ಯಾದಗಿರಿಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ
ಹಿರಿಯರನ್ನು ಗೌರವದಿಂದ ಕಾಣಬೇಕು : ಶಾಸಕ ಚೆನ್ನಾರೆಡ್ಡಿ ಪಾಟೀಲ್ ಸಲಹೆ
ಯಾದಗಿರಿ : ಹಿರಿಯರೇ ಎಲ್ಲರಿಗೂ ಆಧಾರಸ್ಥಂಭ. ಪ್ರತಿಯೊಬ್ಬರೂ ಅವರನ್ನು ಗೌರವಿಸಬೇಕು ಎಂದು ಶಾಸಕ ಚೆಚನ್ನಾರೆಡ್ಡಿ ಪಾಟೀಲ್ ತುನ್ನೂರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಶುಕ್ರವಾರ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ಹಿರಿಯರನ್ನು ಕಡೆಗಣಿಸುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ವಿಷಾದಿಸಿದರು.
ಹಿರಿಯರು ನಮ್ಮ ತಂದೆ-ತಾಯಿ, ಅಜ್ಜ-ಅಜ್ಜಿ ಮಾತ್ರವಲ್ಲದೆ, ಪ್ರತಿ ಮನೆಯ ಜೀವಂತ ಮಾರ್ಗದರ್ಶಕರು. ಅವರು ಹೇಳುವ ಸಲಹೆಗಳು, ತಿದ್ದಾಟಗಳು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಯಲು ನೆರವಾಗುತ್ತವೆ. ಆದರೆ ಇಂದಿನ ಪೀಳಿಗೆಯವರು ಅದನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹಿರಿಯರು ಮನೆಯಲ್ಲಿದ್ದರೆ ಅದು ಆಶೀರ್ವಾದದಂತಾಗಿದೆ. ಅವರನ್ನು ಗೌರವದಿಂದ ನೋಡಿಕೊಳ್ಳುವುದು ನಮ್ಮ ಹೊಣೆಗಾರಿಕೆ ಎಂದು ಶಾಸಕರು ತಿಳಿಸಿದರು.
ಇಂದಿನ ದಿನಗಳಲ್ಲಿ ಅನೇಕರು ಹಿರಿಯರನ್ನು ಸಾಕಲು ಹಿಂಜರಿಯುತ್ತಿದ್ದಾರೆ. ಅವರನ್ನು ಅನಾಥಾಶ್ರಮ ಅಥವಾ ಹಿರಿಯರ ಮನೆಗಳಿಗೆ ಬಿಟ್ಟು ಬರುತ್ತಿದ್ದಾರೆ. ಮುಂದೆ ನಾವು ಕೂಡಾ ಹಿರಿಯರಾಗುತ್ತೇವೆ ಎಂಬ ಅರಿವು ಇರಬೇಕು. ನಮ್ಮ ಮಕ್ಕಳೂ ಹೀಗೆ ಮಾಡಿದರೆ ಎಂಥ ನೋವುಂಟಾಗುತ್ತದೆ ಎಂಬುದನ್ನು ಯೋಚಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಶರಣಪ್ಪ ಪಾಟೀಲ್, ಹಿರಿಯರಾದ ಸಿ.ಎಮ್. ಪಟ್ಟೇದಾರರು ಮಾತನಾಡಿ, ಹಿರಿಯ ನಾಗರಿಕರಿಗೆ ಸರ್ಕಾರ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಎಎಸ್‌ಐ ಸಾಮುವೇಲ್, ಕಂದಾಯ ಇಲಾಖೆಯ ಲಕ್ಷ್ಮಣ ದೇಗಲಮಡಿ, ನಿರಾವರಿ ಇಲಾಖೆಯ ಮಲ್ಲಿನಾಥ ಮಲಗೊಂಡ, ನಿವೃತ್ತ ಕೃಷಿ ಸಹಾಯಕ ಅಧಿಕಾರಿ ವಾಹೀದ್ ಮಿಯಾ, ಶಿಕ್ಷಕ ಚಂದ್ರಾಮಪ್ಪ ಬಳಿಚಕ್ರ, ಸಮಾಜ ಸೇವಕರು ಸಭಾಪತಿ ಮಹಾದೇವಪ್ಪ ಕಡ್ಡಿ ಅಬ್ಬೆತುಮಕೂರು, ಶರಣಪ್ಪ ಜಾಕಾ, ನಿರ್ಮಲ್ ಕುಮಾರ ಜೈನ್, ಬಿ.ಸಿ. ಪಾಟೀಲ್, ಮಾಣಿಕಮ್ಮ ಸೋಮಯ್ಯ ಸ್ವಾಮೀ, ಯಂಕೋಬಾ ಚಿಂತನಳ್ಳಿ, ನಿವೃತ್ತ ಶಿಕ್ಷಕರಾದ ಸಿದ್ದಪ್ಪ ಬಬಲಾದ, ಮಾಜಿ ನಗರಸಭಾ ಸದಸ್ಯ ಸಂಗಣ್ಣ ಬುಕಿಸ್ಟಗಾರ ಶಹಾಪುರ, ನಿವೃತ್ತ ಶಿರಸ್ತೇದಾರ ಭೀಮರಾಯ ಸೇರಿದಂತೆ ಅನೇಕರಿಗೆ ಸನ್ಮಾನ ಮಾಡಲಾಯಿತು.
ವೇದಿಕೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಡ್ಲೂರ್, ನಗರ ಠಾಣೆ ಪಿಎಸ್‌ಐ ಮಂಜೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಶಿರಸಗಿ, ಹಿರಿಯರಾದ ಚನ್ನಪ್ಪಗೌಡ ಮೋಸಂಬಿ, ಜಿಲ್ಲಾ ನಿವೃತ್ತ ಸಂಘದ ಬಂಡೆಪ್ಪ ಆಕಳ, ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಹಾಗೂ ಇತರರು ಉಪಸ್ಥಿತರಿದ್ದರು.