ಶಹಾಪುರ | 11 ಕುರಿಗಳ ಸಾವು: ಸಚಿವರ ಭೇಟಿ, ಸಾಂತ್ವಾನ, 2 ದಿನದಲ್ಲಿ ಪರಿಹಾರದ ಭರವಸೆ
ಶಹಾಪುರ: ತಾಲ್ಲೂಕಿನ ದಿಗ್ಗಿ ಗ್ರಾಮದಲ್ಲಿ ಸೋಮವಾರ ರಾತ್ರಿ ಆಕಸ್ಮಿಕ ಬೆಂಕಿ ಬಿದ್ದು ಮನೆ ಮತ್ತು 11 ಕುರಿಗಳು ಸಾವನ್ನೊಪ್ಪಿದ ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿದರು. ಸಂತ್ರಸ್ತರಿಗೆ ಸಾಂತ್ವಾನ ಹೇಳಿ 10 ಸಾವಿರ ರೂಪಾಯಿ ನೀಡಿ 2 ದಿನದಲ್ಲಿ ಸರ್ಕಾರದಿಂದ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಮಯದಲ್ಲಿ ಮಾತನಾಡಿದ ಸಚಿವರು, ಕುರಿಗಳನ್ನೇ ಅವಲಂಬಿಸಿ ಬದುಕು ಸಾಗಿಸುವ ಕುಟುಂಬಕ್ಕೆ ಇಂತಹ ಘಟನೆ ನಡೆದಿರುವುದು ದುಃಖಕರ ವಿಚಾರ. ಸರ್ಕಾರ ಮತ್ತು ನಾವು ಸಂತ್ರಸ್ತರೊಂದಿಗೆ ಇದ್ದೇವೆ. ಈ ಕುರಿತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕೂಡಲೇ ಪರಿಹಾರ ನೀಡಲು ಸೂಚಿಸಿದ್ದು, 2 ದಿನಗಳಲ್ಲಿ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.
ಕುಟುಂಬಕ್ಕೆ ಸೂಕ್ತ ಸೂರಿನ ವ್ಯವಸ್ಥೆ ಇಲ್ಲ, ಇತ್ತ ಜೀವನ ನಡೆಸಲು ಕುರಿಗಳು ಇದ್ದವು ಈಗ ಅವುಗಳು ಸಾವನ್ನೊಪ್ಪಿದ್ದು ನಮ್ಮ ಕುಟುಂಬ ಅತಂತ್ರ ಸ್ಥಿತಿಯಲ್ಲಿದೆ. ನಮಗೆ ಸಹಾಯ ಮಾಡಿ ಎಂದು ಸಂತ್ರಸ್ತರು ಕಣ್ಣೀರಿಟ್ಟರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರಾದ ಅಂಬ್ಲಪ್ಪ ಮ್ಯಾಗಿನಮನಿ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಇದ್ದರು.