ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಹಿಡನ್ ಅಜೆಂಡಾ ಏನು?
ಈ ‘ಸನಾತನ ಭಾರತೀಯ ಜ್ಞಾನಸಂಪತ್ತು’ ಸನಾತನ ಭಾರತದಲ್ಲಿ ಯಾರ ಸಂಪತ್ತು ಆಗಿತ್ತು, ಅದು ಯಾರಿಗೆ ಲಭ್ಯವಿತ್ತು ಮತ್ತು ಅದರಿಂದ ಲಾಭ ಪಡೆಯುತ್ತಿದ್ದವರು ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ, ಹೊಸ ಶಿಕ್ಷಣ ನೀತಿಯ ಉದ್ದೇಶ ಮತ್ತು ಅದು ಸಾಧಿಸಬೇಕಾದ ಗುರಿಗಳ ಜಾಡಿನ ಅರಿವಾಗುತ್ತದೆ.
Photo: PTI
‘‘ನಮ್ಮ ನಾಡಿನ ಪ್ರಾಚೀನ ಪರಂಪರೆ ಹಾಗೂ ಸನಾತನವೆನಿಸಿದ ಭಾರತೀಯ ಜ್ಞಾನಸಂಪತ್ತು ಮತ್ತು ಚಿಂತನೆಶೀಲತೆ ಈ ಶಿಕ್ಷಣ ವ್ಯವಸ್ಥೆಯ ದಾರಿದೀಪವಾಗಿದೆ. ಜ್ಞಾನ, ವಿವೇಕ ಅಥವಾ ಪ್ರಜ್ಞೆ ಹಾಗೂ ಸತ್ಯ ಇವು ಭಾರತೀಯ ದಾರ್ಶನಿಕ ಚಿಂತನೆಯ ಅತ್ಯುನ್ನತ ಸಾಧನೆಯ ಗುರಿಗಳಾಗಿದ್ದವು. ಪ್ರಾಚೀನ ಭಾರತದಲ್ಲಿ ಶಿಕ್ಷಣದ ಗುರಿ ಪ್ರಪಂಚದಲ್ಲಿ ಬದುಕು ಸಾಗಿಸುವುದಕ್ಕಾಗಿ ಕೇವಲ ಜ್ಞಾನವನ್ನು ಸಂಪಾದನೆ ಮಾಡುವುದು ಮಾತ್ರವಾಗಿರಲಿಲ್ಲ ಅಥವಾ ಶಾಲೆಯಿಂದ ಆಚೆಯ ಬದುಕನ್ನು ಕಂಡುಕೊಳ್ಳುವ ಸಾಧನ ಮಾತ್ರವೇ ಆಗಿರಲಿಲ್ಲ; ಅವುಗಳಿಗಿಂತ ಮಿಗಿಲಾಗಿ ಆತ್ಮಸಾಕ್ಷಾತ್ಕಾರ ಹಾಗೂ ಆತ್ಮವಿಮೋಚನೆ ಶಿಕ್ಷಣದ ಗುರಿಯಾಗಿತ್ತು. (ಎನ್‌ಇಪಿ-2020 ಕನ್ನಡ ಆವೃತ್ತಿ ಪು.4)
