ಬ್ರ್ಯಾಂಡ್ ಬೆಂಗಳೂರಿನ ಕೊಳೆಗೇರಿಯಲ್ಲಿ ಮಹಿಳೆಯರ ನರಕಯಾತನೆ
ಬೆಂಗಳೂರು : ಬೆಂಗಳೂರಿನ ಜಕ್ಕೂರು ಸಮೀಪವಿರುವ ಬೆಳ್ಳಳ್ಳಿ ಕ್ರಾಸ್‌ನಲ್ಲಿ ವಾಸಿಸುವ ಕೊಳೆಗೇರಿಯಲ್ಲಿ ಸರಿಯಾಗಿ ಶೌಚಾಲಯದ ವ್ಯವಸ್ಥೆಯಿಲ್ಲದೇ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಬಯಲು ಕಡೆಗೆ ಹೋಗಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳದಲ್ಲಿರುವ ಕೆಲವು ಮಂದಿ ಹೆಣ್ಣು ಮಕ್ಕಳ ಹಾಗೂ ಮಹಿಳೆಯರ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಾರೆ ಎಂದು ಇಲ್ಲಿನ ಮಹಿಳೆಯೊಬ್ಬರು ನೋವು ತೋಡಿಕೊಂಡಿದ್ದಾರೆ.
ಸರಕಾರಿ ಶಾಲೆಯಿಲ್ಲ: ಬೆಂಗಳೂರಿನ ಕೊಳೆಗೇರಿ ಪ್ರದೇಶದಲ್ಲಿ ಸುಮಾರು ಶೇ.78ರಷ್ಟು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಪ್ರದೇಶದ ಆಸುಪಾಸಿನಲ್ಲಿ ಯಾವುದೇ ಸರಕಾರಿ ಶಾಲೆಗಳು ಇಲ್ಲವಾಗಿರುವುದರಿಂದ ಪೋಷಕರು ತನ್ನ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗುವುದಿಲ್ಲ. 1ನೇ ತರಗತಿಯಿಂದ 7ನೇ ತರಗತಿವರೆಗಿನ ಸುಮಾರು 20ಕ್ಕೂ ಅಧಿಕ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮನೆಯಲ್ಲಿ ವಿದ್ಯುತ್ ಸಂಪರ್ಕ ಕೂಡ ಇಲ್ಲದೇ ಕೆಲವು ವಿದ್ಯಾರ್ಥಿಗಳು ಎಲ್ಲೆಡೆ ಬೆಳಕು ಹುಡುಕಿಕೊಂಡು ರಾತ್ರಿ ಸಮಯದಲ್ಲೂ ಹೊರಗಡೆಯೇ ಇರುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.
ನೀರಿಗಾಗಿ ಪರದಾಟ: ಬೆಂಗಳೂರಿನ ಫಕೀರ ಕಾಲನಿಯಲ್ಲಿ ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಬಾಣಂತಿಯರು, ಶುದ್ಧ ನೀರು ಸಿಗದೇ ಮಾಲಿನ್ಯಯುಕ್ತ ನೀರು ಕುಡಿದು ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಕ್ಯಾನ್ಸರ್, ಸ್ಟ್ರೋಕ್‌ನಂತಹ ಮಾರಣಾಂತಿಕ ರೋಗದಿಂದಾಗಿ ಇತ್ತೀಚೆಗೆ ಇಬ್ಬರು ಮಹಿಳೆ, ಓರ್ವ ಹೆಣ್ಣು ಮಗು ಮೃತಪಟ್ಟಿದ್ದಾರೆ. ರಾಜಧಾನಿಯ ಕೊಳೆಗೇರಿಯಲ್ಲಿ ವಾಸಿಸುವ ಕೆಲವು ಹೆಣ್ಣು ಮಕ್ಕಳು ಚರ್ಮ ರೋಗಗಳಿಂದ ಬಳಲುತ್ತಿದ್ದಾರೆ. ಇಲ್ಲಿನ ನಿವಾಸಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡ ಸಮೀಪದಲ್ಲಿಲ್ಲ. ರಾಜ್ಯ ಸರಕಾರದ ಆರೋಗ್ಯ ಕಲ್ಯಾಣ ಇಲಾಖೆ ಈ ಸಾವುಗಳ ಬಗ್ಗೆ ಕಣ್ಣು ಮುಚ್ಚಿ ಕೂತಿದೆ ಎನ್ನುತ್ತಾರೆ ಕಾಲನಿಯ ನಿವಾಸಿಗಳು.
