×
Ad

ಎನ್‌ಎಸ್‌ಡಿ ವಿದ್ಯಾರ್ಥಿಗಳಿಂದ ಕನ್ನಡದಲ್ಲೇ ಯಕ್ಷಗಾನ

Update: 2025-06-09 11:37 IST

ಉಡುಪಿ: ಕರಾವಳಿ ಕರ್ನಾಟಕದ ಸುಪ್ರಸಿದ್ಧ ಜನಪದ ಕಲೆಯಾದ ಯಕ್ಷಗಾನ, ಡಾ.ಶಿವರಾಮ ಕಾರಂತರ ‘ಯಕ್ಷಗಾನ ಬ್ಯಾಲೆ’ ಮೂಲಕ ಸೀಮೋಲ್ಲಂಘನೆ ಮಾಡಿ ಕನ್ನಡದ ಕಂಪನ್ನು ಕುಣಿತ ಹಾಗೂ ಮಾತುಗಾರಿಕೆಯ ಮೂಲಕ ಇಂದು ವಿಶ್ವಾದ್ಯಂತ ಪಸರಿಸಿದೆ. ಇದೀಗ ಕನ್ನಡವನ್ನೇ ಅರಿಯದ ಹೊಸದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆ(ಎನ್‌ಎಸ್‌ಡಿ)ಯ ವಿದ್ಯಾರ್ಥಿಗಳು ಕನ್ನಡವನ್ನು ತಿಂಗಳೊಪ್ಪಿ ನಲ್ಲಿ ಕಲಿತು ಕನ್ನಡ ಸಂಭಾಷಣೆಯ ಮೂಲಕವೇ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧವಾಗುತ್ತಿದ್ದಾರೆ.

ಸಾಂಪ್ರದಾಯಿಕ ರೀತಿಯಲ್ಲಿ ಯಕ್ಷಗಾನವನ್ನು ಕಲಿಸುವುದಕ್ಕೆ ಖ್ಯಾತಿ ಪಡೆದಿರುವ, ಕಳೆದ ವರ್ಷ ಕರ್ನಾಟಕ ಯಕ್ಷಗಾನ ಅಕಾಡಮಿ ಯಿಂದ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಭಾಜನರಾದ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಅವರು ಉತ್ತರ ಭಾರತದ 30 ವಿದ್ಯಾರ್ಥಿಗಳಿಗೆ ಯಕ್ಷಗಾನ ಕುಣಿತದ ‘ಎ, ಬಿ, ಸಿ, ಡಿ’ ಕಲಿಸುವ ಜೊತೆಗೆ ಕನ್ನಡದ ‘ಅ, ಆ, ಇ, ಈ’ಯನ್ನೂ ಕಲಿಸುತ್ತಿದ್ದಾರೆ.

ಈ ಕಲಿಕೆ ಕಳೆದ ತಿಂಗಳು ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ತಿಂಗಳೆ ಎಂಬ ಪುಟ್ಟ ಊರಿನ ಗರಡಿಯೊಂದರಲ್ಲಿ ಪ್ರಾರಂಭಗೊಂಡು ಇದೀಗ ಬೆಂಗಳೂರಿನ ಜ್ಞಾನಭಾರತಿ ಆವರಣದ ಕಲಾ ಗ್ರಾಮದಲ್ಲಿರುವ ಎನ್‌ಎಸ್‌ಡಿ ಬೆಂಗಳೂರಿನ ದಕ್ಷಿಣ ಕೇಂದ್ರದಲ್ಲಿ ಮುಂದುವರಿದಿದೆ. ತಿಂಗಳೆಯಲ್ಲಿ 10 ದಿನಗಳ ಕಾಲ ಯಕ್ಷಗಾನ ಕುಣಿತ, ವಿವಿಧ ಬಗೆಯ ನೃತ್ಯ, ಭಾವಾಭಿನಯ, ಆಂಗಿಕ ಅಭಿನಯ, ಮುಖಭಾವ ಪ್ರದರ್ಶನ ಕಲಿಕೆಗೆ ಒತ್ತು ನೀಡಿದ್ದರೆ, ಇದೀಗ ಬೆಂಗಳೂರಿನಲ್ಲಿ ಸುಮಾರು 20 ದಿನಗಳ ಕಾಲ ಯಕ್ಷಗಾನ ಕುಣಿತ, ಭಾವಾಭಿನಯದೊಂದಿಗೆ ಕನ್ನಡದಲ್ಲಿ ಸಂಭಾಷಣೆಯನ್ನು ಕಲಿಸಲಾಗುತ್ತಿದೆ. ಪ್ರದರ್ಶನದ ಪ್ರಸಂಗವನ್ನು ಆಯ್ಕೆ ಮಾಡಿ ಅದನ್ನೂ ಕಲಿಸಲಾಗುತ್ತಿದೆ.