ರಾಷ್ಟ್ರೀಯ ಹೊಸ ಶಿಕ್ಷಣ ನೀತಿ(2020)ಯ ಪ್ರಸ್ತಾವನೆ ಅಥವಾ ಪರಿಚಯದಿಂದ ಆಯ್ದ ಈ ಮೇಲಿನ ವಾಕ್ಯಗಳು, ಹೊಸ ಶಿಕ್ಷಣ ನೀತಿಯ ‘ಹಿಡನ್ ಅಜೆಂಡಾ’ದ ಸುಳಿವು ನೀಡುತ್ತವೆ. ಈ ‘ಸನಾತನ ಭಾರತೀಯ ಜ್ಞಾನಸಂಪತ್ತು’ ಸನಾತನ ಭಾರತದಲ್ಲಿ ಯಾರ ಸಂಪತ್ತು ಆಗಿತ್ತು, ಅದು ಯಾರಿಗೆ ಲಭ್ಯವಿತ್ತು ಮತ್ತು ಅದರಿಂದ ಲಾಭ ಪಡೆಯುತ್ತಿದ್ದವರು ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ, ಹೊಸ ಶಿಕ್ಷಣ ನೀತಿಯ ಉದ್ದೇಶ ಮತ್ತು ಅದು ಸಾಧಿಸಬೇಕಾದ ಗುರಿಗಳ ಜಾಡಿನ ಅರಿವಾಗುತ್ತದೆ. ಪ್ರಾಚೀನ ಅಥವಾ ಸನಾತನ ಭಾರತದಲ್ಲಿ ಶಿಕ್ಷಣವು ವರ್ಣಾಶ್ರಮದ ಮೊದಲ ಮೂರು ಜಾತಿಗಳಿಗೆ ಮಾತ್ರ ಸೀಮಿತವಾಗಿತ್ತು. ಆ ಶಿಕ್ಷಣ ವ್ಯವಸ್ಥೆಯ ಪಠ್ಯಕ್ರಮದಲ್ಲಿ ವೇದ ಮತ್ತು ಉಪನಿಷತ್ತುಗಳೇ ಪ್ರಮುಖ ಪಠ್ಯವಿಷಯಗಳಾಗಿದ್ದವು. ಗುರುಕುಲದಲ್ಲಿ ಪ್ರತಿಷ್ಠಾಪಿಸಲಾದ ಹಾಗೂ ಮನುಸ್ಮತಿ ಪ್ರೇರಿತವಾದ ಈ ಶಿಕ್ಷಣ ವ್ಯವಸ್ಥೆಯಡಿಯಲ್ಲಿ, ಶೂದ್ರರಿಗಾಗಲೀ, ಬುಡಕಟ್ಟು ಜನರಿಗಾಗಲೀ, ಮಹಿಳೆಯರಿಗಾಗಲೀ ಅವಕಾಶವಿರಲಿಲ್ಲ. ಆದ್ದರಿಂದ, ಮೇಲೆ ಉಲ್ಲೇಖಿಸಿದ ವಾಕ್ಯಗಳು ಎಂತಹ ಶಿಕ್ಷಣವನ್ನು ಪುನರ್ ಸ್ಥಾಪಿಸಲು ‘ರಾಷ್ಟ್ರೀಯ ಹೊಸ ಶಿಕ್ಷಣ ನೀತಿ’ (ಎನ್‌ಇಪಿ) ಕನಸು ಕಾಣುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
ಅನೇಕ ವೈವಿಧ್ಯತೆಗಳಿಂದ ಕೂಡಿದ ಭಾರತದಲ್ಲಿ ಏಕರೂಪ ಶಿಕ್ಷಣವನ್ನು ಹೇರಿಸುವ ಪ್ರಯತ್ನವು ಶಿಕ್ಷಣವನ್ನು ಕೇಸರೀಕರಣ ಹಾಗೂ ಬ್ರಾಹ್ಮಣೀಕರಣಗೊಳಿಸುವ ಅಜೆಂಡಾದಿಂದ ಕೂಡಿದೆ. ಎನ್‌ಇಪಿಯ ಪಠ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಆದಿವಾಸಿ) ಎಂಬ ಪದಗಳನ್ನು ವಿಶಾಲಾರ್ಥದಲ್ಲಿ ಬಳಸುವುದನ್ನು ಬಿಟ್ಟರೆ, ನಿಜವಾಗಿಯೂ ಈ ಸಮುದಾಯಗಳ ಶೈಕ್ಷಣಿಕ ಅಭಿವೃದ್ಧಿಗೆ ಯಾವುದೇ ರೀತಿಯ ರೂಪುರೇಷೆಗಳನ್ನು ನೀಡಿದ ಹಾಗೆ ಕಂಡುಬರುವುದಿಲ್ಲ. ಈ ಸಮುದಾಯಗಳ ಜನರ ವಿಶಿಷ್ಟವಾದ ಜೀವನ ಶೈಲಿ, ಅವರು ಬಳಸುವ ಭಾಷೆ, ಅವರ ಕುಲ-ಕಸುಬು, ಅವರ ಸಂಸ್ಕೃತಿ ಮುಂತಾದವುಗಳು ಎನ್‌ಇಪಿಯಲ್ಲಿ ಎಲ್ಲೂ ಬಿಂಬಿತವಾಗಿಲ್ಲ. ಅಂತೆಯೇ, ಶತಮಾನಗಳಿಂದ ತುಳಿಯಲ್ಪಟ್ಟ ಈ ಸಮುದಾಯಗಳ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾಗಿರುವ ಶೈಕ್ಷಣಿಕ ಯೋಜನೆಗಳೂ ಎನ್‌ಇಪಿಯಲ್ಲಿ ಕಾಣುವುದಿಲ್ಲ. ಭಾರತೀಯರ ಜನಜೀವನದ ವ್ಯೆವಿಧ್ಯತೆ, ಸಂಸ್ಕೃತಿಗಳ ಸಮಾಗಮ, ಜಾನಪದ ಸಂಪತ್ತು, ಭಾಷೆಗಳ ಸೊಗಡು, ಜಾತಿಪದ್ಧತಿ, ಮತ-ಧರ್ಮಗಳ ಅನ್ಯೋನ್ಯತೆ -ಇವು ಭಾರತೀಯ ಶೈಕ್ಷಣಿಕ ವ್ಯವಸ್ಥೆಯ ಅವಿಭಾಜ್ಯ ಅಂಗಗಳಾಗಬೇಕು. ಆದರೆ. ಎನ್‌ಇಪಿ ಇದನ್ನೆಲ್ಲಾ ಗಣನೆಗೆ ತೆಗೆದುಕೊಂಡಂತೆ ಕಂಡುಬರುವುದಿಲ್ಲ. ಅಸ್ಪಶ್ಯತೆ ಮತ್ತು ಜಾತಿ ಅಸಮಾನತೆಗಳನ್ನು ಪ್ರಜ್ಞಾಪೂರ್ವಕವಾಗಿ ಎನ್‌ಇಪಿಯಿಂದ ಹೊರಗಿಟ್ಟಂತೆ ಕಾಣುತ್ತದೆ. ಇಂತಹ ಶೈಕ್ಷಣಿಕ ವ್ಯವಸ್ಥೆಯ ಮುಖ್ಯ ಉದ್ದೇಶ ಮೇಲ್ವರ್ಗಗಳನ್ನು ಓಲೈಸಿ ಶೂದ್ರ, ದಲಿತ ಮತ್ತು ಆದಿವಾಸಿ ಸಮುದಾಯಗಳನ್ನು ಹೊರಗಿಟ್ಟು, ಸನಾತನ ಶೈಕ್ಷಣಿಕ ವ್ಯವಸ್ಥೆಯನ್ನು ವೈಭವೀಕರಿಸಿ, ಪುನಶ್ಚೇತನಗೊಳಿಸುವುದು ಎನ್ನಬಹುದೇ?
