×
Ad

ಪಠ್ಯದ ಜೊತೆಗೆ ಕ್ರೀಡಾಕೂಟಗಳಲ್ಲಿಯೂ ಸಕ್ರೀಯವಾಗಿ ಭಾಗವಹಿಸಿ : ಸಚಿವ ಶರಣಬಸಪ್ಪ ದರ್ಶನಾಪುರ

ಸಿಎಂ ಕಪ್ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ

Update: 2025-09-08 18:03 IST

ಯಾದಗಿರಿ: ಪಠ್ಯದ ಜೊತೆಗೆ ಕ್ರೀಡಾಕೂಟಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ರಾಷ್ಟ್ರ ಮಟ್ಟದಲ್ಲಿಯೂ ಜಿಲ್ಲೆಯ ಕೀರ್ತಿ ಹೆಚ್ಚಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಜಿಲ್ಲಾ ಮಟ್ಟದ ಸಿ.ಎಂ.ಕಪ್ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಪಟುಗಳು ಪಠ್ಯದ ಜೊತೆಗೆ ಕ್ರೀಡಾಕೂಟಗಳಲ್ಲಿಯೂ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ಸರ್ಕಾರ ನೀಡಿದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ, ಜಿಲ್ಲೆಯ ಕೀರ್ತಿ ಹೆಚ್ಚಿಸುವಂತೆ ಸಲಹೆ ನೀಡಿದರು.

ಕ್ರೀಡಾಪಟುಗಳು ಸೋಲು ಗೆಲುವಿಗೆ ಮಹತ್ವ ನೀಡದೇ ಆತ್ಮವಿಶ್ವಾಸದಿಂದ, ಕ್ರೀಡಾ ಮನೋಭಾವನೆಯೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಛಲ ಹಾಗೂ ಗುರಿ ಇದ್ದಾಗ ಮಾತ್ರ ಸಾಧನೆಗೈಯ್ಯಲು ಸಾಧ್ಯವೆಂದ ಅವರು,  ತೀರ್ಪುಗಾರರ ತೀರ್ಮಾನಕ್ಕೆ ಬದ್ಧರಾಗಿ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಕ್ರೀಡಾಪಟುಗಳಿಗೆ ಸವಲತ್ತು ನೀಡುವ ಜವಾಬ್ದಾರಿ ತಮ್ಮ ಹಾಗೂ ಜನಪ್ರತಿನಿಧಿಗಳದ್ದಾಗಿದ್ದು, ಸರ್ಕಾರದಿಂದಲೂ ಅವಶ್ಯಕ ಸೌಲಭ್ಯ ಒದಗಿಸುವದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರ ಮಟ್ಟದ ಜಾವೆಲಿಯನ್ ಕ್ರೀಡಾಪಟು ರೋಹಿತ್ ಕ್ರೀಡಾ ಜ್ಯೋತಿ ಹಸ್ತಾಂತರಿಸಿದರು. ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಯುವಜನಸೇವಾ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಸ್ವಾಗತಿಸಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಾಬೂರಾವ್ ಕಾಡ್ಲೂರ್, ಸಿದ್ದಲಿಂಗಯ್ಯ ರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಣುಮಂತ ದುಪ್ಪಲ್ಲಿ, ಭೀಮರಾಯ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News