದರೊಂದಿಗೆ ಕೃಷಿ, ಅದರಲ್ಲೂ ಜಾಗತಿಕವಾಗಿ ಸರಕಾರವೇ ಒಪ್ಪಿರುವ ಸುಸ್ಥಿರ ಅಭಿವೃದ್ಧಿಯ ಗುರಿಗಳ ಭಾಗವಾದ ಸುಸ್ಥಿರ ಕೃಷಿಯನ್ನು ಸಾಕಾರಗೊಳಿಸಲು ಮಹಿಳಾ ಕೇಂದ್ರಿತ ಯೋಜನೆಗಳನ್ನು ರೂಪಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಕೆ.ಪಿ. ಸುರೇಶ

contributor

Similar News