ಭಾರತವು ತನ್ನ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ದಲಿತ ಹಾಗೂ ಆದಿವಾಸಿ ಸಮುದಾಯಗಳ ಶೈಕ್ಷಣಿಕ ಪರಿಸ್ಥಿತಿಯ ಸರ್ವೇಕ್ಷಣೆಯ ಕಡೆಗೊಂದಿಷ್ಟು ಗಮನ ನೀಡಬೇಕಾಗಿದೆ. 2011ನೇ ಜನಗಣತಿಯ ಪ್ರಕಾರ ಆದಿವಾಸಿ ಸಾಕ್ಷರತೆ ಪ್ರಮಾಣವು ಶೇ. 59 ಆಗಿತ್ತು. 2010-11ರ ‘ಸ್ಟ್ಯಾಟಿಸ್ಟಿಕ್ಸ್ ಆನ್ ಸ್ಕೂಲ್ ಎಜ್ಯುಕೇಷನ್’ ಪ್ರಕಾರ ಆದಿವಾಸಿಗಳ ಒಂದನೇ ಮತ್ತು ಹತ್ತನೇ ತರಗತಿಗಳ ನಡುವಿನ ಮಕ್ಕಳಲ್ಲಿ, ಶೇ. 70.9ರಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಅಂಕಿ ಅಂಶಗಳು ಕಳೆದ ಹತ್ತು-ಹನ್ನೆರಡು ವರ್ಷಗಳಲ್ಲಿ ಕೊಂಚ ಮಟ್ಟಿಗೆ ಬದಲಾವಣೆಯಾಗಿರಬಹುದಾದರೂ, ಗಣನೀಯವಾಗಿ ಇಳಿಮುಖವಾಗಿರಲಾರದು. ಅದೇ ಜನಗಣತಿಯ ಅಂಕಿ-ಅಂಶಗಳ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯ ಶೇ. 8.6 ಪಾಲು ಆದಿವಾಸಿಗಳಾಗಿದ್ದಾರೆ. ಸುಮಾರು 574ಕ್ಕಿಂತ ಹೆಚ್ಚು ಬುಡಕಟ್ಟು ಪಂಗಡಗಳಿಂದ ಕೂಡಿದ ಈ ಸಮುದಾಯದಲ್ಲಿ ಪ್ರತಿಯೊಂದು ಬುಡಕಟ್ಟು ಸ್ವಂತ ಅಸ್ತಿತ್ವವನ್ನು ಹೊಂದಿದೆ. ತನ್ನದೇ ಆದ ಕುಲಕಸುಬನ್ನು ಅನುಸರಿಸುತ್ತದೆ. ಹಾಗೆಯೇ, ಪ್ರತಿಯೊಂದು ಪಂಗಡ ಬೇರೆ ಬೇರೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಮಟ್ಟದಲ್ಲಿದೆ.
ಶತಮಾನಗಳಿಂದ ಕಡೆಗಣಿಸಲ್ಪಟ್ಟ ಆದಿವಾಸಿ ಸಮುದಾಯಗಳು, ಎಲ್ಲಾ ಸೌಲಭ್ಯಗಳಿಂದ ವಂಚಿತವಾಗಿದ್ದು, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆಗಳಿಂದ ಬಹುದೂರ ಉಳಿದಿದ್ದಾರೆ. ಅವರ ವಾಸಸ್ಥಾನಗಳು ಬಹುತೇಕ ಅರಣ್ಯಗಳ ಅಂಚಿನಲ್ಲಿದ್ದು, ಆ ಭೌಗೋಳಿಕ ಪ್ರದೇಶದ ಪ್ರಭಾವ ಅವರ ಜೀವನ ಶೈಲಿ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಹಾಗೂ ಮಕ್ಕಳ ಶಿಕ್ಷಣದ ಮೇಲೆ ಕಂಡುಬರುತ್ತದೆ. ಮುಖ್ಯವಾಹಿನಿಯಲ್ಲಿ ಆಗುತ್ತಿರುವ ಬದಲಾಣೆಗಳ ಮತ್ತು ಅಭಿವೃದ್ಧಿಗಳ ಪರಿಣಾಮ ಆದಿವಾಸಿಗಳ ಬದುಕಿನ ಮೇಲೆ ನಕಾರಾತ್ಮಕವಾಗಿ ಬೀರಿ, ಅವರನ್ನು ಕಾಡುಗಳ ಅಂಚಿನಿಂದ ನಡುಕಾಡಿಗೆ ಅಟ್ಟುತ್ತಿದ್ದರೆ, ಆಧುನೀಕರಣ, ಔದ್ಯೋಗೀಕರಣ, ಮತ್ತು ಹೊಸ ಹೊಸ ಕೈಗಾರಿಕೆಗಳಿಂದಾಗಿ, ಅವರು ತಮ್ಮ ಜಮೀನುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ನಿರುದ್ಯೋಗ, ಶೋಷಣೆ, ದಾರಿದ್ರ್ಯಗಳ ಜೊತೆಗೆ ಮಕ್ಕಳ ಶಿಕ್ಷಣಕ್ಕೂ ತಿಲಾಂಜಲಿ ನೀಡಬೇಕಾಗುತ್ತದೆ. ಆದಿವಾಸಿ ಸಮುದಾಯಗಳ ಈ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳು ಎನ್‌ಇಪಿಯಲ್ಲಿ ಎಲ್ಲೂ ಬಿಂಬಿಸಿರುವುದು ಕಂಡುಬರುವುದಿಲ್ಲ.