ಹೊಸದಿಲ್ಲಿಯ ಎನ್‌ಎಸ್‌ಡಿಯ ಎರಡನೇ ವರ್ಷದ ಈ ತಂಡ ಸಾಂಪ್ರದಾಯಿಕ ಯಕ್ಷಗಾನವನ್ನು ಕಲಿತು, ಕನ್ನಡದಲ್ಲೇ ಅದನ್ನು ಪ್ರದರ್ಶಿಸಲಿದೆ. ಇದಕ್ಕೆ ಮುಖ್ಯ ಕಾರಣ ಈ ತಂಡ

ಫ್ರಾನ್ಸ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಅಂತರ್‌ರಾಷ್ಟ್ರೀಯ ಕಲಾಮೇಳದಲ್ಲಿ ಪ್ರದರ್ಶನ ನೀಡಲಿರುವುದು. ಇದರಲ್ಲಿ ವಿಶ್ವದ ಜನಪದ ಕಲಾ ಪ್ರಕಾರವನ್ನು ಅದರ ಮೂಲ ಸ್ವರೂಪದಲ್ಲಿ ಪ್ರದರ್ಶಿಸಬೇಕಾಗಿದೆ. ಹೀಗಾಗಿ ಕನ್ನಡದ ಒಬ್ಬನೇ ಒಬ್ಬ ಸದಸ್ಯನಿಲ್ಲದ ಈ ತಂಡ ಕನ್ನಡದಲ್ಲೇ ಯಕ್ಷಗಾನ ಪ್ರದರ್ಶನಕ್ಕೆ ದೃಢ ಸಂಕಲ್ಪ ಮಾಡಿದೆ.

19 ಯುವಕ ಹಾಗೂ 11 ಯುವತಿಯರನ್ನೊಳಗೊಂಡ ಈ ವಿದ್ಯಾರ್ಥಿ ತಂಡ ಬೆಳಗ್ಗೆ 6:30ರಿಂದ ಸಂಜೆ 6ರವರೆಗೆ ತರಬೇತಿ ನಿರತವಾಗಿರುತ್ತದೆ. ತಂಡಕ್ಕೆ ನಡುವೆ ಒಂದೆರಡು ಗಂಟೆಯ ವಿಶ್ರಾಂತಿಯಷ್ಟೇ ಪ್ರತಿದಿನ ನೀಡಲಾಗುತ್ತಿದೆ.

ಎನ್‌ಎಸ್‌ಡಿಯ ಈ ತಂಡ ಅಂತರ್‌ರಾಷ್ಟ್ರೀಯ ಕಲಾ ಮೇಳದಲ್ಲಿ ಪ್ರದರ್ಶನ ನೀಡಲಿರುವುದರಿಂದ ಸಾಂಪ್ರದಾಯಿಕ ಯಕ್ಷಗಾನ ಇಲ್ಲಿ ಪ್ರದರ್ಶನಗೊಳ್ಳ ಬೇಕಿದೆ. ಇದರಿಂದ ಪೂರ್ವರಂಗದ ಬಾಲಗೋಪಾಲ, ಕೊಡಂಗಿ, ಸ್ತ್ರೀವೇಷದ ಕುಣಿತವನ್ನೂ ಪ್ರದರ್ಶಿಸಬೇಕಿದೆ. ಅಲ್ಲದೇ ಕರಾವಳಿಯಲ್ಲಿ ಇಂದು ಹೆಚ್ಚಾಗಿ ಕಾಣಲು ಸಿಗದ ವಡ್ಡೋಲಗ, ಯುದ್ಧ ನೃತ್ಯ, ಬೇಟೆ ನೃತ್ಯವನ್ನೂ ತೋರಿಸಬೇಕಿದೆ ಎಂದು ಯಕ್ಷಗುರು ಸಂಜೀವ ಸುವರ್ಣ ತಿಳಿಸಿದರು.