ಸೋಮವಾರ ಬಂದರೆ ಬಡ್ಡಿ ಚಿಂತೆ!:
ಮಹಿಳೆಯರ ಜೀವ ಹಿಂಡುತ್ತಿರುವ ಬಡ್ಡಿ ಸಾಲಗಳ ತಲೆನೋವು ಇಲ್ಲಿನ ಕಾಲನಿಗಳಿಗೂ ಹಬ್ಬಿದೆ. ‘ದಿನಗೂಲಿಯಾಗಿ 200ರಿಂದ 300ರೂ.ಗಳನ್ನು ಗಳಿಸಿದರೆ, ಪ್ರಸ್ತುತ ದಿನಗಳಲ್ಲಿ ಆ ಹಣ ಸಾಕಾಗದೇ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲವನ್ನು ಪಡೆದು, ವಾರದ ಪ್ರತೀ ಸೋಮವಾರ ಬಡ್ಡಿ ವಸೂಲಿದಾರರಿಂದ ಕಿರುಕುಳ ಅನುಭವಿಸಬೇಕಾಗಿದೆ
ಎಂದು ಫಕೀರ ಕಾಲನಿಯಲ್ಲಿ ವಾಸಿಸುವ ವಿಧವೆಯೊಬ್ಬರು ಹೇಳುತ್ತಾರೆ.
ಹೆಚ್ಚಿದ ಅತ್ಯಾಚಾರ ಪ್ರಕರಣಗಳು:
ಹಿಂದಿನ ಐದು ವರ್ಷಗಳಲ್ಲಿ ನಗರದಲ್ಲಿ 714 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಇತ್ತೀಚೆಗೆ ವಿಧಾನಸಭೆಯಲ್ಲಿ ಮಂಡಿಸಲಾದ ಮಾಹಿತಿಯ ಪ್ರಕಾರ, 2020ರಲ್ಲಿ, 110 ಪ್ರಕರಣಗಳು ದಾಖಲಾಗಿದ್ದು, 2021ರಲ್ಲಿ ಸರಿಸುಮಾರು ಶೇ.5.5ರಷ್ಟು ಏರಿಕೆಯಾಗಿ 116 ಪ್ರಕರಣಗಳಿಗೆ ತಲುಪಿದೆ. 2022ರಲ್ಲಿ 151 ಪ್ರಕರಣಗಳಾಗಿವೆ, 2021ಕ್ಕೆ ಹೋಲಿಸಿದರೆ ಶೇ.30.2ರಷ್ಟು ಹೆಚ್ಚಳವಾಗಿದೆ. 2023ರಲ್ಲಿ 172 ಪ್ರಕರಣಗಳು ವರದಿಯಾಗಿವೆ,
ಇದು ಹಿಂದಿನ ವರ್ಷಕ್ಕಿಂತ ಶೇ.13.9ರಷ್ಟು ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ. 2024ರಲ್ಲಿ, ನವೆಂಬರ್ ಅಂತ್ಯದವರೆಗೆ, 165 ಪ್ರಕರಣಗಳು ವರದಿಯಾಗಿವೆ. ಮತ್ತೊಂದೆಡೆ, 5 ವರ್ಷಗಳಲ್ಲಿ ರಾಜ್ಯದಲ್ಲಿ 2,803 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
ಅಂತ್ಯಸಂಸ್ಕಾರಕ್ಕೆ ತಡೆ :
2024ರ ಸೆ.31ರಂದು ಜಾಂಡೀಸ್ ಕಾಯಿಲೆಗೆ ಚಿಕಿತ್ಸೆ ಪಡೆಯಲು ಬಡ್ಡಿ ಸಾಲ ಪಡೆದಿದ್ದ ಫಕೀರ ಕಾಲನಿಯ ಮಹಿಳೆಯೊಬ್ಬರು ಸರಿಯಾದ ಚಿಕಿತ್ಸೆಯೂ ಸಿಗದೇ, ಚಿಕಿತ್ಸೆಗಾಗಿ ಪಡೆದ ಸಾಲದ ಹೊರೆಯೂ ಹೆಚ್ಚಾಗಿ ಮೃತಪಟ್ಟರು. ಬಡ್ಡಿ ಸಾಲ ತೀರುವವರೆಗೂ ಆ ಮಹಿಳೆಯ ಅಂತ್ಯಸಂಸ್ಕಾರ ನಡೆಸದಂತೆ ತಡೆ ಹಿಡಿಯಲಾಗಿತ್ತು, ಕೊನೆಗೆ ಆಕೆ ವಾಸ ಮಾಡುತ್ತಿದ್ದ ಗುಡಿಸಲನ್ನೇ ಬಡ್ಡಿ ವಸೂಲಿದಾರರಿಗೆ ನೀಡಿ ಆ ಬಳಿಕ ಅಂತ್ಯಸಂಸ್ಕಾರ ಮಾಡಬೇಕಾದ ದುಸ್ಥಿತಿ ಒದಗಿಬಂದಿತ್ತು ಎಂದು ಸ್ಥಳೀಯ ನಿವಾಸಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.