×
Ad

ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಹಠಾತ್ ಭೇಟಿ ನೀಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

Update: 2025-09-27 17:50 IST

ಯಾದಗಿರಿ: ಚಿತ್ತಾಪುರ ರಸ್ತೆ ಮೆಡಿಕಲ್ ಕಾಲೇಜಿಗೆ ಹೊಂದಿಕೊಂಡಿರುವ ಜಿಲ್ಲಾ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳನ್ನು ತಕ್ಷಣ ಸರಿಪಡಿಸಿ, ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಕ್ರಮ ಕೈಗೊಳ್ಳಬೇಕೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಮೆಡಿಕಲ್ ಕಾಲೇಜು ಡಿನ್ ಡಾ.ಸಂದೀಪ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶನಿವಾರ ಮಧ್ಯಾಹ್ನ 2.30ಕ್ಕೆ ಹಠಾತ್ ಆಸ್ಪತ್ರೆ ಭೇಟಿ ನೀಡಿದ ಶಾಸಕರು, ವಾರ್ಡುಗಳಲ್ಲಿ ತಂಗಿದ್ದ ರೋಗಿಗಳ ಜೊತೆ ಮಾತನಾಡಿ, ಅಲ್ಲಿ ಇದ್ದ ದುರವಸ್ಥೆಯನ್ನು ಕಣ್ಣಾರೆ ಕಂಡರು.

ವೈದ್ಯರ ಕೊರತೆ, ಸಿಬ್ಬಂದಿಯ ನಿರ್ಲಕ್ಷ್ಯ, ಅಸಮರ್ಪಕ ಸ್ವಚ್ಛತೆ, ಜಂಗ್ ಹಿಡಿದ ಹಾಸಿಗೆಗಳು, ತಿಂಗಳಿನಿಂದ ಸ್ವಚ್ಛಗೊಳಿಸದ ಶೌಚಾಲಯ, ವಾರ್ಡುಗಳಲ್ಲಿ ದುರ್ವಾಸನೆ ಇತ್ಯಾದಿ ಸಮಸ್ಯೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡದಿದ್ದು, ಸ್ಕ್ಯಾನಿಂಗ್‌ಗೆ ಒಂದು ತಿಂಗಳ ನಂತರದ ದಿನಾಂಕ ನೀಡಿರುವುದರ ಬಗ್ಗೆ ಅಸಮಾಧಾನಗೊಂಡ ಶಾಸಕರು, ಡಿನ್‌ರನ್ನು ದೂರವಾಣಿ ಮೂಲಕ ಸಂಪರ್ಕಿಸಿ “ಸರ್ಕಾರ ಕೋಟಿ ಕೋಟಿ ರೂ. ವೆಚ್ಚ ಮಾಡಿದರೂ ಬಡವರ ಜೀವ ಉಳಿಸುವಲ್ಲಿ ಆಸ್ಪತ್ರೆ ವಿಫಲವಾಗಿದೆ. ತಕ್ಷಣ ಕ್ರಮ ಕೈಗೊಳ್ಳಿ” ಎಂದು ಎಚ್ಚರಿಸಿದರು.

ಹಠಾತ್ ಶಾಸಕರ ಭೇಟಿಯಿಂದ ವೈದ್ಯರು ಮತ್ತು ಸಿಬ್ಬಂದಿ ಗಾಬರಿಗೊಂಡರು. ಕೆಲವರು ತುರ್ತಾಗಿ ಆಸ್ಪತ್ರೆಗೆ ಬಂದು ಹಾಜರಾದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಆಸ್ಪತ್ರೆಯ ಅವ್ಯವಸ್ಥೆಯನ್ನು ಶಾಸಕರ ಗಮನಕ್ಕೆ ತಂದರು.

“ಇಲ್ಲಿ ಚಿಕಿತ್ಸೆ ಪಡೆಯುವವರು ಬಡವರು. ಅವರ ಜೀವ ಉಳಿಸುವ ಸೇವೆ ಮಾಡಿದರೆ ನಿಜವಾದ ಪುಣ್ಯ”.

- ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News