ಇಷ್ಟೆಲ್ಲಾ ಪ್ರದರ್ಶಿಸಿ ನಾವು ಯಕ್ಷಗಾನವನ್ನು ಒಂದೂವರೆ ಗಂಟೆಗೆ ಸೀಮಿತಗೊಳಿಸಬೇಕಾದ ಸವಾಲು ನಮ್ಮ ಮುಂದಿದೆ. ಯಕ್ಷಗಾನದ ಬಗ್ಗೆ ತಿಳಿದವರಿಗೆ ಇದು ಎಷ್ಟು ಕಷ್ಟದ ಕೆಲಸ ಎಂಬುದು ಗೊತ್ತಿದೆ. ಹೀಗಾಗಿ ನಾವು ಕುಣಿತಕ್ಕೆ ಹೆಚ್ಚು ಪ್ರಾಧಾನ್ಯತೆ ಇದ್ದು, ಕಡಿಮೆ ಸಂಭಾಷಣೆ ಇರುವ ಹೊಸ್ತೋಟು ಮಂಜುನಾಥ ಭಾಗವತರ ‘ಗುರುದಕ್ಷಿಣೆ’ (ಏಕಲವ್ಯ) ಪ್ರಸಂಗವನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿದ್ದೇವೆ ಎಂದೂ ಅವರು ಹೇಳಿದರು.

ಒಂದು ಕಾಲದಲ್ಲಿ ಶಿವರಾಮ ಕಾರಂತರಿಗೆ ಕಾದಂಬರಿ ರಚನೆಗೆ ಪ್ರೇರಣೆ ನೀಡಿದ್ದ ಮಲೆನಾಡಿನ ತಪ್ಪಲು ತಿಂಗಳೆ ಗ್ರಾಮ, ಕಾರಂತರೇ ಹೊಸ ಚೈತನ್ಯ ನೀಡಿದ ಯಕ್ಷಗಾನ ಕಲೆಯ ಕಲಿಕೆಗೂ ವೇದಿಕೆಯಾಗಿದ್ದು, ಮೇ 20ರಿಂದ 10 ದಿನ ಸಂಜೀವ ಸುವರ್ಣರು 30 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಬಳಿಕ ತರಬೇತಿ ಬೆಂಗಳೂರಿಗೆ ವರ್ಗಾವಣೆಗೊಂಡ ತರಬೇತಿ ಇದೀಗ ಕಲಾಗ್ರಾಮದಲ್ಲಿ ಸತತವಾಗಿ ಮುಂದುವರಿದಿದೆ.

ಒಂದು ಜನಪದ ಕಲೆಯಾಗಿ ಯಕ್ಷಗಾನ ಹಾಗೂ ಈ ಕಲೆ ಒಳಕೊಂಡಿರುವ ಶಾಸ್ತ್ರೀಯ ಅಂಶಗಳನ್ನು ಕಲಿತು ವಿದ್ಯಾರ್ಥಿಗಳು ರೋಮಾಂಚನಗೊಂಡಿದ್ದಾರೆ. ತಮ್ಮ ರಂಗ ಶಿಕ್ಷಣದ ಮಹತ್ವದ ಮೈಲಿಗಲ್ಲು ಈ ಕಲಿಕೆ ಎಂದು ಅರಿತು ಕಲಿಕೆಯಲ್ಲಿ ಮಗ್ನರಾಗಿದ್ದಾರೆ. ಸಂಗೀತ, ನೃತ್ಯ, ವೇಷಭೂಷಣ ಹೀಗೆ ಯಕ್ಷಗಾನದ ಸಮಗ್ರತೆಗೆ ವಿದ್ಯಾರ್ಥಿಗಳು ಮಾರುಹೋಗಿದ್ದಾರೆ. ರಾಜಧಾನಿಯಲ್ಲೀಗ ಹೆಜ್ಜೆ ಜೊತೆ ಪ್ರಸಂಗದ ಪಾಠವನ್ನೂ ಕಲಿಯುತ್ತಿದ್ದಾರೆ.