‘‘ಸಾಧ್ಯವಾದಷ್ಟು ಮಟ್ಟಿಗೆ ಕಡೇ ಪಕ್ಷ ಐದನೇ ತರಗತಿಯವರೆಗೆ ಅಥವಾ ಅದಕ್ಕಿಂತಲೂ ಮುಂದೆ ಅಂದರೆ ಎಂಟನೇ ತರಗತಿಯವರೆಗೆ ಅಥವಾ ಅದಕ್ಕಿಂತಲೂ ಮುಂದೆ, ಶಿಕ್ಷಣದ ಮಾಧ್ಯಮ ಮನೆಭಾಷೆ/ಮಾತೃಭಾಷೆ/ಸ್ಥಳೀಯಭಾಷೆ/ಪ್ರಾದೇಶಿಕಭಾಷೆ ಆಗಿರಬೇಕು.’’ (4.11 ಪು.18)
ಪ್ರತಿಯೊಂದು ಬುಡಕಟ್ಟು ಸಮುದಾಯಕ್ಕೆ ತನ್ನದೇ ಆದಂತಹ ಭಾಷೆಯೊಂದಿದೆ. ಪ್ರತೀ ಸಮುದಾಯದ ಮಾತೃಭಾಷೆಯಲ್ಲಿ ಶಾಲೆಗಳನ್ನು ನಡೆಸಲು ಸಾಧ್ಯವಿಲ್ಲ. ಸ್ಥಳೀಯಭಾಷೆ ಅಥವಾ ಪ್ರಾದೇಶಿಕ ಭಾಷೆ ಮಗುವಿನ ಮಾತೃಭಾಷೆಯಾಗಿರದಿದ್ದರೆ, ಅದು ಇಂಗ್ಲಿಷ್‌ನಷ್ಟೇ ಪರಭಾಷೆಯಾಗುತ್ತದೆ. ಮನೆಭಾಷೆ/ಮಾತೃಭಾಷೆ/ಸ್ಥಳೀಯಭಾಷೆ/ಪ್ರಾದೇಶಿಕ ಭಾಷೆಯ ಮಾಧ್ಯಮವನ್ನು ಅಳವಡಿಸುವ ಜೊತೆ ಜೊತೆಯಲ್ಲೇ, ಎನ್‌ಇಪಿ ಸಂಸ್ಕೃತ ಭಾಷೆಗೆ, ಇತರ ಪ್ರಾಚೀನ ಭಾಷೆಗಳಿಗಿಂತ ಆದ್ಯತೆ ನೀಡುತ್ತದೆ. ಯಾಕೆ, ಭಾರತದಲ್ಲಿ ಸಂಸ್ಕೃತವೊಂದನ್ನು ಬಿಟ್ಟರೆ ಬೇರೆ ಪ್ರಾಚೀನ ಭಾಷೆಗಳೇ ಇಲ್ಲವೆ? ಇಂಗ್ಲಿಷ್ ಭಾಷೆಯನ್ನು ವಸಾಹತು ಸಂಸ್ಕೃತಿಯ ಪಳೆಯುಳಿಕೆ ಎಂಬುದಾಗಿ ಜರಿದು, ಬ್ರಾಹ್ಮಣಶಾಹಿ ಶೋಷಣೆಯ ಪಳೆಯುಳಿಕೆಯಾದ ಸಂಸ್ಕೃತವನ್ನು ಹಿಂಬದಿ ಬಾಗಿಲಿನಿಂದ ಒಳತರುವ ಹುನ್ನಾರ ಎನ್‌ಇಪಿಯಲ್ಲಿ ನಡೆಯುತ್ತಿದೆಯೇ? ವೈದಿಕ ಪರಂಪರೆಯಲ್ಲಿ, ಬ್ರಾಹ್ಮಣೇತರರನ್ನು, ವಿಶೇಷವಾಗಿ ಶೂದ್ರರನ್ನು, ವೇದ, ಉಪನಿಷತ್ತುಗಳ ಅಧ್ಯಯನದಿಂದ ದೂರವಿಟ್ಟು, ವ್ಯವಸಾಯ ಹಾಗೂ ತಮ್ಮ ತಮ್ಮ ಕುಲಕಸುಬುಗಳಿಗೆ ಅಂಟಿಕೊಳ್ಳುವಂತೆ ಮಾಡಿದ್ದು ಇದೇ ಸಂಸ್ಕೃತ ಭಾಷೆ ಎಂಬುವುದನ್ನು ಮರೆಯಬಾರದು.
