×
Ad

ಯಾದಗಿರಿ | ನ.11ರಂದು ನಗರದಲ್ಲಿ ಏಕತಾ ಅಭಿಯಾನ ಅಂಗವಾಗಿ ಪಾದಯಾತ್ರೆ

Update: 2025-11-07 18:43 IST

ಯಾದಗಿರಿ: ಭಾರತದ ಉಕ್ಕಿನ ಮನುಷ್ಯರೆಂದೆ ಕರೆಯಲ್ಪಡುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ನ.11ರಂದು ನಗರದಲ್ಲಿ "ಏಕತಾ ಅಭಿಯಾನ ಅಂಗವಾಗಿ ಪಾದಯಾತ್ರೆ" ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಈ ಕುರಿತು ವಿವರ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಯುವ ಮತ್ತು ಕ್ರೀಡಾ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಮೇರಾ ಯುವ ಭಾರತ ಕೇಂದ್ರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆ ಇವರ ವತಿಯಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರ ಪ್ರೇಮ ಉತ್ತೇಜನ, ನಾಗರಿಕ ಜವಾಬ್ದಾರಿ ಮನೋಭಾವ ಆಳವಾಗಿ ಬೆಳೆಸುವುದು ಮತ್ತು ಯುವಜನಾಂಗದಲ್ಲಿ ರಾಷ್ಟ್ರೀಯ ಐಕ್ಯತಾ ಭಾವನೆ ಬೆಳೆಸುವ ಉದ್ದೇಶದಿಂದ ಈ ಪಾದಯಾತ್ರೆ ನ.11 ರಂದು ಹಮ್ಮಿಕೊಳ್ಳಲಾಗುತ್ತಿದ್ದು, ಯುವ, ಹಿರಿಯ ನಾಗರಿಕರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ನ.11ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಸ್ವಪ್ನ ಗ್ರೌಂಡ್) ಇಲ್ಲಿಂದ ಸಂಸದರು, ಶಾಸಕರು, ಗಣ್ಯರ ಉಪಸ್ಥಿತಿಯಲ್ಲಿ ಇದಕ್ಕೆ ಚಾಲನೆ ನೀಡಲಿದ್ದು, ಹಿರಿಯ ಅಧಿಕಾರಿಗಳು ಸೇರಿದಂತೆ 500ಕ್ಕೂ ಹೆಚ್ಚು 30 ವರ್ಷರೊಳಗಿನ ಯುವ ವಿದ್ಯಾರ್ಥಿಗಳು, ಸಾರ್ವಜನಿಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಈ ಪಾದಯಾತ್ರೆಯೂ ಸರ್ಕಾರಿ ಪದವಿಪೂರ್ವ ಕಾಲೇಜು ಇಲ್ಲಿಂದ ಆರಂಭಗೊಂಡು, ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್, ತಹಸೀಲ್ದಾರ ಕಚೇರಿ,ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತ, ಸುಭಾಷ್ ಚಂದ್ರ ಬೋಸ್ ವೃತ್ತದ ಮೂಲಕ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಮುಕ್ತಾಯಗೊಳ್ಳಲಿದೆ.

ನಂತರ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪೂಜೆ,ಗೌರವ ಅರ್ಪಣೆ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸಲು, ಸೂಕ್ತ ಪೋಲಿಸ್ ಬಂದೋಬಸ್ತ್, ಕುಡಿಯುವ ನೀರಿನ ಸೌಲಭ್ಯ,ನುರಿತ ವೈದ್ಯರು ಒಳಗೊಂಡ ಅಂಬ್ಯುಲೆನ್ಸ್, ಟ್ರಾಫಿಕ್ ನಿರ್ವಹಣೆ, ಸೇರಿದಂತೆ ಅವಶ್ಯಕ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್, ಮೇರಾ ಯುವ ಭಾರತ ಕೇಂದ್ರ ದ ಅಧಿಕಾರಿ ಮಯೂರ್ ಕುಮಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News