ಕಳೆದ ವರ್ಷ ಉಡುಪಿಗೆ ಬಂದ ಎನ್‌ಎಸ್‌ಡಿ ವಾರಣಾಸಿಯ ತಂಡ ಯಕ್ಷಗಾನ ಕುಣಿತದೊಂದಿಗೆ ಹಿಂದಿಯಲ್ಲಿ ಗುರುದಕ್ಷಿಣೆ ಪ್ರಸಂಗವನ್ನು ಕಲಿತು ಹಿಂದಿಯಲ್ಲಿ ಪ್ರದರ್ಶನ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಯಕ್ಷಗಾನ ಗುರು ಸಂಜೀವ ಸುವರ್ಣ :

ಡಾ.ಶಿವರಾಮ ಕಾರಂತರ ಶಿಷ್ಯರಾಗಿ ಯಕ್ಷಗಾನಕ್ಕೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ಬನ್ನಂಜೆ ಸಂಜೀವ ಸುವರ್ಣರು ಸಾಂಪ್ರದಾಯಿಕ ಕಲಾವಿದನಾಗಿ, ಒಬ್ಬ ಪರಿಪೂರ್ಣ ಗುರುವಾಗಿ ಅರಳಿದ್ದಾರೆ. ಕೇವಲ ಮೂರನೇ ತರಗತಿಯವರಿಗೆ ಮಾತ್ರ ಕಲಿತ ಸಂಜೀವ ಸುವರ್ಣ ಕಲಾ ಸಾಧಕನಾಗಲು ಅಕ್ಷರದ ಹಂಗು ಇರಬೇಕಾಗಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರದ ಗುರುಗಳಾಗಿ ನೂರಾರು ಯಕ್ಷಗಾನ ಕಲಾವಿದರನ್ನು ನಾಡಿಗೆ ನೀಡಿದ ಅವರು ಇದೀಗ ಉಡುಪಿಯಲ್ಲಿ ಯಕ್ಷಸಂಜೀವ ಯಕ್ಷಗಾನ ಕೇಂದ್ರದ ಮುಖ್ಯಸ್ಥರಾಗಿ, ನಾಡಿನ ವಿವಿಧೆಡೆಗಳಿಂದ ಬರುವ ಆಸಕ್ತರಿಗೆ ಹಾಗೂ ತಂಡಗಳಿಗೆ ಯಕ್ಷಗಾನ ಕಲಿಸುತ್ತಿದ್ದಾರೆ.

ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಹಾಗೂ ಎನ್‌ಎಸ್‌ಡಿ ಸಂಸ್ಥೆಗೆ ಅವಿನಾಭಾವ ಸಂಬಂಧ. 2008ರಿಂದಲೂ ಹೊಸದಿಲ್ಲಿಯ ಕೇಂದ್ರ ಎನ್‌ಎಸ್‌ಡಿ ಹಾಗೂ ಹಾಗೂ ವಿವಿಧ ರಾಜ್ಯಗಳಲ್ಲಿರುವ ಪ್ರಾದೇಶಿಕ ಎನ್ ಎಸ್‌ಡಿಯ ವಿದ್ಯಾರ್ಥಿಗಳು ಯಕ್ಷಗಾನ ಕಲಿಕೆಗೆಂದು ಗುರುಗಳನ್ನು ಅರಸಿಕೊಂಡು ಉಡುಪಿಗೆ ಬರುತ್ತಿದ್ದಾರೆ. ರಂಗ ತಜ್ಞ ಚಿದಂಬರ ರಾವ್ ಜಂಬೆಯವರ ಮೂಲಕ ದಶಕಗಳ ಹಿಂದೆ ಆರಂಭಗೊಂಡ ಈ ರಂಗ ಪಯಣ ನಿರಂತರವಾಗಿ ಮುಂದುವರಿದುಕೊಂಡು ಬಂದಿದೆ. ದಿಲ್ಲಿಯ ಎನ್‌ಎಸ್‌ಡಿ ದಶಕದಲ್ಲಿ ಒಂದು ಬಾರಿ ಗುರುಗಳೊಂದಿಗೆ ಯಕ್ಷಗಾನ ಕಲಿಯಲು ಬರುತ್ತಿದೆ. ಉಳಿದಂತೆ ದೇಶದ ವಿವಿಧ ರಾಜ್ಯಗಳಿಂದಲೂ ಎನ್‌ಎಸ್‌ಡಿ ಶಾಖೆಯ ವಿದ್ಯಾರ್ಥಿಗಳು ಪ್ರತೀ ವರ್ಷ ಯಕ್ಷಗಾನ ಕಲಿಯುವ ಉತ್ಸಾಹದಲ್ಲಿ ಬರುತ್ತಿರುತ್ತಾರೆ.