ದಲಿತರ ಮತ್ತು ಆದಿವಾಸಿಗಳ ಮಕ್ಕಳಿಗೆ ಮಾತ್ರ ಮನೆಭಾಷೆ, ಮಾತೃಭಾಷೆ, ಸ್ಥಳೀಯಭಾಷೆ, ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡುವ ಅನಿವಾರ್ಯತೆಯನ್ನು ಎನ್‌ಇಪಿಯು ಎತ್ತಿಹಿಡಿದರೆ, ನಗರ ಮತ್ತು ಅರೆನಗರಗಳಲ್ಲಿ ಮನೆಮಾಡಿಕೊಂಡಿರುವ ಬ್ರಾಹ್ಮಣರ ಮತ್ತು ಮೇಲ್ಜಾತಿಯ ಮಕ್ಕಳಿಗೆ ಮಾತ್ರ ಇಂಗ್ಲಿಷ್ ಶಿಕ್ಷಣದ ಅನುಕೂಲತೆಯನ್ನು ಅಲ್ಲಗಳೆಯುವುದಿಲ್ಲ. ಈ ಧೋರಣೆಯ ಅರ್ಥವೇನೆಂದರೆ ಪ್ರಾದೇಶಿಕ ಭಾಷೆಯಲ್ಲಿ ಕಲಿತ ಮಕ್ಕಳು ತಮ್ಮ ತಂದೆ-ತಾಯಿಯಂದಿರ, ಪೋಷಕರ, ಮನೆತನದ ವೃತ್ತಿಯನ್ನು ಹಿಡಿದು, ಹಳ್ಳಿಗಳಲ್ಲೇ ಉಳಿದುಕೊಳ್ಳಲಿ; ಇಂಗ್ಲಿಷ್ ಶಿಕ್ಷಣ ದೊರೆತ ಮೇಲ್ಜಾತಿಯ ಮಕ್ಕಳು ‘ಶ್ವೇತಕೊರಳ ಪಟ್ಟಿಯ’ ನೌಕರಿ ಹಿಡಿದು ದೇಶವನ್ನು ಆಳಲಿ ಅಥವಾ ಪರದೇಶಗಳಿಗೆ ಹಾರಿಹೋಗಲಿ ಎಂಬುದಲ್ಲವೇ? ಜಾಗತೀಕರಣಗೊಂಡ ಇಂಗ್ಲಿಷ್ ಶಿಕ್ಷಣ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಗತಿಶೀಲತೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ, ನೌಕರಿ ಮತ್ತು ಆರ್ಥಿಕ ಸ್ಥಿರತೆಗೆ ಅನುಕೂಲತೆಯನ್ನು ಕಲ್ಪಿಸುತ್ತದೆ ಎಂಬ ಸತ್ಯಕ್ಕೆ ಎನ್‌ಇಪಿಯು ಕುರುಡಾದಂತೆ ಕಾಣುತ್ತದೆ ಅಥವಾ ಆ ಅವಕಾಶಗಳನ್ನು ಉದ್ದೇಶವೂರ್ವಕವಾಗಿ ಕೆಳಸ್ತರಗಳಿಗೆ ನಿರಾಕರಿಸಲಾಗಿದೆಯೇ?
