ಆರೆಸ್ಸೆಸ್‌ಗೆ ದೊಣ್ಣೆ ಹಿಡಿದು ಪಥಸಂಚಲನಕ್ಕೆ ಅನುಮತಿ ಕೊಡಬೇಡಿ: ದ.ಸಂ.ಸಂ. ಕೆಂಭಾವಿ ಘಟಕದಿಂದ ಜಿಲ್ಲಾಧಿಕಾರಿಗೆ ಮನವಿ
ಸಂವಿಧಾನ ರಕ್ಷಣೆಗೆ ನೀಲಿ ಧ್ವಜ, ಲಾಟಿ ಪಥಸಂಚಲನಕ್ಕೂ ಅವಕಾಶ ಕೊಡಿ
ಯಾದಗಿರಿ: ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ನ.4ರಂದು ನೋಂದಣಿ ಇಲ್ಲದ ಆರೆಸ್ಸೆಸ್ ಸಂಘದವರು ದೊಣ್ಣೆ ಹಿಡಿದು ಪಥಸಂಚಲನ ನಡೆಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕೆಆರ್‌ಡಿಎಸ್‌ಎಸ್) ಯಾದಗಿರಿ ಜಿಲ್ಲಾ ಘಟಕ ಹಾಗೂ ಕೆಂಭಾವಿ ಹೋಬಳಿ ಘಟಕದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಯಾದಗಿರಿ ಜಿಲ್ಲಾ ಸಂಚಾಲಕ ಶಿವಶರಣ ನಾಗರೆಡ್ಡಿ ಯಾಳಗಿ ಅವರು ಮನವಿಯಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಂತೆ ಕಾರ್ಯನಿರ್ವಹಿಸುತ್ತಿದ್ದು, ಸಂವಿಧಾನ ಬಾಹಿರ ನಿಲುವು ತೆಗೆದುಕೊಂಡು ಕೋಮುವಾದಿ ಮತ್ತು ಜಾತಿವಾದಿ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ಆರೋಪಿಸಲಾಗಿದೆ. ಇಂತಹ ಸಂಘಟನೆಗೆ ದೊಣ್ಣೆ ಹಿಡಿದು ಪಥಸಂಚಲನ ಮಾಡಲು ಅನುಮತಿ ನೀಡುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಬಹುದು ಎಂದು ಎಚ್ಚರಿಸಲಾಗಿದೆ.
ಒಂದು ವೇಳೆ ಆರೆಸ್ಸೆಸ್ ಸಂಘಕ್ಕೆ ಪಥಸಂಚಲನಕ್ಕೆ ಅನುಮತಿ ನೀಡಿದಲ್ಲಿ, ಕೆಆರ್‌ಡಿಎಸ್‌ಎಸ್ ನೇತೃತ್ವದಲ್ಲಿ ಸಂವಿಧಾನ ರಕ್ಷಣೆಗಾಗಿ ನೀಲಿ ಧ್ವಜ ಮತ್ತು ಲಾಟಿ ಹಿಡಿದು ಪಥಸಂಚಲನ ನಡೆಸಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ.
ಈ ಪಥಸಂಚಲನವನ್ನು ನ.4ರಂದು ಮಧ್ಯಾಹ್ನ 3 ಗಂಟೆಗೆ ಅಂಬೇಡ್ಕರ್ ವೃತ್ತದಿಂದ ಪ್ರಾರಂಭಿಸಿ ಬಸವ ವೃತ್ತ, ಕೆನಾಲ್ ರಸ್ತೆ, ಅಂಬಿಗರ ಚೌಡಯ್ಯ ವೃತ್ತ, ಸರ್ಕಾರ ಆಸ್ಪತ್ರೆ, ಟಿಪ್ಪುಸುಲ್ತಾನ್ ಚೌಕ್ ಮಾರ್ಗವಾಗಿ ಪುರಸಭೆವರೆಗೆ ನಡೆಸಲು ಯೋಜನೆ ಇದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಿಳಿಸಿದ್ದಾರೆ.