ಬನ್ನಂಜೆ ಸಂಜೀವ ಸುವರ್ಣರಿಗೆ ಕುಣಿತದಲ್ಲಿ ಅವರ ಶಿಷ್ಯರಾದ ಸುಮಂತ್, ಪುತ್ರ ಶಿಶಿರ್ ಸುವರ್ಣ ಹಾಗೂ ಮನೋಜ್ ಸಹಕರಿಸಿದ್ದಾರೆ. ಲಂಬೋದರ ಹೆಗಡೆ ಹಾಗೂ ಶ್ರೀಧರ ಹೆಗಡೆ ಹಿಮ್ಮೇಳದಲ್ಲಿ ಸಾಥ್ ನೀಡುತ್ತಿದ್ದಾರೆ.

ಕೇವಲ ಹತ್ತು ದಿನ ಯಕ್ಷಗಾನ ತರಬೇತಿ ಪಡೆಯಲು ಬಂದ ಮಕ್ಕಳು, ಬೆಂಗಳೂರಿನಲ್ಲಿ ನಾಟಕ ಕಲಿಕೆ ನಡೆಸಬೇಕಾಗಿತ್ತು. ಆದರೆ ಯಕ್ಷಗಾನ ತರಬೇತಿ ಪಡೆದ ವಿದ್ಯಾರ್ಥಿಗಳು ತಾವು ಯಕ್ಷಗಾನ ಪ್ರಸಂಗವನ್ನೇ ಅಭ್ಯಾಸ ಮಾಡುವುದಾಗಿ ಪಟ್ಟು ಹಿಡಿದು ಇದೀಗ ಒಂದೂವರೆ ಗಂಟೆಯ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದಾರೆ. ಕಲಿಕೆಗೆ ಅವರು ತೋರುತ್ತಿರುವ ಉತ್ಸಾಹ ನಮಗೂ ಕಲಿಸಲು ಹುರುಪು ನೀಡುತ್ತಿದೆ.

-ಗುರು ಬನ್ನಂಜೆ ಸಂಜೀವ ಸುವರ್ಣ

ಯಕ್ಷಗಾನದ ಕುಣಿತ, ನೃತ್ಯ ಕಲಿಕೆ ಹೊಸ ಅನುಭವ ನೀಡುತ್ತಿದೆ. ದೇಹ ಮತ್ತು ಮನಸ್ಸಿನ ಸಮನ್ವಯತೆ ಸಾಧಿಸುವುದು ಹೇಗೆ ಎಂದು ಯಕ್ಷಗಾನ ಕಲಿಸಿದೆ. ಆಧುನಿಕ ನಟರಿಗೆ ನಿಜವಾಗಿ ಇಂತಹ ತರಬೇತಿ ಸಿಗಬೇಕು.

-ಚಂದ್ರಿಕಾ ಜೈಪುರ, ಎನ್‌ಎಸ್‌ಡಿ ವಿದ್ಯಾರ್ಥಿನಿ

‘ನಾಟಕದ ವಿದ್ಯಾರ್ಥಿಗಳಿಗೆ ಯಕ್ಷಗಾನದಿಂದ ಲಯ ಮತ್ತು ತಾಳದ ಅನುಭೂತಿಯಾಗಿದೆ. ಹೊಸ ಸಾಧನೆಯನ್ನು ಮಾಡುತ್ತಿದ್ದೇವೆ ಎಂಬ ಭ್ರಮೆಯಲ್ಲಿರುವ ಆಧುನಿಕ ನಟರಿಗೆ, ನಮ್ಮ ಪೂರ್ವಜರು ಯಾವತ್ತೋ ಇದನ್ನೆಲ್ಲಾ ಮಾಡಿ ಮುಗಿಸಿದ್ದಾರೆ ಎಂಬ ಸತ್ಯದ ಅರಿವಾಗುತ್ತದೆ.

-ವಿವೇಕ್, ಎನ್‌ಎಸ್‌ಡಿ ಶಿಕ್ಷಕರು




Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಬಿ.ಬಿ.ಶೆಟ್ಟಿಗಾರ್

contributor

Similar News