‘‘ಭಾರತೀಯ ಶಿಕ್ಷಣ ವ್ಯವಸ್ಥೆ, ಚರಕ, ಸುಶ್ರುತ, ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ, ಬೃಹ್ಮಗುಪ್ತ, ಚಾಣಕ್ಯ, ಚಕ್ರಪಾಣಿದತ್ತ, ಮಾಧವ, ಪಾಣಿನಿ, ಪತಂಜಲಿ, ನಾಗಾರ್ಜುನ, ಗೌತಮ, ಪಿಂಗಳ, ಶಂಕರದೇವ, ಮೈತ್ರೇಯಿ, ಗಾರ್ಗಿ, ತಿರುವಳ್ಳವರ್ ಇಂಥ ಅಸಂಖ್ಯಾತ ಮೇಧಾವಿ ವಿದ್ವಾಂಸರಿಗೆ ತವರೂರೆನಿಸಿತ್ತು.’’ (ಪು.4)
ಎನ್‌ಇಪಿಯ ಈ ಭಾಗದಲ್ಲಿ ಉಲ್ಲೇಖವಾದಂತಹ ಬಹುತೇಕ ಹೆಸರುಗಳು ಬ್ರಾಹ್ಮಣ ಮೇಧಾವಿ ವಿದ್ವಾಂಸರ ಹೆಸರುಗಳಾಗಿವೆ. ಭಾರತದಲ್ಲಿ, ಇವರನ್ನು ಬಿಟ್ಟರೆ, ಅನ್ಯ ಧರ್ಮದ ಅಥವಾ ಜಾತಿಯ ವಿದ್ವಾಂಸರ ಹೆಸರುಗಳು ಎನ್‌ಇಪಿ ಕರ್ತೃಗಳಿಗೆ ಸಿಗಲಿಲ್ಲವೆ?. ದಲಿತರ ಮತ್ತು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಫೂರ್ತಿ ಮತ್ತು ಪ್ರೋತ್ಸಾಹ ಕೊಟ್ಟ ಸಾವಿತ್ರಿಬಾಯಿ ಫುಲೆ, ಜೋತಿರಾವ್ ಫುಲೆ, ಪೆರಿಯಾರ್, ಡಾ. ಅಂಬೇಡ್ಕರ್, ಮೊದಲಾದ ಇನ್ನೆಷ್ಟೋ ಮೇಧಾವಿ ವಿದ್ವಾಂಸರ ಹೆಸರುಗಳು ಎನ್‌ಇಪಿಯಲ್ಲಿ ಉಲ್ಲೇಖವಾಗಿಲ್ಲದಿರುವುದಕ್ಕೆ ಬಲವಾದ ಕಾರಣಗಳಿರಬಹುದೇ?
ರಾಷ್ಟ್ರೀಯ ಶಿಕ್ಷಣ ಹೊಸ ನೀತಿಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿದರೆ, ಗುಪ್ತ ಪಠ್ಯಕ್ರಮವೊಂದನ್ನು ಎನ್‌ಇಪಿಯ ಮೂಲಕ ಕಾರ್ಯರೂಪಕ್ಕೆ ತರಲು ಮಾಡಿದಂತಹ ಗೌಪ್ಯವಾದ ಯೋಜನೆಯ ಪರಿಚಯವಾಗುತ್ತದೆ. ಕಳೆದ ಒಂದು ದಶಕದಿಂದೀಚೆಗೆ, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಹಾಗೂ ಪಠ್ಯಪುಸ್ತಕಗಳಲ್ಲಿ ಎನ್‌ಸಿಇಆರ್‌ಟಿಯು ಮಾಡಿದಂತಹ ಅವಾಂತರಗಳು ಮತ್ತು ಎನ್‌ಇಪಿಯಲ್ಲಿ ಕಂಡುಬರುವ ವ್ಯಾಪಕವಾದ ಸನಾತನದ ವ್ಯಾಮೋಹ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಮತ್ತೆ ಬ್ರಾಹ್ಮಣೀಕರಿಸುವ ಹುನ್ನಾರವೆಂಬುದು ಬಯಲಾಗುತ್ತದೆ. ಭಾರತೀಯ ಸಂವಿಧಾನದತ್ತವಾದ ಸಬಲೀಕರಣದ ವ್ಯವಸ್ಥಿತ ಕಾರ್ಯಾಚರಣೆಯಲ್ಲಿ ಮನುಸ್ಮತಿಯ ವ್ಯವಸ್ಥೆ ಅಸ್ತಂಗತವಾಗುತ್ತಾ ಇದೆ. ಆದರೂ ಎನ್‌ಇಪಿಯ ಮೂಲಕ ಸಂವಿಧಾನದ ಆಶೋತ್ತರಗಳನ್ನು ಹಿನ್ನೆಲೆಗೆ ಸರಿಸಿ ಬ್ರಾಹ್ಮಣ್ಯ ಪ್ರಾಬಲ್ಯದ ಶಿಕ್ಷಣ ವ್ಯವಸ್ಥೆಯನ್ನು ಪ್ರತಿಷ್ಠಾಪಿಸುವ ಮಹದಭಿಲಾಷೆಯ ಯೋಜನೆಯೊಂದು ಜಾರಿಯಾಗಿದೆ. ನವೆಂಬರ್ 12ನೇ 2023ರ ‘ದ ಪ್ರಿಂಟ್’ ಪತ್ರಿಕೆಯ ಪ್ರಕಾರ, ಒಟ್ಟು 89 ಕೇಂದ್ರ ಸರಕಾರದ ಸಚಿವಾಲಯಗಳ ಕಾರ್ಯಾಲಯಗಳಲ್ಲಿ ಕೇವಲ ಮೂರು ಆದಿವಾಸಿ ಮತ್ತು ಒಂದು ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ಸೇವೆಸಲ್ಲಿಸುತ್ತಿದ್ದರೆ, ಒಬಿಸಿ ಸಮುದಾಯದಿಂದ ಒಬ್ಬರೂ ಸೇವೆಯಲ್ಲಿಲ್ಲ. ಈ ಗಂಭೀರವಾದ ಪರಿಸ್ಥಿತಿಯು ಭಾರತೀಯ ಶಿಕ್ಷಣ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಆದ್ದರಿಂದ ಆದಿವಾಸಿ, ಒಬಿಸಿ ಮತ್ತು ದಲಿತ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳು, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ತಮ್ಮ ಸಾಂವಿಧಾನಿಕ ಹಕ್ಕನ್ನು ಉಪಯೋಗಿಸಿ, ಸಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪಣತೊಡಬೇಕಾಗಿದೆ.